ಅಂಬಿಕಾ ಮಹಾವಿದ್ಯಾಲಯದ ಮನಃಶಾಸ್ತ್ರ ವಿಭಾಗದಿಂದ ವಿಶೇಷ ಉಪನ್ಯಾಸ

0

ಮಾಡುವ ಕಾರ್ಯದಲ್ಲಿ ಪರಿಪೂರ್ಣ ತಾದ್ಯಾತ್ಮಕತೆ ಮುಖ್ಯ : ಡಾ.ಪ್ರದೀಪ್ ಕೆ.ವಿ
ಪುತ್ತೂರು: ಮಾಡುವ ಕೆಲಸದಲ್ಲಿ ಪೂರ್ಣಪ್ರಮಾಣದ ತಾದ್ಯಾತ್ಮಕತೆ ಅತ್ಯಂತ ಅಗತ್ಯ. ಮಕ್ಕಳು ಐಸ್‌ಕ್ರೀಂ ತಿನ್ನುವಾಗ ಎಷ್ಟು ಆಸ್ವಾದಿಸಿಕೊಂಡು ತಿನ್ನುತ್ತಾರೋ ಅಷ್ಟು ಗಾಢವಾಗಿ ವಿಷಯವೊಂದರಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವ ಮಟ್ಟಕ್ಕೆ ನಮ್ಮ ಮನಸ್ಸನ್ನು ಜಾಗೃತಗೊಳಿಸಬೇಕು. ಸುತ್ತಮುತ್ತಲಿನ ಸಂಗತಿಗಳು ನಮ್ಮ ಮೇಲೆ ಪ್ರಭಾವ ಬೀರದ ಹಾಗೆ ನಮ್ಮ ಮನಸ್ಸನ್ನು ಸದೃಢಗೊಳಿಸಬೇಕು ಎಂದು ಉಜಿರೆಯ ಎಸ್‌ಡಿಎಂ ಸ್ವಾಯತ್ತ ಕಾಲೇಜಿನ ಮನಃಶಾಸ್ತ್ರ ಉಪನ್ಯಾಸಕ ಡಾ.ಸುಧೀರ್ ಕೆ.ವಿ ಹೇಳಿದರು.

ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದ ಮನಃಶಾಸ್ತ್ರ ವಿಭಾಗದ ಆಶ್ರಯದಲ್ಲಿ ಆಯೋಜಿಸಲಾದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ’ಮೈಂಡ್‌ಫುಲ್‌ನೆಸ್ ಅಂಡ್ ಟೈಮ್ ಮ್ಯಾನೇಜ್‌ಮೆಂಟ್’ ಎಂಬ ವಿಷಯದ ಬಗ್ಗೆ ಮಂಗಳವಾರ ಮಾತನಾಡಿದರು.
ಮನಸ್ಸನ್ನು ಹತೋಟಿಗೆ ತರುವುದು ಅತ್ಯಂತ ಮುಖ್ಯ. ಯಾವುದೇ ಕೆಲಸವನ್ನು ಪೂರ್ಣಪ್ರಮಾಣದಲ್ಲಿ ಪ್ರತಿಶತ ನೂರು ಆಸಕ್ತಿಯಿಂದ ಮಾಡಿದಾಗ ಮಾತ್ರ ಪರಿಪೂರ್ಣತೆ ಒದಗಿಬರಲು ಸಾಧ್ಯ. ನಮ್ಮ ನಿತ್ಯ ಬದುಕಿನಲ್ಲಿ ಮಾಡುವ ದೈನಂದಿನ ಚಟುವಟಿಕೆಗಳ ಸಂದರ್ಭದಲ್ಲೂ ನಮ್ಮ ಮನಸ್ಸು ಮತ್ತೇನನ್ನೋ ಆಲೋಚಿಸುತ್ತಿರುತ್ತದೆ. ಮಾಡುವ ಕೆಲಸವನ್ನೇ ಉದ್ದೇಶಿಸಿ ಮನಸ್ಸು ಕಾರ್ಯನಿರ್ವಹಿಸುವುದು ಅತ್ಯಂತ ಕಡಿಮೆ. ಇದನ್ನು ಸರಿಪಡಿಸಿಕೊಳ್ಳುವುದು ಯಶಸ್ಸಿನ ದೃಷ್ಟಿಯಿಂದ ಅತ್ಯಂತ ಒಳ್ಳೆಯದು ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಲೇಜಿನ ಪ್ರಾಚಾರ್ಯ ರಾಕೇಶ್ ಕುಮಾರ್ ಕಮ್ಮಜೆ ಮಾತನಾಡಿ‌, ಮನಃಶಾಸ್ತ್ರೀಯ ವಿಚಾರಗಳನ್ನು, ಉಪನ್ಯಾಸಗಳನ್ನು ಯುವಸಮುದಾಯಕ್ಕೆ ತಲುಪಿಸುವುದು ಅತ್ಯಂತ ಅಗತ್ಯ. ಶಿಕ್ಷಣ ಸಂಸ್ಥೆಗಳಲ್ಲಿ ಮನಃಶಾಸ್ತ್ರ ಆಧಾರಿತ ಉಪನ್ಯಾಸಗಳನ್ನು ಏರ್ಪಡಿಸುವುದರಿಂದ ವಿದ್ಯಾರ್ಥಿಗಳ ಗುರಿಸಾಧನೆಗೆ ಸಹಕಾರಿಯೆನಿಸುತ್ತದೆ. ನಮ್ಮ ಮನಸ್ಸನ್ನು ನಿರ್ವಹಿಸುವ ಕಲೆ ನಮ್ಮಲ್ಲಿ ಕರಗತಗೊಂಡಾಗ ಬದುಕು ಸುಲಲಿತವೆನಿಸುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ ಮಾತನಾಡಿ, ಮನಸ್ಸಿನ ನಿರ್ವಹಣೆ ಬಗೆಗೆ ಭಗವದ್ಗೀತೆಯಲ್ಲಿ ಮನೋಜ್ಞವಾಗಿ ತಿಳಿಸಲಾಗಿದೆ. ಭಾರತೀಯ ತತ್ತ್ವಶಾಸ್ತ್ರವು ಮನಃಶಾಸ್ತ್ರವನ್ನು ತನ್ನ ಒಡಲಲ್ಲಿರಿಸಿಕೊಂಡಿದೆ. ಸ್ಥಿತಪ್ರಜ್ಞತೆಯನ್ನು ಸಾಧಿಸುವ ಮಟ್ಟಕ್ಕೆ ನಾವು ಏರಬೇಕಿದೆ. ಮನಸ್ಸಿನ ಹತೋಟಿಯೇ ಸ್ಥಿತಪ್ರಜ್ಞತೆಗೆ ಮೂಲ. ಆದ್ದರಿಂದ ಭಾವನೆಗಳ ತೊಳಲಾಟವನ್ನು ಮೀರಿದ ಸ್ಥಿತಿಗೆ ನಮ್ಮನ್ನು ನಾವು ಎತ್ತರಿಸಿಕೊಳ್ಳಬೇಕು ಎಂದು ನುಡಿದರು.
ವಿದ್ಯಾರ್ಥಿನಿ ಅಂಕಿತಾ ಪ್ರಾರ್ಥಿಸಿದರು. ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಗಣೇಶ್ ಪ್ರಸಾದ್ ಎ ಸ್ವಾಗತಿಸಿದರು. ಮನಃಶಾಸ್ತ್ರ ವಿಭಾಗದ ಮುಖ್ಯಸ್ಥ ಚಂದ್ರಕಾಂತ ಗೋರೆ ಪ್ರಸ್ತಾವನೆಗೈದರು. ವಿದ್ಯಾರ್ಥಿನಿ ಅನಘಾ ಸಿ.ಆರ್ ವಂದಿಸಿ, ವಿದ್ಯಾರ್ಥಿನಿ ನಯನ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here