ಪುತ್ತೂರು: ನಾನು ಮನೆ ಕಟ್ಟುತ್ತಿದ್ದೇನೆ, ಬ್ಯಾಂಕಿನಿಂದ ಲೋನ್ ತೆಗೆಯಲು ಜಾಗದ ಎನ್‌ಒಸಿ ಬೇಕಾಗಿದೆ. ಅರ್ಜಿ ಹಾಕಿದ್ದೇನೆ ಕಳೆದ 15 ದಿವಸಗಳಿಂದ ಸಿಬ್ಬಂದಿ ನಾಳೆ ಬನ್ನಿ ಎಂದು ಸತಾಯಿಸುತ್ತಿದ್ದಾರೆ. ಕಚೇರಿಗೆ ಬಂದು ಸಾಕಾಗಿ ಹೋಗಿದೆ ನನಗೆ ನ್ಯಾಯ ಕೊಡಿ ಎಂದು ಮೊಟ್ಟೆತ್ತಡ್ಕ ಮಹಿಳೆಯೋರ್ವರು ಶಾಸಕರಿಗೆ ದೂರು ನೀಡಿದ್ದು ತಕ್ಷಣವೇ ಸ್ಪಂದಿಸಿದ ಶಾಸಕರು ಕಚೇರಿಗೆ ತೆರಳಿ ಸಿಬ್ಬಂದಿಯನ್ನು ತರಾಟೆಗೆ ಎತ್ತಿಕೊಂಡ ಘಟನೆ ನಡೆಯಿತು.
ಭೂ ಸರ್ವೆಕ್ಷಣಾ ಇಲಾಖಾ ಕಚೇರಿಗೆ ತೆರಳಿದ ಶಾಸಕರು ಮಹಿಳೆಗೆ ಎನ್‌ಒಸಿ ಕೊಡಲು ಯಾಕೆ ಸತಾಯಿಸುತ್ತೀರಿ? ಅವರು ಕೊಟ್ಟ ದಾಖಲೆಗಳು ಸರಿಯಿಲ್ಲವೇ? ಪದೇ ಪದೇ ನಾಳೆ ಬನ್ನಿ ಎಂದು ಯಾಕೆ ಹೇಳುತ್ತೀರಿ ಎಂದು ಸಿಬ್ಬಂದಿಯನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಿಬ್ಬಂದಿ ನನ್ನ ತಪ್ಪಿಲ್ಲ ಸರ್. ನಾನು ಫೈಲ್ ರೆಡಿ ಮಾಡಿದ್ದೇನೆ ಅದು ಡಿ ಟಿ ಯವರಲ್ಲಿದೆ. ಡಿ ಟಿ ಸಹಿ ಹಾಕದೆ ಅಲ್ಲೇ ಇಟ್ಟುಕೊಂಡಿದ್ದಾರೆ. ಅವರು ರಜೆಯಲ್ಲಿದ್ದಾರೆ ಮತ್ತು ಚುನಾವಣಾ ಕರ್ತವ್ಯದ ಕಾರಣಕ್ಕೆ ಪೆಂಡಿಂಗ್ ಆಗಿದೆ ಎಂದು ಉತ್ತರಿಸಿದರು. ಇದಕ್ಕೆ ತೃಪ್ತರಾಗದ ಶಾಸಕರು ಚುನಾವಣೆ ಕಳೆದ ದಿನಗಳು ಕಳೆದಿದೆ. ಓರ್ವ ಬಡ ಮಹಿಳೆ ಮನೆ ಕಟ್ಟಲು ಎನ್‌ಒಸಿ ಕೇಳಿದ್ದಾರೆ ಅಷ್ಟೆ ಅದನ್ನು ಕೊಡಲು ನಿಮಗೆ ಏನಾಗಿದೆ ಎಂದು ಪ್ರಶ್ನಿಸಿದರು. ಈ ವೇಳೆ ಕಚೇರಿಗೆ ಸಹಾಯಕ ಕಮಿಷನರ್ ಆಗಮಿಸಿದರು. ಕಡತ ವಿಳಂಬದ ಬಗ್ಗೆ ಸಿಬ್ಬಂದಿಯಲ್ಲಿ ಪ್ರಶ್ನಿಸಿದರು. ತಕ್ಷಣವೇ ಅವರಿಗೆ ಎನ್‌ಒಸಿ ಕೊಟ್ಟು ಬಿಡಿ ಸತಾಯಿಸಲು ಹೋಗಬೇಡಿ ಎಂದು ಸಹಾಯಕ ಕಮಿಷನರ್ ಹೇಳಿದರು. ಈ ವೇಳೆ ಮಹಿಳೆ ʼಆಯಿತು ಎಂದು ಹೇಳುವುದು ಮಾತ್ರ ಮಾಡಿಕೊಡುವುದಿಲ್ಲ, ಯಾರಿಗೆ ಹೇಳಿದ್ರೂ ನನಗೆ ಭಯವಿಲ್ಲʼ ಎಂದು ಸಹಾಯಕ ಕಮಿಷನರ್ ಬಳಿ ಹೇಳಿದರು. ಬಡವರನ್ನು ಸತಾಯಿಸಬೇಡಿ. ಕಾನೂನು ಪ್ರಕಾರ ದಾಖಲೆಗಳು ಸರಿ ಇದ್ದಲ್ಲಿ ತಕ್ಷಣ ಎನ್‌ಒಸಿ ಕೊಡಬೇಕು ಎಂದು ಹೇಳಿ ಅಲ್ಲಿಂದ ನಿರ್ಗಮಿಸಿದರು.