ನೆಲ್ಯಾಡಿ: ವಾರದ ಹಿಂದೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಉಪ್ಪಿನಂಗಡಿ ಗ್ರಾಮದ ಪಂಜಳ ಎಂಬಲ್ಲಿ ಬೈಕ್ ಹಾಗೂ ಲಾರಿ ನಡುವೆ ಡಿಕ್ಕಿ ಸಂಭವಿಸಿ ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಬೈಕ್ ಸವಾರ ಚಿಕಿತ್ಸೆಗೆ ಸ್ಪಂದಿಸದೆ ಜೂ.9ರಂದು ರಾತ್ರಿ ಸಾವನ್ನಪ್ಪಿದ್ದಾರೆ.

ಬಜತ್ತೂರು ಗ್ರಾಮದ ಬೆದ್ರೋಡಿ ವಿದ್ಯಾನಗರ ನಿವಾಸಿ ಇಬ್ರಾಹಿಂ ಎಂಬವರ ಪುತ್ರ ಮಹಮ್ಮದ್ ಅನೀಸ್ ಎಸ್.(27ವ.)ಮೃತಪಟ್ಟ ಬೈಕ್ ಸವಾರ. ಬೈಕ್ನ ಸಹ ಸವಾರ ಹಮೀದ್ ಎಂಬವರು ಗಂಭೀರ ಗಾಯಗೊಂಡಿದ್ದು ಮಂಗಳೂರಿನ ಐಲ್ಯಾಂಡ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಿಬ್ಬರು ಜೂ.2ರಂದು ನೀರಕಟ್ಟೆಯಿಂದ ಬೈಕ್(ಕೆಎ 21 ಇಎ 8899)ನಲ್ಲಿ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದವರು ಪಂಜಳ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಇನ್ನೊಂದು ಬೈಕ್ನಲ್ಲಿ ಬರುತ್ತಿದ್ದ ಸವಾರನಿಗೆ ನಮಸ್ಕರಿಸುತ್ತಾ ಹೆದ್ದಾರಿಯ ಪೂರ್ತಿ ರಾಂಗ್ ಸೈಡಿಗೆ ಬಂದ ಪರಿಣಾಮ ಮಹಮ್ಮದ್ ಆಶಿಫ್ ಎಂಬವರು ಬಿ.ಸಿ ರೋಡ್ ಕಡೆಯಿಂದ ನೀರಕಟ್ಟೆ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ಲಾರಿ(ಕೆಎ 54, 8637)ಯ ಮುಂಭಾಗದ ಬಲಬದಿಗೆ ಡಿಕ್ಕಿ ಹೊಡೆದಿದ್ದರು. ಘಟನೆಯಲ್ಲಿ ಬೈಕ್ ಸವಾರ ಮಹಮ್ಮದ್ ಅನೀಸ್ ಹಾಗೂ ಸಹಸವಾರ ಹಮೀದ್ ಗಂಭೀರ ಗಾಯಗೊಂಡಿದ್ದರು. ಇಬ್ಬರಿಗೂ ಆರಂಭದಲ್ಲಿ ಪುತ್ತೂರಿನ ಮಹಾವೀರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ನೀಡಲಾಗಿತ್ತು. ಯುನಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಮ್ಮದ್ ಅನೀಸ್ ಅವರು ಚಿಕಿತ್ಸೆಗೆ ಸ್ಪಂದಿಸದೆ ಜೂ.9ರಂದು ರಾತ್ರಿ ಸಾವನ್ನಪ್ಪಿದ್ದಾರೆ.
ಘಟನೆ ಕುರಿತಂತೆ ಲಾರಿ ಚಾಲಕ ಬಂಟ್ವಾಳ ತಾಲೂಕಿನ ಬಿ ಮೂಡ ಗ್ರಾಮದ ಪರಳ್ಯಮದ್ದ ನಿವಾಸಿ ಮಹಮ್ಮದ್ ಆಶಿಫ್ ಅವರು ನೀಡಿದ ದೂರಿನಂತೆ ಬೈಕ್ ಸವಾರ ಮಹಮ್ಮದ್ ಅನೀಸ್ ವಿರುದ್ಧ ಪುತ್ತೂರು ಸಂಚಾರ ಠಾಣೆಯಲ್ಲಿ ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿತ್ತು, ಇದೀಗ ಬೈಕ್ ಸವಾರ ಮೃತಪಟ್ಟಿರುವುದರಿಂದ ಈ ಪ್ರಕರಣದ ಕಾನೂನಿನ ಕಲಂ ಅನ್ನು279, 337, 304(ಎ) ಐಪಿಸಿಯಂತೆ ಪರಿವರ್ತಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.