ಕನ್ನಡ, ಸಮಾಜ ವಿಜ್ಞಾನ ಪಠ್ಯಪುಸ್ತಕ: ಅಧಿಕೃತ ತಿದ್ದುಪಡಿ ಪ್ರಕಟ

0

ಬೆಂಗಳೂರು:ಬಿಜೆಪಿ ಸರ್ಕಾರದ ಅವಽಯಲ್ಲಿ ಪಠ್ಯ ಪರಿಶೀಲನೆಗೆ ನೇಮಿಸಿದ್ದ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯು ಪರಿಷ್ಕರಣೆ ಮಾಡಿದ್ದ 6ರಿಂದ 9ನೇ ತರಗತಿಯ ಕನ್ನಡ ಹಾಗೂ ಸಮಾಜ ವಿಜ್ಞಾನ ವಿಷಯಗಳ ಪಠ್ಯಪುಸ್ತಕಗಳಿಗೆ ಬದಲಾವಣೆ ಸೂಚಿಸಿ, ಕರ್ನಾಟಕ ಪಠ್ಯ ಪುಸ್ತಕ ಸಂಘ ತಿದ್ದೋಲೆ ಪ್ರಕಟಣೆ ಹೊರಡಿಸಿದೆ.
ಕನ್ನಡ ಭಾಷಾ ವಿಷಯದ ಪಠ್ಯಗಳಲ್ಲಿ ಸಾವಿತ್ರಿಬಾಯಿ ಪುಲೆ ಅವರ ಕುರಿತ ರಮಾನಂದ ಆಚಾರ್ಯ ಅವರ ಗದ್ಯ ‘ಸಾಮಾಜಿಕ ಕಳಕಳಿಯ ಮೊದಲ ಶಿಕ್ಷಕಿ’ ಕೈಬಿಟ್ಟು, ಹಿಂದೆ ಇದ್ದ ಡಾ|ಎಚ್.ಎಸ್.ನಿರುಪಮಾ ಅವರ ‘ಸಾವಿತ್ರಿಬಾಯಿ ಪುಲೆ’ ಪಾಠವನ್ನು ಮರುಸೇರ್ಪಡೆ ಮಾಡಲಾಗಿದೆ. ನಿರ್ಮಲಾ ಸುರತ್ಕಲ್ ಅವರ ಪದ್ಯ ‘ನಮ್ಮದೇನಿದೆ?‘ ಬದಲು ಚೆನ್ನಣ್ಣ ವಾಲಿಕಾರ್ ಅವರು ಡಾ|ಬಿ.ಆರ್.ಅಂಬೇಡ್ಕರ್ ಅವರ ಕುರಿತು ಬರೆದ ‘ನೀ ಹೋದ ಮರು ದಿನ’ ಸೇರ್ಪಡೆ ಮಾಡಲಾಗಿದೆ.
ಪಾರಂಪಳ್ಳಿ ನರಸಿಂಹ ಐತಾಳ ಅವರ ‘ಭೂ ಕೈಲಾಸ’ ಪೌರಾಣಿಕ ನಾಟಕದ ಬದಲು ತಿ.ತಾ ಶರ್ಮ, ಸಿದ್ಧನಹಳ್ಳಿ ಕೃಷ್ಣ ಶರ್ಮ ಅವರು ಅನುವಾದಿಸಿದ ಜವಾಹರ ಲಾಲ್ ನೆಹರೂ ಅವರ ‘ಮಗಳಿಗೆ ಬರೆದ ಪತ್ರ’ ಸೇರಿಸಲಾಗಿದೆ. ಕೇಶವ ಬಲಿರಾಂ ಹೆಡಗೇವಾರ್ ಅವರ ‘ನಿಜವಾದ ಆದರ್ಶಪುರುಷ ಯಾರಾಗಬೇಕು?’ ಬದಲು ಶಿವಕೋಟ್ಯಾಚಾರ್ಯರ ‘ಸುಕುಮಾರಸ್ವಾಮಿಯ ಕಥೆ’, ಶತಾವಧಾನಿ ಡಾ|ಆರ್.ಗಣೇಶ್ ಅವರ ‘ಶ್ರೇಷ್ಠ ಭಾರತೀಯ ಚಿಂತನೆಗಳು’ ಬದಲಿಗೆ ಸಾ.ರಾ.ಅಬೂಬಕ್ಕರ್ ಅವರ ‘ಯುದ್ಧ’, ಕೆ.ಟಿ.ಗಟ್ಟಿ ಅವರ ‘ಕಾಲವನ್ನು ಗೆದ್ದವರು’ ಬದಲು ವಿಜಯಮಾಲಾ ರಂಗನಾಥ್ ಅವರ ‘ಬ್ಲಡ್ ಗ್ರೂಪ್’, ಪಿ.ಲಕ್ಷ್ಮಿನಾರಾಯಣ ಭಟ್ ಅವರ ‘ಅಚ್ಚರಿಯಜೀವಿ ಇಂಬಳ’ ಬದಲು ದಸ್ತಗೀರ ಅಲ್ಲೀಬಾಯಿ ಅವರ ‘ಉರುಸುಗಳಲ್ಲಿ ಭಾವೈಕ್ಯತೆ’ ಸೇರ್ಪಡೆ ಮಾಡಲಾಗಿದೆ.ಹಾಗೆಯೇ, ಚಕ್ರವರ್ತಿ ಸೂಲಿಬೆಲೆ ಅವರ ‘ತಾಯಿ ಭಾರತಿಯ ಅಮರಪುತ್ರರು’ ಪೂರ್ಣ ಪಾಠವನ್ನು ಕೈಬಿಡಲಾಗಿದೆ.

ಸಮಾಜ ವಿಜ್ಞಾನದಲ್ಲಿ ‘ವೇದಗಳ ಕಾಲದ ಸಂಸ್ಕೃತಿ’, ‘ಹೊಸ ಧರ್ಮಗಳ ಉದಯ’, ‘ಮಹಿಳಾ ಸಮಾಜ ಸುಧಾರಕಿಯರು’, ‘ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು’, ‘ಮಾನವ ಹಕ್ಕುಗಳು‘ ಎಂಬ ಹೊಸ ಅಧ್ಯಾಯ ಸೇರಿಸಲಾಗಿದೆ.‘ನಮ್ಮ ಹೆಮ್ಮೆಯ ರಾಜ್ಯ ಕರ್ನಾಟಕ’, ‘ಮೈಸೂರು ಮತ್ತು ಇತರೆ ಸಂಸ್ಥಾನಗಳು’, ‘ಭಾರತಕ್ಕಿರುವ ಸವಾಲುಗಳು ಮತ್ತು ಪರಿಹಾರೋಪಾಯಗಳು’ ಅಧ್ಯಯನದಲ್ಲಿ ಕೆಲ ತಿದ್ದುಪಡಿಗಳನ್ನು ಸೂಚಿಸಲಾಗಿದೆ.

LEAVE A REPLY

Please enter your comment!
Please enter your name here