ವಿದ್ಯುತ್ ದರ ಏರಿಕೆ ವಿರುದ್ಧ ಕರ್ನಾಟಕ ಬಂದ್‌ಗೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಬೆಂಬಲವಿಲ್ಲ-ದರ ಏರಿಕೆಗೆ ನಮ್ಮ ವಿರೋಧವಿದೆ. ಸಹಾಯಕ ಆಯುಕ್ತರ ಮೂಲಕ ಸರಕಾರಕ್ಕೆ ಮನವಿ

0

ಪುತ್ತೂರು: ವಿದ್ಯುತ್ ದರ ಏರಿಕೆ ಮಾಡಿರುವ ಬಗ್ಗೆ ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವಿರೋಧವಿದೆ. ಆದರೆ ಕರ್ನಾಟಕ ಬಂದ್‌ಗೆ ಯಾವುದೇ ಸಹಕಾರ ಇರುವುದಿಲ್ಲ. ಬಂದ್ ಮಾಡುವುದರಿಂದ ತೊಂದರೆಯೇ ಹೊರತು ಅದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜಾನ್ ಕುಟಿನ್ಹಾ ಹೇಳಿದರು.


ವಿದ್ಯುತ್ ಉಚಿತವಾಗಿ ನೀಡುವುದಕ್ಕೆ ನಮ್ಮ ವಿರೋಧವಿಲ್ಲ. ನಿಗದಿತ ವಿದ್ಯುತ್ ಶುಲ್ಕ 1 ಕೆ.ವಿ ಗೆ ರೂ.125 ಇದ್ದ ದರವನ್ನು ಏಕಾಏಕಿ ರೂ.200ಕ್ಕೆ ಏರಿಕೆ ಮಾಡಿರುವುದಕ್ಕೆ ನಮ್ಮ ವಿರೋಧವಿದೆ. ವಾರದಲ್ಲಿ ಒಂದು ದಿನವಲ್ಲದೆ ಇತರ ದಿನಗಳಲ್ಲಿ ವಿದ್ಯುತ್ ಕಡಿತಗೊಳಿಸುವುದರಿಂದ ಸಣ್ಣ ಉದ್ಯಮಿಗಳಿಗೆ ತೀರಾ ತೊಂದರೆಯುಂಟಾಗುತ್ತಿದೆ. ವಿದ್ಯುತ್ ದರ ಏರಿಕೆಯಿಂದ ಉದ್ಯಮಿಗಳ ಸಮಸ್ಯೆಯನ್ನು ಸಹಾಯಕ ಕಮಿಷನರ್ ಮೂಲಕ ಸರಕಾರದ ಗಮನ ಸೆಳೆಯಲಾಗುವುದು ಎಂದು ಅವರು ತಿಳಿಸಿದರು.


ಕಾರ್ಯದರ್ಶಿ ಉಲ್ಲಾಸ್ ಪೈ ಮಾತನಾಡಿ, ಒಂದು ಕಡೆ ಉಚಿತವಾಗಿ ನೀಡುವುದಾಗಿ ದರ ಏರಿಕೆ ಮಾಡುವುದು ಸಮಂಜಸವಲ್ಲ. ಉಚಿತವಾಗಿ ನೀಡುವ ಆವಶ್ಯಕತೆಯಿತ್ತಾ? ಹುಬ್ಬಳ್ಳಿಯಿಂದ ಜಿಲ್ಲಾ ವರ್ತಕ ಸಂಘದವರು ಜೂ.22ರಂದು ಬಂದ್‌ಗೆ ಕರೆ ನೀಡಿದ್ದರು. ಇದರ ಬಗ್ಗೆ ಮಂಗಳೂರು ಜಿಲ್ಲಾ ಸಂಘವನ್ನು ಭೇಟಿ ಮಾಡಿ ವಿಚಾರಿಸಲಾಗಿದ್ದು ಬಂದ್ ಮಾಡುವುದರಿಂದ ಯಾವುದೇ ಸಮಸ್ಯೆಗಳು ಪರಿಹಾರವಾಗುವುದಿಲ್ಲ. ಗ್ರಾಹಕರಿಗೆ ತೊಂದರೆಯಲ್ಲದೆ ಬೆಳವಣಿಗೆಗೆ ಕುಂಟಿತವಾಗುತ್ತದೆ. ಹೆಚ್ಚಿನ ಪರಿಣಾಮ ಬೀಳುವುದಿಲ್ಲ ಕೈಗಾರಿಕೋದ್ಯಮಿಗಳಿಗೆ ತೊಂದರೆಯಾಗುವುದೇ ಹೊರತು ಬೇರೆ ಯಾವುದೇ ಪರಿಣಾಮ ಬೀಳುವುದಿಲ್ಲ. ಇದಕ್ಕಾಗಿ ಬೆಂಗಳೂರಿನಲ್ಲಿ ಶಾಸಕರ ಮೂಲಕ ಸರಕಾರದ ಗಮನಕ್ಕೆ ತರಲಾಗುವುದು ಎಂದು ಜಿಲ್ಲಾ ಸಂಘದ ಸಲಹೆಯಂತೆ ಪುತ್ತೂರಿನಲ್ಲಿಯೂ ಬಂದ್‌ಗೆ ಬೆಂಬಲವಿಲ್ಲ. ಜೂ.22ರಂದು ಸಹಾಯಕ ಆಯುಕ್ತರ ಮೂಲಕ ಸರಕಾರಕ್ಕೆ ಮನವಿ ಮಾಡಲಾಗುವುದು. ಸ್ಥಳೀಯ ಶಾಸಕರ ಮೂಲಕ ಸರಕಾರದ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.


ವಿದ್ಯುತ್ ಉಚಿತ ಕೊಡುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ದರ ಏರಿಕೆಯಿಂದ ಜನ ಸಾಮಾನ್ಯರಿಗೆ ಉಂಟಾಗುವ ತೊಂದರೆಗಳ ಬಗ್ಗೆ ಪುತ್ತೂರು ಹಾಗೂ ಮಂಗಳೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿಂದ ಸಚಿವರಿಗೆ ಮನವಿ ಸಲ್ಲಿಸಿ ಮನವರಿಕೆ ಮಾಡಲಾಗುವುದು ಎಂದು ಉಪಾಧ್ಯಕ್ಷ ಪಿ.ವಾಮನ ಪೈ ತಿಳಿಸಿದರು.


ವಿದ್ಯುತ್ ದರ ಏರಿಕೆಯಿಂದಾಗಿ ಕೈಗಾರಿಕೆಗಳಲ್ಲಿ ಉತ್ಪಾದನಾ ವೆಚ್ಚ ಅಧಿಕವಾಗಲಿದೆ. ಇದರ ಪರಿಣಾಮ ಜನ ಸಾಮಾನ್ಯರ ಮೇಲೆ ಹೊರೆ ಬೀಳುತ್ತದೆ ಎಂದು ಸಂಘದ ನಿರ್ದೇಶಕ ಶ್ರೀಕಾಂತ್ ಕೊಳತ್ತಾಯ ತಿಳಿಸಿದರು.


ವಾರದ ಇತರ ದಿನಗಳಲ್ಲಿ ವಿದ್ಯುತ್ ಕಡಿತಗೊಳಿಸುವುದರಿಂದ ವಿದ್ಯುತ್‌ನ್ನೇ ಅವಲಂಬಿಸಿರುವ ಪ್ರಿಂಟಿಂಗ್ ಪ್ರೆಸ್ ಸೇರಿದಂತೆ ಸಣ್ಣ ಕೈಗಾರಿಕೋದ್ಯಮಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಗ್ರಾಹಕರಿಗೆ ನಿಗದಿತ ಸಮಯದಲ್ಲಿ ಸೇವೆ ನೀಡಲು ಅಸಾಧ್ಯವಾಗುತ್ತಿದೆ. ಇದರ ಬಗ್ಗೆಯೂ ಸರಕಾರದ ಗಮನ ಸೆಳೆಯಲಾಗುವುದು ಕಾರ್ಯದರ್ಶಿ ಉಲ್ಲಾಸ್ ಪೈ ತಿಳಿಸಿದರು.


ಸೋಲಾರ್ ಸಬ್ಸಿಡಿ ಕಡಿತ:
ಸೋಲಾರ್‌ಗೆ ನೀಡಲಾಗುತ್ತಿದ್ದ ಸಹಾಯಧನವನ್ನು ರಾಜ್ಯ ಸರಕಾರ ಕಡಿತಗೊಳಿಸಿದೆ. ಪ್ರತಿ ಯೂನಿಟ್‌ಗೆ 50 ಪೈಸೆಯಂತೆ ನೀಡುತ್ತಿದ್ದ ಸಹಾಯಧನವನ್ನು ಕಡಿತಗೊಳಿಸಿದೆ. ಅದೂ ಈಗ ಜನರ ಮೇಲೆ ಹೊರೆ ಬೀಳುತ್ತಿದೆ ಎಂದು ವಾಮನ ಪೈ ತಿಳಿಸಿದರು. ಮಾಜಿ ಅಧ್ಯಕ್ಷ ಕೇಶವ ಪೈ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here