ನಿವೃತ್ತ ದೈ.ಶಿ.ಶಿ ಜೆರೋಮಿಯಸ್ ಪಾಯಿಸ್ ರವರ 71ನೇ ಹುಟ್ಟುಹಬ್ಬದ ಸಂಭ್ರಮ

0

ಪುತ್ತೂರು: ಶಿಕ್ಷಕ ವೃತ್ತಿ ಬದುಕಿನಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ಸಮಾಜದಲ್ಲಿ ಉತ್ತಮ ಸ್ಥಾನ ಸಂಪಾದಿಸುವಲ್ಲಿ ಕಾರಣೀಕರ್ತರಾಗಿದ್ದು ಮಾತ್ರವಲ್ಲ ನಿವೃತ್ತಿಯ ಬಳಿಕ ಪ್ರತಿಷ್ಠಿತ ಅಂತರ್ರಾಷ್ಟ್ರೀಯ ರೋಟರಿ ಕ್ಲಬ್ ಅಲ್ಲದೆ ಇತರ ಸಂಘ-ಸಂಸ್ಥೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಸಾಮಾಜಿಕ ಕೊಡುಗೆ ನೀಡುತ್ತಿರುವ ದರ್ಬೆ ಕಾವೇರಿಕಟ್ಟೆ ನಿವಾಸಿ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾಗಿರುವ ಜೆರೋಮಿಯಸ್ ಪಾಯಿಸ್ ರವರಿಗೆ ಜೂ.7 ರಂದು 71ನೇ ಹುಟ್ಟುಹಬ್ಬ.

ಚಿತ್ರ: ಸಂತೋಷ್ ಮೊಟ್ಟೆತ್ತಡ್ಕ


ಈ ಸಂದರ್ಭದಲ್ಲಿ ಜೆರೋಮಿಯಸ್ ಪಾಯಿಸ್ ರವರು ತನ್ನ ಪತ್ನಿ ನಿವೃತ್ತ ಶಿಕ್ಷಕಿ ಪ್ರೆಸ್ಸಿ ಲೋಬೊ, ಕುಟುಂಬದವರೊಂದಿಗೆ, ಹಿತೈಷಿಗಳೊಂದಿಗೆ ಕಾವೇರಿಕಟ್ಟೆ ನಿವಾಸದಲ್ಲಿ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡರು.


ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಹಾಗೂ ಹಿರಿಯ ನಾಗರಿಕರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಪ್ರೊ|ಝೇವಿಯರ್ ಡಿ’ಸೋಜ ಮಾತನಾಡಿ, ಹುಟ್ಟುಹಬ್ಬವನ್ನು ಆಚರಿಸುತ್ತಿರುವ ಜೆರೋಮಿಯಸ್ ಎಲ್ಲರೊಡನೆ ವೈಯಕ್ತಿಕವಾಗಿ ಹಾಗೂ ಸಾಮಾಜಿಕವಾಗಿ ಬೆರೆಯುವ ವ್ಯಕ್ತಿಯಾಗಿದ್ದಾರೆ. ಪಾಠ ಮಾಡುವ ಶಿಕ್ಷಕರು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ ನಡುವೆ ಸಾಮ್ಯತೆಯಿದೆ. ಸಾಮಾನ್ಯವಾಗಿ ಮಕ್ಕಳು ತಮಗೆ ಯಾರು ಬಹಳ ಅಚ್ಚುಮೆಚ್ಚು ಅವರನ್ನು ಮಾತ್ರ ನೆನಪಿಸಿಕೊಳ್ಳುತ್ತಾರೆ. ಆದರೆ ದೈಹಿಕ ಶಿಕ್ಷಣ ಶಿಕ್ಷಕರಿಗೆ ರಫ್ ಆಂಡ್ ಟಫ್ ವಿದ್ಯಾರ್ಥಿಗಳೇ ಸಿಗೋದು. ಮಾತ್ರವಲ್ಲ ಆ ವಿದ್ಯಾರ್ಥಿಗಳು ದೈಹಿಕ ಶಿಕ್ಷಣ ಶಿಕ್ಷಕರೊಂದಿಗೆ ಹೆಚ್ಚಿನ ಆತ್ಮೀಯತೆಯಿಂದ ಇರುವುದು ನಾವು ನೋಡಿದ್ದೇವೆ. ಅದರಂತೆ ಕೂಳೂರು, ಮಂಗಳೂರು, ಕಲ್ಯಾಣಪುರ, ಪುತ್ತೂರಿನಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿರುವ ಜೆರೋಮಿಯಸ್ ಪಾಯಿಸ್ ರವರಿಗೆ ಅಪಾರ ಶಿಷ್ಯ ವರ್ಗವಿದ್ದಾರೆ. ಇಂದಿಲ್ಲಿ ಅವರು ತಮ್ಮ 71ನೇ ಜನ್ಮದಿನೋತ್ಸವದ ಸಂಭ್ರಮವನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಜೆರೋಮಿಯಸ್ ಪಾಯಿಸ್ ರವರಿಗೆ ಶುಭವಾಗಲಿ ಮತ್ತು ಆಯುರಾರೋಗ್ಯವನ್ನು ದೇವರು ಕರುಣಿಸಲಿ ಎಂದರು.


ರೋಟರಿ ಕ್ಲಬ್ ಪುತ್ತೂರು ಸಿಟಿ ಅಧ್ಯಕ್ಷ ಪ್ರಶಾಂತ್ ಶೆಣೈ ಮಾತನಾಡಿ, ಹುಟ್ಟುಹಬ್ಬವನ್ನು ಆಚರಿಸುತ್ತಿರುವ ಜೆರೋಮಿಯಸ್ ಪಾಯಿಸ್ ರವರು ನನಗೆ ಶಿಕ್ಷಕರಾಗಿದ್ದವರು. ಅಂದು ವಿದ್ಯಾರ್ಥಿಯಾಗಿದ್ದ ಸಂದರ್ಭ ನನ್ನನ್ನು ತುಂಬಾ ಓಡಿಸಿದ್ದಾರೆ. ಪ್ರಸ್ತುತ ಜೆರೋಮಿಯಸ್ ಪಾಯಿಸ್ ರವರು ತೊಡಗಿಸಿಕೊಂಡಿರುವ ರೋಟರಿ ಸಿಟಿಯಲ್ಲಿ ತಾನು ಅಧ್ಯಕ್ಷನಾಗಿದ್ದು ಜೆರೋಮಿಯಸ್ ಪಾಯಿಸ್ ರವರ ಸಂಬಂಧ ಮತ್ತಷ್ಟು ವೃದ್ಧಿಗೊಂಡಿದ್ದು ಅವರೀಗ ನನ್ನ ಫ್ರೆಂಡ್ ಎನಿಸಿಕೊಂಡಿದ್ದು ಹುಟ್ಟುಹಬ್ಬದ ಶುಭಾಶಯಗಳು ಎಂದರು.


ಜೆರೋಮಿಯಸ್ ಪಾಯಿಸ್ ರವರ ಪತ್ನಿ ಸಹೋದರರಾಗಿರುವ ಬ್ಯಾಂಕ್ ಆಫ್ ಬರೋಡಾದ ನಿವೃತ್ತ ಡಿಜಿಎಂ ಹಾಗೂ ರಾಷ್ಟ್ರ ಮಟ್ಟದ ಮಾಜಿ ವೈಟ್ ಲಿಪ್ಟರ್ ಬ್ಯಾಪ್ಟಿಸ್ಟ್ ಲೋಬೊ ಬೆಂಗಳೂರು, ಬ್ಯಾಂಕ್ ಆಫ್ ಬರೋಡದ ಸೀನಿಯರ್ ಮ್ಯಾನೇಜರ್ ರಾಜೇಶ್, ರೋಟರಿ ಕ್ಲಬ್ ಪುತ್ತೂರು ಸಿಟಿ ನಿಯೋಜಿತ ಅಧ್ಯಕ್ಷೆ ಗ್ರೇಸಿ ಗೊನ್ಸಾಲ್ವಿಸ್, ಮಾಜಿ ಅಧ್ಯಕ್ಷ ಪ್ರಮೋದ್ ಮಲ್ಲಾರ ಸಹಿತ ಹಲವರು ಉಪಸ್ಥಿತರಿದ್ದರು. ಶೆರಿ ಮಸ್ಕರೇನ್ಹಸ್ ಕಾರ್ಯಕ್ರಮ ನಿರೂಪಿಸಿದರು.

ಕೇಕ್ ಕತ್ತರಿಸಿ ಸಂಭ್ರಮ…
ಆರಂಭದಲ್ಲಿ 71ನೇ ಹುಟ್ಟುಹಬ್ಬವನ್ನು ಆಚರಿಸುತ್ತಿರುವ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಜೆರೋಮಿಯಸ್ ಪಾಯಿಸ್ ರವರು ಪತ್ನಿ ಪ್ರೆಸ್ಸಿ ಲೋಬೊರವರೊಂದಿಗೆ ಸಿಹಿಯ ಪ್ರತೀಕವಾಗಿರುವ ಕೇಕ್ ಕತ್ತರಿಸಿ, ಪರಸ್ಪರ ತಿನ್ನಿಸಿ ಹುಟ್ಟುಹಬ್ಬದ ಸಂಭ್ರಮವನ್ನು ದ್ವಿಗುಣಗೊಳಿಸಿದರು. ಹುಟ್ಟುಹಬ್ಬ ಆಚರಿಸುತ್ತಿರುವ ಜೆರೋಮಿಯಸ್ ಪಾಯಿಸ್ ರವರು ರೋಟರಿ ಕ್ಲಬ್ ಪುತ್ತೂರು ಸಿಟಿಯ ಮಾಜಿ ಅಧ್ಯಕ್ಷರಾಗಿದ್ದು ಈ ಸಂದರ್ಭದಲ್ಲಿ ರೋಟರಿ ಸಿಟಿ ಅಧ್ಯಕ್ಷ ಪ್ರಶಾಂತ್ ಶೆಣೈರವರ ತಂಡ ಜೆರೋಮಿಯಸ್ ಪಾಯಿಸ್ ರವರಿಗೆ ನೆನಪಿನ ಕಾಣಿಕೆಯಿತ್ತು ಶುಭ ಹಾರೈಸಿದರು.

ಕೃತಜ್ಞತೆ…
ಕಳೆದ ವರ್ಷ ಸೈನಿಕರ ಭವನದಲ್ಲಿ ತನ್ನ 70ನೇ ಹುಟ್ಟುಹಬ್ಬವನ್ನು ಆಚರಿಸಿದ್ದೆ. ಈ ಬಾರಿ ಬಹಳ ಸರಳ ರೀತಿಯಲ್ಲಿ ಆಚರಿಸುತ್ತಿದ್ದೇನೆ. ನನ್ನ ಹುಟ್ಟುಹಬ್ಬಕ್ಕೆ ಆಗಮಿಸಿ ಶುಭ ಹಾರೈಸಿದ ಎಲ್ಲಾ ನನ್ನ ಕುಟುಂಬ ವರ್ಗದವರಿಗೆ, ರೋಟರಿ ಮಿತ್ರರಿಗೆ, ಹಿತೈಷಿಗಳಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ನಾವೆಲ್ಲರೂ ಹಸನ್ಮುಖಿಯಿಂದ ಬಾಳೋಣ ಎಂದು ಹುಟ್ಟುಹಬ್ಬ ಆಚರಿಸಿದ ಜೆರೋಮಿಯಸ್ ಪಾಯಿಸ್ ರವರು ಹೇಳಿದರು.

LEAVE A REPLY

Please enter your comment!
Please enter your name here