20 ದಿನದೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಶಾಸಕರ ಖಡಕ್ ಸೂಚನೆ
ಪುತ್ತೂರು: ಕಳೆದ ಮೂರು ವರ್ಷಗಳ ಹಿಂದೆ ಪ್ರಾರಂಭಗೊಂಡ ಪುತ್ತೂರು -ಉಪ್ಪಿನಂಗಡಿ ಚತುಷ್ಪಥ ರಸ್ತೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ, ಮುಂದಿನ ೨೦ ದಿನದೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಇಂಜನಿಯರ್ ಹಾಗೂ ಗುತ್ತಿಗೆದಾರರಿಗೆ ಪುತ್ತೂರು ಶಾಸಕರಾದ ಅಶೋಕ್ ರೈ ಖಡಕ್ ಸೂಚನೆಯನ್ನು ನೀಡಿದ್ದಾರೆ.
ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಮೊದಲ ಬಾರಿ ಕ್ಷೇತ್ರ ಪರ್ಯಟನೆ ಆರಂಭಿಸಿದ ಅವರು ಮೊದಲಿಗೆ ಕೋಡಿಂಬಡಿ ಮಹಿಷಮರ್ದಿನಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಬಳಿಕ ಪುತ್ತೂರು- ಉಪ್ಪಿನಂಗಡಿ ರಸ್ತೆ ಕಾಮಗಾರಿಯನ್ನು ವೀಕ್ಷಣೆ ಮಾಡಿದರು.
೩ ವರ್ಷದಿಂದ ಕಾಮಗಾರಿ ನಡೆಯುತ್ತಿದೆ ಆದರೆ ಇನ್ನೂ ಕಾಮಗಾರಿ ಅಪೂರ್ಣವಾಗಿದೆ. ಚರಂಡಿ ಹಾಗೂ ತಡೆಗೋಡೆ ಕಾಮಗಾರಿ ಇನ್ನೂ ಬಾಕಿ ಇದೆ ಯಾಕೆ ಈರೀತಿ ಅಗಿದೆ. ನೀವು ಮೊದಲೇ ಎಸ್ಟಿಮೇಟ್ ಮಾಡಿಕೊಂಡಿಲ್ವ? ಅಥವಾ ನಿಮಗೆ ಕೊಟ್ಟ ಎಸ್ಟಿಮೇಟ್ ಸರಿ ಇಲ್ವಾ? ಎಂದು ಕಾಮಗಾರಿ ಇಂಜಿನಿಯರ್ ಹಾಗೂ ಗುತ್ತಿಗೆದಾರರನ್ನು ಪ್ರಶ್ನಿಸಿದರು. ಕಾಮಗಾರಿ ಎಳ್ಳಷ್ಟೂ ಕಳಪೆಯಾಗಬಾರದು, ಮುಂದಿನ ೨೦ ದಿನದೊಳಗೆ ಕಾಮಗಾರಿ ಪೂರ್ಣಗೊಳಿಸಲೇಬೇಕು ಎಂದು ಶಾಸಕರು ಸೂಚನೆ ನೀಡಿದರು.
ಕಾಮಗಾರಿ ವೇಳೆ ಅನೇಕ ಚರಂಡಿಗಳನ್ನು ಮುಚ್ಚಿದ್ದೀರಿ, ಮಳೆಗಾಲದಲ್ಲಿ ನೀರು ಎಲ್ಲಿಗೆ ಹೋಗಬೇಕು? ಮಣ್ಣು ತೆಗೆಯುವ ವೇಳೆ ಧರೆ ನಿರ್ಮಾಣವಾಗಿದೆ ಕೆಲವೊಂದು ಮನೆಗಳ ಅಂಗಳದವರೆಗೂ ಧರೆ ಇದೆ, ಮಣ್ಣು ಜರಿದರೆ ಮನೆ ಬೀಳಬಹುದು ಅಲ್ಲಿ ಯಾಕೆ ತಡೆಗೋಡೆ ನಿರ್ಮಾಣ ಮಾಡಿಲ್ಲ. ತಡೆಗೋಡೆ ನಿರ್ಮಾಣ ಮಾಡುವ ಕಾಮಗಾರಿ ನಿಮ್ಮ ಎಸ್ಟಿಮೇಟಲ್ಲಿ ಇಲ್ವ ಎಂದು ಶಾಸಕರು ಪ್ರಶ್ನಿಸಿದರು. ಕಾಮಗಾರಿಯಿಂದ ಯಾವುದೇ ಸಾರ್ವಜನಿಕರಿಗೆ ತೊಂದರೆಯಾಗಬಾರದು, ಮಳೆಗಾಲದಲ್ಲಿ ಅಪಾಯ ಉಂಟಾಗಬಾರದು, ಮಳೆ ನೀರು ರಸ್ತೆಯಲ್ಲಿ ಹರಿಯಬಾರದು ಇದಕ್ಕೆ ಬೇಕಾದ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು.
ಪರ್ಸನಲ್ ವಿಚಾರ ಏನೂ ಇಲ್ಲ
ನನ್ನ ಜೊತೆ ಪರ್ಸನಲ್ ವಿಚಾರ ಏನೂ ಇಲ್ಲ. ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು . ಎಲ್ಲೂ ಲೋಪವಾಗದಂತೆ ನೋಡಿಕೊಳ್ಳಬೇಕು. ಕ್ಷೇತ್ರದ ಅಭಿವೃದ್ದಿಯೇ ನನ್ನ ಧ್ಯೇಯವಾಗಿದೆ, ಶಾಸಕರಿಗೆ ಏನೂ ಗುತ್ತಿಗೆದಾರರ ಜೊತೆ ಪರ್ಸನಲ್ ವಿಚಾರವೇ ಇಲ್ಲ ಸರಿಯಾಗಿ ಕೆಲಸ ಮಾಡಿತೋರಿಸಬೇಕು ಎಂದು ತಾಕೀತು ಮಾಡಿದರು.
ಒಂದಿಬ್ಬರು ಕೆಲಸದವರಿದ್ದಾರೆ
ರಸ್ತೆ ಮಧ್ಯೆ ಡಿವೈಡರ್ ಕಾಮಗಾರಿಗೆಂದು ಸಿಮೆಂಟ್ ಕಲ್ಲುಗಳನ್ನು ತಂದು ಹಾಕಲಾಗಿದೆ ಇದರಿಂದ ಅಪಾಯವಾಗುವ ಸಂಭವ ಇದೆ. ಒಂದಿಬ್ಬರು ಕೆಲಸದವರನ್ನು ಬಿಟ್ಟು ಕಾಮಗಾರಿ ನಡೆಸುವುದು ಗುತ್ತಿಗೆದಾರರಿಗೆ ಹೇಳಿಸಿದ ಕೆಲಸವಲ್ಲ. ಹೆಚ್ಚು ಕಾರ್ಮಿಕರನ್ನು ಬಳಸಿ ಕಾಮಗಾರಿಯ ವೇಗವನ್ನು ಹೆಚ್ಚಿಸಬೇಕು ಎಂದು ಗುತ್ತಿಗೆದಾರಿಗೆ ಸೂಚಿಸಿದರು. ಕಾಮಗಾರಿಯಿಂದಾಗಿ ನಮಗೆ ತೊಂದರೆಯಾಗಿದೆ ಎಂದು ಹಲವು ಮಂದಿ ಶಾಸಕರಲ್ಲಿ ತಮ್ಮ ಅಳಲು ತೋಡಿಕೊಂಡರು. ಯಾರಿಗೂ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ಇಂಜನಿಯರ್ ಮತ್ತು ಗುತ್ತಿಗೆದಾರರಿಗೆ ಶಾಸಕರು ಸೂಚಿಸಿದರು. ಕಾಟಾಚಾರಕ್ಕೆ ಎಂಬಂತೆ ಕೆಲಸ ಮಡುವ ಆಟ ನನ್ನಲ್ಲಿ ಬೇಡ . ವಹಿಸಿಕೊಂಡ ಕಡಲಸವನ್ನು ಪರ್ಫೆಕ್ಟಾಗಿ ಮಾಡಬೇಕು ಎಂದು ಖಡಕ್ ಎಚ್ಚರಿಕೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ರಾಜಾರಾಮ್, ಕಿರಿಯ ಅಭಿಯಂತರರಾದ ಕಾನಿಷ್ಕ ರವರು ಇಲಾಖಾತ್ಮಕ ಮಾಹಿತಿಗಳನ್ನು ಶಾಸಕರಿಗೆ ನೀಡಿದರು. ಶಾಸಕರೊಂದಿಗೆ ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ ಕೆ.ಬಿ., ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಯುನಿಕ್, ಕಾಂಗ್ರೆಸ್ ಪ್ರಮುಖರಾದ ಉಮಾನಾಥ ಶೆಟ್ಟಿ ಪೆರ್ನೆ, ಅನಿ ಮಿನೇಜಸ್, ಮುರಳೀಧರ ರೈ ಮಠಂತಬೆಟ್ಟು, ಜಯಪ್ರಕಾಶ್ ಬದಿನಾರು, ಅಜೀಜ್ ಬಸ್ತಿಕಾರ್, ನಝೀರ್ ಮಠ, ಆದಂ ಕೊಪ್ಪಳ ಮತ್ತಿತರರು ಉಪಸ್ಥಿತರಿದ್ದರು.