ನೆಲ್ಯಾಡಿ-ಚರಂಡಿ ಅಸಮರ್ಪಕ ನಿರ್ವಹಣೆ-ಜೂ.3ರೊಳಗೆ ಬಗೆಹರಿಸದಿದ್ದಲ್ಲಿ ಪ್ರತಿಭಟನೆ ಎಚ್ಚರಿಕೆ

0

ನೆಲ್ಯಾಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಚತುಷ್ಪಥ ಕಾಮಗಾರಿಯ ಸಂದರ್ಭದಲ್ಲಿ ನೆಲ್ಯಾಡಿ ಪೇಟೆಯಲ್ಲಿ ಚರಂಡಿ ನಿರ್ವಹಣೆ ಸಮರ್ಪಕವಾಗಿ ಆಗಿಲ್ಲ. ಮಳೆಗಾಲದಲ್ಲಿ ಇದರಿಂದ ಸಮಸ್ಯೆಯಾಗಲಿದ್ದು ಇದನ್ನು ಶೀಘ್ರವೇ ಬಗೆಹರಿಸದೇ ಇದ್ದಲ್ಲಿ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸುತ್ತೇವೆ ಎಂದು ನೆಲ್ಯಾಡಿಯ ವರ್ತಕರು ಹಾಗೂ ಕಟ್ಟಡ ಮಾಲೀಕರು ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದ್ದಾರೆ.


ಚತುಷ್ಪಥ ಹೆದ್ದಾರಿ ನಿರ್ಮಾಣ ಸಂದರ್ಭ ನೆಲ್ಯಾಡಿ ಪೇಟೆಯಲ್ಲಿ ಚರಂಡಿ ಮಾಡಲಾಗಿದ್ದರೂ ಅದರ ಒಳಗಡೆ ಮಣ್ಣು, ಸಿಮೆಂಟ್‌ನ ತುಂಡು, ಕಸಕಡ್ಡಿ ಸೇರಿದಂತೆ ಇತರೇ ತ್ಯಾಜ್ಯಗಳೂ ತುಂಬಿಕೊಂಡಿವೆ. ಇದರಿಂದ ಆಗುತ್ತಿರುವ ಸಮಸ್ಯೆ ಬಗ್ಗೆ ವರ್ತಕರಿಂದ ಹಾಗೂ ಸಾರ್ವಜನಿಕರಿಂದ ದೂರು ಬಂದಿವೆ. ಈ ಹಿನ್ನೆಲೆಯಲ್ಲಿ ಕಟ್ಟಡ ಹಾಗೂ ವರ್ತಕರ ಸಂಘದವರು ಗುತ್ತಿಗೆದಾರರಾದ ಕೆಎನ್‌ಆರ್ ಕನ್‌ಸ್ಟ್ರಕ್ಷನ್ ಕಂಪನಿಯ ಇಂಜಿನಿಯರ್ ಮಹೇಂದ್ರ ಸಿಂಗ್‌ರನ್ನು ಸ್ಥಳಕ್ಕೆ ಕರೆಸಿ ಅಸಮರ್ಪಕ ಚರಂಡಿ ನಿರ್ವಹಣೆಯ ಬಗ್ಗೆ ಗಮನ ಸೆಳೆದರು. ಚರಂಡಿಯು ಅವ್ಯವಸ್ಥೆಯಿಂದ ಕೂಡಿದ್ದ ಸ್ಥಳಗಳಿಗೆ ಅಧಿಕಾರಿಯೊಂದಿಗೆ ಭೇಟಿ ನೀಡಿ, ಚರಂಡಿ ಅಸಮರ್ಪಕ ನಿರ್ವಹಣೆ, ಕಳಪೆ ಕಾಮಗಾರಿ, ಚರಂಡಿಯ ಒಳಗಡೆ ಮಣ್ಣಿನ ರಾಶಿ, ಸಿಮೆಂಟ್‌ನ ರಾಶಿ, ಕಸ ಕಡ್ಡಿಗಳನ್ನು ತೆಗೆಯದೆ ಚರಂಡಿಯನ್ನು ನಿರ್ಮಿಸಿರುವುದರಿಂದ ನೀರು ಸರಾಗವಾಗಿ ಹೋಗಲು ತೊಂದರೆಯಾಗುವುದನ್ನು ತೋರಿಸಿ ಮನವರಿಕೆ ಮಾಡಲಾಯಿತು.

ಪ್ರತಿಭಟನೆ ಎಚ್ಚರಿಕೆ:
ನೆಲ್ಯಾಡಿ ಪೇಟೆಯಲ್ಲಿನ ಚರಂಡಿಗಳ ಅವ್ಯವಸ್ಥೆ ಸೇರಿದಂತೆ ಕಾಮಗಾರಿ ಕುರಿತ ಹಲವು ವಿಚಾರಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಆಗಾಗ ಗಮನಕ್ಕೆ ತಂದರು ಸರಿಪಡಿಸುವ ಕಾರ್ಯ ನಡೆದಿಲ್ಲ. ಹಾಗಾಗಿ ಈಗ ಕಡೆಯ ಬಾರಿಗೆ ಮನವಿ ಮಾಡುತ್ತಿದ್ದೇವೆ. ಮುಂದಿನ ಶನಿವಾರದ ಒಳಗೆ ಈ ಎಲ್ಲಾ ಅವ್ಯವಸ್ಥೆಗಳನ್ನು ಸರಿಪಡಿಸಬೇಕು. ಒಂದು ವೇಳೆ ಸರಿಪಡಿಸದೇ ಇದ್ದಲ್ಲಿ ನೆಲ್ಯಾಡಿ ಪೇಟೆಯ ಸಮಸ್ತ ನಾಗರಿಕರು ಸೇರಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಲಾಯಿತು.

ಜೂ.3ರೊಳಗೆ ಸೂಕ್ತ ಕ್ರಮ:
ಜೂ.3ರ ಒಳಗೆ ಸಮರ್ಪಕವಾಗಿ ಕೆಲಸವನ್ನು ನಿರ್ವಹಿಸಿ ಕೊಡಲಾಗುವುದೆಂದು ಕೆಎನ್‌ಆರ್ ಕಂಪನಿಯ ಇಂಜಿನಿಯರ್ ಮಹೇಂದ್ರ ಸಿಂಗ್ ಒಪ್ಪಿಕೊಂಡರು. ಜೂ.3ರ ಒಳಗೆ ಸಮರ್ಪಕವಾಗಿ ಕೆಲಸವನ್ನು ಮಾಡಿಕೊಡದೇ ಇದ್ದಲ್ಲಿ ಕಟ್ಟಡ ಮಾಲಕರು, ವರ್ತಕರು ಹಾಗೂ ಸಾರ್ವಜನಿಕರು ಸೇರಿ ರಸ್ತೆ ಬಂದ್ ಮಾಡಿ ಪ್ರತಿಭಟಿಸುವುದಾಗಿ ಕಟ್ಟಡ ಮಾಲಕರ ಸಂಘದ ಅಧ್ಯಕ್ಷರಾದ ಎ.ಕೆ ವರ್ಗೀಸ್‌ರವರು ಈ ಸಂದರ್ಭದಲ್ಲಿ ತಿಳಿಸಿದರು. ವರ್ತಕರ ಸಂಘದ ಅಧ್ಯಕ್ಷರಾದ ರಫೀಕ್ ಸಿಗಲ್, ಉಪಾಧ್ಯಕ್ಷರಾದ ಗಣೇಶ್ ರಶ್ಮಿ, ಕಟ್ಟಡ ಮಾಲಕರ ಸಂಘದ ಕಾರ್ಯದರ್ಶಿ ರವಿಚಂದ್ರ ಹೊಸವಕ್ಲು, ನೆಲ್ಯಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅಬ್ದುಲ್ ಜಬ್ಬಾರ್ ಹಾಗೂ ಕಟ್ಟಡ ಮಾಲಕರು ಹಾಗೂ ವರ್ತಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here