ಪುತ್ತೂರು: ಸುಳ್ಯ, ಕಡಬ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ತಾಲೂಕುಗಳಲ್ಲಿ ಪ್ರತ್ಯೇಕ ಸುಸಜ್ಜಿತ ಕಣ್ಣಿನ ಆಸ್ಪತ್ರೆಯ ಕೊರತೆಯನ್ನು ನೀಗಿಸಲು ಪುತ್ತೂರು ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಕೆಳ ಅಂತಸ್ತಿನಲ್ಲಿ ಸೂಪರ್ ಸ್ಪೆಷಾಲಿಟಿ ರೋಟರಿ ಕಣ್ಣಿನ ಅಸ್ಪತ್ರೆ ಜೂ. 21ರಂದು ಉದ್ಘಾಟನೆಗೊಳ್ಳಲಿದೆ.
ರೋಟರಿ ಸಂಸ್ಥೆಯ ವತಿಯಿಂದ ನಡೆಯುವ ಉಚಿತ ಕಣ್ಣಿನ ಚಿಕಿತ್ಸಾ ಶಿಬಿರದಲ್ಲಿ ಶಿಫಾರಸ್ಸುಗೊಂಡವರಿಗೆ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗಳನ್ನು ಉಚಿತವಾಗಿ ಮಾಡಲಾಗುತ್ತದೆ.
ರೋಟರಿ ಕ್ಲಬ್ ಪುತ್ತೂರು ಇದರ ಪ್ರಾಜೆಕ್ಟ್ ಚೇರ್ಮಾನ್ ಡಾ.ಭಾಸ್ಕರ್ ಎಸ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ರೋಟರಿ ಕ್ಲಬ್ ಪುತ್ತೂರು 1965ರಲ್ಲಿ ಪ್ರಾರಂಭವಾದ ಅವಿಭಜಿತ ದ.ಕ.ಜಿಲ್ಲೆಯ ಎರಡನೇ ಅತೀ ಹಿರಿಯ ರೋಟರಿ ಕ್ಲಬ್ ಆಗಿದೆ. ಕಳೆದ 57 ವರ್ಷಗಳಿಂದ ಪುತ್ತೂರು ಮತ್ತು ಸುತ್ತಮುತ್ತಲಿನ ಪರಿಸರದಲ್ಲಿ ತನ್ನ ವಿವಿಧ ಸೇವಾ ಚಟುವಟಿಕೆಗಳ ಮೂಲಕ ಜನಮಾನಸದಲ್ಲಿ ಒಂದು ವಿಶಿಷ್ಟ ಸ್ಥಾನಮಾನವನ್ನು ಗಳಿಸಿದೆ. ರೋಟರಿ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿ ಅದರ ಮೂಲಕ ತನ್ನೆಲ್ಲ ಯೋಜನೆಗಳನ್ನು ಯಶಸ್ವಿಗೊಳಿಸಿದೆ. ಬ್ಲಡ್‌ಬ್ಯಾಂಕ್, ಬ್ಲಡ್‌ಬ್ಯಾಂಕ್ ಉನ್ನತಿಕರಣ, ಡಯಾಲಿಸ್ ಸೆಂಟರ್, ಬ್ಲಡ್ ಕಲೆಕ್ಷನ್ ವಾಹನ ಯೋಜನೆಗಳನ್ನು ಯಶಸ್ವಿಗೊಳಿಸಿದ್ದು, ಇದೀಗ ಕಣ್ಣಿನ ಆಸ್ಪತ್ರೆಯನ್ನು ಉದ್ಘಾಟಿಸುತ್ತಿದೆ ಎಂದ ಅವರು ವ್ಯಕ್ತಿಗೆ ಕಣ್ಣು ಕಾಣಿಸದಂತೆ ಆಗುವುದನ್ನು ತಪ್ಪಿಸಲು ಪ್ರಾರಂಭದಯ ಜೊತೆಗೆ ಇತರ ಬೇರೆ ಬೇರೆ ರೀತಿಯ ಚಿಕಿತ್ಸೆ ಕೊಡಿಸುವ ಒಟ್ಟಿನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸಿಗುವ ಎಲ್ಲಾ ಸೌಲಭ್ಯಗಳನ್ನು ಕೊಡಿಸುವುದು ಈ ಆಸ್ಪತ್ರೆಯ ಮುಖ್ಯ ಉದ್ದೇಶ. ಹಾಗಾಗಿ ಗ್ಲೋಬಲ್ ಗ್ರಾಂಟ್ ಪ್ರಾಜೆಕ್ಟ್‌ನಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ದಿ ರೋಟರಿ ಪೌಂಡೇಶನ್ ಜರ್ಮನಿಯ ಪಾಸ್‌ಪೋರ್ಟ್ ಕ್ಲಬ್, ಅಮೇರಿಕಾದ ಫ್ಲೋರಿಡದ ಟೆಂಪನೋನ್ ಕ್ಲಬ್, ರೋಟರಿ ಜಿಲ್ಲೆ 3181 ಮತ್ತು 3150, ರೋಟರಿ ಕ್ಲಬ್ ಪುತ್ತೂರು ಸಿಟಿ, ಇನ್ನರ್‌ವೀಲ್ ಕ್ಲಬ್ ಪುತ್ತೂರು ಈ ಯೋಜನೆಯ ಪಾಲುದಾರರಾಗಿದ್ದಾರೆ. ಇದರ ಜೊತೆಗೆ ವಿನಾಯಕ ಕುಡ್ವ, ರವಿ ವಡ್ಲಮನಿ ಇವರ ವಿಶೇಷ ಸಹಕಾರ ಮತ್ತು ನಮ್ಮ ಸದಸ್ಯರು ಮತ್ತು ಕೆಲವು ದಾನಿಗಳ ಸಹಕಾರದೊಂದಿಗೆ ಯೋಜನೆ ಯಶಸ್ವಿಯಾಗಿದೆ ಎಂದ ಅವರು ಆಸ್ಪತ್ರೆ ಉದ್ಘಾಟನೆಯಾದ ಒಂದೂವರೆ ತಿಂಗಳ ಒಳಗೆ ಕಣ್ಣಿನ ಆಸ್ಪತ್ರೆಯು ಪೂರ್ಣ ಪ್ರಮಾಣದಲ್ಲಿ ಕಾರ್ಯರಂಭ ಮಾಡಲಿದೆ. ಇದರ ನಿರ್ವಹಣೆಯನ್ನು ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರಖ್ಯಾತರಾಗಿರುವ ಪ್ರಸಾದ್ ನೇತ್ರಾಲಯಕ್ಕೆ ವಹಿಸಲಾಗಿದೆ ಎಂದವರು ಹೇಳಿದರು.
ಉದ್ಘಾಟನಾ ಸಮಾರಂಭ:
ಜೂ. 21ರಂದು ಯೋಜನೆಯನ್ನು ರೋಟರಿ ಅಂತರಾಷ್ಟ್ರೀಯ ನಿರ್ದೇಶಕ ಮಹೇಶ್ ಉದ್ಘಾಟಿಸಲಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈ ದೀಪ ಪ್ರಜ್ವಲಿಸಲಿದ್ದಾರೆ. ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ಮೊಡಿಲರ್ ಒಟಿಯನ್ನು ಉದ್ಘಾಟಿಸಲಿದ್ದಾರೆ. ಅಂತರಾಷ್ಟ್ರೀಯ ರೋಟರಿಯ ಚಯರ್‌ಮ್ಯಾನ್ ರವಿವಡ್ಲಮನಿ ಡೇ ಕೇರ್ ಸೆಂಟರ್ ಉದ್ಘಾಟಸಲಿದ್ದಾರೆ. ರೋಟರಿ ಪೌಂಡೇಶನ್‌ನ ಚೆಯರ್‌ಮ್ಯಾನ್ ಡಾ. ಕೆ ಸೂರ್ಯನಾರಾಯಣ, ಪ್ರಸಾದ್ ನೇತ್ರಾಲಯದ ಡಾ. ಕೃಷ್ಣ ಪ್ರಸಾದ್ ಕೆ, ರೋಟರಿ ಜಿಲ್ಲಾ ಅಸಿಸ್ಟಂಟ್ ಗವರ್ನರ್ ಎ.ಜಗಜೀವನ್‌ದಾಸ್ ರೈ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಡಾ. ಭಾಸ್ಕರ್ ಎಸ್ ಹೇಳಿದರು.
ಸಮಾಜಮುಖಿ ಕಾರ್ಯಗಳು:
ರೋಟರಿ ಬ್ಲಡ್ ಬ್ಯಾಂಕ್‌ನಲ್ಲಿ ಇಲ್ಲಿನ ತನಕ 22.123 ಯುನಿಟ್ ರಕ್ತ ಸಂಗ್ರಹಣೆ ಆಗಿದೆ. ಒಟ್ಟು 46,527 ಯುನಿಟ್ ರಕ್ತ ವಿತರಣೆ ಆಗಿದೆ. ಅದೇ ರೀತಿ ಕ್ಯಾನ್ಸರ್ ರೋಗಿಗಳಿಗೆ ಶೇ.50 ದರದಲ್ಲಿ, ತಲಸೀಮಿಯ ರೋಗಿಗಳಿಗೆ ಉಚಿತ, ಸರಕಾರಿ ಆಸ್ಪತ್ರೆಯ ಎಲ್ಲಾ ರೋಗಿಗಳ ಕೇಸ್‌ಗೆ ಸಂಬಂಧಿಸಿ ಶೇ. 50ರಿಯಾಯಿತಿ, ಹೆಚ್.ಐ.ವಿ.ಕೇಸ್‌ಗಳಿಗೆ ಉಚಿತ ರಕ್ತ ವಿತರಣೆ ಮಾಡಲಾಗುತ್ತಿದೆ. ರೋಟರಿ ಕ್ಲಬ್ ಪುತ್ತೂರು ಡಯಾಲಿಸಿಸ್ ಸೆಂಟರ್‌ನಲ್ಲಿ 2021 ರಿಂದ ಇಲ್ಲಿನ ತನಕ 40 ರೋಗಿಗಳಿಗೆ 3,681 ಡಯಾಲಿಸಿಸ್ ಸೇವೆ ಒದಗಿಸಲಾಗಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ಉಮಾನಾಥ್ ಪಿ.ಬಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿ ಡಾ. ಶ್ರೀಪ್ರಕಾಶ್, ಮಾಜಿ ಅಧ್ಯಕ್ಷ ಜೇವಿಯರ್ ಡಿ’ಸೋಜ ಉಪಸ್ಥಿತರಿದ್ದರು.
ಶಿಬಿರದಲ್ಲಿ ಶೀಫಾರಸ್ಸುಗೊಂಡವರಿಗೆ ಉಚಿತ ಶಸ್ತ್ರಚಿಕಿತ್ಸೆ
ರೋಟರಿ ಮತ್ತು ಆಸ್ಪತ್ರೆಯಿಂದ ವಿವಿಧ ಕಡೆಯಲ್ಲಿ ಪ್ರತಿ ತಿಂಗಳು ಉಚಿತ ಕಣ್ಣಿನ ತಪಾಸಣಾ ಶಿಬಿರ ನಡೆಯುತ್ತದೆ. ಈ ಶಿಬಿರದಲ್ಲಿ ತಪಾಸಣೆ ಮಾಡಿಸಿ ಶಿಫಾರಸ್ಸಾದವರಿಗೆ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗಳನ್ನು ಉಚಿತವಾಗಿ ಮಾಡಲಾಗುತ್ತದೆ. ಅಪೇಕ್ಷೆ ಪಟ್ಟ ರೋಗಿಗಳಿಗೆ ಯಾವುದೇ ವೈಯುಕ್ತಿಕವಾದ ಮತ್ತು ಪಾವತಿ ಆಧಾರಿತ ಸೇವೆಗಳನ್ನು ಒದಗಿಸಲಾಗುವುದು. ಆಸ್ಪತ್ರೆಯು ಒಟ್ಟು 2,500 ಚದರ ಅಡಿಯ ವಿಸ್ತೀರ್ಣಹೊಂದಿದ್ದು, ರೂ. 2 ಕೋಟಿ ವೆಚ್ಚ ತಲುಗಲಿದೆ. ಈ ಆಸ್ಪತ್ರೆಯಲ್ಲಿ ಕಣ್ಣಿನ ತಪಾಸಣೆ, ಸಮಾಲೋಚನೆ, ನುರಿತ ವೈದ್ಯರ ಮಾರ್ಗದರ್ಶನದಲ್ಲಿ ಡೇ ಕೇರ್ ಟ್ರೀಟ್‌ಮೆಂಟ್. ಯಾವುದೇ ಕಣ್ಣಿನ ಚಿಕಿತ್ಸೆ ಔಷಧಿಗಳು ದೊರೆಯುವುದಲ್ಲದೆ. ಕನ್ನಡಕಗಳು ದೊರೆಯುತ್ತದೆ. ಅತ್ಯಾಧುನಿಕ ಯಂತ್ರಗಳು ಮತ್ತು ತಂತ್ರಜ್ಞಾನ ಬಳಸಿ ಕಣ್ಣಿನಪೊರೆ ಚಿಕಿತ್ಸೆ ನೀಡಲಾಗುವುದು. ಶಸ್ತ್ರಚಿಕಿತ್ಸಾ ಕೊಠಡಿ ಸಂಪೂರ್ಣ ಸ್ಟೈನ್‌ಲೆಸ್ ಸ್ಟೀಲ್ ಮೊಡಿಲರ್ ಒಟಿ ಮಾಡಿದ್ದೇವೆ ಎಂದು ಡಾ. ಭಾಸ್ಕರ್ ಎಸ್ ಹೇಳಿದರು.