ಹಸುಗೂಸು ಸಹಿತ ಮಕ್ಕಳಿಬ್ಬರನ್ನು ಮನೆಯೊಂದರಲ್ಲಿ ಬಿಟ್ಟು ದಂಪತಿ ನಾಪತ್ತೆ

0

ಆಶ್ರಮ ಸೇರಿದ ಮಕ್ಕಳು: ದಂಪತಿ ಪತ್ತೆಗೆ ಪೊಲೀಸರಿಗೆ ದೂರು

ಉಪ್ಪಿನಂಗಡಿ: ಒಂದು ತಿಂಗಳ ಹಸುಗೂಸು ಸಹಿತ ತಮ್ಮ ಇಬ್ಬರು ಮಕ್ಕಳನ್ನು ಮನೆಯೊಂದರಲ್ಲಿ ಬಿಟ್ಟು ನಾಪತ್ತೆಯಾಗಿರುವ ಹೆತ್ತವರ ಪತ್ತೆಗಾಗಿ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿದ್ದು, ಈ ಮಕ್ಕಳನ್ನು ಪುತ್ತೂರಿನ ರಾಮಕೃಷ್ಣಾಶ್ರಮಕ್ಕೆ ಒಪ್ಪಿಸಿದ ಘಟನೆ ಕರಾಯದಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕು ಕರಾಯ ಪರಿಸರದಲ್ಲಿ ಅಲೆಮಾರಿ ಜನಾಂಗದ ದಂಪತಿ ಬುಟ್ಟಿ ಹೆಣೆಯುವ ಕಾಯಕದೊಂದಿಗೆ ಆಗಾಗ ಕಾಣಿಸಿಕೊಂಡು ಪರಿಸರದ ನಿವಾಸಿಗರ ವಿಶ್ವಾಸ ಗಳಿಸಿದ್ದರು. ಮದ್ಯವ್ಯಸನಿಗಳಾದ ಇವರು ಅಲ್ಲಲ್ಲಿ ಮಲಗಿಕೊಂಡು ಅವ್ಯವಸ್ಥಿತ ಜೀವನ ನಡೆಸುತ್ತಿದ್ದರು. ದಂಪತಿಗೆ ದಿನೇಶ ಎಂಬ ನಾಲ್ಕು ವರ್ಷದ ಮಗನಿದ್ದು, ಒಂದು ತಿಂಗಳ ಹಿಂದೆಯಷ್ಟೇ ಹೆಣ್ಣು ಮಗು ಜನಿಸಿತ್ತು.

ಈ ಎರಡು ಮಕ್ಕಳನ್ನು ಜೂ. 2ರಂದು ಕರಾಯ ಗ್ರಾಮದ ಫಾತಿಮಾ ಎಂಬಾಕೆಯ ಮನೆಯಲ್ಲಿ ಬಿಟ್ಟು ನಾವು ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ಹೋಗಿ ಬರುತ್ತೇವೆ ಎಂದು ಈ ದಂಪತಿ ತಿಳಿಸಿದ್ದರು. ಮಾನವೀಯತೆ ಮೆರೆದ ಫಾತಿಮಾ ಅವರು ಇದಕ್ಕೆ ಒಪ್ಪಿಕೊಂಡಿದ್ದರು. ಆದರೆ ಆ ಬಳಿಕ ಈ ದಂಪತಿಯ ಪತ್ತೆಯಿರಲಿಲ್ಲ. ಒಂದು ತಿಂಗಳ ಹಸುಗೂಸು ಸಹಿತ ಇಬ್ಬರು ಮಕ್ಕಳ ಲಾಲನೆ ಪಾಲನೆ ಮಾಡಿದ ಫಾತಿಮಾರವರು 2 ದಿನ ಕಳೆದರೂ ಹೆತ್ತವರು ಕಾಣಿಸಿಕೊಳ್ಳದೇ ಹೋದಾಗ ಕಳವಳಗೊಂಡು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಽಕಾರಿಗಳ ಗಮನಕ್ಕೆ ತಂದು ಮಕ್ಕಳನ್ನು ಆದಿತ್ಯವಾರದಂದು ಪುತ್ತೂರಿನ ರಾಮಕೃಷ್ಣಾಶ್ರಮಕ್ಕೆ ಒಪ್ಪಿಸಿದರು.

ಮಕ್ಕಳನ್ನು ಬಿಟ್ಟು ಹೋಗಿ ಮೂರು ದಿನವಾದರೂ ಹೆತ್ತವರ ಪತ್ತೆ ಇಲ್ಲದಿರುವುದನ್ನು ಗಮನಿಸಿದ ಫಾತಿಮಾರವರು ಸೋಮವಾರದಂದು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿ, ಮಕ್ಕಳನ್ನು ತನ್ನ ಮನೆಯಲ್ಲಿ ಬಿಟ್ಟು ಹೋಗಿರುವ ದಂಪತಿಯನ್ನು ಪತ್ತೆ ಹಚ್ಚಲು ವಿನಂತಿಸಿದ್ದಾರೆ. ದಂಪತಿಯ ಪೈಕಿ ಗಂಡನ ಹೆಸರು ತಿಳಿದಿಲ್ಲವೆಂದೂ, ಪತ್ನಿಯ ಹೆಸರು ಆಕೆಯ ಮಗ ತಿಳಿಸಿದ ರೀತಿಯಲ್ಲಿ ಲೀಲಾ ಎಂದಾಗಿದೆ ಎಂದು ದೂರಿನಲ್ಲಿ ಉಲ್ಲೇಖೀಸಲಾಗಿದೆ. ಉಪ್ಪಿನಂಗಡಿ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸುತಿದ್ದಾರೆ.

LEAVE A REPLY

Please enter your comment!
Please enter your name here