ಸಾಧಕ ವಿದ್ಯಾರ್ಥಿಗಳನ್ನು ಪರಿಚಯಿಸಿದ ಕೀರ್ತಿ ಫಿಲೋಮಿನಾ ಕಾಲೇಜಿಗಿದೆ-ಸತೀಶ್ ನಾಯ್ಕ್
ಪುತ್ತೂರು: ಶಿಕ್ಷಣ ಶಿಲ್ಪಿ ಮೊ.ಪತ್ರಾವೋರವರು ಸ್ಥಾಪಿಸಿದ ಈ ಫಿಲೋಮಿನಾ ವಿದ್ಯಾಸಂಸ್ಥೆಯು ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ, ರಾಜಕೀಯ, ಕ್ರೀಡೆ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಸಾಧಕ ವಿದ್ಯಾರ್ಥಿಗಳನ್ನು ಪರಿಚಯಿಸಿದ ಕೀರ್ತಿ ಈ ಸಂಸ್ಥೆಗಿದೆ ಎಂದು ಆರ್ಯಾಪು ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಹಾಗೂ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿ ಪೋಷಕರಾದ ಸತೀಶ್ ನಾಯ್ಕ್ ಪರ್ಲಡ್ಕರವರು ಹೇಳಿದರು.
ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ದರ್ಬೆ ಫಿಲೋನಗರದ ಸಂತ ಫಿಲೋಮಿನಾ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘ ಹಾಗೂ ರಕ್ಷಕ-ಶಿಕ್ಷಕ ಸಂಘದ ವಾರ್ಷಿಕೋತ್ಸವದ ಅಂಗವಾಗಿ ಫಿಲೋಮಿನಾ ಕಾಲೇಜಿನ ಕ್ರೀಡಾಂಗಣದಲ್ಲಿ ಜೂ.25 ರಂದು ನಡೆದ ವಾರ್ಷಿಕ ಕ್ರೀಡಾಕೂಟವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಫಿಲೋಮಿನಾ ವಿದ್ಯಾಸಂಸ್ಥೆಗೆ ಅನೇಕ ವರ್ಷಗಳ ಇತಿಹಾಸವಿದೆ. ಇಲ್ಲಿ ಕಲಿತ ಅದೆಷ್ಟೋ ವಿದ್ಯಾರ್ಥಿಗಳು ಇಂದು ಸಾರ್ಥಕ ಬದುಕನ್ನು ಕಂಡುಕೊಂಡಿದ್ದಾರೆ ಎನ್ನುವುದು ಸತ್ಯ ಸಂಗತಿಯಾಗಿದೆ. ಅಲ್ಲದೆ ಫಿಲೋಮಿನಾ ಕಾಲೇಜು ಈ ನಿಟ್ಟಿನಲ್ಲಿ ಅದ್ವಿತೀಯವಾದ ಸಾಧನೆಯನ್ನು ಮಾಡಿದೆ. ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘ ಹಾಗೂ ರಕ್ಷಕ ಶಿಕ್ಷಕ ಸಂಘ ಕಾಲೇಜಿನ ಅಭಿವೃದ್ಧಿಯಲ್ಲಿ ಪ್ರಗತಿಪರ ಹೆಜ್ಜೆಯನ್ನಿಟ್ಟಿದೆ ಎಂದು ಹೇಳಿದರು.
ಫಿಲೋಮಿನಾ ಕಾಲೇಜಿನ ಉಪ ಪ್ರಾಂಶುಪಾಲ ಪ್ರೊ.ಗಣೇಶ್ ಭಟ್ ಮಾತನಾಡಿ, ಫಿಲೋಮಿನಾ ಕಾಲೇಜಿನ ಬೆಳವಣಿಗೆಯಲ್ಲಿ ಹಿರಿಯ ವಿದ್ಯಾರ್ಥಿ ಸಂಘ ಹಾಗೂ ರಕ್ಷಕ ಶಿಕ್ಷಕ ಸಂಘ ಬೆನ್ನೆಲುಬಾಗಿ ನಿಂತಿದೆ. ಸಾಕಷ್ಟು ಮಂದಿ ಹಿರಿಯ ವಿದ್ಯಾರ್ಥಿಗಳು ಇಂದು ಉತ್ತಮ ಸ್ಥಾನದಲ್ಲಿದ್ದಾರೆ. ಎಲ್ಲಾ ಹಿರಿಯ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಕಾಲೇಜಿನ ಸರ್ವಾಂಗೀಣ ಅಭಿವೃದ್ದಿಗೆ ಇನ್ನೂ ಹೆಚ್ಚಿನ ಸಹಕಾರ ನೀಡುವಂತಾಗಬೇಕು ಎಂದರು.
ಫಿಲೋಮಿನಾ ಕಾಲೇಜಿನ ಉಪ ಪ್ರಾಂಶುಪಾಲ ಡಾ.ಎ.ಪಿ ರಾಧಾಕೃಷ್ಣ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎ.ಜೆ ರೈ, ಕಾರ್ಯದರ್ಶಿ ತೇಜಸ್ವಿ ಭಟ್, ರಕ್ಷಕ-ಶಿಕ್ಷಕ ಸಂಘದ ಕಾರ್ಯದರ್ಶಿ ಪ್ರಶಾಂತ್ ರೈ, ಫಿಲೋಮಿನಾ ಕಾಲೇಜಿನ ಸಾರ್ವಜನಿಕ ಸಂಪರ್ಕಾಧಿಕಾರಿ ಭಾರತಿ ಎಸ್.ರೈ ಸಹಿತ ನೂರಾರು ಹಿರಿಯ ವಿದ್ಯಾರ್ಥಿಗಳು ಹಾಗೂ ರಕ್ಷಕ-ಶಿಕ್ಷಕ ಸಂಘದ ಸದಸ್ಯರುಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಸ್ವಾಗತಿಸಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎ.ಜೆ ರೈ ವಂದಿಸಿದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರುಗಳಾದ ಎಲ್ಯಾಸ್ ಪಿಂಟೋ ಹಾಗೂ ರಾಜೇಶ್ ಮೂಲ್ಯರವರು ಕ್ರೀಡಾಕೂಟ ಯಶಸ್ವಿಯಾಗಿಸುವಲ್ಲಿ ಸಹಕರಿಸಿದರು.
ಜೂ.27 ಕ್ಕೆ ವಾರ್ಷಿಕೋತ್ಸವ
ಸಂತ ಫಿಲೋಮಿನಾ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘ ಹಾಗೂ ರಕ್ಷಕ-ಶಿಕ್ಷಕ ಸಂಘದ ವಾರ್ಷಿಕೋತ್ಸವವು ಜೂ.27 ಕ್ಕೆ ಸಂಜೆ ಕಾಲೇಜಿನ ಸಿಲ್ವರ್ ಜ್ಯುಬಿಲಿ ಸಭಾಂಗಣದಲ್ಲಿ ನಡೆಯಲಿದೆ. ಮೊದಲಿಗೆ ವಾರ್ಷಿಕ ಮಹಾಸಭೆ, ಬಳಿಕ ಸಭಾ ಕಾರ್ಯಕ್ರಮ, ಮನೋರಂಜನಾ ಕಾರ್ಯಕ್ರಮ ಜರಗಲಿದ್ದು ಎಲ್ಲಾ ಹಿರಿಯ ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಪೋಷಕರು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘ ಹಾಗೂ ರಕ್ಷಕ ಶಿಕ್ಷಕ ಸಂಘದ ಪ್ರಕಟಣೆ ತಿಳಿಸಿದೆ.
ಕಾಲೇಜಿನ ಹಿರಿಯ ವಿದ್ಯಾರ್ಥಿಗಳಿಗೆ ಹಾಗೂ ರಕ್ಷಕ-ಶಿಕ್ಷಕ ಸಂಘದ ಪುರುಷರಿಗೆ ವಾಲಿಬಾಲ್, ಶಾಟ್ ಫುಟ್ ಮತ್ತು ಮಹಿಳೆಯರಿಗೆ ತ್ರೋಬಾಲ್, ಶಾಟ್ ಫುಟ್ ಪಂದ್ಯಾಟವನ್ನು ಆಯೋಜಿಸಲಾಗಿತ್ತು.