ವಿಕಲಚೇತನ ಯುವಕನಲ್ಲಿ ಮರುಚೈತನ್ಯ ಮೂಡಿಸಿದ ಯೋಗ, ದೈಹಿಕ ವ್ಯಾಯಾಮ; ಹೊಸ ಭರವಸೆ ಮೂಡಿಸಿದ ಮುಳಿಯ ಡೈಮಂಡ್ ಹೆಲ್ತ್‌ಫಿಟ್‌ನೆಸ್ ಸೆಂಟರ್

0

ವ್ಯಾಯಾಮ, ಯೋಗ ಎಂದರೆ ಅದು ಕೇವಲ ಫಿಟ್‌ನೆಸ್‌ಗೆ, ಜಿಮ್‌ಗೆ ಹೋಗಿ ವರ್ಕೌಟ್ ಮಾಡುವುದರಿಂದ ಫಿಟ್‌ನೆಸ್‌ನ್ನ ಕಾಪಾಡಿಕೊಳ್ಳಬಹುದಷ್ಟೇ ಎನ್ನುವುದು ಹಲವರ ನಂಬಿಕೆ. ಆದರೆ ಇದರಿಂದ ಇರುವ ಅನುಕೂಲಗಳನ್ನು ಸರಿಯಾಗಿ ತಿಳಿದುಕೊಂಡರೆ ನೀವು ಅಚ್ಚರಿಪಡದೇ ಇರಲು ಸಾಧ್ಯವಿಲ್ಲ. ನಿಗದಿತ ವ್ಯಾಯಾಮ, ಯೋಗವು ದೇಹವನ್ನು ಫಿಟ್ ಆಗಿಡುವ ಜೊತೆಗೆ ಹುಟ್ಟಿನಿಂದಲೇ ಇರುವ ಕೆಲವೊಂದು ದೈಹಿಕ ಸಮಸ್ಯೆಗಳನ್ನು, ನ್ಯೂನ್ಯತೆಗಳನ್ನು ಸರಿಪಡಿಸುತ್ತದೆ. ಇದಕ್ಕೆ ಪ್ರತ್ಯಕ್ಷ ನಿದರ್ಶನಕ್ಕೆ ಪುತ್ತೂರು ಕೋರ್ಟ್ ರಸ್ತೆಯಲ್ಲಿರುವ ಮುಳಿಯು ಜ್ಯುವೆಲ್ಸ್ ಪಕ್ಕದ ಇಂಡಿಯನ್ ಆರ್ಕೇಡ್‌ನಲ್ಲಿ ಕಾರ್ಯಾಚರಿಸುತ್ತಿರುವ ಮುಳಿಯ ಡೈಮಂಡ್ ಹೆಲ್ತ್ ಆಂಡ್ ಫಿಟ್‌ನೆಸ್ ಸೆಂಟರ್ ಸಾಕ್ಷಿಯಾಗಿದೆ. ಹೌದು, ಹುಟ್ಟಿದ 3ನೇ ದಿನಕ್ಕೆ ಫಿಟ್ಸ್ ಬಂದು ದೇಹದ ಸ್ವಾಧೀನತೆ ಕಳೆದುಕೊಂಡಿದ್ದ ಯುವಕ ಇಂದು ನಿಗದಿತ ವ್ಯಾಯಾಮ, ಯೋಗವನ್ನು ಅಭ್ಯಾಸ ಮಾಡುವ ಮೂಲಕ ಮರುಚೈತನ್ಯ ಪಡೆದುಕೊಂಡಿದ್ದಾರೆ.

ಪುತ್ತೂರು ಬೊಳುವಾರಿನ ಯುವಕ 19ರ ಹರೆಯದ ಶಮನ್ ಅವರು ತಾನು ಹುಟ್ಟಿದ ಮೂರನೇ ದಿನಕ್ಕೆ ಫಿಟ್ಸ್‌ಗೆ ತುತ್ತಾಗಿದ್ದರು. ಪರಿಣಾಮವಾಗಿ ಕೈಕಾಲುಗಳು ಸ್ವಾಧೀನ ಕಳೆದುಕೊಂಡಿದ್ದವು. ಅತ್ತಿತ್ತ ನಡೆದಾಡುವುದಕ್ಕೆ ಇನ್ನೊಬ್ಬರ ಆಸರೆ ಬೇಕೇಬೇಕಿತ್ತು. ಸಣ್ಣಂದಿನಲ್ಲಿ ಎತ್ತಿಕೊಂಡೇ ಹೋಗಬೇಕಿತ್ತು. ಇನ್ನೊಬ್ಬರ ಸಹಾಯವಿಲ್ಲದೆ ಏನೂ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ. ಕುಟುಂಬದ ಬಡತನದ ಹಿನ್ನೆಲೆಯಲ್ಲಿ ತಂದೆ ಮನೆ ನಿರ್ವಹಣೆಗೆ ಮನೆಯಿಂದ ಹೊರಹೋಗಿ ದುಡಿಯಬೇಕಾದ ಅನಿವಾರ್ಯತೆಯಾದರೆ ಮಗನ ಚಲನವಲನಕ್ಕೆ ತಾಯಿಯೇ ಆಧಾರ. ಸಣ್ಣಂದಿನಿಂದಲೇ ಮಗನ ಚಿಕಿತ್ಸೆಗೆ ಹೆತ್ತವರು ಬಹಳ ಪ್ರಯತ್ನ ಪಟ್ಟಿದ್ದರು. ಹಲವಾರು ಕಡೆಗಳಿಗೆ ತೆರಳಿ ಚಿಕಿತ್ಸೆ ಕೊಡಿಸಿದ್ದರು. ಇದೆಲ್ಲದರ ಪರಿಣಾಮ ಅಲ್ಪಸ್ವಲ್ಪ ನಡೆಯುವಷ್ಟರ ಮಟ್ಟಿಗೆ ಬೆಳವಣಿಗೆ ಕಂಡಿದ್ದರು. ಮುಳಿಯ ಹೆಲ್ತ್ ಆಂಡ್ ಫಿಟ್‌ನೆಸ್ ಸೆಂಟರ್ ಮೂಲಕ ಆರೋಗ್ಯದ ಬಗ್ಗೆ ಸೆಮಿನಾರ್‌ಗಳ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯುತ್ತಿದ್ದು, ಪುತ್ತೂರಿನ ಮಂಗಲ್ ಸ್ಟೋರ‍್ಸ್‌ನಲ್ಲಿ ನಡೆದ ಕಾರ್ಯಾಗಾರದ ಸಂದರ್ಭದಲ್ಲಿ, ಅಲ್ಲಿ ಕೆಲಸ ಮಾಡುತ್ತಿದ್ದ ತನ್ನ ತಾಯಿಯ ಜೊತೆಗಿದ್ದ ಶಮನ್ ಅವರನ್ನು ಮುಳಿಯ ಡೈಮಂಡ್ ಹೆಲ್ತ್ ಆಂಡ್ ಫಿಟ್‌ನೆಸ್ ಸೆಂಟರ್‌ನ ಹೆಡ್ ಕೋಚ್ ಹಾಗೂ ಮ್ಯಾನೇಜರ್ ಆಗಿರುವ ಸುನೀಲ್ ರಾಮಕೃಷ್ಣ ಅವರು ಗಮನಿಸಿದ್ದರು. ಜಿಮ್‌ನಲ್ಲಿ ನಿಗದಿತ ವ್ಯಾಯಾಮ, ಯೋಗದ ಮೂಲಕ ಶಮನ್ ಅವರ ಸಮಸ್ಯೆಯನ್ನು ಬಗೆಹರಿಸಬಹುದು ಎನ್ನುವುದನ್ನು ಮನಗಂಡ ಸುನೀಲ್ ರಾಮಕೃಷ್ಣ ಅವರು ಜಿಮ್‌ಗೆ ಫಿಟ್‌ನೆಸ್ ಸೆಂಟರ್‌ಗೆ ಬರುವಂತೆ ತಿಳಿಸಿದ್ದರು. ಅಂತೆಯೇ ಫಿಟ್‌ನೆಸ್ ಸೆಂಟರ್‌ಗೆ ಬಂದ ಶಮನ್ ಅವರನ್ನು 3 ತಿಂಗಳಿನಲ್ಲಿ ಸಂಪೂರ್ಣವಾಗಿ ಗುಣಪಡಿಸುವ ಭರವಸೆ ನೀಡಿದ್ದು, ಅದರಂತೆ ಪ್ರಯತ್ನ ಆರಂಭಿಸಿದ್ದಾರೆ.
ಈಗ ಪ್ರತೀದಿನ ಸಂಜೆ 4 ಗಂಟೆಯಿಂದ ಜಿಮ್‌ನಲ್ಲಿ ವರ್ಕೌಟ್, ಯೋಗ ಮಾಡುತ್ತಾರೆ. ಶಮಂತ್ ಅವರು ಯೋಗ, ವ್ಯಾಯಾಮ ಆರಂಭಿಸಿ ಈಗಾಗಲೇ 1 ತಿಂಗಳು ಕಳೆದಿದ್ದು ಈಗ ಅವರು ಯಾರ ಸಹಾಯವೂ ಇಲ್ಲದೆ ನಡೆಯುವಷ್ಟು ಸಮರ್ಥರಾಗಿದ್ದಾರೆ. ಯೋಗ, ಜಿಮ್ ಮಾಡುವ ಜೊತೆಗೆ ಮೆಟ್ಟಿಲು ಹತ್ತುವುದು, ಇಳಿಯುವುದು, ಭಾರ ಎತ್ತುವುದು ಹೀಗೆ ಎಲ್ಲವನ್ನೂ ಯಾರ ಸಹಾಯವೂ ಇಲ್ಲದೆ, ಸ್ವತಂತ್ರವಾಗಿ ಮಾಡುವಷ್ಟು ಸ್ಟ್ರಾಂಗ್ ಆಗಿದ್ದಾರೆ. ಇವರಿಗೆ ಜಿಮ್‌ನ ಇತರ ತರಬೇತುದಾರರಾದ ತುಳಸಿ, ಅಶೋಕ್ ಅವರು ಸಾಥ್ ನೀಡುತ್ತಿದ್ದಾರೆ. ಎಲ್ಲರ ಪ್ರಯತ್ನ, ಸಹಕಾರದಿಂದ ಮಾನಸಿಕವಾಗಿ ಧೈರ್ಯವೂ ಬಂದಿದೆ ಎನ್ನುವುದು ಶಮನ್ ಅವರ ಮಾತು.
ಮನುಷ್ಯನಿಗೆ ತಾನು ಸಮಸ್ಯೆಯನ್ನು ಮೀರಿ ನಿಲ್ಲಬೇಕು ಎನ್ನುವ ಹಠ, ಛಲ ಇದ್ದರೆ ಎಂತಹ ಸಮಸ್ಯೆಯನ್ನಾದರೂ ಮೀರಿ ನಿಲ್ಲಬಹುದು. ವಿಕಲಚೇತನರಿಗೆ ತಮ್ಮ ಸಮಸ್ಯೆಗಳನ್ನು ಬೇರೆಯವರ ಜೊತೆಗೆ ಹೇಳಿಕೊಳ್ಳಲು ಸಾಧ್ಯವಿಲ್ಲ. ಮನಸ್ಸಿನೊಳಗೆ ಬಹಳಷ್ಟು ನೋವು ಪಡುತ್ತಿರುತ್ತಾರೆ. ಈಗ ಶಮಂತ್ ಅವರಲ್ಲಿ ಆತ್ಮವಿಶ್ವಾಸ ತುಂಬಿ ಅವರನ್ನು ಸಜ್ಜುಗೊಳಿಸುತ್ತಿದ್ದೇವೆ. ಈಗ ಅವರ ಬೆಳವಣಿಗೆಯ ಬಗ್ಗೆ ಅವರ ಹೆತ್ತವರಿಗೆ ಖುಷಿ ಇದೆ. ಇದು ನನಗೂ ಅತೀವ ಸಂತಸ ತಂದಿದೆ ಎನ್ನುತ್ತಾರೆ ಶಮನ್ ಅವರನ್ನು ತರಬೇತುಗೊಳಿಸುತ್ತಿರುವ ಮುಳಿಯ ಹೆಲ್ತ್ & ಫಿಟ್‌ನೆಸ್ ಸೆಂಟರ್‌ನ ಹೆಡ್ ಟ್ರೈನರ್ ಮತ್ತು ಮ್ಯಾನೇಜರ್ ಆಗಿರುವ ಸುನಿಲ್ ರಾಮಕೃಷ್ಣ ಅವರು.
ಶಮನ್ ಅವರು ಆರಂಭದಲ್ಲಿ ಬಂದಾಗ ಅವರಿಗೆ ಶಕ್ತಿ ಇರಲಿಲ್ಲ. ದೇಹವನ್ನು ಬ್ಯಾಲೆನ್ಸ್ ಮಾಡಲು ಕಷ್ಟವಾಗುತ್ತಿತ್ತು. ಮಾತನಾಡಲೂ ಹಿಂಜರಿಕೆ ಇತ್ತು. ಹಿಂದೆ ನಡೆದಾಡಲೂ ಕಷ್ಟವಾಗ್ತಾ ಇತ್ತು. ಯೋಗದ ಮೂಲಕ ಬ್ಯಾಲೆನ್ಸಿಂಗ್, ಸ್ಟ್ರೆಂಥನಿಂಗ್ ಪ್ರಾಕ್ಟೀಸಸ್‌ಗಳನ್ನು ಹೇಳಿಕೊಟ್ಟಿದ್ದೇವೆ. ಇಲ್ಲಿ ಶಮನ್ ಅವರು ಬಹಳಷ್ಟು ಪ್ರಯತ್ನಪಡುತ್ತಿದ್ದಾರೆ. ಈಗ ಇಷ್ಟು ಸದೃಢವಾಗಿದ್ದು, ಇನ್ನೆರಡು ತಿಂಗಳಲ್ಲಿ ಸಂಪೂರ್ಣ ಸದೃಢರಾಗಬಹುದು ಎನ್ನುವುದು ಯೋಗ ಟ್ರೈನರ್ ಸ್ವಾತಿ ಬಿ.ಶೆಟ್ಟಿಯವರ ಅಭಿಪ್ರಾಯ.
ಯುವಕ ಶಮನ್, ಅವರ ತಾಯಿಯ ಮಾತುಗಳು ಜೊತೆಗೆ ತರಬೇತುದಾರ ಸುನಿಲ್ ರಾಮಕೃಷ್ಣ ಅವರ ಮಾತುಗಳ ಕುರಿತ ಸಮಗ್ರ ವೀಡಿಯೋ ಸುದ್ದಿ ನ್ಯೂಸ್ ಪುತ್ತೂರು ಯೂಟ್ಯೂಬ್ ಚಾನೆಲ್‌ನಲ್ಲಿ ಮತ್ತು ಸುದ್ದಿ ಬಿಡುಗಡೆ ಫೇಸ್‌ಬುಕ್ ಪೇಜ್‌ನಲ್ಲಿ ಲಭ್ಯವಿದೆ. https://youtu.be/SfP1qiaYwVM ಈ ವೀಡಿಯೋ ಲಿಂಕ್ ಮೂಲಕ ಸಂಪೂರ್ಣ ವೀಡಿಯೋ ವರದಿಯನ್ನು ವೀಕ್ಷಿಸಬಹುದು. ಶಮನ್ ಅವರಿಗೆ ಆರ್ಥಿಕವಾಗಿ ನೆರವಾಗಬಯಸುವವರು ಈ ಬ್ಯಾಂಕ್ ಖಾತೆಗೆ ತಮ್ಮ ಸಹಾಯ ಮಾಡಬಹುದು.
ಹೆಸರು: ಶಮನ್
ಖಾತೆ ಸಂಖ್ಯೆ: 39808211836
ಐಎಫ್‌ಎಸ್‌ಸಿ :SBIN0004270
ಬ್ಯಾಂಕ್: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಶಾಖೆ: ಪುತ್ತೂರು

ವ್ಯಾಯಾಮ ಎನ್ನುವುದು ಪ್ರತಿಯೋರ್ವ ವ್ಯಕ್ತಿಗೂ ಬಹಳಷ್ಟು ಮುಖ್ಯವಾದುದು. ಜಿಮ್ ಎಂದರೆ ಕೇವಲ ಬಾಡಿಬಿಲ್ಡಿಂಗ್ ಮಾತ್ರವಲ್ಲ. ಇದನ್ನು ಮಾಡುವುದಕ್ಕೆ ಯಾವ ವಯಸ್ಸಿನ ಅಂತರವೂ ಇಲ್ಲ. ಇದು ಜೀವನದ ಅಂಗ. ಆರೋಗ್ಯವಂತರಾಗಿ, ಸುಂದರವಾಗಿ, ಕ್ರಿಯಾಶೀಲರಾಗಿರಬೇಕು ಎಂದು ಬಯಸುವವರಿಗೆ ವ್ಯಾಯಾಮ ಬೇಕೇ ಬೇಕು. 7-8 ವರ್ಷದ ಮಕ್ಕಳಿಂದ ಹಿಡಿದು 70 ವರ್ಷದ ವಯಸ್ಕರವರೆಗೂ ವ್ಯಾಯಾಮ ಮಾಡಬಹುದು. ಮುಳಿಯ ಹೆಲ್ತ್ ಫಿಟ್‌ನೆಸ್ ಸೆಂಟರ್‌ಗೆ ಯಾವ ವಯಸ್ಸಿನವರು, ಯಾವ ಆರೋಗ್ಯ ಸಮಸ್ಯೆಯುಳ್ಳವರು ಬಂದರೂ ಅವರಿಗೆ ಅನುಕೂಲವಾಗುವ ವ್ಯಾಯಾಮವನ್ನು ಹೇಳಿಕೊಟ್ಟು ಅವರ ಕನಸನ್ನು ನನಸಾಗಿಸಲು ಪ್ರಯತ್ನಿಸುತ್ತಿದ್ದೇವೆ. ಇಲ್ಲಿ ದೊರಕುವ ಜ್ಞಾನವನ್ನು ನಾವು ಎಲ್ಲೇ ಹೋದರೂ ಜೀವನಪರ್ಯಂತ ಬಳಸಿಕೊಳ್ಳಬಹುದು.
-ಸುನಿಲ್ ರಾಮಕೃಷ್ಣ, ಹೆಡ್ ಟ್ರೈನರ್, ಮ್ಯಾನೇಜರ್- ಮುಳಿಯ ಡೈಮಂಡ್ ಹೆಲ್ತ್ ಫಿಟ್‌ನೆಸ್ ಸೆಂಟರ್

ಮಗನ ಚಿಕಿತ್ಸೆಗೆ ಬಹಳಷ್ಟು ಪ್ರಯತ್ನ ಮಾಡಿದ್ದೇವೆ. ಹಲವೆಡೆ ಪ್ರಯತ್ನ ಮಾಡಿದ ಬಳಿಕ ಕೈಹಿಡಿದುಕೊಂಡು ನಡೆಯುವಷ್ಟರ ಮಟ್ಟಿಗೆ ಬೆಳವಣಿಗೆ ಆಗಿದ್ದ. ಮುಳಿಯ ಹೆಲ್ತ್ ಆಂಡ್ ಫಿಟ್‌ನೆಸ್ ಸೆಂಟರ್‌ನ ಸುನೀಲ್ ರಾಮಕೃಷ್ಣ ಅವರು ನೀಡಿದ ಭರವಸೆ ಹಿನ್ನೆಲೆಯಲ್ಲಿ ಇಲ್ಲಿಗೆ ಬಂದಿದ್ದೇವೆ. ಮುಂಚೆ ನಡೆಯುವಾಗ ಹೆಜ್ಜೆ ಹೆಜ್ಜೆಗೂ ಬೀಳುತ್ತಿದ್ದ. ಈಗ ಸ್ವಲ್ಪ ಸುಧಾರಣೆಯಾಗಿದೆ. ಔಷಧಗಳು ಬೇಕೇಬೇಕಿದ್ದು, ತಿಂಗಳಿಗೆ ಸರಿಸುಮಾರು 2 ಸಾವಿರ ರೂ.ಗಳು ಔಷಧಿಗೆ ಬೇಕು. ಆರ್ಥಿಕವಾಗಿ ಸಂಕಷ್ಟವಿದೆ. ಮಗ ಎಲ್ಲರ ಹಾಗೆ ಆದರೆ ಸಾಕು ಎನ್ನುವುದು ಶಮನ್ ಅವರ ತಾಯಿ ಮಮತಾ ಅವರ ಮಾತು.

ದರ್ಶನ್ ಅವರನ್ನು ನೋಡಬೇಕೆನ್ನೋದು ಕನಸು

ಶಮನ್ ಅವರು ಖ್ಯಾತ ಸ್ಯಾಂಡಲ್‌ವುಡ್ ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕಟ್ಟಾ ಅಭಿಮಾನಿ. ನಾನು ಅವರನ್ನು ನೋಡಬೇಕು, ಅವರಂತೆ ಗತ್ತಿನಿಂದ ನಡೆಯಬೇಕು ಎನ್ನುವುದು ಶಮನ್ ಅವರ ಕನಸು. ಈ ಕನಸನ್ನು ನನಸು ಮಾಡುತ್ತೇನೆ ಎನ್ನುವುದು ಜಿಮ್ ಟ್ರೈನರ್ ಸುನೀಲ್ ರಾಮಕೃಷ್ಣ (ಕೃಷ್ಣ) ಅವರು ಶಮನ್‌ಗೆ ನೀಡಿರುವ ಭರವಸೆ. 3 ತಿಂಗಳಲ್ಲಿ ಸಂಪೂರ್ಣ ಗುಣಮುಖರಾಗುವಂತೆ ಮಾಡಿ ದರ್ಶನ್ ಅವರನ್ನು ಭೇಟಿ ಮಾಡಿಸುತ್ತೇನೆ ಎಂದು ಹೇಳಿರುವ ಮಾತು ಶಮನ್ ಅವರಲ್ಲಿ ಇನ್ನಷ್ಟು ಉತ್ತೇಜನ ಮೂಡಿಸಿದೆ. ಅದಕ್ಕಾಗಿ ಕಾಯುತ್ತಿದ್ದೇನೆ ಎನ್ನುತ್ತಾರೆ ಶಮನ್.

LEAVE A REPLY

Please enter your comment!
Please enter your name here