ಬೆಂಗಳೂರು:‘ಗುತ್ತಿಗೆದಾರರಿಂದ ಕಮಿಷನ್ ವಸೂಲಿ ಮಾಡುವ ದಂಧೆಗೆ ನಮ್ಮ ಸರ್ಕಾರದ ಅವಧಿಯಲ್ಲಿ ಸಂಪೂರ್ಣ ಕಡಿವಾಣ ಹಾಕುತ್ತೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳಿಗೆ ಭರವಸೆ ನೀಡಿದ್ದಾರೆ.
ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ನೇತೃತ್ವದಲ್ಲಿ ಗುತ್ತಿಗೆದಾರರ ನಿಯೋಗವೊಂದು ಮುಖ್ಯಮಂತ್ರಿಯವರನ್ನು ಭೇಟಿಮಾಡಿ, ಗುತ್ತಿಗೆದಾರರ ಸಮಸ್ಯೆಗಳ ಕುರಿತು ಚರ್ಚಿಸಿತು.ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿನ ಕಮಿಷನ್ ಹಾವಳಿ ಕುರಿತು ಗುತ್ತಿಗೆದಾರರ ಸಂಘದ ಪ್ರತಿನಿಧಿಗಳು ಮುಖ್ಯಮಂತ್ರಿ ಜೊತೆ ಪ್ರಸ್ತಾಪಿಸಿದ್ದು, ಅದನ್ನು ಮುಂದುವರಿಸಲು ಅವಕಾಶ ನೀಡದಂತೆ ಆಗ್ರಹಿಸಿದರು.ಗುತ್ತಿಗೆದಾರರ ಬೇಡಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ‘ಹಿಂದಿನ ಸರ್ಕಾರದ ಅವಧಿಯಲ್ಲಿನ ಆರ್ಥಿಕ ಅಶಿಸ್ತು ಮತ್ತು ಕಮಿಷನ್ ಹಾವಳಿಯಿಂದ ಸಮಸ್ಯೆಯಾಗಿದೆ.ಅದನ್ನು ಸರಿಪಡಿಸಲು ಸ್ವಲ್ಪ ಕಾಲಾವಲಾಶ ಅಗತ್ಯ.ಆದರೆ ನಮ್ಮ ಸರಕಾರ ಕಮಿಷನ್ ದಂಧೆಗೆ ಸಂಪೂರ್ಣ ಕಡಿವಾಣ ಹಾಕಲಿದೆ’ ಎಂದು ಹೇಳಿದರು.
ಬಿಲ್ ಪಾವತಿಗೆ ಆಗ್ರಹ: ವಿವಿಧ ಇಲಾಖೆಗಳಲ್ಲಿ ಗುತ್ತಿಗೆದಾರರಿಗೆ ರೂ.2೦,೦೦೦ ಕೋಟಿಯಷ್ಟು ಬಿಲ್ ಬಾಕಿ ಇದೆ. ಇದರಿಂದ ಗುತ್ತಿಗೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಾಕಿ ಬಿಲ್ ಪಾವತಿಗೆ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯಾಧ್ಯಕ್ಷ ಕೆಂಪಣ್ಣ ಒತ್ತಾಯಿಸಿದರು.ಹಣಕಾಸು ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿ, ಬಿಲ್ ಪಾವತಿಗೆ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದರು.
ಈ ಸರ್ಕಾರದಲ್ಲಿ ಕಮಿಷನ್ ದಂಧೆ ನಡೆದರೂ ಬಹಿರಂಗ: ಡಿ. ಕೆಂಪಣ್ಣ
‘ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿನ ಕಮಿಷನ್ ದಂಧೆ ವಿರುದ್ಧ ಹೋರಾಟ ನಡೆಸಿದ್ದೆವು.ಈಗಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕಮಿಷನ್ ದಂಧೆ ನಡೆದರೂ ಬಹಿರಂಗಪಡಿಸುತ್ತೇವೆ’ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಹೇಳಿದರು.ಸಂಘದ ಪದಾಧಿಕಾರಿಗಳ ನಿಯೋಗದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಮಾಡಿ ಚರ್ಚಿಸಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.’ಬಾಕಿ ಇರುವ ಬಿಲ್ ಪಾವತಿ ಕುರಿತು ಮನವಿ ಮಾಡಲು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ್ದೆವು.ಹಿಂದಿನ ಸರ್ಕಾರದ ಅವಧಿಯ ಕಮಿಷನ್ ದಂಧೆ ಕುರಿತು ಏನು ಹೇಳಬೇಕಿತ್ತೋ ಅದನ್ನು ಹೇಳಿದ್ದೇವೆ’ ಎಂದರು. ’ಕಾಂಗ್ರೆಸ್ ಸರ್ಕಾರದಲ್ಲಿ ಕಮಿಷನ್ ನಿಗದಿಯಾಗಿದೆ’ ಎಂಬ ಬಿಜೆಪಿ ಮುಖಂಡರ ಆರೋಪದ ಕುರಿತು ಕೇಳಿದಾಗ, ‘ಈ ಸರ್ಕಾರದಲ್ಲಿ ಈವರೆಗೆ ಯಾರೂ ನಮ್ಮ ಬಳಿ ಕಮಿಷನ್ ಕೇಳಿಲ್ಲ. ಯಾರಾದರೂ ಸಚಿವರು ಅಥವಾ ಅಧಿಕಾರಿಗಳು ಕಮಿಷನ್‌ಗೆ ಬೇಡಿಕೆ ಇಟ್ಟರೆ ಅದನ್ನೂ ಬಹಿರಂಗಪಡಿಸುತ್ತೇವೆ’ ಎಂದು ಉತ್ತರಿಸಿದರು.ಹಿಂದಿನ ಸರ್ಕಾರದ ವಿರುದ್ಧದ ಆರೋಪಕ್ಕೆ ದಾಖಲೆ ಒದಗಿಸಿಲ್ಲ ಎಂಬ ಟೀಕೆ ಬಗ್ಗೆ ಕೇಳಿದಾಗ, ‘ಆ ವಿಚಾರ ಈಗ ನ್ಯಾಯಾಲಯದಲ್ಲಿದೆ. ಸೂಕ್ತ ಸಂದರ್ಭದಲ್ಲಿ ಬಹಿರಂಗಪಡಿಸುತ್ತೇವೆ’ ಎಂದರು.