ಮನುಷ್ಯನ ಅತೀ ಬುದ್ಧಿವಂತಿಕೆಯಿಂದ ಪರಿಸರ ನಾಶ: ಶಿವಾನಂದ ಆಚಾರ್ಯ
ಪುತ್ತೂರು: ಮಾನವ ಪರಿಸರದ ಅವಿಭಾಜ್ಯ ಅಂಗ. ಆದರೆ ತನ್ನ ಅತೀ ಬುದ್ಧಿವಂತಿಕೆಯಿಂದ ಪರಿಸರವನ್ನು ನಾಶ ಮಾಡುವ ಮೂಲಕ ಲಾಭದ ಪ್ರಯತ್ನದಲ್ಲಿದ್ದಾನೆ. ಅಭಿವೃದ್ಧಿಯ ಹೆಸರಿನಲ್ಲಿ ಮರಗಳಿಗೆ ಕೊಡಲಿ ಏಟು ಬೀಳುತ್ತಿದೆ. ಆದ್ದರಿಂದ ಪ್ರಕೃತಿಯನ್ನು ಉಳಿಸಬೇಕು. ಅದು ನಮ್ಮೆಲ್ಲರ ಕರ್ತವ್ಯ. ಅಂತೆಯೇ ಪ್ಲಾಸ್ಟಿಕ್ ಮಾಲಿನ್ಯವನ್ನು ತೊಲಗಿಸಬೇಕು ಎಂದು ಉಪವಲಯ ಅರಣ್ಯಾಧಿಕಾರಿ ಶಿವಾನಂದ ಆಚಾರ್ಯ ಹೇಳಿದರು.
ಅವರು ವಿಶ್ವ ಪರಿಸರ ದಿನದ ಪ್ರಯುಕ್ತ ಅಂಬಿಕಾ ಸಿಬಿಎಸ್‌ಇ ವಿದ್ಯಾಲಯದಲ್ಲಿ, ಜೂ.5 ರಂದು ಆಯೋಜಿಸಲಾಗಿದ್ದ ವನಮಹೋತ್ಸವ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿ ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ನಾವು ಪ್ರಕೃತಿಯನ್ನು ಆರಾಧಿಸುವವರು. ಒಬ್ಬ ರೈತ ಭೂಮಿಯನ್ನು ಉಳುಮೆ ಮಾಡುವಾಗ ಶ್ರದ್ಧೆಯಿಂದ ಶಿರಬಾಗುತ್ತಾನೆ. ಆದರೆ ಇಂದು ನಾಗಲೋಟದಲ್ಲಿ ಸಾಗುತ್ತಿರುವ ಮಾನವ ಪ್ರಕೃತಿಯ ಮೇಲೆ ಅತ್ಯಾಚಾರ ಎಸಗುತ್ತಿದ್ದಾನೆ, ನೀರನ್ನು ಸ್ವೇಚ್ಛವಾಗಿ ಬಳಕೆ ಮಾಡುತ್ತಿದ್ದೇವೆ. ಇಂದು ಬಾವಿಯಲ್ಲಿ ಒಸರು ಬರುತ್ತಿಲ್ಲ. ಬೋರ್ವೆಲ್ ನಿಂದ ನೀರನ್ನು ಹೀರುತ್ತಿದ್ದೇವೆ. ಕಾಡನ್ನು ನಾಶ ಮಾಡುತ್ತಿದ್ದೇವೆ. ಜೀವಿಗಳಿಲ್ಲದೆ ಮನುಷ್ಯ ಬದುಕಲು ಸಾಧ್ಯವಿಲ್ಲ. ಹಾಗಾಗಿ ನಾವು ಪ್ರತಿ ಹೆಜ್ಜೆಯನ್ನೂ ಜಾಗೃತವಾಗಿ ಇರಿಸಬೇಕು. ಪ್ರಕೃತಿಯನ್ನು ರಕ್ಷಿಸಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಹೇಳಿದರು.
ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ನಟ್ಟೋಜ, ಶಾಲಾ ಪ್ರಾಂಶುಪಾಲೆ ಮಾಲತಿ ಡಿ. ಭಟ್ ಉಪಸ್ಥಿತರಿದ್ದರು. 10ನೇ ತರಗತಿ ವಿದ್ಯಾರ್ಥಿಗಳಾದ ಅಭಿನವಶಿಷ್ಟ ಹಾಗೂ ಪ್ರವರ್ಧನ್ ಕೆ ಪಿ ಪ್ಲಾಸ್ಟಿಕ್ ಬಳಕೆಯಿಂದ ಆಗುವ ಹಾನಿಯ ಕುರಿತು ವಿಷಯಗಳನ್ನು ಹಂಚಿಕೊಂಡರು. ಗೈಡ್ಸ್ ವಿದ್ಯಾರ್ಥಿಗಳಾದ ಭಾರ್ಗವಿ, ಅರುಂಧತಿ ಎಲ್ ಆಚಾರ್ಯಾ, ಸಾನ್ವಿ, ಶ್ರಾವಣಿ ಪರಿಸರದ ಹಾಡನ್ನು ಪ್ರಸ್ತುತಪಡಿಸಿದರು. 10ನೇ ತರಗತಿಯ ವಿದ್ಯಾರ್ಥಿ ಶ್ರೀಲಕ್ಷ್ಮೀ ಸ್ವಾಗತಿಸಿ, ಅವನೀಶ ಕೃಷ್ಣ ವಂದಿಸಿದರು. ಖುಷಿ ಪಿ.ಡಿ ಕಾರ್ಯಕ್ರಮವನ್ನು ನಿರ್ವಹಿಸಿದರು. ವಂಶಿಕ, ಹೃನ್ಮಯಿ, ಸಾನ್ವಿ, ಸುಷುನ್ಮ, ಇಂಚರ ಪ್ರಾರ್ಥಿಸಿದರು.