ರಾಮಕುಂಜೇಶ್ವರ ಮಹಾವಿದ್ಯಾಲಯದಲ್ಲಿ ರಕ್ತದಾನ ಶಿಬಿರ

0

ರಾಮಕುಂಜ: ರಕ್ತದಾನ-ಜೀವದಾನ. ರಕ್ತವು ಜೀವಿಯ ದೇಹದ ಸಾರ, ಎಲ್ಲಾ ಅವಯವಗಳ ಚಟುವಟಿಕೆಗಳಿಗೆ ಬೇಕಾದ ಶಕ್ತಿ ರಕ್ತದಲ್ಲಿದೆ. ರಕ್ತ ನಿರ್ದಿಷ್ಟ ಪ್ರಮಾಣದಲ್ಲಿ ಉತ್ಪತ್ತಿಯಾಗಬೇಕು. ರಕ್ತದ ಸೃಷ್ಟಿ-ಸ್ಥಿತಿ-ಲಯ ಇದು ಶರೀರದಲ್ಲಿ ನಿರಂತರ ನಡೆಯುತ್ತದೆ.

ಆದ್ದರಿಂದ ರಕ್ತದ ’ಪ್ರಮಾಣ” ಜೀವಿಯ ಆರೋಗ್ಯಕ್ಕೆ ಮುಖ್ಯ ಅಂಶವಾಗಿದೆ. ರಕ್ತದ ಕೊರತೆ ಬಂದಾಗ ಪೂರೈಸಿದಲ್ಲಿ ಮಾತ್ರ ಜೀವಿ ಬದುಕಬಲ್ಲ. ಹಾಗಾಗಿ ಇದು ಜೀವದಾನ. ರಕ್ತಗುಂಪು ಒಂದು ಕುಟುಂಬದಂತೆ. ಜಗತ್ತಿನ ಯಾವ ಮೂಲೆಯಲ್ಲೂ ನಮ್ಮ ಕುಟುಂಬದವರು ಇರಬಹುದು. ಯುವಕರು ರಕ್ತದಾನದ ಮಹತ್ವವನ್ನು ತಿಳಿಯಿರಿ ಎಂದು ರಾಮಕುಂಜ ಪದವಿ ಕಾಲೇಜು ಪ್ರಾಂಶುಪಾಲ ಗಣರಾಜ ಕುಂಬ್ಳೆ ತಿಳಿಸಿದರು.
ಅವರು ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದಲ್ಲಿ ಆಲಂಕಾರು ಜೇಸೀ ಘಟಕ, ಕಾಲೇಜಿನ ಎನ್.ಎಸ್.ಎಸ್ ಹಾಗೂ ರೆಡ್ ಕ್ರಾಸ್ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತಾಡುತ್ತಿದ್ದರು. ಸಹಯೋಗ ನೀಡಿದ ಪುತ್ತೂರಿನ ರೋಟರಿ ಕ್ಯಾಂಪ್ಕೊ ಬ್ಲಡ್ ಬ್ಯಾಂಕ್‌ನ ಡಾ. ರಾಮಚಂದ್ರ ಭಟ್ ರಕ್ತದಾನದ ಬಗ್ಗೆ ಮಾಹಿತಿ ನೀಡಿದರು. ಮುಖ್ಯ ಅತಿಥಿಗಳಾಗಿ ವಲಯ ಉಪಾಧ್ಯಕ್ಷ ಅಜಿತ್ ರೈ ವಿದ್ಯಾರ್ಥಿಗಳಿಗೆ ಹಿತವಚನ ನುಡಿದರು. ಆಲಂಕಾರು ಜೇಸೀ ಅಧ್ಯಕ್ಷ ಲಕ್ಷ್ಮೀನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಕೃಷ್ಣಪ್ರಸಾದ್ ಸ್ವಾಗತಿಸಿದರು. ವಿದ್ಯಾರ್ಥಿನಿ ಕೃತಿಕಾ ವಂದಿಸಿದರು. ಜೆಸಿ ವಲಯ ತರಬೇತುದಾರ ಪ್ರದೀಪ್ ಬಾಕಿಲ, ಉಪನ್ಯಾಸಕರಾದ ಶಿವಪ್ರಸಾದ್, ಗಣೇಶ್, ಎನ್.ಎಸ್.ಎಸ್ ನಾಯಕರಾದ ಹರ್ಷಿತ್, ಸ್ವಾತಿ ಹಾಗೂ ಇತರರು ಸಹಕರಿಸಿದರು. 39 ಮಂದಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ರಕ್ತದಾನ ಮಾಡಿದರು.

LEAVE A REPLY

Please enter your comment!
Please enter your name here