ದುಷ್ಕರ್ಮಿಗಳಿಂದ ಹತ್ಯೆಯಾದ ಫಾಝಿಲ್, ಮಸೂದ್ ಹಾಗೂ ಜಲೀಲ್ ಕುಟುಂಬಕ್ಕೂ ರೂ.25 ಲಕ್ಷ ಪರಿಹಾರ – ಕುಟುಂಬದ ಒಬ್ಬರಿಗೆ ಸರಕಾರಿ ಉದ್ಯೋಗ ನೀಡುವಂತೆ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಆಗ್ರಹ

0

ಪುತ್ತೂರು: ನೆರೆಯ ತಾಲೂಕು ಹಾಗೂ ಜಿಲ್ಲೆಯಲ್ಲಿ ಈ ಹಿಂದೆ ದುಷ್ಕರ್ಮಿಗಳಿಂದ ಹತ್ಯೆಯಾದ ಫಾಝಿಲ್, ಮಸೂದ್ ಹಾಗೂ ಜಲೀಲ್ ಕುಟುಂಬಕ್ಕೆ ತಲಾ ರೂ.25 ಲಕ್ಷ ಪರಿಹಾರ ನೀಡಬೇಕು. ಕುಟುಂಬದ ಒಬ್ಬರಿಗೆ ಸರಕಾರಿ ಉದ್ಯೋಗ ನೀಡಬೇಕು. ಈ ಮೂವರ ಹತ್ಯೆ ಪ್ರಕರಣವನ್ನು ಎನ್‌ಐಎಎಗೆ ವಹಿಸಿಕೊಡಬೇಕು ಎಂದು ದ.ಕ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಅಧ್ಯಕ್ಷ ಅಶ್ರಫ್ ಕಲ್ಲೇಗ ತಿಳಿಸಿದರು.

ಮೇ.30ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳ್ಳಾರೆಯ ಕಳೆಂಜದ ಮಸೂದ್, ಸುರತ್ಕಲ್ ಕಾಟಿಪಳ್ಳದ ಫಾಝಿಲ್ ಹಾಗೂ ಕೃಷ್ಣಾಪುರದಲ್ಲಿ ಜಲೀಲ್‌ರವರು ದುಷ್ಕರ್ಮಿಗಳಿಂದ ಹತ್ಯೆಯಾಗಿದ್ದಾರೆ. ಆದರೆ ಹಿಂದಿನ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಪರಿಹಾರ ನೀಡುವಲ್ಲಿ ತಾರತಮ್ಯ ಮಾಡಿದ್ದು ಯಾವುದೇ ಪರಿಹಾರ ದೊರೆಯಲಿಲ್ಲ. ವಿರೋಧ ಪಕ್ಷದ ನಾಯಕರಾಗಿದ್ದ ಸಂದರ್ಭದಲ್ಲಿ ಸಿದ್ದರಾಮಯ್ಯ ಈ ಹಿಂದೆ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ನಮ್ಮ ಸರಕಾರ ಬಂದರೆ ಪರಿಹಾರ ನೀಡುವುದು ಹಾಗೂ ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದರು. ಈಗ ಜಾತ್ಯಾತೀತ ಸರಕಾರ ಆಡಳಿತಕ್ಕೆ ಬಂದಿದ್ದು, ದುಷ್ಕರ್ಮಿಗಳಿಂದ ಹತ್ಯೆಯಾದ ಮೂವರಿಗೂ ರೂ.25 ಲಕ್ಷ ಪರಿಹಾರ ನೀಡಬೇಕು ಹಾಗೂ ಕುಟುಂಬದ ಒಬ್ಬರಿಗೆ ಸರಕಾರಿ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದರು. ನಮ್ಮ ಬೇಡಿಕೆ ಈಡೇರಿಸದಿದ್ದಲ್ಲಿ ಅವರು ನೀಡಿದ ಭರವಸೆ ಸುಳ್ಳಾಗುತ್ತದೆ. ಅಲ್ಲದೆ ಇದರ ವಿರುದ್ದ ಜಿಲ್ಲೆಯಾದ್ಯಂತ ಎಲ್ಲಾ ಮುಸ್ಲಿಂ ಸಂಘಟನೆಗಳು ಉಗ್ರವಾದ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲೂ ಹಲವು ಅನುಮಾನಗಳಿವೆ. ಈ ಹಿಂದೆ ನಡೆದ ತನಿಖೆಗಳು ಸಮರ್ಪಕವಾಗಿಲ್ಲ. ಈ ಪ್ರಕರಣವನ್ನು ಉನ್ನತ ಮಟ್ಟದ ತನಿಖಾಧಿಕಾರಿಗಳ ಮೂಲಕ ಸಮಗ್ರವಾಗಿ ಮರು ತನಿಖೆ ನಡೆಸಬೇಕು. ಮೂರು ಮಂದಿಯ ಹತ್ಯೆ ಪ್ರಕರಣವನ್ನು ಎನ್‌ಐಎಗೆ ವಹಿಸಿಕೊಡಬೇಕು. ಪ್ರವೀಣ್ ನೆಟ್ಟಾರು ಕೊಲೆಗೆ ಮೂವರನ್ನು ಕೊಲೆ ಮಾಡಿರುವುದಾಗಿ ವಿ.ಎಚ್.ಪಿ ಮುಖಂಡ ಶರಣ್ ಪಂಪುವೆಲ್ ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಅವರ ಮೇಲೆ ಈವರೆಗೂ ಪೋಲೀಸರು ಸುಮೊಟೋ ಕೇಸು ದಾಖಲಿಸಿಲ್ಲ. ಈ ದೃಷ್ಟಿಯಲ್ಲಿ ಸಮಗ್ರವಾದ ತನಿಖೆ ನಡೆಸಬೇಕು. ಸರಕಾರ ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಇಸ್ಲಾಂ ಧರ್ಮದವರು ನಮಾಜು ಮಾಡುವುದರ ಬಗ್ಗೆ ವ್ಯಂಗ್ಯ ಚಿತ್ರ ಹಾಕಿ ಮುಸ್ಲಿಮರಿಗೆ ಅವಮಾನ ಆಗುವ ರೀತಿಯಲ್ಲಿ ಸಂದೀಪ್ ವಾಣಿಯನ್ ಪಾಣಾಜೆ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಡಿವೈಎಸ್‌ಪಿಯವರನ್ನು ಭೇಟಿ ಮಾಡಿ ಅವರ ವಿರುದ್ಧ ದೂರು ನೀಡಲಾಗುವುದು. ಕೋಮು ಸೂಕ್ಷ್ಮ ಪ್ರದೇಶವಾದ ಪುತ್ತೂರಿನಲ್ಲಿ ಇಂತಹ ವ್ಯಂಗ್ಯ ಚಿತ್ರವನ್ನು ಹಾಕುವ ಮೂಲಕ ಸಮಾಜಕ್ಕೆ ನೋವುಂಟು ಮಾಡುವ ಉದ್ದೇಶ ಇಟ್ಟುಕೊಳ್ಳುವುದು ಇನ್ನು ಮುಂದೆ ನಡೆಯದಂತೆ ಪೊಲೀಸ್ ಇಲಾಖೆ ಎಚ್ಚರ ವಹಿಸುವಂತೆ ಅವರು ಆಗ್ರಹಿಸಿದರು.
ಜಿಲ್ಲಾ ಮುಸ್ಮಿಂ ಯುವಜನ ಪರಿಷತ್ ಉಪಾಧ್ಯಕ್ಷ ಸಾಗರ್ ಇಬ್ರಾಹಿಂ, ನೌಷದ್ ಬೊಳುವಾರು ಹಾಗೂ ಜೈನುದ್ದೀನ್ ವಿಟ್ಲ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here