ನೆಲ್ಯಾಡಿ: 1 ರಿಂದ ಪದವಿ ತನಕ ಸರಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಬರೆಯುವ ಪುಸ್ತಕ ವಿತರಣಾ ಕಾರ್ಯಕ್ರಮ ನೆಲ್ಯಾಡಿ ಗ್ರಾಮದ ರಾಮನಗರ ಅವೆತ್ತಿಮಾರು ಗುತ್ತುವಿನಲ್ಲಿ ನಡೆಯಿತು.

ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಸಮಾಜ ಸೇವಕ ಅಮೆತ್ತಿಮಾರುಗುತ್ತು ಗಂಗಾಧರ ಶೆಟ್ಟಿ ಹೊಸಮನೆಯವರ ನೇತೃತ್ವದಲ್ಲಿ ದಾನಿಗಳ ನೆರವಿನೊಂದಿಗೆ ಸುಮಾರು 100 ವಿದ್ಯಾರ್ಥಿಗಳಿಗೆ ಬರೆಯುವ ಪುಸ್ತಕ ವಿತರಿಸಲಾಯಿತು ಮುಖ್ಯ ಅತಿಥಿಯಾಗಿದ್ದ ಸಾಮಾಜಿಕ ಮುಖಂಡ ಸೀತಾರಾಮ ಗೌಡ ಕಾನಮನೆಯವರು ವಿದ್ಯಾರ್ಥಿಗಳಿಗೆ ಪುಸ್ತಕವನ್ನು ವಿತರಿಸಿ ಮಾತನಾಡಿ, ಈ ಕಾರ್ಯ ಬಹಳ ಪುಣ್ಯದ ಕೆಲಸವಾಗಿದೆ. ವಿದ್ಯಾರ್ಥಿಗಳು ಕಠಿಣ ಪರಿಶ್ರಮವನ್ನು ಮಾಡಿ ಗುರುಗಳನ್ನು ಹಿರಿಯರನ್ನು ಗೌರವಿಸುವ ಸಂಸ್ಕಾರವನ್ನು ಬೆಳೆಸಿಕೊಂಡು ದೇಶಪ್ರೇಮವನ್ನು ಮೈಗೂಡಿಸಿಕೊಂಡು ನಮ್ಮ ಊರಿಗೆ ಕೀರ್ತಿಯನ್ನು ತರಬೇಕು. ನಾವು ಇನ್ನೊಬ್ಬರ ಕಷ್ಟಗಳಿಗೆ ಸ್ಪಂದಿಸುವ ಸೇವಾ ಮನೋಭಾವವನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿ ಶುಭ ಹಾರೈಸಿದರು.
ಕಾರ್ಯಕ್ರಮದ ವ್ಯವಸ್ಥಾಪಕರಾದ ಗಂಗಾಧರ ಶೆಟ್ಟಿ ಹೊಸಮನೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪುಸ್ತಕ ವಿತರಣೆ ಕಾರ್ಯವನ್ನು ಕಳೆದ ಮೂರು ವರ್ಷಗಳಿಂದ ಮಾಡುತ್ತಾ ಬಂದಿದ್ದೇನೆ. ಈ ಕಾರ್ಯವನ್ನು ಪ್ರತಿವರ್ಷ ಇನ್ನಷ್ಟು ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳಿಗೆ ನೀಡುವ ಬಗ್ಗೆ ಆಲೋಚನೆಯನ್ನು ಇಟ್ಟುಕೊಂಡಿದ್ದೇವೆ. ನಾವೆಲ್ಲ ಭಾರತಮಾತೆಯ ಮಕ್ಕಳು, ಯಾವುದೇ ಜಾತಿ ಮತ ಭೇದವಿಲ್ಲದೆ ಒಗ್ಗಟ್ಟಿನಿಂದ ಈ ಸಮಾಜದಲ್ಲಿ ಬಾಳಿದಾಗ ಮಹಾತ್ಮ ಗಾಂಧಿಯವರ ರಾಮ ರಾಜ್ಯದ ಕಲ್ಪನೆ ಸಾಕಾರಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಎಲ್ಲಾ ಮಕ್ಕಳಿಗೆ ವಿಶೇಷವಾಗಿ ಸರಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ಮಾಡುವುದರ ಮೂಲಕ ನಾವು ಕಲಿತಂತಹ ವಿದ್ಯೆಗೆ ಮತ್ತು ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ಮಟ್ಟದಲ್ಲಿ ಕಲಿತಂತಹ ಸಂಸ್ಕಾರಕ್ಕೆ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇವೆ. ಇಂತಹ ಕಾರ್ಯಗಳಿಂದ ನಮಗೆ ಜೀವನದಲ್ಲಿ ನೆಮ್ಮದಿ ಸಂತೋಷ ಕಾಣಸಿಗುತ್ತದೆ. ನಮ್ಮಲ್ಲಿ ಪ್ರೀತಿ ಇಟ್ಟು ಬಂದಂತಹ ಪೋಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಹಾಗೂ ಪುಸ್ತಕ ವಿತರಣಾ ಕಾರ್ಯದಲ್ಲಿ ನನ್ನೊಂದಿಗೆ ಕೈಜೋಡಿಸಿದ ದಾನಿಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.
ಪುಸ್ತಕ ವಿತರಣೆಯಲ್ಲಿ ದಾನಿಗಳಾಗಿ ಪ್ರಗತಿಪರ ಕೃಷಿಕ ಸಾಮಾಜಿಕ ಮುಖಂಡರಾದ ರಮೇಶ ಗೌಡ ನಾಲ್ಗುತ್ತು, ನೆಲ್ಯಾಡಿ ಸೇವಾ ಸಹಕಾರಿ ಬ್ಯಾಂಕಿನ ಉದ್ಯೋಗಿ ಮಹೇಶ್ ಗೌಡ ಮುದಲೆ, ನೆಲ್ಯಾಡಿ ಬಾಲಾಜಿ ಮೆಡಿಕಲ್‌ನ ಉದಯ್ ಕುಮಾರ್ ಭಟ್ ಸಹಕರಿಸಿದ್ದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ನಡುಗುಡ್ಡೆ ಶ್ರೀ ರಾಜನ್ ದೈವಸ್ಥಾನದ ಗುರಿಕಾರ ಹಾರ್ಪಳಗುತ್ತು ರಘುನಾಥ ರೈ ಉಪಸ್ಥಿತರಿದ್ದರು.