ವಿದ್ಯಾರ್ಥಿಗಳೆಲ್ಲ ಸುಶಿಕ್ಷಿತರಾಗಿ ಸಮಾಜದಲ್ಲಿ ಕೀರ್ತಿ ಪಡೆಯಿರಿ – ಮೋಹನ್ ನೆಲ್ಲಿಗುಂಡಿ
ಪುತ್ತೂರು: ತಾನು ಕಲಿತ ಸರಕಾರಿ ಶಾಲೆಯನ್ನು ನೆನಪು ಮಾಡಿ ಅಲ್ಲಿನ ವಿದ್ಯಾರ್ಥಿಗಳಿಗೆ ಬರೆಯುವ ಪುಸ್ತಕ ವಿತರಣೆ ಮಾಡುವ ಮೂಲಕ ತನ್ನ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದ ಕೆನರಾ ಬ್ಯಾಂಕ್ ಉದ್ಯೋಗಿ ಮೋಹನ್ ನೆಲ್ಲಿಗುಂಡಿ ದಂಪತಿ ಜೂ.16ರಂದು ಬಪ್ಪಳಿಗೆ ರಾಗಿಕುಮೇರು ದ.ಕ ಜಿ.ಪಂ.ಉ.ಹಿ.ಪ್ರಾ ಶಾಲೆಯ ವಿದ್ಯಾರ್ಥಿಗಳಿಗೆ ಬರೆಯುವ ಪುಸ್ತಕ ನೀಡುವ ಮೂಲಕ ಮಾದರಿ ಕಾರ್ಯಕ್ರಮ ಮಾಡಿದರು.
ಮೂಲತಃ ನೆಲ್ಲಿಗುಂಡಿಯವರಾಗಿದ್ದು, ಪ್ರಸ್ತುತ ಕಲ್ಲರ್ಪೆಯಲ್ಲಿ ವಾಸ್ಯವ್ಯ ಇರುವ ಪುತ್ತೂರು ಕೆನರಾ ಬ್ಯಾಂಕ್ ಉದ್ಯೋಗಿ ಮೋಹನ್ ನೆಲ್ಲಿಗುಂಡಿ ಅವರು ಜೂ.15ರಂದು ತಮ್ಮ ದಾಂಪತ್ಯದ 25 ವರ್ಷ ಪೂರೈಸಿದ್ದರು. ಈ ಹಿನ್ನಲೆಯಲ್ಲಿ ಸಮಾಜಮುಖಿ ಕಾರ್ಯಕ್ರಮ ಮಾಡುವ ಉದ್ದೇಶದಿಂದ ತಾನು ಕಲಿತ ರಾಗಿಕುಮೇರು ಶಾಲೆಯ ವಿದ್ಯಾರ್ಥಿಗಳೆಲ್ಲರಿಗೂ ಬರೆಯುವ ಪುಸ್ತಕ ವಿತರಣೆ ಮಾಡಿದರು.
ವಿದ್ಯಾರ್ಥಿಗಳೆಲ್ಲ ಸುಶಿಕ್ಷಿತರಾಗಿ ಸಮಾಜದಲ್ಲಿ ಕೀರ್ತಿ ಪಡೆಯಿರಿ :
ಪುಸ್ತಕ ವಿತರಣೆ ಮಾಡಿದ ಮೋಹನ್ ನೆಲ್ಲಿಗುಂಡಿ ಅವರು ಮಾತನಾಡಿ ನಾನು ಇದೇ ಶಾಲೆಯಲ್ಲಿ ಬಾಲ್ಯ ಕಳೆದಿದ್ದೇನೆ. 1ರಿಂದ 7ನೇ ತರಗತಿ ಇಲ್ಲೇ ಓದಿದ್ದು, ಈ ಸಂದರ್ಭ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಕಿಂಚಿತ್ ಅವರಿಗೆ ಪ್ರಯೋಜನವಾಗುವ ಪುಸ್ತಕ ನೀಡಿದ್ದೇವೆ. ವಿದ್ಯಾರ್ಥಿಗಳೆಲ್ಲ ಸುಶಿಕ್ಷಿತರಾಗಿ ಸಮಾಜದಲ್ಲಿ ಕೀರ್ತಿ ಪಡೆಯಿರಿ ಎಂದರು. ಎಸ್ ಡಿ ಎಮ್ ಸಿ ಅಧ್ಯಕ್ಷ ಹೊನ್ನಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಉಪಾಧ್ಯಕ್ಷೆ ಗೀತಾ, ಮೋಹನ್ ನೆಲ್ಲಿಗುಂಡಿಯವರ ಪತ್ನಿ ಇಂದಿರಾ ಉಪಸ್ಥಿತರಿದ್ದರು.
ಶಾಲಾ ಮುಖ್ಯಮಂತ್ರಿ ಹಿಮಾನಿ, ಉಪಾಧ್ಯಕ್ಷ ಯತೀನ್, ರೇಶ್ಮಾ, ಭೂಮಿಕಾ ಶ್ರಾವ್ಯ, ಸೃಜನ್ ಅತಿಥಿಗಳನ್ನು ಗೌರವಿಸಿದರು. ಮುಖ್ಯಗುರು ಯಶೋದಾ ಪಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಆಶಾ ಟಿ ವಂದಿಸಿದರು. ಪಿ ಸೌಮ್ಯ, ಸೌಮ್ಯ ಕೆ ವಿವಿಧ ಕಾರ್ಯಕ್ರಮ ನಿರೂಪಿಸಿದರು. ಮೋಹನ್ ನೆಲ್ಲಿಗುಂಡಿಯವರ ಸಹೋದರಿ ಶ್ಯಾಮಲ, ಅಂಗನವಾಡಿ ಕಾರ್ಯಕರ್ತೆ ಸುಮಿತ್ರ ಸಹಿತ ಮಕ್ಕಳ ಪೋಷಕರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಎಸ್ ಡಿ ಎಂಸಿ ಅಧ್ಯಕ್ಷರ ಮಗಳು ಹಿಮಾನಿ ಅವರ ಹುಟ್ಟಿದ ಹಬ್ಬವನ್ನು ಆಚರಿಸಲಾಯಿತು.