ಭ್ರಷ್ಟಾಚಾರದ ವಿರುದ್ಧ ಶಾಸಕರ ಸಮರ-ಉಪ್ಪಿನಂಗಡಿಯ ಮೂವರಿಗೆ ಲಂಚದ ಹಣ ವಾಪಸ್

0

ಉಪ್ಪಿನಂಗಡಿ: ಅಶೋಕ್ ಕುಮಾರ್ ರೈಯವರು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಬಳಿಕ ಭ್ರಷ್ಟ ಅಧಿಕಾರಿಗಳ ವಿರುದ್ಧ ಗುಡುಗಿದ್ದೇ ತಡ ಈ ಮೊದಲೇ ಲಂಚವಾಗಿ ಪಡೆದಿದ್ದ ಲಕ್ಷಾಂತರ ರೂಪಾಯಿ ಹಣವನ್ನು ವಾಪಸ್ ಮಾಡಿದ ಘಟನೆ ಉಪ್ಪಿನಂಗಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ನಡೆದಿದೆ.

ಅಶೋಕ್ ಕುಮಾರ್ ರೈಯವರು ಶಾಸಕರಾದ ಬಳಿಕ ಭ್ರಷ್ಟ ಹಾಗೂ ಸಾರ್ವಜನಿಕರ ಕೆಲಸಗಳ ಬಗ್ಗೆ ನಿರ್ಲಕ್ಷ್ಯ ವಹಿಸುವ ಯಾವುದೇ ಇಲಾಖೆಯ ಅಧಿಕಾರಿಗಳನ್ನು ಕ್ಷಮಿಸಲ್ಲ ಎಂದು ಹೇಳಿದ್ದರು. ಮಾತ್ರವಲ್ಲದೆ ಆ ರೀತಿಯ ನಡೆಯನ್ನು ತೋರಿಸುತ್ತಾ ಬಂದಿದ್ದಾರೆ. ಇವರ ಈ ನಡೆ ಭ್ರಷ್ಟ ಅಧಿಕಾರಿಗಳಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಈ ಮೊದಲು ಕೆಲವು ಸರಕಾರಿ ಇಲಾಖೆಗಳಲ್ಲಿ ಲಂಚ, ಭ್ರಷ್ಟಾಚಾರ ಮಿತಿ ಮೀರಿತ್ತು. 94 ಸಿ, ಅಕ್ರಮ- ಸಕ್ರಮ ಸೇರಿದಂತೆ ಇನ್ನಿತರ ಜನಸಾಮಾನ್ಯರ ಅನುಕೂಲಕ್ಕಾಗಿ ಸರಕಾರಗಳು ಜಾರಿಗೊಳಿಸಿದ ಯೋಜನೆಗಳು ಭ್ರಷ್ಟ ಅಧಿಕಾರಿಗಳಿಗೆ ಚಿನ್ನದ ಮೊಟ್ಟೆ ಇಡುವ ಕೋಳಿಯಂತಾಗಿತ್ತು. ಲಂಚ ಕೊಡುವುದು, ತೆಗೆದುಕೊಳ್ಳುವುದು ಕಾನೂನು ಪ್ರಕಾರ ತಪ್ಪಾಗಿದ್ದರೂ, ಲಂಚವಿಲ್ಲದೆ ಕೆಲಸವಾಗೋದಿಲ್ಲ ಎಂಬಂತಹ ಸ್ಥಿತಿ ಇದ್ದಾಗ ಇದನ್ನೆಲ್ಲಾ ಮಾಡಿಸಿಕೊಳ್ಳಲು ಸಾವಿರಾರು ರೂಪಾಯಿ ಲಂಚ ಕೊಡಬೇಕಾದ ಅನಿವಾರ್ಯತೆಯೂ ಜನಸಾಮಾನ್ಯರಿಗೆ ಇತ್ತು.

ಆದರೆ ಅಶೋಕ್ ಕುಮಾರ್ ರೈಯವರು ಶಾಸಕರಾಗಿ ಆಯ್ಕೆಯಾದ ಬಳಿಕ ಸರಕಾರಿ ಇಲಾಖೆಗಳಲ್ಲಿನ ಭ್ರಷ್ಟಾಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ಕೆಲಸ ಮಾಡಿಕೊಡುತ್ತೇವೆಂದು ಈ ಮೊದಲು ಅಧಿಕಾರಿಗಳು ಲಂಚ ಪಡೆದು, ಆ ಬಳಿಕ ಆ ಕೆಲಸವನ್ನು ಮಾಡಿಕೊಡದ ಪ್ರಕರಣವೊಂದರಲ್ಲಿ ಉಪ್ಪಿನಂಗಡಿ ಗ್ರಾ.ಪಂ. ವ್ಯಾಪ್ತಿಯ ಮೂವರಿಗೆ, ಅವರಿಂದ ಪಡೆದುಕೊಂಡಿದ್ದ ಎರಡು ಲಕ್ಷದಷ್ಟು ಹಣವನ್ನು ಅಧಿಕಾರಿಗಳು ವಾಪಸ್ ನೀಡಿದ್ದಾರೆ. ಅದೇ ರೀತಿ ಪಾಣಾಜೆ, ಬೆಟ್ಟಂಪಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿಯೂ ಇಂತಹ ಘಟನೆ ನಡೆದಿದೆ ಎಂಬ ಮಾಹಿತಿ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ.

ನಾನು ಯಾವುದೇ ಅಧಿಕಾರಿಯ ವಿರೋಧಿ ಅಲ್ಲ. ಆದರೆ ಭ್ರಷ್ಟಾಚಾರ ಹಾಗೂ ಸಾರ್ವಜನಿಕ ಕೆಲಸಗಳಲ್ಲಿ ನಿರ್ಲಕ್ಷ್ಯ ಮಾಡುವ ಅಧಿಕಾರಿ ಯಾರೇ ಆದರೂ ಅವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ. ಈ ಹಿಂದೆ ಲಂಚ ತಗೊಂಡು ಕೆಲಸ ಮಾಡಿ ಕೊಡದ ಕೆಲವು ಪ್ರಕರಣಗಳಲ್ಲಿ ಅಧಿಕಾರಿಗಳೇ ಸ್ವತಹ ಲಂಚವಾಗಿ ಪಡೆದ ಹಣವನ್ನು ವಾಪಸ್ ಮಾಡಿದ್ದಾರೆ. ಇಂತಹ 3-4 ನಿದರ್ಶನಗಳು ನನ್ನ ಗಮನಕ್ಕೆ ಬಂದಿದೆ. ಅಧಿಕಾರಿಗಳು ಲಂಚವಾಗಿ ಪಡೆದುಕೊಂಡ ಹಣವನ್ನು ವಾಪಸ್ ಮಾಡಿದ ಮೇಲೆ ಅದನ್ನು ಪಡೆದುಕೊಂಡ ಜನಸಾಮಾನ್ಯರು ನನ್ನ ಬಳಿಗೆ ಬಂದು ನನಗೆ ಧನ್ಯವಾದ ಹೇಳಿ ಹಾರ ಹಾಕಿ ಹೋಗಿದ್ದಾರೆ. ಅಧಿಕಾರಿಗಳು ಲಂಚದ ಹಣ ಹಿಂದಿರುಗಿಸುವಷ್ಟರ ಮಟ್ಟಿಗೆ ಪುತ್ತೂರಿನಲ್ಲಿ ಕಾರ್ಯಾಂಗ ವ್ಯವಸ್ಥೆ ಮುಟ್ಟಿದೆ ಎಂದರೆ ಅಧಿಕಾರಿಗಳು ಇನ್ನು ಮುಂದಕ್ಕೆ ಲಂಚ ತೆಗೆದುಕೊಳ್ಳಲ್ಲ ಅಂತ ನಿರ್ಣಯ ಮಾಡಿದ್ದಾರೆ ಅಂತ ಅರ್ಥ. ಇದು ಉತ್ತಮ ಬೆಳವಣಿಗೆ.

ಅಶೋಕ್ ಕುಮಾರ್ ರೈ, ಶಾಸಕರು, ಪುತ್ತೂರು ವಿಧಾನ ಸಭಾ ಕ್ಷೇತ್ರ

ಸುದ್ದಿಯಿಂದ ಜನಾಂದೋಲನ

  • ಲಂಚ, ಭ್ರಷ್ಟಾಚಾರದ ವಿರುದ್ಧ ಸುದ್ದಿ ಜನಾಂದೋಲನ ವೇದಿಕೆ ವತಿಯಿಂದ ನಿರಂತರ ಹೋರಾಟ, ಆಂದೋಲನ ನಡೆಯುತ್ತಿದೆ. ಲಂಚ, ಭ್ರಷ್ಟಾಚಾರದ ವಿರುದ್ಧ ಪ್ರತಿಜ್ಞೆ ಮಾಡುವಂತೆ ಮತ್ತು ಅಧಿಕಾರಿಗಳು ಲಂಚ, ಭ್ರಷ್ಟಾಚಾರದಿಂದ ಪಡೆದ ಹಣವನ್ನು ಜನರಿಗೆ ಹಿಂತಿರುಗಿಸುವ ಕುರಿತು ಈ ಬಾರಿಯ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳಿಂದ ಪ್ರತಿಜ್ಞೆ ಮಾಡಿಸಲಾಗಿತ್ತು. ಅಶೋಕ್ ಕುಮಾರ್ ರೈ ಸಹಿತ ಪುತ್ತೂರು, ಸುಳ್ಯ, ಬೆಳ್ತಂಗಡಿ ಕ್ಷೇತ್ರದ ಅಭ್ಯರ್ಥಿಗಳು ಈ ಕುರಿತು ಪ್ರತಿಜ್ಞೆ ಮಾಡಿದ್ದರು. ಮಾತ್ರವಲ್ಲದೆ, ಈ ವಿಚಾರ ರಾಜ್ಯವ್ಯಾಪಿಯಾಗಿ ಪ್ರಚಾರವಾಗಬೇಕೆನ್ನುವ ಉದ್ದೇಶದೊಂದಿಗೆ ಸುದ್ದಿ ಜನಾಂದೋಲನ ವೇದಿಕೆ ಮುಖ್ಯಸ್ಥ ಡಾ.ಯು.ಪಿ.ಶಿವಾನಂದರವರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಪ್ರತಿನಿಧಿಸಿರುವ ವರುಣಾ ಕ್ಷೇತ್ರ ಮತ್ತು ನಿಕಟಪೂರ್ವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಶಿಗ್ಗಾಂವಿ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಈ ಎರಡೂ ಕ್ಷೇತ್ರಗಳಲ್ಲಿಯೂ ಲಂಚ, ಭ್ರಷ್ಟಾಚಾರದ ವಿರುದ್ಧ ಆಂದೋಲನಕ್ಕೆ ವ್ಯಾಪಕ ಜನಬೆಂಬಲ ವ್ಯಕ್ತವಾಗಿತ್ತು. ತನಗೆ ನಿಮ್ಮ ಮತ ಬೇಡ, ನಿಮ್ಮ ಆಯ್ಕೆಯ ಅಭ್ಯರ್ಥಿಗೇ ನೀಡಿ. ಆದರೆ ಕ್ಷೇತ್ರದಲ್ಲಿ ಲಂಚ, ಭ್ರಷ್ಟಾಚಾರದ ವಿರುದ್ಧ ಅಭ್ಯರ್ಥಿಗಳಿಂದ ಪ್ರತಿಜ್ಞೆ ಮಾಡಿಸಿ ಎಂದು ಅಲ್ಲಿನ ಮತದಾರರಿಗೆ ಡಾ.ಯು.ಪಿ.ಶಿವಾನಂದ ಅವರು ಕರೆ ನೀಡಿದ್ದರು. ಅಧಿಕಾರಿಗಳು ಲಂಚವಾಗಿ ಪಡೆದ ಹಣವನ್ನು ವಾಪಸ್ ತೆಗೆಸಿಕೊಡುವ ಮೂಲಕ ಪುತ್ತೂರು ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈಯವರು ಕಾರ್ಯೋನ್ಮುಖರಾಗಿ ನಾಗರಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

LEAVE A REPLY

Please enter your comment!
Please enter your name here