ನರೇಂದ್ರ ಪ.ಪೂ.ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಸಾಧಕರಿಗೆ ಅಭಿನಂದನಾ ಸಮಾರಂಭ

0

ಪುತ್ತೂರು: ವಿದ್ಯಾರ್ಥಿಗಳು ಭವಿಷ್ಯದ ಜೀವನದಲ್ಲಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕಾದರೆ ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಮತ್ತು ಶ್ರದ್ಧೆಯಿಂದ ಕಲಿಕೆಯಲ್ಲಿ ತೊಡಗಿಕೊಳ್ಳಬೇಕು.ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿನ ಪ್ರತಿಭೆಯನ್ನು ಗುರುತಿಸಿ ಉತ್ತಮ ವಾತಾವರಣ ಕಲ್ಪಿಸಿಕೊಟ್ಟಾಗ ಪ್ರತಿಭೆ ವಿಕಸನಗೊಳ್ಳುತ್ತದೆ.ಭವಿಷ್ಯದ ಬಗ್ಗೆ ಸ್ಪಷ್ಟ ಗುರಿ ಇಟ್ಟುಕೊಂಡು ಮುನ್ನುಗ್ಗಬೇಕು.ದಿಟ್ಟ ಹೆಜ್ಜೆಯೇ ಮುಂದಿನ ಸಾಧನೆಗೆ ಅಣಿಯಾಗಬೇಕು.ಎಂದು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.

ನರೇಂದ್ರ ಪ.ಪೂ.ಕಾಲೇಜಿನಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ರಾಜ್ಯಕ್ಕೆ ಐದನೇ ರ್‍ಯಾಂಕ್ ಪಡೆದ ಮತ್ತು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡು ಕಾಲೇಜಿಗೆ ಕೀರ್ತಿ ತಂದ ಎಲ್ಲಾ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದರು.

ಕಾರ್‍ಯಕ್ರಮದ ಮುಖ್ಯ ಅತಿಥಿಗಳಾದ ವಿವೇಕಾನಂದ ವಿದ್ಯಾವರ್ಧಕ ಸಂಘದ ಜೊತೆ ಕಾರ್‍ಯದರ್ಶಿ ರೂಪಲೇಖ ಮಾತನಾಡಿ ಕರ್ತವ್ಯ ಪ್ರಜ್ಞೆಯೊಂದಿಗೆ ಛಲವನ್ನು ಹೊಂದಿ ಕನಸು ಈಡೇರಿಸುವ ಜವಾಬ್ದಾರಿ ಹೊಂದಬೇಕು.ವಿದ್ಯಾರ್ಥಿಗಳು ಆಸಕ್ತಿಯಿಂದ ಕಲಿಕೆಯ ಜೊತೆಗೆ ಬದುಕಿಗೆ ಆಸರೆಯಾಗುವ ಉನ್ನತ ಶಿಕ್ಷಣವನ್ನು ಪಡೆದು ಸಮುದಾಯದ ಏಳಿಗೆಗಾಗಿ ಸಹಕಾರಿಯಾಗಬೇಕಿದೆ.ಸೋಲು ಗೆಲುವು ಶಾಶ್ವತವಲ್ಲ ಎಂಬ ಸತ್ಯದ ಅರಿವಿನೊಡನೆ ಮುನ್ನಡೆಯಿರಿ.ಅವಕಾಶಗಳನ್ನು ಉತ್ತಮ ಅಭಿಲಾಷೆಯೊಂದಿಗೆ ನಿಮ್ಮದಾಗಿಸಿಕೊಳ್ಳಿ ಮತ್ತು ಈ ದೇಶದ ಉತ್ತಮ ನಾಗರಿಕರಾಗಿ ಬಾಳಿ ಎಂದು ಹೇಳಿದರು.

ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀಕಾಂತ ಕೊಳತ್ತಾಯ ಮಾತನಾಡಿ,ಒಂದು ನಿರ್ಧಿಷ್ಟ ಗುರಿಯನ್ನಿಟ್ಟುಕೊಂಡು ಯಶಸ್ಸಿಗಾಗಿ ಪ್ರಯತ್ನಿಸಬೇಕು.ವಿಫಲವಾದರೂ ಮರಳಿ ಪ್ರಯತ್ನವನ್ನು ಮಾಡಿ ಗುರಿಯನ್ನು ಸಾಧಿಸಬೇಕು. ದೇಶದ ಭವಿಷ್ಯವು ಯುವಶಕ್ತಿಯನ್ನು ಅವಲಂಬಿಸಿದೆ.ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯುವಜನಾಂಗವು ಅತ್ಯಾಧುನಿಕ ಕೌಶಲ್ಯ ಮತ್ತು ಜ್ಞಾನವನ್ನು ಹೊಂದಿರಬೇಕು ಹಾಗೂ ತನ್ನಲ್ಲಿರುವ ದೌರ್ಬಲ್ಯವನ್ನುಅರಿತುಕೊಂಡು ಶಕ್ತಿ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಬೇಕು ಎಂದು ಹೇಳಿದರು. ಪ್ರಥಮ ಪಿಯುಸಿಯ ವಿದ್ಯಾರ್ಥಿಗಳಿಗೆ ಉಪನ್ಯಾಸಕರು ಆರತಿ ಬೆಳಗಿ,ತಿಲಕ ಧಾರಣೆ ಮಾಡಿ ಸ್ವಾಗತಿಸಿದರು.

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಐದನೇ ರ್‍ಯಾಂಕ್ ಪಡೆದ ಪಲ್ಲವಿ ಮತ್ತು ಅತ್ಯುತ್ತಮ ಅಂಕಗಳಿಸಿ , ಸಾಧನೆಗೈದ ಎಲ್ಲಾ 34 ವಿದ್ಯಾರ್ಥಿಗಳನ್ನೂ ಅಭಿನಂದಿಸಲಾಯಿತು. ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡ ವಿದ್ಯಾರ್ಥಿಗಳ ವಿವರಗಳನ್ನು ಉಪನ್ಯಾಸಕಿ ಶಶಿಕಲಾ ನೀಡಿದರು.

ಅಭಿನಂದನೆಗೆ ಪಾತ್ರರಾದ ವಿದ್ಯಾರ್ಥಿಗಳು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸುತ್ತಾ ಪೋಷಕರು,ಕಾಲೇಜಿನ ಆಡಳಿತ ಮಂಡಳಿ,ಪ್ರಾಂಶುಪಾಲರು ಮತ್ತು ಉಪನ್ಯಾಸಕರ ಬೆಂಬಲದಿಂದ ಮತ್ತು ಸತತ ಪರಿಶ್ರಮದಿಂದ ಈ ಸಾಧನೆ ಸಾಧ್ಯವಾಯಿತು ಎಂದು ಹೇಳಿದರು.

ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕರಾದ ಸಂತೋಷ ಬಿ.,ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಸತ್ಯನಾರಾಯಣ ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಂಶುಪಾಲ ಪ್ರಸಾದ್ ಶ್ಯಾನಭಾಗ್ ಸ್ವಾಗತಿಸಿ,ಉಪನ್ಯಾಸಕಿ ರೇಣುಕಾ ವಂದಿಸಿದರು. ಮಧುರಾರವರು ಕಾರ್‍ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here