ಉಪ್ಪಿನಂಗಡಿ: ಪುತ್ತೂರು ವಿಧಾನ ಸಭಾ ಕ್ಷೇತ್ರದ ನೂತನ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಅಭಿನಂದನೆ ಹಾಗೂ ಇವರ ಗೆಲುವಿಗೆ ಕಾರಣಕರ್ತರಾದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಜೂ. 10ರಂದು ಉಪ್ಪಿನಂಗಡಿಯಲ್ಲಿ ಕೃತಜ್ಞತಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಉಪ್ಪಿನಂಗಡಿ-ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್ ಕೆ.ಬಿ. ತಿಳಿಸಿದರು.
ಬೆಳಗ್ಗೆ 10 ಗಂಟೆಗೆ ಉಪ್ಪಿನಂಗಡಿಯ ಎಚ್.ಎಂ. ಅಡಿಟೋರಿಯಂನಲ್ಲಿ ಸಮಾರಂಭ ನಡೆಯಲಿದ್ದು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್, ಮಂಜುನಾಥ ಭಂಡಾರಿ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವನಾಥ ರೈ ಹಾಗೂ ಪುತ್ತೂರು ಮತ್ತು ಉಪ್ಪಿನಂಗಡಿ-ವಿಟ್ಲ ಬ್ಲಾಕ್ ಕಾಂಗ್ರೆಸ್‌ನ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಪಕ್ಷ ಸಂಘಟನೆಗೆ ಒತ್ತು:
ಈ ಹಿಂದಿನ ಅವಧಿಯಲ್ಲಿ ಪುತ್ತೂರಿನಲ್ಲಿ ಕಾಂಗ್ರೆಸ್ ಶಾಸಕರು ಇರಲಿಲ್ಲ, ಇದೀಗ ಕಾಂಗ್ರೆಸ್ ಶಾಸಕರೂ ಇದ್ದಾರೆ. ಜೊತೆಗೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ. ಈ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡು ಪಕ್ಷ ಸಂಘಟನೆಗೆ ಒತ್ತು ನೀಡುವ ಕೆಲಸ ಈ ಕಾರ್ಯಕ್ರಮದ ಮೂಲಕ ನಡೆಯಲಿದೆ ಎಂದ ಅವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಂಗಳೂರು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯ ಗೆಲುವನ್ನು ಸಾಧಿಸಬೇಕಾಗಿದೆ. ಈ ನಿಟ್ಟಿನಲ್ಲಿ ವಲಯ, ಬೂತ್ ಮಟ್ಟದಿಂದಲೇ ಪಕ್ಷ ಬಲವರ್ಧನೆ, ಸಂಘಟನೆ ಸಲುವಾಗಿ ಕಾರ್ಯಕ್ರಮ ರೂಪಿಸಲಾಗುವುದು ಎಂದರು.
ಕಾರ್ಯಕರ್ತರಿಂದ ಗ್ಯಾರಂಟಿ ಯೋಜನೆಯ ಮಾಹಿತಿ:
ರಾಜ್ಯ ಸರಕಾರದ ಗ್ಯಾರಂಟಿ ಯೋಜನೆ ಪಕ್ಷ ಸಂಘಟನೆಗೆ ರಹದಾರಿ ಆಗಿದ್ದು, ಗ್ಯಾರಂಟಿ ಯೋಜನೆಯನ್ನು ಪಡೆಯುವ ಬಗ್ಗೆ ಫಲಾನುಭವಿಗಳಿಗೆ ಮಾಹಿತಿ ಕೊಡುವ ನಿಟ್ಟಿನಲ್ಲಿ ವಲಯ ಮಟ್ಟದಲ್ಲಿ ಶಾಸಕರ ಉಪಸ್ಥಿತಿಯಲ್ಲಿ ಮಾಹಿತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಪ್ಪಿನಂಗಡಿ-ವಿಟ್ಲ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಯುನಿಕ್, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಸೋಮನಾಥ, ಯುವಕ ಕಾಂಗ್ರೆಸ್ ಅಧ್ಯಕ್ಷ ಫಾರೂಕ್ ಪೆರ್ನೆ, ಪಕ್ಷದ ಮುಖಂಡರಾದ ಕೃಷ್ಣ ರಾವ್ ಅರ್ತಿಲ, ಅಬ್ದುಲ್ ರಹಿಮಾನ್ ಕೆ., ನಝೀರ್ ಮಠ, ವಲಯ ಕಾಂಗ್ರೆಸ್ ಅಧ್ಯಕ್ಷ ಆದಂ ಕೊಪ್ಪಲ, ಯು.ಟಿ. ತೌಸೀಫ್, ಶಬ್ಬೀರ್ ಕೆಂಪಿ ಇದ್ದರು.