ಹಲವು ದಿನಗಳಿಂದ ನೀರಿಲ್ಲದೇ ತೊಂದರೆ ಅನುಭವಿಸುತ್ತಿರುವ ಸ್ಥಳೀಯರು
ಪುತ್ತೂರು: ಸರ್ವೆ ಗ್ರಾಮದ ಕೂಡುರಸ್ತೆ ಹಾಗೂ ಬಾಲಾಯ ಪರಿಸರದಲ್ಲಿ ಕೆಲವು ದಿನಗಳಿಂದ ನೀರಿನ ಸಮಸ್ಯೆ ಉಂಟಾಗಿದ್ದು ಸ್ಥಳೀಯರು ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಈ ಪ್ರದೇಶದಲ್ಲಿ ಸುಮಾರು 60 ರಿಂದ 70ರಷ್ಟು ಮನೆಗಳಿದ್ದು ಬಹುತೇಕ ಮನೆಯವರು ಗ್ರಾಮ ಪಂಚಾಯತ್ ನಳ್ಳಿ ನೀರನ್ನೇ ಅವಲಂಬಿಸಿದವರಾಗಿದ್ದಾರೆ. ಕೆಲವು ಸಮಯಗಳಿಂದಲೇ ಈ ಭಾಗದಲ್ಲಿ ನೀರಿನ ಸಮಸ್ಯೆ ತಲೆದೋರಿದ್ದು ಇದೀಗ ಕಳೆದ ಐದು ದಿನಗಳಿಂದ ಈ ಪರಿಸರಕ್ಕೆ ನೀರಿನ ಪೂರೈಕೆ ಸಂಪೂರ್ಣ ನಿಂತು ಹೋಗಿದೆ ಎಂದು ತಿಳಿದು ಬಂದಿದೆ.

ಯಾಕಾಗಿ ನೀರಿನ ಸಮಸ್ಯೆ ಉಂಟಾಗಿದೆ ಎಂಬುದು ತಿಳಿದು ಬಂದಿಲ್ಲ. ಸಂಬಂಧಪಟ್ಟವರು ಕೂಡಲೇ ನಮ್ಮ ಸಮಸ್ಯೆಯನ್ನು ಮನಗಂಡು ಸಮಸ್ಯೆಗೆ ಪರಿಹಾರ ಮಾಡಿಕೊಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಗ್ರಾ.ಪಂ ನಿರ್ಲಕ್ಷ ವಹಿಸುತ್ತಿದೆ- ಆಲಿ ಆರೋಪ
ಕೂಡುರಸ್ತೆ, ಬಾಲಾಯ ಪರಿಸರದಲ್ಲಿ ಅನೇಕ ದಿನಗಳಿಂದ ನೀರಿನ ಸಮಸ್ಯೆ ಉಂಟಾಗಿದ್ದು ಇರುವ ಬೋರ್ ವೆಲ್ ನಲ್ಲಿ ನೀರು ಬತ್ತಿ ಹೋಗಿರುವುದೇ ನೀರಿನ ಸಮಸ್ಯೆಗೆ ಪ್ರಮುಖ ಕಾರಣ. ಈ ಬಗ್ಗೆ ಗ್ರಾಮ ಪಂಚಾಯತ್ ಗೆ ವಿಷಯ ತಿಳಿಸಿ ಸಮಸ್ಯೆಗೆ ಪರಿಹಾರ ನೀಡುವಂತೆ ಹಲವು ಬಾರಿ ಮನವಿ ಮಾಡಿದ್ದೇನೆ, ಆದರೆ ಗ್ರಾ.ಪಂನಿಂದ ಯಾವುದೇ ರೀತಿಯ ಸ್ಪಂದನೆ ಸಿಕ್ಕಿಲ್ಲ. ಸಮಸ್ಯೆ ಶೀಘ್ರದಲ್ಲಿ ಬಗೆಹರಿಯದಿದ್ದಲ್ಲಿ ಮುಂದಕ್ಕೆ ಪ್ರತಿಭಟನೆ ನಡೆಸುವುದಾಗಿ ಮುಂಡೂರು ಗ್ರಾ.ಪಂ ಸದಸ್ಯ ಮಹಮ್ಮದ ಆಲಿ ನೇರೋಳ್ತಡ್ಕ ತಿಳಿಸಿದ್ದಾರೆ.