ರಾಜ್ಯ ಸರಕಾರದ ಮಹತ್ವದ 5 ಗ್ಯಾರಂಟಿ ಯೋಜನೆ ಏಕಕಾಲದಲ್ಲಿ ಜಾರಿ – ಸಿಎಂ ಸಿದ್ದರಾಮಯ್ಯ ಘೋಷಣೆ

0

ಪುತ್ತೂರು : ಪ್ರಸ್ತುತ ಆರ್ಥಿಕ ವರ್ಷದಲ್ಲಿ ಐದು ಗ್ಯಾರಂಟಿ ಯೋಜನೆ ಜಾರಿಗೊಳಿಸಲು ನಿರ್ಧಾರ ಮಾಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಾಹಿತಿ ನೀಡಿದ ಸಿಎಂ, ರಾಜ್ಯದ ಯಾವುದೇ ಜಾತಿ ಧರ್ಮ ಭಾಷೆ ನೋಡದೆ ಈ ಯೋಜನೆ ತಲುಪಿಸುವುದಾಗಿ ಹೇಳಿದ್ದಾರೆ.

ಎಲ್ಲರ ಮನೆಗಳಿಗೆ 200 ಯೂನಿಟ್‌ ವರೆಗೆ ಉಚಿತ ವಿದ್ಯುತ್‌ ನೀಡಲಾಗುವುದು. ಯಾರು 200 ಯೂನಿಟ್ ಒಳಗಡೆ ವಿದ್ಯುತ್ ಬಳಸುತ್ತಾರೆ ಅವರು ಬಿಲ್ ಕಟ್ಟಬೇಕಾಗಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.

ಜೂನ್ 11ರಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಜಾರಿಗೊಳಿಸಲಾಗುವುದು. ಎಸಿ ಮತ್ತು ಸ್ಲೀಪರ್ ಬಸ್ಸುಗಳನ್ನು ಹೊರತುಪಡಿಸಿ ಶಕ್ತಿ ಗ್ಯಾರಂಟಿ ಯೋಜನೆಯಡಿ ಎಲ್ಲಾ ಮಹಿಳೆಯರಿಗೆ, ವಿದ್ಯಾರ್ಥಿಗಳು ಉಚಿತವಾಗಿ ಸರಕಾರಿ ಬಸ್ಸಿನಲ್ಲಿ ಸಂಚರಿಸಬಹುದು ಎಂದು ಸಿಎಂ ಹೇಳಿದ್ದಾರೆ.

ಗೃಹಲಕ್ಷ್ಮಿ ಯೋಜನೆ ಅಡಿ ಮನೆಯ ಯಜಮಾನಿ ಖಾತೆಗೆ 2,000 ಜಮೆ ಮಾಡಲಾಗುವುದು. ಎಪಿಎಲ್ ಮತ್ತು ಬಿಪಿಎಲ್ ಕಾರ್ಡುದಾರರಿಗೆ ಈ ಯೋಜನೆ ಅನ್ವಯವಾಗಲಿದೆ. ಜೂನ್ 15ರಿಂದ ಜುಲೈ 15ರವರೆಗೆ ಅರ್ಜಿ ಸಲ್ಲಿಸಲು ಸಮಯ ಅವಕಾಶ ನೀಡಲಾಗುವುದು. ಕಡ್ಡಾಯವಾಗಿ ಆಧಾರ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಪಾಸ್ ಪುಸ್ತಕದ ಪ್ರತಿಯನ್ನು ನೀಡಬೇಕು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಜುಲೈ 1ರಿಂದ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ದಾರರಿಗೆ ಅನ್ನಭಾಗ್ಯ ಯೋಜನೆ ಅಡಿ 10 ಕೆಜಿ ಅಕ್ಕಿ ವಿತರಿಸಲಾಗುವುದು ಎಂದು ಸಿ ಎಂ ಸ್ಪಷ್ಟಪಡಿಸಿದ್ದಾರೆ.

2022-23ನೇ ವರ್ಷದಲ್ಲಿ ವ್ಯಾಸಾಂಗ ಮಾಡಿ ಪಾಸ್ ಆಗಿರುವ ನಿರುದ್ಯೋಗಿ ಯುವಕರಿಗೆ 24 ತಿಂಗಳವರೆಗೆ ಪ್ರತಿ ತಿಂಗಳು ಪದವೀಧರರಿಗೆ 3000 ಡಿಪ್ಲೋಮಾ ಮಾಡಿದವರಿಗೆ 1500 ರೂಪಾಯಿ ನೀಡಲಾಗುವುದು. ಇದಕ್ಕೆ ಅರ್ಜಿ ಸಲ್ಲಿಸಬೇಕಾಗಿದ್ದು ಅರ್ಜಿಯ ಮಾಹಿತಿ ಆಧರಿಸಿ ಯುವ ನಿಧಿ ಯೋಜನೆಯಡಿ ನಿರುದ್ಯೋಗ ಭತ್ಯೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

LEAVE A REPLY

Please enter your comment!
Please enter your name here