ಮಳೆಗಾಲ ಎದುರಿಸಲು ಮೆಸ್ಕಾಂ ಸರ್ವಸನ್ನದ್ಧ -ಎಇಇ ರಾಮಚಂದ್ರ

0

ಪುತ್ತೂರು:ಮಳೆಗಾಲ ಆರಂಭಗೊಂಡಿದ್ದರೂ ಇನ್ನೂ ಪೂರ್ಣ ಪ್ರಮಾಣದಲ್ಲಿ ಮಳೆ ಸುರಿಯಲು ಆರಂಭಿಸಿಲ್ಲ.ಆದರೂ ಸರಕಾರಿ ಇಲಾಖೆಗಳು ಮಳೆಗಾಲವನ್ನು ಎದುರಿಸಲು ಸನ್ನದ್ಧವಾಗಿದ್ದು, ಮೆಸ್ಕಾಂ ಕೂಡ ಸಕಲ ಪೂರ್ವಸಿದ್ಧತೆಗಳನ್ನು ಮಾಡಿಕೊಂಡಿದೆ.ಮಳೆಗಾಲದಲ್ಲಿ ಎದುರಾಗುವ ಸಾಮಾನ್ಯ ಸಮಸ್ಯೆಗಳಾದ ಕಂಬಗಳು ತುಂಡಾಗುವುದು, ಮರಗಳು ಉರುಳುವುದು ಇತ್ಯಾದಿ ಸಮಸ್ಯೆಗಳು ಕಂಡುಬಂದಾಗ ಕ್ಷಿಪ್ರವಾಗಿ ಸ್ಪಂದಿಸಲು ತಂಡಗಳನ್ನು ಸನ್ನದ್ಧವಾಗಿ ಇರಿಸಲಾಗಿದೆ ಎಂದು ಪುತ್ತೂರು ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ ಎ. ತಿಳಿಸಿದ್ದಾರೆ.


ಮಳೆಗಾಲದ ಸಿದ್ಧತೆಯ ಬಗ್ಗೆ ‘ಸುದ್ದಿ’ಗೆ ಮಾಹಿತಿ ನೀಡಿದ ಅವರು, ಮಳೆಗಾಲದಲ್ಲಿ ಕಂಬಗಳು ಉರುಳುವುದು, ಉಳಿದ ಕಂಬಗಳನ್ನು ಮರಳಿ ಎಬ್ಬಿಸಿ ನಿಲ್ಲಿಸುವುದು ದೊಡ್ಡ ಸವಾಲು. ಇದಕ್ಕಾಗಿ ಈಗಾಗಲೇ ಉದ್ದಕ್ಕೆ ಬೆಳೆದಿರುವ ಮರಗಳ ರೆಂಬೆ, ಕೊಂಬೆಗಳನ್ನು ಕತ್ತರಿಸಿದ್ದೇವೆ.ಸಬ್‌ಡಿವಿಷನ್‌ಗೆ 12 ಜನರನ್ನು ಹೊರಗುತ್ತಿಗೆ ಆಧಾರದಲ್ಲಿ ತೆಗೆದುಕೊಂಡಿದ್ದು, ಇದಕ್ಕಾಗಿ ಬೇಕಾದಂತಹ ಮಾನವ ಸಂಪನ್ಮೂಲವನ್ನು ಸಿದ್ಧಪಡಿಸಿಕೊಂಡಿದ್ದೇವೆ. ರಾತ್ರಿ ವೇಳೆ ಕಂಬಗಳು ಬಿದ್ದರೂ ಹೋಗಿ ಕಾರ್ಯಾಚರಣೆ ಮಾಡುತ್ತಾರೆ.ಇದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಕೂಡ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.


ಸಕಾಲದಲ್ಲಿ ಮಳೆ ಬಾರದೆ ನೀರಿನ ಅಭಾವ ಸೃಷ್ಟಿಯಾಗಿದ್ದು, ಬೋರ್‌ವೆಲ್‌ಗಳಿಗೆ 24*7 ಪವರ್ ನೀಡಬೇಕಿದೆ.ಈ ಹಿಂದೆ ಮಳೆಗಾಲ ಆರಂಭಕ್ಕೆ ಮುಂಚೆ 2-3 ಬಾರಿ ಮಳೆ ಬಂದಿದ್ದು, ಕೃಷಿಕರಿಗೆ ನೀರಿನ ಅಭಾವ ಉಂಟಾಗಿರಲಿಲ್ಲ.ಆದರೆ ಈ ಬಾರಿ ಮಳೆಗಾಲ ಆರಂಭವಾದರೂ ಮಳೆ ಸುರಿಯಲಾರಂಭಿಸದೇ ಇರುವುದರಿಂದ ಇನ್ನೂ ಓವರ್‌ಲೋಡ್ ಕಡಿಮೆ ಆಗಿಲ್ಲ.ನಿರ್ವಹಣೆಗೆ ಸವಾಲಾಗಿದೆ.ಇದರಿಂದ ಮೆಸ್ಕಾಂನ ಮಳೆಗಾಲದ ಪೂರ್ವಸಿದ್ಧತಾ ಕೆಲಸಕ್ಕೆ ಕೆಲವೊಂದು ಸಮಸ್ಯೆಗಳಾಗಿವೆ ಎಂದು ಹೇಳಿದರು.


ಮಳೆಗಾಲದಲ್ಲಿ ಯಾವುದೇ ವಿದ್ಯುತ್ ಕಂಬ, ತಂತಿ ಮುರಿದು ಬಿದ್ದಿದ್ದಾಗ ಮೊದಲು ಮೆಸ್ಕಾಂಗೆ ಮಾಹಿತಿ ನೀಡಬೇಕು ಹೊರತು ಯಾರೂ ಕೂಡ ಸ್ವತಃ ಪ್ರಯತ್ನಿಸಲು ಹೋಗಬಾರದು. ಎಂತಹ ಪರಿಸ್ಥಿತಿ ಬಂದರೂ ಮೆಸ್ಕಾಂನ ಸಿಬ್ಬಂದಿ ಅಥವಾ ಅಧಿಕಾರಿ ಬರುವವರೆಗೆ ಕಾಯಬೇಕು.ಮಳೆಗಾಲದಲ್ಲಿ ತುರ್ತು ಸಂದರ್ಭಗಳನ್ನು ಎದುರಿಸಲು ವಿಶೇಷ ತಂಡಗಳು ತಯಾರಿವೆ.ಹೆಚ್ಚಿನ ಸಮಸ್ಯೆಗಳನ್ನು ಒಂದು ದಿನದ ಒಳಗೆ ಸರಿಪಡಿಸಲು ಯತ್ನಿಸುತ್ತೇವೆ.ಹಲವೆಡೆ ಸಮಸ್ಯೆಗಳಾದಾಗ ಆದ್ಯತೆಯ ಮೇರೆಗೆ ದುರಸ್ತಿ ಕಾರ್ಯ ಮಾಡ್ತೇವೆ.ಇದು ನಮಗೆ ಸವಾಲು, ಗ್ರಾಹಕರು ಕೂಡ ನಮ್ಮೊಂದಿಗೆ ಸಹಕಾರ ನೀಡಬೇಕಾಗುತ್ತದೆ ಎಂದು ಮನವಿ ಮಾಡಿಕೊಂಡರು.
ಪವರ್‌ಮ್ಯಾನ್‌ಗಳಿಗೆ ಎಲ್ಲಾ ಸುರಕ್ಷತಾ ಸಾಧನ, ಉಪಕರಣಗಳನ್ನು ನೀಡಲಾಗಿದೆ.ಕೆಲವೊಂದು ಬಾರಿ ಆಕಸ್ಮಿಕವಾಗಿ ಅವಘಡಗಳು ಸಂಭವಿಸುತ್ತವೆ.ನಗರ ಪ್ರದೇಶವನ್ನು ಹೊರತುಪಡಿಸಿ ಬೇರೆ ಎಲ್ಲೂ ಕೂಡ 24/7 ಸೇವೆ ನೀಡುವ ವ್ಯವಸ್ಥೆ ಇಲ್ಲ.5.30 ಗಂಟೆಗೆ ಅವಧಿ ಮುಕ್ತಾಯಗೊಳ್ಳುತ್ತದೆ.ಬಳಿಕ ಪವರ್‌ಮ್ಯಾನ್‌ಗಳು ಇರುವುದಿಲ್ಲ.ಮಳೆಗಾಲದಲ್ಲಿ ಇವರನ್ನೇ ಓವರ್‌ಟೈಮ್ ದುಡಿಸಬೇಕಾಗುತ್ತದೆ.ಹೀಗಾದಾಗ ಒತ್ತಡದಲ್ಲಿ ಕೆಲಸ ಮಾಡಬೇಕಾಗುತ್ತದೆ.ಪವರ್‌ಮ್ಯಾನ್‌ಗಳು ಅಪಾಯಕ್ಕೆ ತುತ್ತಾಗುವುದನ್ನು ತಡೆಗಟ್ಟಲು ಬಹಳಷ್ಟು ಪ್ರಯತ್ನ ಮಾಡುತ್ತಿದ್ದೇವೆ ಎಂದು ರಾಮಚಂದ್ರ ಹೇಳಿದರು.

ಸಮಸ್ಯೆಗಳಾದಾಗ 1912 ಸಹಾಯವಾಣಿಗೆ ಕರೆ ಮಾಡಿ
ವಿದ್ಯುತ್ ಸಮಸ್ಯೆಗಳಾದಾಗ ಮೆಸ್ಕಾಂ ಕಚೇರಿಗೆ, ಅಧಿಕಾರಿಗಳಿಗೆ, ಸಿಬ್ಬಂದಿಗೆ ಕರೆ ಮಾಡಿದಾಗ ಅವರು ಕರೆ ಸ್ವೀಕರಿಸುವುದಿಲ್ಲ ಎನ್ನುವ ದೂರು ಸಾರ್ವಜನಿಕರಿಂದ ಸಹಜವಾಗಿ ವ್ಯಾಪಕವಾಗಿ ಕೇಳಿಬರುತ್ತದೆ.ಆದರೆ ಉದ್ದೇಶಪೂರ್ವಕವಾಗಿ ನಮ್ಮ ಅಧಿಕಾರಿ, ಸಿಬ್ಬಂದಿಗಳು ಕರೆ ಸ್ವೀಕರಿಸದೇ ಇರುವುದಿಲ್ಲ.ಉದಾಹರಣೆಗೆ, ಪುತ್ತೂರು ಟೌನ್‌ನಲ್ಲಿ 3 ಫೀಡರ್‌ಗಳಿಂದ ಪೂರೈಕೆ ಮಾಡುತ್ತೇವೆ.ಒಂದು ಫೀಡರ್ ಆ- ಆದರೆ 6-7 ಸಾವಿರ ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತದೆ.ಈ ಪೈಕಿ 500 ಜನ ಕರೆ ಮಾಡಿದರೂ ಕೂಡ ಎಲ್ಲಾ ಲೈನ್‌ಗಳು ಒಂದೇ ಸಮಯಕ್ಕೆ ಬ್ಯುಸಿ ಆಗಿಬಿಡುತ್ತವೆ.ಇನ್ನು ಅಧಿಕಾರಿಗಳು ವಿದ್ಯುತ್ ಸಮಸ್ಯೆ ಸರಿಪಡಿಸಲು ಪವರ್‌ಮ್ಯಾನ್‌ಗಳು, ಇತರ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರುವುದರಿಂದ, ವಿದ್ಯುತ್ ಕೆಲಸಗಳು ಅತ್ಯಂತ ನಾಜೂಕಿನ ಕೆಲಸಗಳು ಆಗಿರುವುದರಿಂದ -ನ್‌ಗಳನ್ನು ಬಳಸಿಕೊಳ್ಳುತ್ತಿರುತ್ತೇವೆ.ಇದಕ್ಕಾಗಿ ಸಾರ್ವಜನಿಕರು ವಿದ್ಯುತ್ ಸಮಸ್ಯೆಗಳಾದಾಗ ನಮ್ಮ ಶುಲ್ಕರಹಿತ ಸಹಾಯವಾಣಿ ಸಂಖ್ಯೆ ‘1912’ ಸಂಖ್ಯೆಗೆ ಕರೆ ಮಾಡಬಹುದು.ಇದು ಮಂಗಳೂರಿಗೆ ಕನೆಕ್ಟ್ ಆಗುತ್ತದೆ. ಅಲ್ಲಿಂದ ನಮಗೆ ಮಾಹಿತಿ ನೀಡುತ್ತಾರೆ. ವಿದ್ಯುತ್ ತಂತಿ, ಕಂಬ ಬಿದ್ದಿದ್ದಲ್ಲಿ ಕೂಡಲೇ ಈ ಸಂಖ್ಯೆಗೆ ಕರೆಮಾಡಿ ಎಂದು ರಾಮಚಂದ್ರ ಹೇಳಿದರು.

‘ಗೃಹಜ್ಯೋತಿ ಯೋಜನೆ’
‘ಗೃಹಜ್ಯೋತಿ’ ಯೋಜನೆಯ ಬಗ್ಗೆ ಸರಕಾರದ ಆದೇಶ ಆಗಿದ್ದರೂ ಇಲಾಖೆಯಿಂದ ಸುತ್ತೋಲೆ ಬಂದಿಲ್ಲ.ಆದರೆ ಈ ಯೋಜನೆಯ ಲಾಭ ಪಡೆಯಬೇಕಿದ್ದರೆ ಬಳಕೆದಾರರ ಹೆಸರಿನಲ್ಲೇ ಕನೆಕ್ಷನ್ ಇರಬೇಕು ಎನ್ನುವುದು ಸ್ಪಷ್ಟವಾಗಿದೆ.ಹೀಗಾಗಿ ಜನರು ತಮ್ಮ ಹೆಸರು ನೋಂದಣಿ, ಬದಲಾವಣೆಯ ಪ್ರಕ್ರಿಯೆಯನ್ನು ಆರಂಭಿಸಿದ್ದಾರೆ.ಗ್ರಾಹಕರು ಹೆಸರು ವರ್ಗಾವಣೆ ಮಾಡಿಕೊಳ್ಳುವಾಗ ಯಾವ ಕಾರಣಕ್ಕೆ ಮಾಡುತ್ತಿದ್ದಾರೆ ಎನ್ನುವುದಕ್ಕೆ ಸೂಕ್ತ ದಾಖಲೆ ಬೇಕು.ಮೂಲ ಬಳಕೆದಾರರು ಮೃತರಾಗಿದ್ದರೆ ಡೆತ್ ಸರ್ಟಿಫಿಕೇಟ್, ಆಸ್ತಿ ಖರೀದಿದಾರರಾಗಿದ್ದರೆ ಕಂದಾಯ ಇಲಾಖೆಯಲ್ಲಿ ಆ ಆಸ್ತಿ ಬಳಕೆದಾರರ ಹೆಸರಲ್ಲಿ ನೋಂದಣಿಯಾಗಿರಬೇಕು, ಜೊತೆಗೆ ಅವರು ಕಟ್ಟಿರುವ ತೆರಿಗೆ ರಶೀದಿಯನ್ನು ನೀಡಬೇಕು. ಇಷ್ಟಿದ್ದರೆ ಹೆಸರು ಬದಲಾವಣೆ ಆಗುತ್ತದೆ.ಹೀಗಾಗಿ ಗ್ರಾಹಕರು ಈ ಬಗ್ಗೆ ಗಮನಹರಿಸಬೇಕು. ಮುಂದಕ್ಕೆ ಸರಕಾರದ ಯೋಜನೆಯ ಪ್ರಕಾರ ಎಲ್ಲಾ ಕಾರ್ಯಗಳನ್ನು ಮಾಡಲು ನಾವು ಬದ್ಧರಾಗಿದ್ದೇವೆ.”
-ರಾಮಚಂದ್ರ ಎ,
ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಮೆಸ್ಕಾಂ ಪುತ್ತೂರು

LEAVE A REPLY

Please enter your comment!
Please enter your name here