ಇಂದು ಅಂತರ್ರಾಷ್ಟ್ರೀಯ ಯೋಗ ದಿನ

0

ಸಂಸ್ಕೃತಿಯು ಇಡೀ ವಿಶ್ವವನ್ನು ನಮ್ಮ ನಿವಾಸವನ್ನಾಗಿಸಿದೆ. ನಮ್ಮ ಮನೆಗಳಲ್ಲಿ ಆರಾಮವಾಗಿರುವಂತೆ ಎಲ್ಲಾ ವಿಷಯಗಳಲ್ಲಿ ಒಗ್ಗೂಡಿರುವಂತೆಯೂ ಮಾಡಿದೆ..!!! ಎಂದು ಭಾರತದ ಖ್ಯಾತ ಗಣಿತಜ್ಞ ಭೌತವಿಜ್ಞಾನಿ ಸತ್ಯೇಂದ್ರನಾಥ ಭೋಸ್ ಒಂದು ಕಡೆ ಹೀಗೆ ಹೇಳಿದ್ದಾರೆ. ಅಂತರ್ರಾಷ್ಟ್ರೀಯ ಯೋಗ ದಿನ ಜೂ.21ರ ಈ ದಿನಕ್ಕೆ ಬಹಳ ಸೂಕ್ತವಾದ ಮಾತಾಗಿದೆ. ಭವ್ಯ ಸಂಸ್ಕೃತಿ, ಸಂಸ್ಕಾರ, ಜೀವನ ಮೌಲ್ಯಗಳಿಂದ ಕೂಡಿದ ನಮ್ಮ ದೇಶ ಜ್ಞಾನ ಸಂಪತ್ತುಗಳ ನಿಧಿ. ಅಂತಹ ಮಹಾನ್ ಜ್ಞಾನಗಳಲ್ಲಿ ಯೋಗ ಅತ್ಯಂತ ಶ್ರೇಷ್ಠವಾಗಿದೆ. ವ್ಯಕ್ತಿಯ ಮಾನಸಿಕ ಮತ್ತು ಶಾರೀರಿಕ ಆರೋಗ್ಯವನ್ನು ಸಮತೋಲನದಲ್ಲಿ ಇಡಲು ಯೋಗದ ಪಾತ್ರ ಮಹೋನ್ನತವಾದುದು.

ಇಂದು ನಾನಾ ಒತ್ತಡ ಸಮಸ್ಯೆಗಳಿಂದ ಮಾನವ ಬದುಕು ಹಳಿತಪ್ಪಿದಂತಾಗಿದೆ. ಬದುಕನ್ನು ಮತ್ತೆ ಸರಿಯಾದ ಮಾರ್ಗಕ್ಕೆ ತರಲು ಯೋಗಾಭ್ಯಾಸ ಸರಳ ಮಾರ್ಗವಾಗಿದೆ. ಅಂತರ್ರಾಷ್ಟ್ರೀಯ ಯೋಗದಿನಾಚರಣೆಯ ಈ ಶುಭ ಸಂದರ್ಭದಲ್ಲಿ ನಾವು ನಮ್ಮ ಭವಿಷ್ಯತ್ತಿನ ವಿದ್ಯಾರ್ಥಿ-ಯುವಜನಾಂಗವನ್ನು ದೃಷ್ಟಿಯಲ್ಲಿಟ್ಟುಕೊಂಡು ಕೆಲವೊಂದು ವಿಚಾರಗಳನ್ನು ತಿಳಿಸುವುದು ಬಹಳ ಅಗತ್ಯ.

ನಮ್ಮ ಮನಸ್ಸು ಬಹಳ ಚಂಚಲವಾದುದು. ಮನಸ್ಸು ನಾವು ಹೇಳುವ ಹಾಗೆ ಕೇಳುವಂತೆ ಮಾಡುವ ವಿಜ್ಞಾನವೇ ಯೋಗ ಎಂಬ ಮಾತಿದೆ. ಯೋಗದಲ್ಲಿ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ ಮತ್ತು ಸಮಾಧಿ ಎಂಬ ಎಂಟು ಅಂಗಗಳಿವೆ. ಇವುಗಳನ್ನು ಅಷ್ಟಾಂಗಗಳೆಂದು ಕರೆಯಲಾಗುತ್ತದೆ. ನಮ್ಮ ದೈನಂದಿನ ಬದುಕಿನಲ್ಲಿ ಇವುಗಳನ್ನು ಅಳವಡಿಸುವುದು ಬಹಳ ಅಗತ್ಯ. ಈ ನಿಟ್ಟಿನಲ್ಲಿ ಶಾಲಾ-ಕಾಲೇಜುಗಳಲ್ಲಿ ಯೋಗ ಶಿಕ್ಷಣ ಮಹತ್ವದ ಸ್ಥಾನ ಪಡೆದಿದೆ. ಅನೇಕ ವಿದ್ಯಾರ್ಥಿಗಳು, ಯುವಕರು ಮಾತ್ರವಲ್ಲದೆ ಹಿರಿಯರು ಕೂಡಾ ಜಿಲ್ಲೆ, ರಾಜ್ಯ, ರಾಷ್ಟ್ರ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಸಾಧನೆ ಮಾಡಿರುವುದು ನಮ್ಮ ದೇಶದ ಹಿರಿಮೆಯಾಗಿದೆ. ಯೋಗ, ಧ್ಯಾನದ ಮೂಲಕ ನಾವು ಹೃದಯದ ಒತ್ತಡ, ಸ್ನಾಯುಗಳ ಒತ್ತಡ, ನಿದ್ರಾಹೀನತೆ, ಖಿನ್ನತೆ ಮೊದಲಾದವುಗಳಿಂದ ಮುಕ್ತರಾಗಲು ಸಾಧ್ಯ. ಮನಸ್ಸು ಪ್ರಕ್ಷುಬ್ಧಗೊಂಡಾಗ ನಿರಾಳವಾಗಲು ಪ್ರಾಣಾಯಾಮ, ಸರ್ವಾಂಗಾಸನ, ಉತ್ತಾನಾಸನ, ಚಕ್ರಾಸನ, ಭುಜಂಗಾಸನ.. ಸೇರಿದಂತೆ ಅನೇಕ ಯೋಗಾಸನಗಳನ್ನು ಅಭ್ಯಾಸಮಾಡುವುದು ಅಗತ್ಯ. ಯೋಗಾಭ್ಯಾಸಗಳಿಂದ ದೇಹಕ್ಕೆ ವಿಶ್ರಾಂತಿ, ಮನಸ್ಸಿಗೆ ಶಾಂತಿ ದೊರಕಿ ಸಕಾರಾತ್ಮಕ ಚಿಂತನೆ, ಕ್ರಿಯಾಶೀಲತೆ, ರಕ್ತಸಂಚಲನದಲ್ಲಿ ಸಮತೋಲನ ಮಾನಸಿಕ ಸ್ಥಿರತೆ, ಉತ್ತಮ ಜೀರ್ಣಶಕ್ತಿ ಹಾಗೂ ನಿದ್ರಾಹೀನತೆ ಪರಿಹಾರವಾಗುವುದು.

ಜೂ.21ವರ್ಷದ ಅತ್ಯಂತ ದೀರ್ಘ ದಿನವಾಗಿರುವ ಹಿನ್ನೆಲೆಯಲ್ಲಿ ಅಂತರ್ರಾಷ್ಟ್ರೀಯ ಯೋಗ ದಿನಾಚರಣೆಯನ್ನು ವಿಶ್ವದಾದ್ಯಂತ ಆಚರಿಸಲಾಗುವುದು. ಪ್ರತೀ ವರ್ಷ ಒಂದು ಧ್ಯೇಯವಾಕ್ಯವನ್ನು ಘೋಷಿಸಲಾಗುತ್ತದೆ. ಈ ವರ್ಷದ ಧ್ಯೇಯ ವಾಕ್ಯ ‘ಯೋಗ ಫಾರ್ ವಸುದೈವ ಕುಟುಂಬಕಂ’-ಪ್ರತಿ ಅಂಗಳದಲ್ಲಿ ಯೋಗ ಎಂಬಂತೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಆಚರಿಸಲಾಗುವುದು.

ನಾರಾಯಣ ರೈ ಕುಕ್ಕುವಳ್ಳಿ

LEAVE A REPLY

Please enter your comment!
Please enter your name here