ಮಾಣಿ:ಪರಸ್ಪರ ಹಲ್ಲೆ ಆರೋಪ-ಇಬ್ಬರು ಆಸ್ಪತ್ರೆಗೆ; 9 ಮಂದಿ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲು

0

ವಿಟ್ಲ:ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಮಾಣಿ ಜಂಕ್ಷನ್‌ನಲ್ಲಿ ಇತ್ತಂಡಗಳ ಮಧ್ಯೆ ಹಲ್ಲೆ ನಡೆದು ಇಬ್ಬರು ಆಸ್ಪತ್ರೆಯಲ್ಲಿ ದಾಖಲಾಗಿ ಪರಸ್ಪರ ಆರೋಪ ಹೊರಿಸಿಕೊಂಡು ದೂರು ನೀಡಿದ್ದಾರೆ. ವಿಟ್ಲ ಪೊಲೀಸರು ಎರಡೂ ತಂಡಗಳ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ರಾಜಕೀಯ ವೈಷಮ್ಯದಿಂದ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಕೊಡಾಜೆ ನಿವಾಸಿ ಭುಜಂಗ ಸಪಲ್ಯರವರ ಪುತ್ರ ಮಹೇಂದ್ರ(26 ವ.)ರವರು ಮಂಜುನಾಥ, ರಾಕೇಶ್, ಪ್ರವೀಣ್ ಅನಂತಾಡಿ ವಿರುದ್ಧ ದೂರು ನೀಡಿದ್ದಾರೆ. ಇನ್ನೊಂದು ಕಡೆ ಬಂಟ್ವಾಳ ತಾಲೂಕು ಅನಂತಾಡಿ ಗ್ರಾಮದ ಕರಿಂಕ ದಿ.ವೆಂಕಪ್ಪ ನಾಯ್ಕ್‌ರವರ ಪುತ್ರ ಈಶ್ವರ ನಾಯ್ಕ್ ಯಾನೆ ಪ್ರವೀಣ್ ನಾಯ್ಕ್ ಎಂಬವರು ಮಹೇಂದ್ರ, ಪ್ರಶಾಂತ್, ಚಿರಂಜೀವಿ, ಪ್ರವೀಣ್, ದೇವಿಪ್ರಸಾದ್, ಹರೀಶ್ ಎಂಬವರ ವಿರುದ್ಧ ದೂರು ನೀಡಿದ್ದಾರೆ.

ಮಹೇಂದ್ರರವರು ನೀಡಿದ ದೂರಿನಲ್ಲಿ ಏನಿದೆ..?
‘ಮೇ.24ರಂದು ನಾನು ಅಕ್ಕನ ಆಕ್ಟೀವಾ ಹೊಂಡಾದಲ್ಲಿ ಮಾಣಿಯಲ್ಲಿರುವ ಬ್ಯಾಂಕ್ ಆಫ್ ಬರೋಡಾದಿಂದ ಆಡವಿಟ್ಟ ಚಿನ್ನದ ಸರ ಬಿಡಿಸಿ ತನ್ನ ಸ್ಕೂಟರ್‌ನಲ್ಲಿ ಪುತ್ತೂರು-ಬಂಟ್ವಾಳ ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಮಾಣಿ ಜಂಕ್ಷನ್‌ನಲ್ಲಿರುವ ನಾಗರಾಜ್‌ರವರ ಫೈನಾನ್ಸ್ ಕಛೇರಿಯ ಮುಂಭಾಗ ತಲುಪಿದಾಗ ರಸ್ತೆಯ ಬದಿ ನಾಗರಾಜ್‌ರವರ ಸಹಚರರೊಬ್ಬರು ನನಗೆ ತಲವಾರು ಬೀಸಿದರು. ತಪ್ಪಿಸಿಕೊಂಡು ನಾನು ಬುಡೋಳಿ ಕಡೆಗೆ ಹೋಗುತ್ತಿದ್ದ ವೇಳೆ ಮಾಣಿ ಜಂಕ್ಷನ್‌ನಲ್ಲಿ ನನ್ನ ಆಕ್ಟೀವಾ ಸ್ಕೂಟರ್‌ಗೆ ಹಿಂದಿನಿಂದ ವಾಹನವೊಂದನ್ನು ಡಿಕ್ಕಿ ಹೊಡೆಸಿದ ಪರಿಣಾಮ ನಾನು ರಸ್ತೆಗೆ ಬಿದ್ದಾಗ ರಾಕೇಶ್, ಮಂಜುನಾಥ್, ಅನಂತಾಡಿ ಪ್ರವೀಣ್ ಎಂಬವರು ಸೇರಿಕೊಂಡು ಬ್ಯಾಟ್, ವಿಕೆಟ್‌ನಿಂದ ಹಲ್ಲೆ ನಡೆಸಿ, ಕುತ್ತಿಗೆಯಲ್ಲಿದ್ದ ಚಿನ್ನದ ಸರ ಎಳೆದು, ನೀನು ಭಾರೀ ಜಿಜೆಪಿಯಲ್ಲಿ ಕೆಲಸ ಮಾಡುತ್ತೀಯಾ ಎಂದು ಹೇಳಿ, ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಹೇಳಿ ಹೋಗಿದ್ದರು. ಕಾಂಗ್ರೆಸ್ ಕಾರ್ಯಕರ್ತರಾದ ರಾಕೇಶ್, ಮಂಜುನಾಥ್, ರಾಜೇಶ್ ಮತ್ತು ಇತರರು ಕೊಲ್ಲುವ ಉದ್ದೇಶದಿಂದ ತಲವಾರು ಬೀಸಿ, ವಿಕೆಟ್, ಬ್ಯಾಟ್, ಕಬ್ಬಿಣದ ರಾಡ್‌ನಿಂದ ಹೊಡೆದು ಕತ್ತಿನಲ್ಲಿದ ಚಿನ್ನದ ಸರವನ್ನು ಕಸಿದುಕೊಂಡು ಹೋಗಿದ್ದಾರೆ’ ಎಂದು ಮಹೇಂದ್ರರವರು ವಿಟ್ಲ ಠಾಣಾ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಘಟನೆಯಿಂದ ಗಾಯಗೊಂಡಿದ್ದ ಮಹೇಂದ್ರರವರನ್ನು ಪುತ್ತೂರಿನ ಆದರ್ಶ ಆಸ್ಪತ್ರೆಗೆ ಕರೆತಂದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಂಗಳೂರು ಎ.ಜೆ.ಆಸ್ಪತ್ರೆಗೆ ಶಿಫ್ಟ್‌ ಮಾಡಲಾಗಿದೆ. ಮಹೇಂದ್ರ ಅವರು ನೀಡಿರುವ ದೂರಿನ ಮೇರೆಗೆ ಮಂಜುನಾಥ, ರಾಕೇಶ್, ಪ್ರವೀಣ್ ಅನಂತಾಡಿರವರ ವಿರುದ್ಧ ಕಲಂ 324, 506,507,394 ಜೊತೆಗೆ 34 ಐಪಿಸಿಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈಶ್ವರ ನಾಯ್ಕ್ ಯಾನೆ ಪ್ರವೀಣ್ ನಾಯ್ಕ್ ನೀಡಿದ ದೂರಿನಲ್ಲೇನಿದೆ..?: ‘ನಾನು ಬ್ಯಾಂಕ್ ರಿಕವರಿ ಕರ್ತವ್ಯ ನಿರ್ವಹಿಸುತ್ತಿದ್ದು ಮೇ.24ರಂದು ಸಂಗ್ರಹವಾದ ಹಣದೊಂದಿಗೆ ತನ್ನ ಮೋಟಾರ್ ಸೈಕಲ್‌ನಲ್ಲಿ ಮಾಣಿ ಕಡೆಗೆ ಹೋಗುತ್ತಿದ್ದ ವೇಳೆ ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಪಟ್ಲಕೋಡಿ ಎಂಬಲ್ಲಿ ತಲುಪಿದಾಗ ನನ್ನ ಪರಿಚಯದ ಮಹೇಂದ್ರ, ಪ್ರಶಾಂತ್, ಚಿರಂಜೀವಿ,ಪ್ರವೀಣ್‌ರವರು ಬಿಳಿ ಬಣ್ಣದ ಸ್ವಿಫ್ಟ್ ಕಾರು, ಪಿಕಪ್ ಹಾಗೂ ಕೆಂಪು ಬಣ್ಣದ ಬ್ರೆಝಾ ಕಾರಿನಲ್ಲಿ ನಿಂತುಕೊಂಡಿದ್ದು ನನ್ನನ್ನು ನೋಡಿ ಏಕಾಏಕಿ ಬ್ರೆಝಾ ಕಾರನ್ನು ಚಲಾಯಿಸಿ ಮುಂದಕ್ಕೆ ಹೋಗದಂತೆ ತೆಡೆದು ಆ ಕಾರಿನಿಂದ ದೇವಿ ಪ್ರಸಾದ್ ಎಂಬಾತನು ಇಳಿದು ಬಂದು ಅದೇ ಸಮಯ ಸ್ವಿಫ್ಟ್ ಕಾರಿನಿಂದ ಹರೀಶ್,‌ ಮಹೇಂದ್ರ, ಪ್ರಶಾಂತ, ಚಿರಂಜೀವಿ, ಪ್ರವೀಣ್‌ರವರು ನನ್ನನ್ನು ಸುತ್ತುವರೆದು ಅವಾಚ್ಯ ಶಬ್ದಗಳಿಂದ ಬೈದು, ಜಾತಿನಿಂದನೆ ಮಾಡಿ, ಕಾಲರ್ ಪಟ್ಟಿಯನ್ನು ಹಿಡಿದು ಎಲೆಕ್ಷನ್ ಕೌಂಟಿಂಗ್ ದಿನ ಭಾರೀ ದುರಹಂಕಾರ ತೋರಿಸಿದ್ದಿ ಎಂದು ಹೇಳೆ ಕೈಯಲ್ಲಿದ್ದ 13ಸಾವಿರ ರೂ.ಹಣವಿದ್ದ ಚೀಲವನ್ನು ಎಳೆದು ತೆಗದು ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ, ಜೀವ ಬೆದರಿಕೆ ಒಡ್ಡಿದ್ದಾರೆ’ ಎಂದು ಈಶ್ವರ ನಾಯ್ಕ್‌ರವರು ವಿಟ್ಲ ಠಾಣಾ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈಶ್ವರ ನಾಯ್ಕ್‌ರವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಅವರು ನೀಡಿರುವ ದೂರಿನಂತೆ ಮಹೇಂದ್ರ, ಪ್ರಶಾಂತ್, ಚಿರಂಜೀವಿ, ಪ್ರವೀಣ್, ದೇವಿಪ್ರಸಾದ್ ಮತ್ತು ಹರೀಶ್ ಎಂಬವರ ವಿರುದ್ಧ ಕಲಂ 143,147,323,324,506,504,307,394, ಜೊತೆಗೆ 149 ಐಪಿಸಿ ಮತ್ತು ಕಲಂ 3(1)(ಎಸ್)ದಿ ಎಸ್‌ಸಿ ಎಸ್‌ಟಿ(ಪ್ರಿವೆನ್ಶನ್ ಆಫ್ ಅಟ್ರಾಸಿಟೀಸ್ ಅಮೆಂಡ್‌ಮೆಂಟ್ ಆಕ್ಟ್ 2015)ನಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.‌ ರಾಜಕೀಯ ವೈಷಮ್ಯದಿಂದ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.

ಮಾಣಿ ಹಲ್ಲೆ ಪ್ರಕರಣ ಮಹೇಂದ್ರ ಮಂಗಳೂರಿಗೆ ಶಿಫ್ಟ್

ಮಾಣಿಯಲ್ಲಿ ಹಲ್ಲೆಗೊಳಗಾಗಿ ಮುಖ ಮತ್ತು ತಲೆಗೆ ತೀವ್ರ ಗಾಯಗೊಂಡಿರುವ ಪೆರಾಜೆ ಬಜರಂಗಳ ಸಂಚಾಲಕ ಮಹೇಂದ್ರ ಎಂಬವರನ್ನು ಆದರ್ಶ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಎ.ಜೆ.ಆಸ್ಪತ್ರೆಗೆ ಕರೆದೊಯ್ಯಲಾಗಿದೆ.‌ ಘಟನೆಗೆ ಸಂಬಂಧಿಸಿ ಇನ್ನೊಂದು ಕಡೆಯ ಈಶ್ವರ ನಾಯ್ಕ್ ಯಾನೆ ಪ್ರವೀಣ್ ನಾಯ್ಕ್‌ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

LEAVE A REPLY

Please enter your comment!
Please enter your name here