ಕಾರ್ಯನಿರ್ವಹಣೆ ಸ್ಥಗಿತಗೊಳಿಸಿದ ಜಿಡೆಕಲ್ಲು ಹಾಲು ಶೀತಲೀಕರಣ ಕೇಂದ್ರ

0

ಮೇ31ಕ್ಕೆ ಶೀತಲೀಕರಣ ಪ್ರಕ್ರಿಯೆ ಸ್ಥಗಿತ

ಖಾಯಂ ಸಿಬ್ಬಂದಿಗಳು ಮಂಗಳೂರಿಗೆ ಶಿಫ್ಟ್‌

ಸಂಕಷ್ಟದಲ್ಲಿ ಗುತ್ತಿಗೆ ಸಿಬ್ಬಂದಿಗಳು

ಪುತ್ತೂರು: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಇದರ ವತಿಯಿಂದ ಪುತ್ತೂರಿನ ಜಿಡೆಕಲ್ಲಿನಲ್ಲಿ ಕಳೆದ 30 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ‘ಪುತ್ತೂರು ಹಾಲು ಶೀತಲೀಕರಣ ಕೇಂದ್ರ’ವು ಮೇ31ಕ್ಕೆ ಎಲ್ಲಾ ಪ್ರಕ್ರಿಯೆಗಳನ್ನು ಸ್ಥಗಿತಗೊಳಿಸಿದ್ದು ಈ ಮೂಲಕ ಪುತ್ತೂರಿನ ಬೃಹತ್ ಸಂಸ್ಥೆಯೊಂದು ಇತಿಹಾಸದ ಪುಟ ಸೇರುವಂತಾಗಿದೆ.

ಪ್ರಾರಂಭದಲ್ಲಿ ಎಪಿಎಂಸಿ ಪ್ರಾಂಗಣದೊಳಗೆ ಕಾರ್ಯಾಚರಿಸುತ್ತಿದ್ದ ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಶೀತಲೀಕರಣ ಕೇಂದ್ರವು 1993ರಲ್ಲಿ ಜಿಡೆಕಲ್ಲು ಎಂಬಲ್ಲಿ ಸ್ವಂತ ನಿವೇಶನದಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡು ಸುದೀರ್ಘ 30 ವರ್ಷಗಳ ಕಾರ್ಯನಿರ್ವಹಣೆ ಇತಿಹಾಸವನ್ನು ಹೊಂದಿದೆ.

ವಿಶಾಲವಾಗಿ ಸುಮಾರು ಆರು ಎಕರೆ ಸ್ವಂತ ನಿವೇಶನವನ್ನು ಹೊಂದಿದ್ದು ಇಲ್ಲಿ ದಿನವೊಂದಕ್ಕೆ ಸುಮಾರು 50,೦೦೦ ಲೀಟರ್ ಹಾಲು ಶೀತಲೀಕರಣಗೊಳಿಸುವ ಮೂರು ಬೃಹತ್ ಟ್ಯಾಂಕ್‌ಗಳು, ಇದಕ್ಕೆ ಪೂರಕವಾದ ಯಂತ್ರೋಪಕರಣಗಳು, ಎರಡು ಬೃಹತ್ ಜನರೇಟರ್, ಕಂಪ್ರೆಷರ್, ಲ್ಯಾಬ್ ಎಲ್ಲವೂ ಇಲ್ಲಿದೆ. ಪ್ರಾರಂಭದಲ್ಲಿ 30 ಮಂದಿ ಸಿಬ್ಬಂದಿಗಳು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಬರಬರುತ್ತಾ ಸಿಬ್ಬಂದಿಗಳ ಸಂಖ್ಯೆಯೂ ಇಳಿಕೆಯಾಗುತ್ತಾ ಪ್ರಸ್ತುತ 17 ಮಂದಿ ಸಿಬ್ಬಂದಿಗಳು ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಇದರಲ್ಲಿ ಕೇವಲ 4 ಮಂದಿ ಮಾತ್ರ ಖಾಯಂ ಸಿಬ್ಬಂದಿಗಳಾಗಿದ್ದಾರೆ. ಉಳಿದ 13 ಮಂದಿ ತಾತ್ಕಾಲಿಕ ನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದವರು.
ಕೇಂದ್ರವು ಪ್ರಾರಂಭಗೊಂಡ ದಿನಗಳಲ್ಲಿ ಪುತ್ತೂರು, ಸುಳ್ಯ, ಬೆಳ್ತಂಗಡಿ ಹಾಗೂ ಬಂಟ್ವಾಳ ತಾಲೂಕುಗಳ 70 ಹಾಲು ಉತ್ಪಾದಕರ ಸಹಕಾರಿ ಸಂಘಗಳಿಂದ ಸುಮಾರು 6೦,೦೦೦ ಲೀಟರ್ ಹಾಲು ಪ್ರತಿನಿತ್ಯ ಈ ಕೇಂದ್ರಕ್ಕೆ ಸರಬರಾಜು ಆಗಿ ಇಲ್ಲಿ ಹಾಲು ಶೀತಲೀಕರಣಗೊಂಡು ಇಲ್ಲಿಂದ ಮಂಗಳೂರಿನ ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟಕ್ಕೆ ಸರಬರಾಜು ಆಗುತ್ತಿತ್ತು. ವಿವಿಧ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಮೂಲಕ ಸಂಗ್ರಹಗೊಂಡ ಹಾಲು 11 ರೂಟ್‌ಗಳ ಮೂಲಕ ವಿವಿಧ ವಾಹನಗಳಲ್ಲಿ ಜಿಡೆಕಲ್ಲು ಶೀತಲೀಕರಣ ಕೇಂದ್ರಕ್ಕೆ ಸರಬರಾಜಾಗಿ ಇಲ್ಲಿ ಶೀತಲೀಕರಣ ಕಾರ್ಯಗಳು ನಡೆದು ಟ್ಯಾಂಕರ್‌ಗಳ ಮೂಲಕ ಮಂಗಳೂರು ಒಕ್ಕೂಟಕ್ಕೆ ಸರಬರಾಜಾಗುತ್ತಿತ್ತು.

ವಿವಿಧ ಸಹಕಾರಿ ಸಂಘಗಳಲ್ಲಿ ಬಲ್ಕ್ ಮಿಲ್ಕ್ ಕೂಲರ್‌ಗಳು: ಕಳೆದ ಕೆಲವು ವರ್ಷಗಳಿಂದ ಜಿಲ್ಲೆಯ ಹಲವು ಹಾಲು ಉತ್ಪಾದಕರ ಸಹಕಾರಿ ಸಂಘಗಳ ಮೂಲಕ ಆಧುನಿಕ ತಂತ್ರಜ್ಞಾನಾಧಾರಿತ ಬಲ್ಕ್ ಮಿಲ್ಕ್ ಕೂಲರ್(ಬಿಎಂಸಿ)ಗಳು ಪ್ರಾರಂಭಗೊಂಡಿರುವ ಹಿನ್ನೆಲೆಯಲ್ಲಿ ಜಿಡೆಕಲ್ಲಿನ ಹಾಲು ಶೀತಲೀಕರಣ ಕೇಂದ್ರಕ್ಕೆ ಸರಬರಾಜಾಗುವ ಹಾಲಿನ ಪ್ರಮಾಣ ಇಳಿಮುಖವಾಗುತ್ತಾ ಸಾಗಿದೆ. ಇಲ್ಲಿ ಶೀತಲೀಕರಣ ಕೇಂದ್ರ ಕಾರ್ಯನಿರ್ವಹಣೆ ಸ್ಥಗಿತಗೊಳಿಸುವ ಕೊನೇ ದಿನದಂದು 15,೦೦೦ ಲೀಟರ್ ಹಾಲು ಸಂಗ್ರಹಗೊಂಡು ಶೀತಲೀಕರಣಗೊಂಡು ಮಂಗಳೂರಿನ ಒಕ್ಕೂಟಕ್ಕೆ ಸರಬರಾಜು ಮಾಡಲಾಗಿತ್ತು.

ಪ್ಯಾಕಿಂಗ್, ಪೌಡರ್ ಪ್ಲಾಂಟ್‌ಗೆ ಎರಡು ಬಾರಿ ಗುದ್ದಲಿ ಪೂಜೆ ನಡೆದಿತ್ತು; ವಿಶಾಲವಾಗಿ ಆರು ಎಕರೆ ನಿವೇಶನ ಹಾಗೂ ಸುತ್ತು ಆವರಣಗೋಡೆ ಹೊಂದಿರುವ ಜಿಡೆಕಲ್ಲು ಶೀತಲೀಕರಣ ಕೇಂದ್ರದಲ್ಲಿಯೇ ಹಾಲು ಪ್ಯಾಕಿಂಗ್ ಹಾಗೂ ಪೌಡರ್ ಪ್ಲಾಂಟ್ ನಿರ್ಮಾಣಕ್ಕಾಗಿ ನೀಲ ನಕಾಶೆ ಸಿದ್ದಪಡಿಸಿ, ಒಕ್ಕೂಟದ ಹಿಂದಿನ ಅಧ್ಯಕ್ಷರ ಅವಧಿಯಲ್ಲಿ ಎರಡು ಬಾರಿ ಗುದ್ದಲಿ ಪೂಜೆ ನಡೆದಿತ್ತು. ಅದಕ್ಕಾಗಿ ಒಕ್ಕೂಟದಿಂದ ಅನುದಾನವನ್ನೂ ಮೀಸಲಿರಿಸಲಾಗಿತ್ತು. ಆದರೆ ಆ ಯೋಜನೆಗಳು ಮಾತ್ರ ಇನ್ನೂ ಸಾಕಾರಗೊಂಡಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಈ ಕೇಂದ್ರದಲ್ಲಿ ಮೇ31ರಂದು ಎಲ್ಲಾ ರೀತಿಯ ಶೀತಲೀಕರಣ ಕಾರ್ಯಗಳನ್ನು ಮುಕ್ತಾಯಗೊಳಿಸಿ ಜೂ.1ರಿಂದ ಸಂಪೂರ್ಣ ಕಾರ್ಯನಿರ್ವಹಣೆ ಸ್ಥಗಿತಗೊಳಿಸಿದೆ. ಇಲ್ಲಿನ ಖಾಯಂ ಸಿಬಂದಿಗಳಿಗೆ ಮಂಗಳೂರಿನಲ್ಲಿ ಒಕ್ಕೂಟದಲ್ಲಿ ಕರ್ತವ್ಯ ನಿರ್ವಹಿಸಲು ಅಧಿಕಾರಿಗಳಿಂದ ಸೂಚನೆಗಳು ಬಂದಿವೆ. ಆದರೆ ಇಲ್ಲಿ ತಾತ್ಕಾಲಿಕ ನೆಲೆಯಲ್ಲಿ ಕನಿಷ್ಠ ವೇತನದಲ್ಲಿ ದುಡಿಯುತ್ತಿದ್ದ ಸಿಬ್ಬಂದಿಗಳು ಸಂಕಷ್ಟಕ್ಕೊಳಗಾಗಿದ್ದಾರೆ. ಜೊತೆಗೆ ವಿವಿಧ ಹಾಲು ಉತ್ಪಾದಕರ ಸಹಕಾರಿ ಸಂಘಗಳಿಂದ 11 ರೂಟ್‌ಗಳ ಮೂಲಕ ಹಾಲು ಸರಬರಾಜು ಮಾಡುತ್ತಿರುವ ಖಾಸಗಿ ವಾಹನಗಳ ಮ್ಹಾಲಕರೂ ಸಮಸ್ಯೆ ಎದುರಿಸುವಂತಾಗಿದೆ. ಜಿಲ್ಲಾ ಕೇಂದ್ರವಾಗುವ ಹೊಸ್ತಿಲಲ್ಲಿರುವ ಪುತ್ತೂರಿನಲ್ಲಿ ಇಂತಹ ಕೇಂದ್ರಗಳು ಸ್ಥಗಿತಗೊಳ್ಳಬಾರದು. ಇಲ್ಲಿ ಈಗಾಗಲೇ ನಿರ್ಮಿಸಲು ಉದ್ದೇಶಿಸಿರುವ ಪ್ಯಾಕಿಂಗ್ ಕೇಂದ್ರ, ಶೀತಲೀಕರಣ ಹಾಗೂ ಪೌಡರ್ ಪ್ಲಾಂಟ್‌ಗಳು ಪ್ರಾರಂಭಗೊಂಡು ಹಲವು ಮಂದಿಗೆ ಉದ್ಯೋಗಾವಕಾಶವು ದೊರೆಯುವಂತಾಗಲಿ. ಜನಪ್ರತಿನಿಧಿಗಳು, ಅಧಿಕಾರಿಗಳು ಮುತುವರ್ಜಿವಹಿಸಿ ಈ ಸಂಸ್ಥೆ ಕಾರ್ಯನಿರ್ವಹಣೆ ಮುಂದುವರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಲಿ ಎನ್ನುವುದೇ ಎಲ್ಲರ ಆಶಯವಾಗಿದೆ.

ಪೌಡರ್ ಪ್ಲಾಂಟ್ ಸ್ಥಾಪಿಸಿ ಹಾಲಿನ ಪ್ಯಾಕೆಟ್ ಘಟಕ ಪ್ರಾರಂಭಿಸುವ ಯೋಜನೆಯಿದೆ

ಸಹಕಾರಿ ಸಂಘಗಳಿಂದ ಸಂಗ್ರಹಿಸಿದ ಹಾಲನ್ನು ಜಿಡೆಕಲ್ಲು ಕೇಂದ್ರಕ್ಕೆ ಸಾಗಿಸಿ ಅಲ್ಲಿ ಶೀತಲೀಕಣಗೊಂಡು ಮಂಗಳೂರಿಗೆ ಸರಬರಾಜು ಮಾಡಬೇಕಾಗಿರುವುದರಿಂದ ಒಕ್ಕೂಟಕ್ಕೆ ಅಧಿಕ ಹೊರೆ ಬೀಳುತ್ತದೆ. ಅಲ್ಲದೆ ಹಾಲಿನ ಸಂಗ್ರಹಣೆಯೂ ಗಣನೀಯವಾಗಿ ಇಳಿಕೆಯಾಗಿದೆ. ಈ ನಿಟ್ಟಿನಲ್ಲಿ ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲೂಕಿನ ವಿವಿಧ ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ಬಿಎಂಸಿ ಪ್ರಾರಂಭಿಸಲಾಗಿದ್ದು ಅಲ್ಲಿನ ಸುತ್ತ ಮುತ್ತಲಿನ 7 ಸಂಘಗಳಿಂದ ಹಾಲು ಅಲ್ಲಿ ಸಂಗ್ರಹಗೊಂಡು ಶೀತಲೀಕರವಾಗಿ ಟ್ಯಾಂಕರ್‌ನಲ್ಲಿ ನೇರವಾಗಿ ಒಕ್ಕೂಟಕ್ಕೆ ಸರಬರಾಜಾಗುವ ಮೂಲಕ ನಿರ್ವಹಣಾ ವೆಚ್ಚ ಕಡಿಮೆಯಾಗುತ್ತದೆ. ಇದಕ್ಕಾಗಿ ಜಿಡೆಕಲ್ಲಲ್ಲಿದ್ದ ಶೀತಲೀಕರಣ ಕೇಂದ್ರವನ್ನು ಸ್ಥಗಿತಗೊಳಿಸಲಾಗಿದೆ. ಇಗಿರುವ ಜಿಡೆಕಲ್ಲು ಕೇಂದ್ರ ವಿಶಾಲ ಜಾಗ ಹೊಂದಿರುವುದರಿಂದ ಈ ಭಾಗದ ಹಾಲನ್ನು ಇಲ್ಲಿಯೇ ಬಳಸಿಕೊಂಡು ಪೌಡರ್ ಪ್ಲಾಂಟ್ ಸ್ಥಾಪಿಸಿ ಹಾಲು ಪ್ಯಾಕೆಟ್ ಉತ್ಪಾದನಾ ಘಟಕ ಪ್ರಾರಂಭಿಸುವ ಯೋಜನೆಗಳಿದ್ದು ಇಲ್ಲಿಂದ ಪ್ಯಾಕೆಟ್ ಹಾಲು ಸುತ್ತ ಮುತ್ತಲಿನ ತಾಲೂಕುಗಳಿಗೆ ಸರಬರಾಜಾಗುವ ಮೂಲಕ ಸಾಗಾಟ ವೆಚ್ಚವೂ ಕಡಿಮೆಯಾಗಲಿದೆ. ಇಲ್ಲಿನ ಖಾಯಂ ಸಿಬ್ಬಂದಿಗಳನ್ನು ಮಂಗಳೂರಿಗೆ ಕರೆಸಿಕೊಳ್ಳಲಾಗಿದೆ. ಗುತ್ತಿಗೆ ಆಧಾರದ ಸಿಬಂದಿಗಳನ್ನೂ ಕೈ ಬಿಡುವುದಿಲ್ಲ. ಅವರಿಗೂ ಉದ್ಯೋಗ ನೀಡಲಾಗುವುದು-
ಎಸ್.ಬಿ.ಜಯರಾಮ ರೈ, ಉಪಾಧ್ಯಕ್ಷರು
ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ

ಬಿಎಂಸಿಗಳಾಗಿರೋದ್ರಿಂದ ಅವಶ್ಯಕತೆ ಬೀಳುವುದಿಲ್ಲ


ಈ ಕೇಂದ್ರದಲ್ಲಿ ದಿನವೊಂದಕ್ಕೆ 9೦೦೦ ಲೀಟರ್ ಹಾಲು ಮಾತ್ರ ಸಂಗ್ರಹಗೊಂಡು ಶೀತಲೀಕರಣಗೊಳ್ಳುತ್ತಿದೆ. ಇಲ್ಲಿನ ಯಂತ್ರೋಪಕರಣಗಳು ಸುಮಾರು 45 ವರ್ಷಗಳಷ್ಟು ಹಳೆಯದಾಗಿದೆ. ಈ ಭಾಗದಲ್ಲಿ ಸುಮಾರು 24-25 ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿರುವ ಬಿಎಂಸಿ(ಬಲ್ಕ್ ಮಿಲ್ಕ್ ಕೂಲರ್)ನ್ನು ಅಳವಡಿಸಲಾಗಿದ್ದು ಅಲ್ಲಿಯೇ ಹಾಲು ಶೀತಲೀಕರಣಗೊಂಡು ಅಲ್ಲಿಂದ ಟ್ಯಾಂಕರ್‌ಗಳ ಮೂಲಕ ನೇರವಾಗಿ ಮಂಗಳೂರಿಗೆ ಸರಬರಾಜಾಗುತ್ತದೆ. ಬಿಎಂಸಿಗಳು ಆಗುವ ತನಕ ಇಲ್ಲಿನ ಕೇಂದ್ರವು ಕಾರ್ಯನಿರ್ವಹಿಸುತ್ತಿತ್ತು.ಇದೀಗ ಜಿಡೆಕಲ್ಲು ಶೀತಲೀಕರಣ ಕೇಂದ್ರದ ಅವಶ್ಯಕತೆ ಬೀಳುವುದಿಲ್ಲ.ಆಡಳಿತ ಮಂಡಳಿಯ ತೀರ್ಮಾನದಂತೆ ಮುಂದಿನ ಕ್ರಮಕೈಗೊಳ್ಳಲಾಗುವುದು-
-ಅಶೋಕ್, ಆಡಳಿತ ನಿರ್ದೇಶಕರು, ದ.ಕ ಸಹಕಾರಿ
ಹಾಲು ಉತ್ಪಾದಕರ ಒಕ್ಕೂಟ

LEAVE A REPLY

Please enter your comment!
Please enter your name here