ಪುತ್ತೂರು : ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಮತ್ತು ಜೆಸಿಐ ಪುತ್ತೂರು ಇದರ ಸಂಯುಕ್ತ ಆಶ್ರಯದಲ್ಲಿ ಹಲಸು ಮತ್ತು ಹಣ್ಣುಗಳ ಮೇಳ ಜೂ.17 ಮತ್ತು 18ರಂದು ನಡೆಯಲಿದೆ ಎಂದು ನವತೇಜ ಟ್ರಸ್ಟ್ ಪುತ್ತೂರು ಇದರ ಅಧ್ಯಕ್ಷ ಅನಂತ ಪ್ರಸಾದ್ ನೈತಡ್ಕ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ನವನೀತ್ ಫಾರ್ಮ್ ನರ್ಸರಿ ಮತ್ತು ಮರಿಕೆ ಸಾವಯವ ಮಳಿಗೆ ಸಹಕಾರದೊಂದಿಗೆ ಬೈಪಾಸ್ ರಸ್ತೆಯ ಬಳಿಯ ಜೈನ ಭವನದಲ್ಲಿ ಮೇಳ ನಡೆಯಲಿದೆ. ಸುಮಾರು ಮೂವತ್ತಕ್ಕೂ ಮಿಕ್ಕಿ ಮಳಿಗೆಗಳಲ್ಲಿ ತಾಜಾ ಹಲಸಿನ ಉತ್ಪನ್ನಗಳ ಮಾರಾಟ, ಯಾವುದೇ ಕೃತಕ ಬಣ್ಣ ಒಳಸುರಿಗಳನ್ನು ಬಳಸದ ಉತ್ಪನ್ನಗಳು ಮೇಳದ ಹೈಲೈಟ್. ಸ್ಥಳದಲ್ಲಿ ತಯಾರಿಸುವ ಹಲವು ಪಾರಂಪರಿಕ ತಿಂಡಿಗಳು ಗ್ರಾಹಕರಲ್ಲಿ ರುಚಿ ವರ್ಧನೆಯನ್ನು ಮಾಡಲಿದೆ. ಇದರೊಂದಿಗೆ ಹಲಸಿನ ತಳಿಗಳನ್ನು ಅಭಿವೃದ್ಧಿಪಡಿಸಿದ ಪ್ರಸಿದ್ಧ ನರ್ಸರಿಗಳಿಂದ ಗಿಡಗಳ ಪ್ರದರ್ಶನ ಮತ್ತು ಮಾರಾಟವೂ ನಡೆಯಲಿದೆ ಎಂದು ಅವರು ಹೇಳಿದ್ದಾರೆ.
ಹಲಸಿನ ಉಂಡ್ಲ ಕಾಳು, ಚಿಪ್ಸು, ಹಪ್ಪಳ, ದೋಸೆ, ಮಂಚೂರಿ, ಕಬಾಬ್, ಜ್ಯೂಸ್, ಸೊಳೆ ರೊಟ್ಟಿ, ಹಲ್ವಾ, ಕೇಕ್, ಅತಿರಸ, ದೋಸೆ, ಸೇಮಿಗೆ, ಬನ್ಸ್, ಪಲಾವ್, ಪಾಯಸ, ಕೊಟ್ಟಿಗೆ, ಗೆಣಸಲೆ, ಪೋಡಿ, ಮಾಂಬಳ, ಹಣ್ಣಿನ ಐಸ್ ಕ್ರೀಮ್ ಹೀಗೆ ಹತ್ತಾರು ಬಗೆಯ ಹಲಸಿನ ಉತ್ಪನ್ನಗಳನ್ನು ಸವಿಯಬಹುದಾಗಿದೆ. ಇದರೊಂದಿಗೆ ಹಲಸಿನ ಬೀಜದ ಹೋಳಿಗೆ, ಹಣ್ಣಿನ ಹೋಳಿಗೆ ಒಂದೇ ಸೂರಿನಡಿಯಲ್ಲಿ ಲಭ್ಯವಿದ್ದು ಹಲಸು ಪ್ರಿಯರಿಗೆ ಖುಷಿ ತರಲಿದೆ.
ಬೆಂಗಳೂರಿನ ಐ.ಐ.ಹೆಚ್.ಆರ್ ಸಂಸ್ಥೆಯು ಹಲಸಿನ ಉತ್ಕೃಷ್ಟ ತಳಿಗಳ ಪ್ರದರ್ಶನ ಮಾಡಲಿದ್ದು ಇದರ ಜೊತೆಗೆ ವಿಜ್ಞಾನಿಗಳು ಹಲಸು ಕೃಷಿ ಮತ್ತು ಮಾರಾಟದ ಕುರಿತಾದ ಕೃಷಿಕ ಕೌಶಲ್ಯ ತರಬೇತಿಯನ್ನು ನೀಡಲಿದ್ದಾರೆ. ಕೃಷಿಕರು ತಮ್ಮಲ್ಲಿದ್ದ ವಿವಿಧ ರುಚಿಯ ಹಲಸಿನ ಹಣ್ಣು, ಇತರ ಹಣ್ಣುಗಳು ಮತ್ತು ಕಾಡು ಹಣ್ಣುಗಳ ಪ್ರದರ್ಶನ ಮತ್ತು ಮಾರಾಟಕ್ಕಿಡುವ ವ್ಯವಸ್ಥೆಯು ಇಲ್ಲಿದೆ. ಈ ಋತುವಿನಲ್ಲಿ ಸಿಗುವ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ ವಿಶೇಷ ಆಹಾರ ಮಳಿಗೆ ಅಗ್ರಿ ಬಿಸಿನೆಸ್ ಮಳಿಗೆಗಳು ಹಲಸು ಕೃಷಿಕರ ಅನುಭವದ ಮಾತುಗಳು ಹೊಸ ಹೊಸ ತಳಿಗಳ ಪರಿಚಯ ಹೀಗೆ ಹಲಸು ಮೇಳದಲ್ಲಿ ವಿವಿಧ ವೈವಿಧ್ಯತೆಗಳನ್ನು ಕಾಣಬಹುದು. ವಿದ್ಯಾರ್ಥಿಗಳಿಗೆ ಹಲಸಿನ ಅರಿವನ್ನು ಮೂಡಿಸುವ ಉದ್ದೇಶದಿಂದ ಚಿತ್ರ ಬಿಡಿಸುವ, ಕವನ ರಚಿಸುವ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ವಿವಿಧ ಸ್ಪರ್ಧೆಗಳು:
ವಿದ್ಯಾರ್ಥಿಗಳಿಗೆ ಹಲಸಿನ ಅರಿವನ್ನು ಮೂಡಿಸುವ ಉದ್ದೇಶದಿಂದ ಚಿತ್ರಬಿಡಿಸುವ, ಕವನ ರಚಿಸುವ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಹಲಸಿನ ಹಣ್ಣಿನ ಸೊಳೆಯನ್ನು ತಿನ್ನುವ ಸ್ಪರ್ಧೆಯಿದೆ. ಮೇಳದಲ್ಲಿ ದೊಡ್ಡ ಹಲಸಿನ ಹಣ್ಣು ಮತ್ತು ಅತೀ ಸಣ್ಣ ಹಲಸಿನ ಹಣ್ಣಿಗೆ ಬಹುಮಾನವಿದೆ. ಹಲಸು ಪ್ರಿಯರಿಗೆ ಈ ಎಲ್ಲಾ ಕಾರ್ಯಕ್ರಮಗಳಿಗೆ ಮುಕ್ತ ಪ್ರವೇಶ ಎಂದು ಸುಹಾಸ್ ಮರಿಕೆ ಅವರು ತಿಳಿಸಿದ್ದಾರೆ. ನವನೀತ್ ನರ್ಸರಿಯ ಮಾಲಕ ವೇಣುಗೋಪಾಲ್ ಅವರು ಮಾತನಾಡಿ ಪ್ರಗತಿಪರ ಕೃಷಿಕ ಸಮಗ್ರ ತೋಟಗಾರಿಕೆ ಬೆಳೆಯುವ ಉದ್ದೇಶ ನಮ್ಮದು ಎಂದರು.