ಮಹೇಶ್ ಕರಿಕ್ಕಳ ಮನೆಯಲ್ಲಿ ಕಾಂಗ್ರೆಸ್ ಉಚ್ಛಾಟಿತ ನಾಯಕರ ಸಭೆ

0

ಶೋಕಾಸ್ ನೋಟೀಸ್ ಪಡೆದ ನಂದಕುಮಾರ್ ಸಹಿತ ಹಲವು ನಾಯಕರೂ ಭಾಗಿ
ಕೃಷ್ಣಪ್ಪ ಹಠಾವೋ ಕಾಂಗ್ರೆಸ್ ಬಚಾವೋ ಅಭಿಯಾನಕ್ಕೆ ನಿರ್ಧಾರ
ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆಗೂ ಆಗ್ರಹ
ಡಿಕೆಶಿ ಭೇಟಿ ಮಾಡಿ ಮನವರಿಕೆ ಮಾಡಿಕೊಡಲು ನಿರ್ಧಾರ

ಪುತ್ತೂರು: ಕಾಂಗ್ರೆಸ್ ನಿಂದ ಉಚ್ಛಾಟನೆ ಕ್ರಮಕ್ಕೆ ಒಳಗಾಗಿರುವ ನಾಯಕರ ಸಭೆ ಮಹೇಶ್ ಕುಮಾರ್ ಕರಿಕ್ಕಳ ಅವರ ಮನೆಯಲ್ಲಿ ನಡೆದಿದ್ದು, ಶೋಕಾಸ್ ನೋಟೀಸ್ ಪಡೆದಿರುವ ಕೆಲವು ನಾಯಕರ ಸಹಿತ ಹಲವು ಮಂದಿ ಪಾಲ್ಗೊಂಡಿರುವುದಾಗಿ ತಿಳಿದು ಬಂದಿದೆ. ಕೆಪಿಸಿಸಿ ಸುಳ್ಯ ಉಸ್ತುವಾರಿ ನಂದಕುಮಾರ್ ರ ಉಪಸ್ಥಿತಿಯಲ್ಲಿ ಈ ಸಭೆ ನಡೆಯಿತು.

ಮಹೇಶ್ ಕುಮಾರ್ ಕರಿಕ್ಕಳ ಮಾತನಾಡಿ, ಕರ್ನಾಟಕ ರಾಜ್ಯದ ಇತಿಹಾಸದಲ್ಲೇ ಈ ರೀತಿಯ ಘಟನೆ ನಡೆದಿರುವುದು ಪ್ರಥಮ. ಯಾಕೆಂದರೆ ಇಲ್ಲಿ ಉಚ್ಛಾಟಿತರಾದವರು ಮತ್ತು ಶೋಕಾಸ್ ನೋಟೀಸ್ ಪಡೆದಿರುವವರು ಸಮರ್ಪಣಾ ಭಾವದಿಂದ ದುಡಿದ ಕಾರ್ಯಕರ್ತರು. ಯಾವುದೋ ಎರಡು ಮೂರು ಮಂದಿ ಕಾಣದ ಕೈಗಳ ಕೆಲಸದಿಂದಾಗಿ ಈ ರೀತಿಯ ಗೊಂದಲ ಆಗಿದೆ. ಈ ಬಗ್ಗೆ ನಾವು ಮುಂದೆ ಏನು ಮಾಡಬೇಕೆಂಬುದನ್ನು ಸಭೆಯಲ್ಲಿ ತೀರ್ಮಾನಿಸಿ ಮುನ್ನಡೆಯೋಣ ಎಂದರು.

ಬಳಿಕ ಸಭೆಯಲ್ಲಿ ಭಾಗವಹಿಸಿದ್ದ ಎಲ್ಲರೂ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಅಂತಿಮವಾಗಿ ಕೆಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಪಕ್ಷಕ್ಕಾಗಿ ದುಡಿದ ನಾಯಕರನ್ನು ಉಚ್ಚಾಟನೆ ಮಾಡಿದ ಬ್ಲಾಕ್ ಅಧ್ಯಕ್ಷರನ್ನು ಬದಲಾಯಿಸಬೇಕು. ಸುಳ್ಯ ವಿಧಾನ ಸಭಾ ಕ್ಷೇತ್ರಕ್ಕೆ ಬಂದು ಕಾಂಗ್ರೆಸ್‌ನ್ನು ಒಡೆಯಲು ಮುಂದಾದ, ಗೊಂದಲಕ್ಕೆ ಕಾರಣವಾದ ಕೃಷ್ಣಪ್ಪರನ್ನು ಇನ್ನು ಮುಂದೆ ಸುಳ್ಯಕ್ಕೆ ಬರದಂತೆ ತಡೆಯಬೇಕು. ಪಕ್ಷದ ಪ್ರಮುಖ ನಾಯಕರು ಡಿಕೆಶಿಯನ್ನು ಭೇಟಿ ಮಾಡಿ ನೈಜ ವಿಚಾರವನ್ನು ಅವರಿಗೆ ಮನದಟ್ಟು ಮಾಡಬೇಕು. ನಂದಕುಮಾರರನ್ನು ಸುಳ್ಯದ ಉಸ್ತುವಾರಿಯಾಗಿ ನೇಮಿಸಬೇಕು. ನಂದಕುಮಾರ್ ಅಭಿಮಾನಿಗಳು ಒಟ್ಟಾಗಿ ಸಮಾವೇಶ ನಡೆಸಬೇಕು ಎಂಬಿತ್ಯಾದಿ ನಿರ್ಧಾರಗಳನ್ನು ಸಭೆಯಲ್ಲಿ ಕೈಗೊಳ್ಳಲಾಯಿತೆಂದು ತಿಳಿದುಬಂದಿದೆ.

ನಾಯಕರಾದ ಬಾಲಕೃಷ್ಣ ಬಳ್ಳೇರಿ, ಮಹೇಶ್ ಕುಮಾರ್ ಕರಿಕ್ಕಳ, ಎಚ್.ಎಂ. ನಂದಕುಮಾರ್, ಪ್ರವೀಣ್ ಕುಮಾರ್ ಕೆಡೆಂಜಿಗುತ್ತು, ಕೆ. ಗೋಕುಲ್ ದಾಸ್, ಸಚಿನ್ ರಾಜ್ ಶೆಟ್ಟಿ ಪೆರುವಾಜೆಗುತ್ತು, ಆಶಾ ಲಕ್ಷ್ಮಣ್, ಶಶಿಧರ ಎಂ.ಜೆ, ಮೊಹಮ್ಮದ್ ಪೈಝಲ್, ಭವಾನಿ ಶಂಕರ ಕಲ್ಮಡ್ಕ, ಚೇತನ್ ಕಜಗದ್ದೆ, ಬಶೀರ್ ಅಹ್ಮದ್, ರವೀಂದ್ರ ಕುಮಾರ್ ರುದ್ರಪಾದ, ಜಗನ್ನಾಥ ಪೂಜಾರಿ ಮುಕ್ಕೂರು, ಕಮಲಾಕ್ಷ ಪಿ, ಶೇಖರ, ರಾಮಕೃಷ್ಣ ಡಿ ಹೊಳ್ಳಾರು, ಶೋಭಿತ್ ಎಂ. ನಾರಾಯಣ, ಗೋಪಾಲಕೃಷ್ಣ ಭಟ್ ನೂಚಿಲ, ಬಾಲಕೃಷ್ಣ ಮರೀಲ್, ಕ್ಷೇಬಿಯರ್ ಬೀಬಿ, ಸಂದೇಶ್ ಚಾರ್ವಕ ಮೊದಲಾದವರು ಉಪಸ್ಥಿತರಿದ್ದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಕೊನೆಯಲ್ಲಿ ಮಾತನಾಡಿದ ಹೆಚ್.ಎಂ. ನಂದಕುಮಾರ್, ಶೋಕಾಸ್ ನೋಟೀಸ್ ನೀಡಿರುವ ಬಗ್ಗೆ ಯಾರೂ ಚಿಂತಿತರಾಗುವುದು ಬೇಡ. ನಾನು ನಿಮ್ಮೊಂದಿಗಿದ್ದೇನೆ. ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಪರಿಹಾರ ಕಂಡುಕೊಳ್ಳೋಣ ಎಂದರು.

LEAVE A REPLY

Please enter your comment!
Please enter your name here