ಕಡಬ: ಬಿಳಿನೆಲೆ ಗ್ರಾಮದ ಬೈಲು ಬಿಳಿನೆಲೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರ ವರ್ಗಾವಣೆಗೆ ಶಾಲಾ ಎಸ್.ಡಿ.ಎಂ.ಸಿ., ಪೋಷಕರು ವಿರೋಧ ವ್ಯಕ್ತಪಡಿಸಿರುವ ಘಟನೆ ನಡೆದಿದೆ.
ಈ ಬಗ್ಗೆ ಶಾಲೆಯಲ್ಲಿ ಗುರುವಾರ ಹಾಗೂ ಶುಕ್ರವಾರ ಸಭೆಗಳನ್ನು ನಡೆಸಿ ಶಿಕ್ಷಕರ ವರ್ಗಾವಣೆ ತಡೆ ಹಿಡಿಯುವಂತೆ ಆಗ್ರಹಿಸಿದ್ದಾರೆ. ಮುಂದಿನ ಹೋರಾಟದ ಬಗ್ಗೆ ಚರ್ಚಿಸಿದ್ದಾರೆ. ಗುರುವಾರ ನಡೆದ ಸಭೆಯಲ್ಲಿ ಮಾತನಾಡಿದ ವಿನೀಶ್ ಬಿಳಿನೆಲೆ, ಬೈಲು ಬಿಳಿನೆಲೆ ಶಾಲೆಯಲ್ಲಿ 90ಕ್ಕೂ ಅಧಿಕ ಮಕ್ಕಳಿದ್ದು, ಮೂವರು ಸರಕಾರಿ ಶಿಕ್ಷಕರಿದ್ದಾರೆ. ಆದರೆ ಇದೀಗ ದೈಹಿಕ ಶಿಕ್ಷಣ ಶಿಕ್ಷಕರನ್ನು ವರ್ಗಾವಣೆ ಮಾಡಲಾಗುತ್ತಿದೆ. ಇದಕ್ಕೆ ನಮ್ಮೆಲ್ಲರ ವಿರೋಧ ಇದೆ. 90 ಮಕ್ಕಳಿರುವ ಶಾಲೆಗಳಿಗೂ ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಿಸಬೇಕು. ಇರುವ ಶಿಕ್ಷಕರನ್ನು ವರ್ಗಾವಣೆ ಮಾಡುವುದು ಸರಿಯಲ್ಲ ಎಂದರು. ಮುಂದೆ ವರ್ಗಾವಣೆ ರದ್ದು ಮಾಡದಿದ್ದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸದೇ ಪ್ರತಿಭಟಿಸುವ ಎಚ್ಚರಿಕೆ ನೀಡಿದ್ದಾರೆ. ದುಗ್ಗಪ್ಪಗೌಡ ಸೂಡ್ಲು, ಎಸ್.ಡಿ.ಎಂ.ಸಿ. ಅಧ್ಯಕ್ಷ ಯಶೋಧರ ಪರ್ಲಾ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಉಮೇಶ್ ಪೊಂಬೋಳಿ, ದುಗ್ಗಪ್ಪಗೌಡ ಸೇರಿದಂತೆ ಪೋಷಕರು, ಎಸ್ ಡಿಎಂಸಿಯವರು, ಊರಿನವರು ಉಪಸ್ಥಿತರಿದ್ದರು.
ಮಕ್ಕಳನ್ನು ಕಳುಹಿಸದೇ ಪ್ರತಿಭಟನೆಗೆ ನಿರ್ಧಾರ: ಶುಕ್ರವಾರವೂ ಶಾಲೆಯಲ್ಲಿ ಸೇರಿದ ಪ್ರಮುಖರು ದೈಹಿಕ ಶಿಕ್ಷಣ ಶಿಕ್ಷಕರ ವರ್ಗಾವಣೆ ರದ್ದು ಮಾಡಿ ಬೈಲು ಬಿಳಿನೆಲೆ ಶಾಲೆಯಲ್ಲಿ ಅವರನ್ನು ಉಳಿಸಲು ಮುಂದೆ ನಡೆಸುವ ಹೋರಾಟದ ಬಗ್ಗೆ ಚರ್ಚಿಸಿದರು. ಜೂ.24ರಂದು ಮಕ್ಕಳನ್ನು ಶಾಲೆಗೆ ಕಳುಹಿಸದೇ ಪ್ರತಿಭಟಿಸುವ ನಿರ್ಧಾರಕ್ಕೆ ಪೋಷಕರು ಸಭೆಯಲ್ಲಿ ನಿರ್ಧಾರ ಕೈಗೊಂಡಿದ್ದಾರೆ. ಸಭೆಯಲ್ಲಿ ಶಾಲಾ ಪೋಷಕರು, ಹಿರಿಯ ವಿದ್ಯಾರ್ಥಿಗಳು, ಊರಿನ ಪ್ರಮುಖರು, ಎಸ್.ಡಿ.ಎಂ.ಸಿ. ಯವರು ಉಪಸ್ಥಿತರಿದ್ದರು.