ಕೊಯಿಲದ ಯುವಕ ವಿದೇಶದಲ್ಲಿ ಆತ್ಮಹತ್ಯೆ

0

ರಾಮಕುಂಜ: ವಿದೇಶದಲ್ಲಿ ಉದ್ಯೋಗದಲ್ಲಿರುವ ಕಡಬ ತಾಲೂಕಿನ ಕೊಯಿಲ ಗ್ರಾಮದ ಯುವಕನೋರ್ವ ಅಲ್ಲಿ ತನ್ನ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೇ 28ರಂದು ನಡೆದಿದೆ.

ಕೊಯಿಲ ಗ್ರಾಮದ ಸುಣ್ಣಾಡಿ ನಿವಾಸಿ ದಿ|ಮೋನಪ್ಪ ಪೂಜಾರಿಯವರ ಪುತ್ರ ಸಂದೇಶ್ (32ವ.) ಆತ್ಮಹತ್ಯೆ ಮಾಡಿಕೊಂಡವರು. ಇವರು ಓಮನ್ ದೇಶದ ಮಸ್ಕತ್‌ನಲ್ಲಿ ಕಂಪನಿಯೊಂದರಲ್ಲಿ ಲೈನ್ ಸೇಲ್ ಉದ್ಯೋಗ ಮಾಡುತ್ತಿದ್ದು, ಎಂಟು ತಿಂಗಳ ಹಿಂದೆಯಷ್ಟೆ ಕೆಲಸಕ್ಕೆ ಸೇರಿದ್ದರು. ಇವರ ಸಹೋದರ ಸಂತೋಷ್ ಕೂಡಾ ಮಸ್ಕತ್‌ನಲ್ಲೇ ಉದ್ಯೋಗದಲ್ಲಿದ್ದು ಇಬ್ಬರು ಒಂದೇ ಕೊಠಡಿಯಲ್ಲಿ ವಾಸವಾಗಿದ್ದರು. ಇವರ ಸಂಬಂಧಿ ಯುವಕ ಕೊಯಿಲ ಗ್ರಾಮದ ಅಂಬಾ ನಿವಾಸಿ ಚರಣ್ ಎಂಬವರು ಸಹ ಮಸ್ಕತ್‌ನಲ್ಲಿ ಉದ್ಯೋಗದಲ್ಲಿದ್ದು ಇವರು ಇನ್ನೊಂದು ಕೊಠಡಿಯಲ್ಲಿ ವಾಸವಾಗಿದ್ದರು. ಮೇ 29ರಂದು ಸಂದೇಶ್ ಅವರು ಬೇಗ ಕೆಲಸ ಮುಗಿಸಿ ಕೊಠಡಿಗೆ ಬಂದವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಇದಾದ ಕೆಲ ಹೊತ್ತಿನ ಬಳಿಕ ಚರಣ್ ಅವರು ಸಂದೇಶ್ ಇರುವ ಕೊಠಡಿಗೆ ಬಂದು ನೋಡಿದಾಗ ಕೊಠಡಿ ಬಾಗಿಲು ಬಂದ್ ಆಗಿತ್ತು. ಕರೆದರೂ ಯಾವುದೇ ಉತ್ತರ ಬಾರದೇ ಇದ್ದಾಗ ಸಂಶಯಗೊಂಡು ಗಾಬರಿಯಿಂದ ಸಂದೇಶ್‌ರವರ ಸಹೋದರ ಸಂತೋಷ್‌ಗೆ ಕರೆ ಮಾಡಿ ಕರೆಸಿಕೊಂಡಿದ್ದಾರೆ. ಸಂತೋಷ್ ತನ್ನಲ್ಲಿದ್ದ ಕೀಯಿಂದ ಕೊಠಡಿಯ ಬಾಗಿಲು ತೆರೆದು ನೋಡಿದಾಗ ಸಂದೇಶ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಮಸ್ಕತ್‌ನಲ್ಲೇ ಮೃತದೇಹದ ಮರಣೋತ್ತರ ಪರೀಕ್ಷೆ ಪ್ರಕ್ರಿಯೆ ಮುಗಿದು ಮಂಗಳವಾರ ಅಥವಾ ಬುಧವಾರ ಮೃತದೇಹ ಊರಿಗೆ ಆಗಮಿಸುವ ನಿರೀಕ್ಷೆ ಇದೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.

8 ತಿಂಗಳ ಹಿಂದೆಯಷ್ಟೇ ಉದ್ಯೋಗಕ್ಕೆ ತೆರಳಿದ್ದರು: ಸಂದೇಶ್ ಸಹೋದರ ಸಂತೋಷ್‌ರವರು 7 ವರ್ಷಗಳಿಂದ ಮಸ್ಕತ್‌ನಲ್ಲಿ ಉದ್ಯೋಗದಲ್ಲಿದ್ದಾರೆ. ಆದರೆ ಮೃತ ಸಂದೇಶ ಕಳೆದ ಕೆಲವು ವರ್ಷಗಳಿಂದ ಚೆನೈನಲ್ಲಿ ಹೋಟೇಲ್‌ನಲ್ಲಿ ಕೆಲಸ ಮಾಡುತ್ತಿದ್ದವರು 8 ತಿಂಗಳ ಹಿಂದೆಯಷ್ಟೇ ಮಸ್ಕತ್‌ಗೆ ತೆರಳಿದ್ದರು. ಆರಂಭದಲ್ಲಿ ವಿಸಿಟಿಂಗ್ ವೀಸಾದಲ್ಲಿ ಮಸ್ಕತ್‌ಗೆ ತೆರಳಿದ್ದ ಸಂದೇಶ್ ಬಳಿಕ ಅಲ್ಲಿನ ಕೆಲಸದ ವೀಸಾ ಪಡೆದು ಕರ್ತವ್ಯ ನಿರ್ವಹಿಸುತ್ತಿದ್ದರು. ಸಂಸ್ಥೆಯಲ್ಲಿ ಉತ್ತಮ ವೇತನ ಹಾಗೂ ಯಾವುದೇ ಕಿರಿಕಿರಿ ಇಲ್ಲದ ಉದ್ಯೋಗ ಇದ್ದು ಯಾವುದೇ ಸಮಸ್ಯೆಗಳೂ ಇರಲಿಲ್ಲ. ಅಣ್ಣ ತಮ್ಮ ಜೊತೆಯಾಗಿಯೇ ಇದ್ದು ಸಂತೋಷವಾಗಿಯೇ ಇದ್ದರು. ಕೇವಲ ಒಂದು ಲೈನ್ ’ಸಾರಿ ಅಣ್ಣ’ ಎಂದು ಬರೆದಿಟ್ಟು ಸಂದೇಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೃತ ಸಂದೇಶ್ ತಾಯಿ ವಿಮಲ, ಸಹೋದರರಾದ ಮಸ್ಕತ್‌ನಲ್ಲಿ ಉದ್ಯೋಗದಲ್ಲಿರುವ ಸಂತೋಷ್ ಹಾಗೂ ಊರಿನಲ್ಲಿ ಆಟೋ ಚಾಲಕನಾಗಿರುವ ಸತೀಶ್ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here