ಮಂಗಳೂರು: ವಿಧಾನಸಭೆ ಹಾಗೂ ವಿಧಾನ ಪರಿಷತ್ ಎಂಬ ವ್ಯವಸ್ಥೆ ನ್ಯಾಯಾಂಗಕ್ಕಿಂತಲೂ ಅತ್ಯುನ್ನತವಾದದ್ದು.ಇವುಗಳ ಸಮರ್ಪಕ ನಿರ್ವಹಣೆಗೆ ಉಭಯ ಸದನಗಳ ಸದಸ್ಯರನ್ನು ಒಳಗೊಂಡ ನೈತಿಕ ಸಮಿತಿಯನ್ನು ರಚಿಸುವ ಅಗತ್ಯವಿದೆ ಎಂದು ಮಾಜಿ ಮುಖ್ಯಮಂತ್ರಿ ಡಾ|ಎಂ.ವೀರಪ್ಪ ಮೊಯ್ಲಿ ಸಲಹೆ ನೀಡಿದ್ದಾರೆ.
ತುಳು ಪರಿಷತ್ ವತಿಯಿಂದ ಪುರಭವನದಲ್ಲಿ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಸಂಸತ್ ವ್ಯವಸ್ಥೆಯ ಘನತೆಯನ್ನು ಕಾಪಾಡಿಕೊಂಡು, ಶಿಸ್ತುಬದ್ಧವಾಗಿ ಕಲಾಪಗಳನ್ನು ನಿರ್ವಹಿಸಿ ಜನರಿಗೆ ನ್ಯಾಯ ಒದಗಿಸುವಲ್ಲಿ ನೈತಿಕ ಸಮಿತಿ ಅಗತ್ಯವಾಗಿದೆ ಎಂದು ಹೇಳಿದ ಮೊಯ್ಲಿಯವರು, ಬಂಟ್ವಾಳ ವೈಕುಂಠ ಬಾಳಿಗ, ಕೆ.ಎಸ್.ಹೆಗ್ಡೆ ಮೊದಲಾದ ಸಭಾಪತಿಗಳ ದೊಡ್ಡ ಪರಂಪರೆಯನ್ನು ಹೊಂದಿರುವ ಜಿಲ್ಲೆಯವರಾದ ಯು.ಟಿ.ಖಾದರ್ ಅವರು, ಸದನದ ಗೌರವ, ಘನತೆ ಎತ್ತಿಹಿಡಿದು, ಶಿಸ್ತನ್ನು ಕಾಪಾಡಿಕೊಂಡು ಮಾದರಿಯಾಗಬೇಕು ಎಂದು ಸಲಹೆ ನೀಡಿದರು. ಸ್ಪೀಕರ್ ಆಗಿ ಯು.ಟಿ.ಖಾದರ್ ಆಯ್ಕೆ ಭಾಷಾ, ಮತೀಯ, ಸಾಂಸ್ಕೃತಿಕ ಸೌಹಾರ್ದತೆಗೆ ತಿಲಕ ಪ್ರಾಯವಾಗಿದ್ದು, ತಮ್ಮ ಅವಽಯಲ್ಲಿ ಸದನದಲ್ಲಿ ಯುವ ಶಾಸಕರಿಗೆ ಹೆಚ್ಚಿನ ಆದ್ಯತೆ ನೀಡಿ ಹೊಸ ಪ್ರತಿಭೆಗಳ ವಿಕಸನಕ್ಕೆ ಅನುವು ಮಾಡಿಕೊಡಬೇಕು ಎಂದು ವೀರಪ್ಪ ಮೊಯ್ಲಿ ಹೇಳಿದರು.
ಪ್ರತಿಪಕ್ಷದ ಮಿತ್ರನಾಗಿ ಕಾರ್ಯನಿರ್ವಹಣೆ: ಸನ್ಮಾನ ಸ್ವೀಕರಿಸಿ ಮಾತನಾಡಿದ ಯು.ಟಿ.ಖಾದರ್, ಸ್ಪೀಕರ್ ಆಗಿ ಸಂಸದೀಯ ನಿಯಮಗಳನ್ನು ಪಾಲಿಸಿಕೊಂಡು ಕರ್ತವ್ಯ ನಿರ್ವಹಿಸುವ ಜತೆಗೆ ತಾನು ಪ್ರತಿಪಕ್ಷದ ಮಿತ್ರನಾಗಿ ಕಾರ್ಯನಿರ್ವಹಿಸಲು ಬಯಸುವುದಾಗಿ ಹೇಳಿದರು.
ಸನ್ಮಾನ ಕಾರ್ಯಕ್ರಮಕ್ಕೆ ಮೊದಲು ನಡೆದ ಸಂವಾದ ಕಾರ್ಯಕ್ರಮದಲ್ಲಿ ವಿವಿಧ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮಂಗಳೂರು ವಿಶ್ವವಿದ್ಯಾನಿಲಯದ ಪ್ರಭಾರ ಕುಲಪತಿ ಪ್ರೊ| ಜಯರಾಜ್ ಅಮೀನ್ ಅಧ್ಯಕ್ಷತೆ ವಹಿಸಿದ್ದರು. ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ|ಎಂ.ಎನ್.ರಾಜೇಂದ್ರ ಕುಮಾರ್, ಬಿಷಪ್ ಅತಿ|ವಂ|ಡಾ|ಪೀಟರ್ ಪಾವ್ಲ್ ಸಲ್ದಾನ, ಶ್ರೀದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸದಾನಂದ ಶೆಟ್ಟಿ, ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ಉರ್ಮಿಳಾ ರಮೇಶ್ ಕುಮಾರ್, ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್, ದಸಂಸ ರಾಜ್ಯ ಸಂಘಟನಾ ಸಂಚಾಲಕ ಎಂ.ದೇವದಾಸ್, ದ.ಕ.ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷ ಜಯಶೀಲ ಅಡ್ಯಂತಾಯ, ಕಸಪಾ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಪೃಥ್ವಿರಾಜ್ ರೈ, ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಅಧ್ಯಕ್ಷೆ ವಿಜಯಲಕ್ಷ್ಮಿ ಬಿ.ಶೆಟ್ಟಿ, ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ, ಅಹಿಂದ ಜನ ಚಳವಳಿಯ ಅಧ್ಯಕ್ಷ ಪದ್ಮನಾಭ ನರಿಂಗಾನ, ಜೆಡಿಎಸ್ ರಾಜ್ಯ ವಕ್ತಾರ ಎಂ.ಬಿ.ಸದಾಶಿವ, ಎಸ್ಡಿಎಂ ಕಾಲೇಜಿನ ನಿವೃತ್ತ ನಿರ್ದೇಶಕ ಡಾ.ದೇವರಾಜ್ ಕೆ., ಹೀರಾ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎ.ಎಚ್. ಮಹಮೂದ್, ತುಳು ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ಕಿಶೋರ್ ಡಿ.ಶೆಟ್ಟಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಓಸ್ವಾಲ್ಡ್ ಪ್ರಕಾಶ್ ಪಿಂಟೋ, ತುಳು ಪರಿಷತ್ನ ಗೌರವ ಅಧ್ಯಕ್ಷರಾದ ಸ್ವರ್ಣ ಸುಂದರ್, ಕೋಶಾಽಕಾರಿ ಶುಭೋದಯ ಆಳ್ವ ಮೊದಲಾದವರು ಉಪಸ್ಥಿತರಿದ್ದರು.ತುಳು ಪರಿಷತ್ನ ಗೌರವಾಧ್ಯಕ್ಷ ಡಾ|ಪ್ರಭಾಕರ ನೀರುಮಾರ್ಗ ಸ್ವಾಗತಿಸಿದರು. ಅಧ್ಯಕ್ಷ ತಾರನಾಥ್ ಗಟ್ಟಿ ಕಾಪಿಕಾಡ್ ಕಾರ್ಯಕ್ರಮ ನಿರೂಪಿಸಿದರು.
ರಾಜಕೀಯ ತರಬೇತಿ ಸಂಸ್ಥೆ ರಚನೆಗೆ ಚಿಂತನೆ
ಸದನದ ಶಿಸ್ತನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಯುವ ಶಾಸಕರು ಸದನದಲ್ಲಿ ಯಾವ ರೀತಿಯಲ್ಲಿ ವ್ಯವಹರಿಸಬೇಕೆಂಬ ನಿಟ್ಟಿನಲ್ಲಿ ಮುಂದಿನ ವಾರದಲ್ಲಿ ಮೂರು ದಿನಗಳ ತರಬೇತಿಯನ್ನು ನೆಲಮಂಗಲದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದ ಸ್ಪೀಕರ್ ಯು.ಟಿ.ಖಾದರ್, ರಾಜಕೀಯದ ಕುರಿತಂತೆ ಪ್ರಾಯೋಗಿಕ ಮಾಹಿತಿಯನ್ನು ಒಳಗೊಂಡಂತೆ ‘ರಾಜಕೀಯದ ತರಬೇತಿ ಸಂಸ್ಥೆ’ಯನ್ನು ಆರಂಭಿಸುವ ಚಿಂತನೆಯನ್ನು ತಾವು ಹೊಂದಿರುವುದಾಗಿ ಹೇಳಿದರು.
ತುಳು ರಾಜ್ಯಭಾಷೆಯಾಗಿಸಲು ಕ್ರಮ
ತುಳುವನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ಕುರಿತಂತೆ ಹಲವು ಬಾರಿ ವಿಧಾನ ಸಭೆಯಲ್ಲಿ ಧ್ವನಿ ಎತ್ತಿದ್ದೇನೆ. ರಾಜ್ಯಭಾಷೆಯನ್ನಾಗಿಸುವ ನಿಟ್ಟಿನಲ್ಲಿ ಈಗಾಗಲೇ ಸಮಿತಿ ಮಾಡಲಾಗಿದೆ. ಆ ಸಮಿತಿಯ ವರದಿ ಪಡೆದು ಅದರ ಆಧಾರದಲ್ಲಿ ತುಳುವಿಗೆ ರಾಜ್ಯಭಾಷೆಯ ಮಾನ್ಯತೆ ನೀಡುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು ಎಂದು ವಿದ್ಯಾರ್ಥಿಗಳ ಜತೆಗಿನ ಸಂವಾದದ ವೇಳೆ ಸ್ಪೀಕರ್ ಯು.ಟಿ.ಖಾದರ್ ಪ್ರತಿಕ್ರಿಯಿಸಿದರು.