ಮಂಗಳೂರಿನಲ್ಲಿ ಉಸ್ತುವಾರಿ ಸಚಿವರಿಂದ ಸಭೆ – ಭ್ರಷ್ಟ ಅಧಿಕಾರಿಗಳನ್ನು ಎತ್ತಂಗಡಿ ಮಾಡಿಯೇ ಸಿದ್ದ: ಶಾಸಕ ಅಶೋಕ್ ರೈ

0

ಪುತ್ತೂರು: ಪುತ್ತೂರು ಕ್ಷೇತ್ರವನ್ನು ಅಭಿವೃದ್ದಿ ಮಾಡುತ್ತೇನೆ ಎಂದು ಜನತೆಗೆ ಮಾತು ಕೊಟ್ಟಿದ್ದೇನೆ, ನನ್ನಕ್ಷೇತ್ರ ಸೇರಿದಂತೆ ಸಾರ್ವಜನಿಕ ಸೇವೆ ಮಾಡುವ ಯಾವುದೇ ಇಲಾಖೆಯಲ್ಲಿ ಭ್ರಷ್ಟ ಅಧಿಕಾರಿ ಇದ್ದರೆ ಅಂಥವರನ್ನು ಎತ್ತಂಗಡಿ ಮಾಡಲೇಬೇಕು. ಭ್ರಷ್ಟಾಚಾರ ಯಾರೇ ಮಾಡಿದರೂ ಸಹಿಸುವುದಿಲ್ಲ. ನಮ್ಮವರೂ ಮಾಡಿದರೂ ಸರಿ ಅದು ತಪ್ಪೇ. ನನಗೆ ಅವರ ಪರಿಚಯ ಉಂಟು ಇವರ ಪರಿಚಯ ಉಂಟು ಎಂದು ಹೇಳಿ ಇಲಾಖೆಗಳಲ್ಲಿ ನಮ್ಮ ಕಾರ್ಯಕರ್ತರು ಯಾರೂ ಭ್ರಷ್ಟಾಚಾರ ಮಾಡಬಾರದು. ಇದರಿಂದ ಪಕ್ಷಕ್ಕೆ ಕೆಟ್ಟ ಹೆಸರು ಬರುತ್ತದೆ. ಕಾರ್ಪೋರೇಷನ್, ಪುಡಾ, ಮೂಡಾ ಎಲ್ಲಿಯೇ ಆಗಲಿ ಲಂಚಮುಕ್ತ, ಭ್ರಷ್ಟಾಚಾರ ಮುಕ್ತವಾಗಿ ಕೆಲಸ ಮಾಡಲೇಬೇಕು ಎಂದು ಹೇಳಿದರು. ಪಕ್ಷದ ಹೆಸರನ್ನು ನಾವು ಯಾರೂ ಹಾಳುಮಾಡಬಾರದು. ಪಕ್ಷ ಇದ್ದರೆ ನಾವಿದ್ದೇವೆ. ಅದನ್ನು ನಾವೆಲ್ಲರೂ ತಿಳಿದುಕೊಳ್ಳಬೇಕು. ವರ್ಷಕ್ಕೆ ಇಂತಿಷ್ಟು ಕೋಟಿ ಅನುದಾನವನ್ನು ಕೊಡಿ. ಅದರಿಂದ ನಾವು ಅಭಿವೃದ್ದಿ ಮಾಡುತ್ತೇವೆ. ಮಂಗಳಾ ಕಾರಿಡಾರ್ ಯೋಜನೆಯಂಥಹ ಸಾವಿರಾರು ಕೋಟಿ ರೂ. ಯೋಜನೆಯನ್ನು ನಾವು ಕಾರ್ಯರೂಪಕ್ಕೆ ತರಬೇಕು ಎಂದು ಶಾಸಕ ಅಶೋಕ್ ರೈ ಹೇಳಿದರು.

ಗ್ಯಾರಂಟಿ ಯೋಜನೆಯ ಬಗ್ಗೆ ಹೆಚ್ಚು ಪ್ರಚಾರ ಅಗತ್ಯ
ಸರಕಾರದ ಐದು ಗ್ಯಾರಂಟಿ ಬಗ್ಗೆ ಹೆಚ್ಚು ಪ್ರಚಾರ ಅಗತ್ಯವಿದೆ. ಬಿಜೆಪಿಯಾಗಿದ್ರೆ ಈಗಾಗಲೇ ಮನೆ ಮನೆಗಳಲ್ಲಿ ಇದನ್ನು ಪ್ರಚಾರ ಮಾಡುತ್ತಿದ್ದರು. ನಾವು ಸಾಮಾಜಿಕ ಜಾಲತಾಣವನ್ನು ಬಳಸುವುದರಲ್ಲೂ ಹಿಂದೆ ಇದ್ದೇವೆ ಎಂದು ಹೇಳಿದ ಶಾಸಕರು ಪ್ರತೀ ಬೂತ್ ಗಳಲ್ಲಿ ಗ್ಯಾರಂಟಿ ಯೋಜನೆಯ ಫ್ಲೆಕ್ಸ್ ಹಾಕಿ. ಇದು ಕಾಂಗ್ರೆಸ್ ಸರಕಾರದ ಯೋಜನೆ ಎಂದು ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು. ಪಕ್ಷದ ಉತ್ತಮ ಕಾರ್ಯಗಳನ್ನು ಪ್ರಚಾರ ಮಾಡಿದರೆ ಮಾತ್ರ ನಮಗೆ ಪಕ್ಷ ಕಟ್ಟಲು ಸುಲಭವಾಗುತ್ತದೆ. ಎಲ್ಲಾ ಕಾರ್ಯಕರ್ತರೂ ಗ್ಯಾರಂಟಿ ಬಗ್ಗೆ ಮನೆ ಮನೆಗಳಲ್ಲಿ ಪ್ರಚಾರ ಕಾರ್ಯವನ್ನು ಮಾಡಬೇಕು ಎಂದು ಶಾಸಕರು ಹೇಳಿದರು.

ಮೆಡಿಕಲ್ ಕಾಲೇಜು ಬೇಕೇ ಬೇಕು
ಪುತ್ತೂರಿಗೆ ಮೆಡಿಕಲ್ ಕಾಲೇಜು ಕೊಡಿಸುತ್ತೇನೆ ಎಂದು ಚುನಾವಣಾ ಸಮಯದಲ್ಲಿ ಭರವಸೆ ಕೊಟ್ಟಿದ್ದೇನೆ. ಅದು ಆಗಲೇಬೇಕು ಎಂದು ಶಾಸಕರು ಸಚಿವರ ಮುಂದೆ ತಿಳಿಸಿದರು. ಆ ಕೆಲಸ ಆಗದೇ ಇದ್ದರೆ ಅದು ಆಗಲು ನಾನು ಎಲ್ಲಿ ಬೇಕಾದರೂ ಕೂರಲು ತಯಾರಾಗಿದ್ದೇನೆ. ನಾವು ದ.ಕ ಜಿಲ್ಲೆಯವರು ಬೊಬ್ಬೆ ಹಾಕಿ , ಗಲಾಟೆ ಮಾಡಿ ನಾವು ಏನನ್ನೂ ಕೇಳುವುದಿಲ್ಲ. ಸೌಮ್ಯ ವಾಗಿಯೇ ನಾವು ಕೇಳುತ್ತೇವೆ, ತಗ್ಗಿ ಬಗ್ಗಿ ಮನವಿ ಮಾಡುತ್ತೇವೆ. ನಮ್ಮ ಜನರ ಬೇಡಿಕೆಯನ್ನು ಸರಕಾರ ಈಡೇರಿಸಲೇಬೇಕು. ಇದಕ್ಕೆ ಬೇಕಾದ ಎಲ್ಲಾ ಸಿದ್ದತೆಗಳು ಪೂರ್ಣಗೊಂಡಿದೆ ಎಂದು ಶಾಸಕರು ಹೇಳಿದರು. ಪುತ್ತೂರಿಗೆ ಮೆಡಿಕಲ್ ಕಾಲೇಜು , ಕುಡಿಯುವ ನೀರು ಮತ್ತು ಡ್ರೈನೇಜ್ ವ್ಯವಸ್ಥೆ ಈ ಮೂರನ್ನು ಕೊಟ್ಟು ಬಿಡಿ ಎಂದು ಸಚಿವರಲ್ಲಿ ಕೇಳಿಕೊಂಡರು.

ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್‌ಕುಮಾರ್, ಐವನ್ ಡಿಸೋಜಾ, ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here