ಉಪ್ಪಿನಂಗಡಿ ಪ.ಪೂ ಕಾಲೇಜು-ಅಭಿವೃದ್ಧಿಗೆ ಮುನ್ನುಡಿ -ಶಾಸಕರಿಂದ ಸಭೆ

0

ಸೀಟು ಇಲ್ಲ ಎಂದು ಯಾವ ವಿದ್ಯಾರ್ಥಿಯನ್ನು ವಾಪಸ್ ಕಳುಹಿಸಬೇಡಿ : ಪ್ರಾಂಶುಪಾಲರಿಗೆ ಶಾಸಕರ ಸೂಚನೆ


ಪುತ್ತೂರು: ಸೀಟು ಇಲ್ಲ ಎಂದು ದಾಖಲಾತಿಗೆ ಅರ್ಜಿ ಹಾಕಿದ ಯಾವ ವಿದ್ಯಾರ್ಥಿಯನ್ನೂ ವಾಪಸ್ ಕಳುಹಿಸಬೇಡಿ, ಕಾಲೇಜಿಗೆ ದಾಖಲಾತಿಗೆ ಅರ್ಜಿ ಹಾಕಿದ ಎಲ್ಲಾ ವಿದ್ಯಾರ್ಥಿಗಳಿಗೂ ಅವಕಾಶ ನೀಡಬೇಕು, ಅದಕ್ಕೆ ಏನು ವ್ಯವಸ್ಥೆ ಆಗಬೇಕೋ ಅದನ್ನು ನಾನು ಮಾಡಿಸುತ್ತೇನೆ ಎಂದು ಪುತ್ತೂರು ಶಾಸಕ ಅಶೋಕ್ ರೈಯವರು ಉಪ್ಪಿನಂಗಡಿ ಪ ಪೂ ಕಾಲೇಜಿನ ಪ್ರಾಂಶುಪಾಲರಾದ ಸುಧೀರ್‌ಕುಮಾರ್ ರವರಿಗೆ ಸೂಚನೆ ನೀಡಿದರು.


ಉಪ್ಪಿನಂಗಡಿ ಕಾಲೇಜಿನಲ್ಲಿ ಈ ಬಾರಿ ಭಾರೀ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ದಾಖಲಾತಿಗೆ ಅರ್ಜಿ ಹಾಕಿದ್ದಾರೆ. ಕಾಲೇಜಿನಲ್ಲಿ ಫಲಿತಾಂಶ ಗುಣಮಟ್ಟದಿಂದ ಕೂಡಿದ್ದರಿಂದ ಹೆಚ್ಚಿನ ಪೋಷಕರು ಉಪ್ಪಿನಂಗಡಿ ಸರಕಾರಿ ಕಾಲೇಜಿಗೆ ಮಕ್ಕಳನ್ನು ದಾಖಲು ಮಾಡುತ್ತಿದ್ದಾರೆ. ಕೊಠಡಿಯ ಕೊರತೆ ಇದೆ ಎಂದು ಕೆಲವೇ ವಿದ್ಯಾರ್ಥಿಗಳನ್ನು ಮಾತ್ರ ದಾಖಲಾತಿ ಮಾಡಲಾಗುತ್ತಿದೆ ಎಂದು ಪೋಷಕರು ಮಾಹಿತಿ ನೀಡಿದ್ದಾರೆ. ಕೊಠಡಿಯ ಕೊರತೆಯ ಕಾರಣಕ್ಕೆ ಅಥವಾ ಕಾಲೇಜಿನಲ್ಲಿನ ಮೂಲಭೂತ ಸೌಕರ್ಯದ ಕೊರತೆಯಿದೆ ಎಂದು ಸೀಟಿಲ್ಲ ಎಂದು ವಿದ್ಯಾರ್ಥಿಗಳನ್ನು ವಾಪಸ್ ಕಳುಹಿಸುವುದು ಬೇಡ. ವಿದ್ಯಾರ್ಥಿಗಳ ಕಲಿಕೆಗೆ ಏನೆಲ್ಲಾ ಅವಶ್ಯಕತೆ ಬೇಕೋ ಅದನ್ನು ಹೇಳಿ ಮಾಡಿಸುವ ವ್ಯವಸ್ಥೆಯನ್ನು ಮಾಡಿಸುತ್ತೇನೆ. ಯಾವೊಬ್ಬ ವಿದ್ಯಾರ್ಥಿಯೂ ಶಿಕ್ಷಣದಿಂದ ವಂಚಿತರಾಗಬಾರದು ಎಂದು ಶಾಸಕರು ಹೇಳಿದರು.ಉಪ್ಪಿನಂಘಡಿ ಆಸುಪಾಸಿನಲ್ಲಿ ಯಾವುದೇ ಸರಕಾರಿ ಕಾಲೇಜು ಇಲ್ಲದ ಕಾರಣ ಈ ಭಗದ ಬಹುತೇಕ ವಿದ್ಯಾರ್ಥಿಗಳು ಇಲ್ಲಿಗೆ ದಾಖಲಾತಿಗೆ ಅರ್ಜಿ ಹಾಕುತ್ತಿದ್ದಾರೆ. ಹೆಚ್ಚು ಅಂಕ ಇದ್ದವರಿಗೆ ಮಾತ್ರ ಸೀಟು ಕೊಡುವುದು ಎಂಬ ತೀರ್ಮಾನಕ್ಕೆ ಬರುವುದು ಬೇಡ. ಇಲ್ಲಿ ಪ್ರತೀಯೊಬ್ಬ ಪೋಷಕರ ಮಕ್ಕಳೂ ಕಲಿಯಬೇಕು , ವಿಜ್ಞಾ, ಕಲಾ ಮತ್ತು ವಾಣಿಜ್ಯ ವಿಭಾಗದಲ್ಲಿ ಎಷ್ಟು ವಿದ್ಯಾರ್ಥಿಗಳು ಅರ್ಜಿ ಹಾಕುತ್ತರೋ ಅವರೆಲ್ಲರನ್ನೂ ದಾಖಲಿಸಿ ಎಲ್ಲರ ಮಕ್ಕಳು ಕಲಿತು ವಿದ್ಯಾವಂತರಾಗಬೇಕು, ಇಂಜಿನಿಯರೋ, ಡಾಕ್ಟ್ರೋ ಆಗಬೇಕು ಎಂಬುದೇ ನನ್ನ ಉದ್ದೇಶ ಎಂದು ಶಾಸಕರು ಹೇಳಿದರು.

ಕೊಠಡಿಯ ಕೊರತೆ ಇದೆ: ಪ್ರಾಂಶುಪಾಲರು
ಕಾಲೇಜಿನಲ್ಲಿ ಮೂಲಭೂತ ಸೌಕರ್ಯದ ಕೊರತೆಯ ನಡುವೆ ಈ ಬಾರಿ ಉತ್ತಮ ಫಲಿತಾಂಶ ಬಂದಿದೆ. ಕಾಲೇಜಿನಲ್ಲಿ ಕೊಠಡಿಯ ಕೊರತೆ ಇದೆ ಈ ಕಾರಣಕ್ಕೆ ನಮಗೆ ಹೆಚ್ಚು ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಪ್ರಾಂಶುಪಾಲರಾದ ಸುಧೀಂದ್ರರವರು ಶಾಸಕರ ಗಮನಕ್ಕೆ ತಂದರು. ಮೂಲಭೂತ ಸೌಕರ್ಯದ ಕೊರತೆ ಇದ್ದರೂ ಶಿಕ್ಷಕರು ಒಳ್ಳೆಯ ಗುಣಮಟ್ಟದ ಶಿಕ್ಷಣವನ್ನು ನೀಡಿದ್ದಾರೆ ಇದಕ್ಕೆ ನಿಮ್ಮ ತಂಡಕ್ಕೆ ಅಭಿನಂದನೆಯನ್ನು ಸಲ್ಲಿಸುತ್ತೇನೆ ಎಂದು ಶಾಸಕರು ಹೇಳಿದರು. ಕೊಠಡಿಯ ಸಮಸ್ಯೆ ಸೇರಿದಂತೆ ಎಲ್ಲಾ ಸಮಸ್ಯೆಗಳನ್ನು ಇತ್ಯರ್ಥಪಡಿಸುವ ಎಂದು ಭರವಸೆ ನೀಡಿದರು.

ಸ್ಥಳದಲ್ಲೇ ಕೊಠಡಿ ಸಮಸ್ಯೆ ಪರಿಹಾರ
ಕೊಠಡಿಯ ಕೊರತೆಯನ್ನು ಮನಗಂಡ ಶಾಸಕರು ಪ್ರೌಢ ಶಾಲಾ ವಿಭಾಗದಲ್ಲಿ ಎರಡು ಕೊಠಡಿ ಖಾಲಿ ಇರುವ ಬಗ್ಗೆ ಮಾಹಿತಿ ಪಡೆದುಕೊಂಡ ಶಾಸಕರು ತಕ್ಷಣ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿ ಪ ಪೂ ಕಾಲೇಜಿಗೆ ತಾಗಿಕೊಂಡಿರುವ ಪ್ರೌಢ ಶಾಲೆಯಲ್ಲಿ ಖಾಲಿ ಇರುವ ಎರಡು ಕೊಠಡಿಯನ್ನು ಪಿಯು ಸೆಕ್ಷನ್‌ಗೆ ನೀಡುವಂತೆ ಸೂಚಿಸಿದರು. ಅದರಂತೆ ಎರಡು ಕೊಠಡಿಯನ್ನು ಪಿಯು ವಿಭಾಗಕ್ಕೆ ನೀಡುವ ಮೂಲಕ ಕೊಠಡಿಯ ಸಮಸ್ಯೆಯನ್ನು ಶಾಸಕರು ಸ್ಥಳದಲ್ಲೇ ಬಗೆಹರಿಸಿದ್ದಾರೆ.

ಕಾಲೇಜಿನಲ್ಲಿ ರಾಜಕೀಯ ನುಸುಳಬಾರದು
ಕಾಲೇಜಿನಲ್ಲಿ ರಾಜಕೀಯ ನುಸುಳಿದರೆ ಇಡೀ ವ್ಯವಸ್ಥೆಯೇ ಹಾಳಾಗ್ತದೆ ಆರೀತಿ ಆಗದಂತೆ ನೋಡಿಕೊಳ್ಳಿ ಎಂದು ಪ್ರಾಂಶುಪಾಲರಿಗೆ ತಿಳಿಸಿದರು. ಸಭೆಯಲ್ಲಿದ್ದ ಕಾಂಗ್ರೆಸ್ ಮುಖಂಡ ಚಂದ್ರಹಾಸ ಶೆಟ್ಟಿ ಮಾತನಾಡಿ ಉಪ್ಪಿನಂಗಡಿ ಕಾಲೇಜನ್ನು ಹಾಳು ಮಾಡಿದ್ದೇ ರಾಜಕೀಯ ಮಾಡಿ. ಮುಂದಿನ ದಿನಗಳಲ್ಲಿ ಆ ರೀತಿ ಆಗದಂತೆ ಸಂಪೂರ್ಣ ನಿಗಾವಹಿಸಬೇಕಿದೆ. ಕಾಲೇಜು ಅಂದ್ರೆ ಕೇವಲ ಶಿಕ್ಷಣ ಮಾತ್ರ ಮಕ್ಕಳ ಕಲಿಗೆ ಏನೆಲ್ಲಾ ವ್ಯವಸ್ಥೆಗಳು ಆಗಬೇಕಾ ಅದೆಲ್ಲವೂ ಮಾಡಿಕೊಟ್ಟರೆ ಶಿಕ್ಷಕರು ಉತ್ತಮ ರೀತಿಯಲ್ಲಿ ಕಲಿಸುತ್ತಾರೆ. ಸರಕಾರಿ ಕಾಲೇಜಿನಲ್ಲಿ ಮೂಲಭೂತ ಸೌಕರ್ಯದ ಕೊರತೆಯೇ ಆಗಬಾರದು ಆ ರೀತಿ ವ್ಯವಸ್ಥೆ ಮಾಡುವಂತೆ ಸಾಸಕರಿಗೆ ಮನವಿ ಮಾಡಿದರು. ಇದಕ್ಕೆ ಉಪ್ಪಿನಂಗಡಿ ಗ್ರಾಪಂ ಸದಸ್ಯ ಯು ಟಿ ತೌಸೀಫ್ ಕೂಡ ಬೆಂಬಲವನ್ನು ಸೂಚಿಸಿದರು. ಪ್ರತಿಕ್ರಿಯಿಸಿದ ಶಾಸಕರು ಕಾಲೇಜಿನಲ್ಲಿ ಶಿಕ್ಷಣ ಮಾತ್ರ ಮುಂದಿನ ದಿನಗಳಲ್ಲಿ ರಾಜಕೀಯ ನಡೆಯಬಾರದು, ಮಕ್ಕಳ ಕಲಿಕೆಗೆ ರಾಜಕೀಯ ಅಡ್ಡಿಯಾಗಬಾರದು ಮುಂದಿನ ದಿನಗಳಲ್ಲಿ ಸಭೆ ಕರೆದು ಈ ಬಗ್ಗೆ ಸರಿಯಾದ ರೀತಿಯಲ್ಲಿ ವ್ಯವಸ್ಥೆ ಮಾಡುತ್ತೇನೆ ಎಂದು ಭರವಸೆ ನೀಡಿದರು

ಕಾಲೇಜಿನ ಪರವಾಗಿ ಶಸಕರಿಗೆ ಅಭಿನಂದನೆ
ಇದೇ ಸಂದರ್ಭದಲ್ಲಿ ಶಾಸಕರಾದ ಬಳಿಕ ಮೊದಲ ಬಾರಿಗೆ ಕಾಲೇಜಿಗೆ ಭೇಟಿ ನೀಡಿದ ಶಾಸಕ ಅಶೋಕ್ ರೈಯವರನ್ನು ಕಾಲೇಜಿನ ಪರವಾಗಿ ಪ್ರಾಂಶುಪಾಲರು ಹಾಗೂ ಕನ್ನಡ ಉಪನ್ಯಾಸಕ ಇಬ್ರಾಹಿಂ ರವರು ಹೂಗುಚ್ಚ ನೀಡಿ ಶಾಲು ಹೊದಿಸಿ ಸನ್ಮಾನಿಸಿದರು. ಕಾಲೇಜಿನ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡುವಂತೆ ಶಾಸಕರಲ್ಲಿ ಅವರು ಮನವಿ ಮಾಡಿದರು.

ಇಂಜನಿಯರ್ ಜೊತೆ ಮಾತುಕತೆ
ಉಪ್ಪಿನಂಗಡಿ ಕಾಲೇಜು ಕಟ್ಟಡ ನಿರ್ಮಾಣಕ್ಕೆ ವಿವೇಕ ಯೋಜನೆಯಡಿ ಸರಕಾರದಿಂದ ರೂ ೩ ಕೋಟಿ ಅನುದಾನ ಮಂಜೂರಾಗಿದೆ. ಕಾಮಗಾರಿಗೆ ಇನ್ನೂ ಟೆಂಡರ್ ಕರೆಯಲಾಗಿಲ್ಲ. ಕಟ್ಟಡ ಕಾಮಗಾರಿ ಕುರಿತಂತೆ ಜಿಪಂ ಇಂಜನಿಯರ್ ಭರತ್ ರವರ ಜೊತೆ ಶಾಸಕರು ಮಾತುಕತೆ ನಡೆಸಿದರು. ಈ ಅನುದಾನದಲ್ಲಿ ಮಾಡರ್ನ್ ಮಾಡೆಲ್ ಕಟ್ಟಡ ನಿರ್ಮಾಣವಾಗಬೇಕಿದೆ. ತನು ದೆಹಲಿಯಲ್ಲಿ ಕೆಲವೊಂದು ಕಾಲೇಜು ಕಟ್ಟಡವನ್ನು ಪರಿಶೀಲನೆ ಮಾಡಿದ್ದು ಖಾಸಗಿ ಶಾಲೆಯನ್ನು ಮೀರಿಸುವಂತಿದೆ. ಅದೇ ಮಾದರಿಯಲ್ಲಿ ಇಲ್ಲಿಯೂ ಕಟ್ಟಡ ನಿರ್ಮಾಣ ಆಗಬೇಕಿದೆ. ಉದ್ದಕ್ಕೆ ಗೋಶಾಲೆಯ ಹಾಗೆ ಕಟ್ಟಡವನ್ನು ಕಟ್ಟಬೇಡಿ , ಕಟ್ಟಡ ನಿರ್ಮಾಣಕ್ಕೆ ಸಂಬಂದಿಸಿದಂತೆ ಮಾಸ್ಟರ್ ಪ್ಲಾನ್ ಮಾಡೋಣ ಎಂದು ಶಾಸಕರು ಇಂಜಿನಿಯರ್‌ಗೆ ತಿಳಿಸಿದರು. ಉಪ್ಪಿನಂಗಡಿಯಲ್ಲಿ ಎಲ್‌ಕೆಜಿಯಿಂದ ಪದವಿ ತನಕ ಒಂದೇ ಕಡೆಯಲ್ಲಿ ಶಿಕ್ಷಣ ದೊರೆಯುವಂತೆ ಆಗಬೇಕಿದೆ ಇದಕ್ಕೆ ಎಲ್ಲಾ ರೀತಿಯ ಪ್ರಯತ್ನವನ್ನು ಮಾಡುವುದಾಗಿ ತಿಳಿಸಿದರು.

ಪದವಿ ಕಾಲೇಜಿ ಪ್ರಾಂಶುಪಾಲರ ವರ್ಗಾವಣೆ ರದ್ದು?
ಪದವಿ ಕಾಲೇಜಿನ ಪ್ರಾಂಶುಪಾಲರನ್ನು ವರ್ಗಾವಣೆ ಮಾಡಿದ್ದಾರೆ ಅವರು ಉತ್ತಮ ಪ್ರಾಂಶುಪಾಲರಾಗಿದ್ದರು ಅವರ ವರ್ಗಾವಣೆಯನ್ನು ರದ್ದುಗೊಳಿಸಿ ಮತ್ತೆ ಇದೇ ಕಾಲೇಜಿನಲ್ಲಿ ಉಳಿಸಿಕೊಳ್ಳಬೇಕಿದ ಎಂದು ಪೋಷಕರು ಶಾಸಕರ ಗಮನಕ್ಕೆ ತಂದರು. ಈ ಸಂಬಂಧ ಶಿಕ್ಷಣ ಇಲಾಖೆಯ ಮೇಲಧಿಕಾರಿಗಳ ಜೊತೆ ಮಾತನಾಡಿದ ಶಾಸಕರು ಉತ್ತಮ ಪ್ರಾಂಶುಪಾಲರು ಎಂದು ಪೋಷಕರು ಅಂಕ ನೀಡಿದ ಪ್ರಾಂಶುಪಾಲರಾದ ಸುಬ್ಬಪ್ಪ ಕೈಕಂಬ ಎಂಬವರನ್ನು ವರ್ಗಾವಣೆ ಮಾಡುವುದು ಬೇಡ ಎಂದು ಪೋಷಕರು ತಿಳಿಸಿರುವ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರು. ಈ ಹಿನ್ನೆಲೆಯಲ್ಲಿ ಅವರ ವರ್ಗಾವಣೆ ರದ್ದಾಗುವ ಸಂಭವವೂ ಇದೆ.


ಈ ಸಂದರ್ಭದಲ್ಲಿ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಯುನಿಕ್, ಜಿಲ್ಲಾ ಕಾಂಗ್ರೆಸ್‌ನ ಮುರಳೀಧರ ರೈ ಮಠಂತಬೆಟ್ಟು, ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎನ್. ಚಂದ್ರಹಾಸ ಶೆಟ್ಟಿ, ಕಾಲೇಜು ಅಭಿವೃದ್ಧಿ ಸಮಿತಿಯ ಮಾಜಿ ಸದಸ್ಯ ಅಜೀಜ್ ಬಸ್ತಿಕ್ಕಾರ್, ಆದಂ ಕೊಪ್ಪಳ, ಗ್ರಾಮ ಪಂಚಾಯತ್ ಸದಸ್ಯ ಯು.ಟಿ. ತೌಸೀಫ್, ಕಾಂಗ್ರೆಸ್ ಮುಖಂಡ ಜಯಪ್ರಕಾಶ್ ಬದಿನಾರು, ಹಿರಿಯ ವಿದ್ಯಾರ್ಥಿಗಳಾದ ನಝೀರ್ ಮಠ, ಶಬ್ಬೀರ್ ಕೆಂಪಿ, ಇಬ್ರಾಹಿಂ ಆಚಿ, ಸೌಕತ್ ಕೆಮ್ಮಾರ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here