ಪಾಣಾಜೆ ಸರಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ , ಪುಸ್ತಕ , ಯೂನಿಫಾರಂ ವಿತರಣೆ

0

ಗಡಿಗ್ರಾಮದ ಶಾಲೆಗಳ ಅಭಿವೃದ್ದಿಗೆ ವಿಶೇಷ ಒತ್ತು: ಶಾಸಕ ಅಶೋಕ್ ರೈ


ಪುತ್ತೂರು: ಗಡಿಗ್ರಾಮದ ಸರಕಾರಿ ಶಾಲೆಗಳ ಅಭಿವೃದ್ದಿಗೆ ವಿಶೆಷ ಒತ್ತು ನೀಡಲಾಗುವುದು ಮತ್ತು ಗಡಿಗ್ರಾಮದ ಸರಕಾರಿ ಶಾಲೆಗಳನ್ನು ಉಳಿಸುವಲ್ಲಿ , ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸುವಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.


ಅವರು ಪಾಣಾಜೆ ಸರಕಾರಿ ಹಿ ಪ್ರಾ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವದ ಪ್ರಯುಕ್ತ ವಿದ್ಯಾರ್ಥಿಗಳಿಗೆ ದಾನಿಯೊಬ್ಬರು ನೀಡಿದ ಶಾಲಾ ಬ್ಯಾಗ್ ಮತ್ತು ಸರಕಾರದಿಂದ ನೀಡಲಾಗುವ ಯುನಿಫಾರಂ ಅನ್ನು ವಿತರಿಸಿ ಮಾತನಾಡಿದರು.


ಪಾಣಾಜೆ ಶಾಲೆ ಶತಮಾನವನ್ನು ಕಂಡಿದ್ದು ಇಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿಲ್ಲ. ಶಾಲಾ ಕಟ್ಟಡದ ಕೊರತೆ ಮತ್ತು ಶೌಚಾಲಯದ ಕೊರತೆ ಇರುವ ಬಗ್ಗೆ ಪೋಷಕರು ಶಾಸಕರ ಗಮನಕ್ಕೆ ತಂದರು. ಪೀಠೋಪಕರಣಗಳ ಕೊರತೆ ಮತ್ತು ಹಾಲ್‌ಗಳ ಕೊರತೆಯಿಂದ ಮಕ್ಕಳಿಗೆ ಊಟ ಮಾಡಲು ಸೂಕ್ತ ಸ್ಥಳವಕಾಶದ ಕೊರತೆಯಿರುವ ಬಗ್ಗೆಯೂ ಶಾಸಕರಲ್ಲಿ ಪೋಷಕರು ತಿಳಿಸಿದರು. ಸರಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುತ್ತಿರುವ ಕಾರಣಕ್ಕೆ ಪುತ್ತೂರಿನ ಹಾರಾಡಿ, ಕೆಯ್ಯೂರು ಕೆಪಿಎಸ್ ಸ್ಕೂಲ್, ಕುಂಬ್ರ ಕೆಪಿಎಸ್ ಸ್ಕೂಲ್ ಸೇರಿದಂತೆ ತಾಲೂಕಿನ ವಿವಿಧ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿರುವುದು ಅತ್ಯಂತ ಸಂತೋಷದ ವಿಚಾರವಾಗಿದೆ ಎಂದು ಹೇಳಿದ ಶಾಸಕರು ಮಕ್ಕಳನ್ನು ಸರಕಾರಿ ಶಾಲೆಗೆ ಕಳುಹಿಸುವ ಮೂಲಕ ಶಾಲೆಯನ್ನು ಉಳಿಸಿಕೊಳ್ಳುವ ಕೆಲಸವನ್ನು ನಾವು ಮಾಡಬೇಕಿದೆ ಎಂದು ಹೇಳಿದರು.

ವಿಶೇಷ ಅನುದಾನ
ಪಾಣಾಜೆ ಶಾಲೆಯಲ್ಲಿ ಅನೇಕ ಕೊರತೆಗಳಿದ್ದು ಅವುಗಳನ್ನು ನೀಗಿಸುವ ನಿಟ್ಟಿನಲ್ಲಿ ವಿಶೇಷ ಅನುದಾನವನ್ನು ನೀಡಲು ತಾನು ಬದ್ದನಾಗಿದ್ದೇನೆ ಎಂದು ಶಾಸಕರು ತಿಳಿಸಿದರು. ಇಲ್ಲಿರುವ ಹಳೆಯಕಾಲದ ಕಟ್ಟಡವನ್ನು ಕೆಡವಿ ಹೊಸ ಕಟ್ಟಡವನ್ನು ನಿರ್ಮಾಣ ಮಾಡುವಲ್ಲಿ ಮುತುವರ್ಜಿವಹಿಸುವುದಾಗಿ ಹೇಳಿದ ಶಾಸಕರು ಹಂತಹಂತವಾಗಿ ಇಲ್ಲಿಗೆ ನಾಲ್ಕು ಕೊಠಡಿಗಳನ್ನು ಮಂಜೂರು ಮಾಡುವುದಾಗಿ ಭರವಸೆ ನೀಡಿದರು.ಶಿಕ್ಷಕರ ಕೊರತೆ ಇರುವ ಕಾರಣ ಇಲ್ಲಿಗೆ ಎರಡು ಅತಿಥಿ ಶಿಕ್ಷಕರನ್ನು ನೇಮಕಮಾಡಲಾಗಿದೆ, ಧೈಹಿಕ ಶಿಕ್ಷಕರ ನೇಮಕಾತಿಯೂ ಶೀಘ್ರದಲ್ಲಿ ನಡೆಯಲಿದೆ ಎಂದು ಹೇಳಿದರು. ಶಾಲೆಗೆ ಕಳೆದ ಹಲವು ವರ್ಷಗಳಿಂದ ಯಾವುದೇ ರೀತಿಯ ಅನುದಾನ ಬಂದಿಲ್ಲ ಎಂದು ಪೋಷಕರು ತಿಳಿಸಿದ ಕಾರಣ ಶಾಸಕರು ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಸ್ಥಳದಿಂದಲೇ ಕರೆ ಮಾಡಿ ಮಾಹಿತಿ ಪಡೆದುಕೊಂಡರು.

ಶಾಸಕರಿಗೆ ಸನ್ಮಾನ
ಶಾಲಾ ಎಸ್‌ಡಿಎಂಸಿ ವತಿಯಿಂದ ಶಾಸಕರಿಗೆ ಸನ್ಮಾನ ಕಾರ್ಯ ನಡೆಯಿತು. ಶಾಲು ಹೊದಿಸಿ ಹೂಗುಚ್ಚ ನೀಡಿ ಎಸ್‌ಡಿಎಂಸಿ ಅಧ್ಯಕ್ಷೆ ಸೀತಾಭಟ್ ಸನ್ಮಾನಿಸಿದರು. ಬಾಳೆ ಮೂಲೆ ಪಟ್ಟೆಮನೆ ಉದ್ಯಮಿ ರಾಂಪ್ರಸಾದ್ ರೈಯವರು ವಿದ್ಯಾರ್ಥಿಗಳಿಗೆ ಉಚಿತವಾಗಿ ಶಾಲಾ ಬ್ಯಾಗ್ ಕೊಡುಗೆಯಾಗಿ ನೀಡಿದರು. ವೇದಿಕೆಯಲ್ಲಿ ಗ್ರಾಪಂ ಸದಸ್ಯೆ ವಿಮಲಾ, ನಾರಾಯಣ್ ನಾಯಕ್, ಮೈಮೂನತುಲ್ ಮೆಹ್ರಾ, ಕೃಷ್ಣಪ್ಪ ಪೂಜಾರಿ, ಪೋಷಕರಾದ ಅಬ್ದುಲ್ ರಹಿಮಾನ್ , ಉದ್ಯಮಿ ಪಟ್ಟೆಮನೆ ರಾಂಪ್ರಸಾದ್ ರೈ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಶೀಲಾವತಿ ಸ್ವಾಗತಿಸಿದರು. ಎಸ್‌ಡಿಎಂಸಿ ಉಪಾಧ್ಯಕ್ಷರಾದ ಹಾಜಿ ಅಬೂಬಕ್ಕರ್ ಆರ್ಲಪದವು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಸೀತಾರಾಂ ಭಟ್ ವಂದಿಸಿದರು. ಶಿಕ್ಷಕ ಮಾಂಕುಮೂಲ್ಯ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here