ಉಪ್ಪಿನಂಗಡಿ: ಇಲ್ಲಿನ ಶ್ರೀ ಮಹಾಕಾಳಿ ಅಮ್ಮನವರ ಗರ್ಭಗುಡಿಗೆ ಹಾಡಹಗಲೇ ನುಗ್ಗಿದ ವ್ಯಕ್ತಿಯೋರ್ವ ಶ್ರೀ ದೇವಿಯ ವಿಗ್ರಹದಿಂದ ಚಿನ್ನಲೇಪಿತ ಬೆಳ್ಳಿಯ ಜುಮುಕಿಯನ್ನು ಕದ್ದು ಪರಾರಿಯಾದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.

ಮೇ 30 ರಂದು ಈ ಘಟನೆ ನಡೆದಿದ್ದು, ಮೇ 31ರಂದು ಶ್ರೀ ದೇವಿಯ ವಿಗ್ರಹದಲ್ಲಿದ್ದ ಜುಮುಕಿ ಕಳವಾಗಿರುವ ಬಗ್ಗೆ ದೇವಾಲಯದ ಅರ್ಚಕರ ಗಮನಕ್ಕೆ ಬಂದಿದೆ. ಬಳಿಕ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಮೇ 30ರಂದು 1.15ರಿಂದ 1.33ರೊಳಗೆ ದೇವಾಲಯಕ್ಕೆ ಬಂದ ಅಪರಿಚಿತ ವ್ಯಕ್ತಿಯೋರ್ವ ದೇವಾಲಯದಲ್ಲಿ ಯಾರೂ ಇಲ್ಲದ್ದನ್ನು ನೋಡಿ, ಸೀದಾ ಗರ್ಭಗುಡಿಗೆ ನುಗ್ಗಿ ದೇವರ ವಿಗ್ರಹದ ಕಿವಿಯ ಬೆಂಡೋಲೆಗೆ ಸಿಕ್ಕಿಸಿದ್ದ ಚಿನ್ನಲೇಪಿತ ಬೆಳ್ಳಿಯ ಜುಮುಕಿಯನ್ನು ಕದ್ದು ಪರಾರಿಯಾಗಿರುವುದು ಕಂಡು ಬಂದಿದೆ. ಈತ ಭಕ್ತನ ಸೋಗಿನಲ್ಲಿ ದೇವಾಲಯಕ್ಕೆ ಬಂದಿದ್ದು, ಈತ ಬಂದ ಸಂದರ್ಭ ಅರ್ಚಕರು ಸೇರಿದಂತೆ ದೇವಾಲಯದೊಳಗೆ ಯಾರೂ ಇರಲಿಲ್ಲ. ಜುಮುಕಿಯನ್ನು ಕದ್ದು ದೇವಾಲಯದಿಂದ ಹೊರಬರುತ್ತಿರುವ ಸಂದರ್ಭ ಕೂಡಾ ಈತ ಕೈಸನ್ನೆಯಲ್ಲಿ ದೇವರನ್ನು ನಮಿಸಿಕೊಂಡು ಬರುತ್ತಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇಲ್ಲಿರುವ ಶ್ರೀ ಮಹಾಕಾಳಿ ಅಮ್ಮನವರ ವಿಗ್ರಹ ಬೃಹತ್ ಗಾತ್ರದಾಗಿದ್ದು, ಈ ಜುಮುಕಿಯನ್ನು ಹೊರತುಪಡಿಸಿ ಶ್ರೀ ಅಮ್ಮನವರ ವಿಗ್ರಹದ ಮೇಲಿರುವ ಉಳಿದೆಲ್ಲಾ ಆಭರಣಗಳು ಚಿನ್ನದಾಗಿವೆ. ಆದರೆ ಆತ ಗಡಿಬಿಡಿಯಲ್ಲಿ ಅದನ್ನೆಲ್ಲಾ ಬಿಟ್ಟು ಜುಮುಕಿಯನ್ನು ಮಾತ್ರ ಎಳೆದುಕೊಂಡು ಬಂದಿದ್ದಾನೆ. ಕಳವಾದ ಬಗ್ಗೆ ದೇವಾಲಯದವರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.