ಮಾದಕ ವಸ್ತುಗಳಿಗೆ ಬಲಿಯಾಗದಿರಿ- ಬದುಕು ಬರ್ಬಾದ್ ಆದೀತು ಎಚ್ಚರ

0

ಇಂದು ವಿಶ್ವ ಮಾದಕ ವಸ್ತು ನಿರ್ಮೂಲನಾ ದಿನ..

@ ಯೂಸುಫ್ ರೆಂಜಲಾಡಿ


ಪುತ್ತೂರು: ನಾಗರಿಕ ಸಮಾಜದ ಪ್ರಮುಖ ಸಮಸ್ಯೆಗಳಲ್ಲೊಂದಾಗಿರುವ ಮಾದಕ ವ್ಯಸನವು ಲಕ್ಷಾಂತರ ಜನರ ಭವಿಷ್ಯವನ್ನು, ಬದುಕನ್ನು ನುಚ್ಚು ನೂರು ಮಾಡಿದೆ. ಧೂಮಪಾನ, ಮದ್ಯಪಾನ, ಗುಟ್ಕಾಗಳಿಂದ ಮೋಜಿಗಾಗಿ ಪ್ರಾರಂಭವಾಗುವ ಮಾದಕ ವ್ಯಸನದ ಚಟ ಕ್ರಮೇಣ ಎಲ್ಲ ವಿಧದ ಡ್ರಗ್ಸ್‌ಗಳಿಗೂ ಜನರನ್ನು ಬಲಿಬೀಳುವಂತೆ ಮಾಡುತ್ತದೆ. ಸಂಘ ಸಂಸ್ಥೆಗಳು, ವಿದ್ಯಾರ್ಥಿಗಳು ಈ ದಿಸೆಯಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಸುತ್ತಿದ್ದರೂ ವ್ಯಾಪಕವಾಗಿ ಬೇರೂರಿರುವ ಅದನ್ನು ಸಮರ್ಪಕವಾಗಿ ಮಟ್ಟ ಹಾಕುವುದು ಅಷ್ಟು ಸುಲಭದ ಮಾತಲ್ಲ. ಭಾರತ ಸೇರಿದಂತೆ ಮುಂದುವರಿದ ರಾಷ್ಟ್ರಗಳಲ್ಲೂ ಮಾದಕ ವ್ಯಸನಕ್ಕೆ ಬಲಿ ಬೀಳುವ ಯುವಜನತೆ ಯಥೇಚ್ಚವಾಗಿದ್ದಾರೆ. ಅದಕ್ಕಾಗಿಯೇ ಜೂ.೨೬ರಂದು ಅಂತರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನವನ್ನಾಗಿ ಆಚರಿಸಲಾಗುತ್ತಿದೆ.

ಕಣ್ಮುಚ್ಚಿ ನಡೆಯುತ್ತಿದೆ `ಡ್ರಗ್ಸ್ ಮಾಫಿಯಾ’…!
ಸಮಾಜದ ಸ್ವಾಸ್ಥ್ಯ ಹದಗೆಡಿಸುತ್ತಿರುವ, ತೆರೆಮರೆಯಲ್ಲಿ ವ್ಯಾಪಕವಾಗಿ ಹಬ್ಬಿಕೊಂಡಿರುವ ಮಾದಕ ವಸ್ತುಗಳ ಕಾನೂನು ಬಾಹಿರ ದಂಧೆಗೆ ಕಡಿವಾಣ ಹಾಕಬೇಕಿದೆ. ಪೊಲೀಸ್ ಇಲಾಖೆ ಕೆಲವೊಮ್ಮೆ ಇಂತಹ ಪ್ರಕರಣಗಳನ್ನು ಅಲ್ಲಲ್ಲಿ ಬೇಧಿಸುತ್ತದೆಯಾದರೂ ಪರಿಣಾಮಕಾರಿಯಾಗಿ ಡ್ರಗ್ಸ್ ಮಾಫಿಯಾ ವಿರುದ್ದ ಕಾರ್ಯಾಚರಿಸಲು ಸಾಧ್ಯವಾಗಿಲ್ಲ. ಗಾಂಜಾ ಸಾಗಾಟದಂತಹ ಕೆಲವೊಂದು ಪ್ರಕರಣಗಳನ್ನು ಆಗಾಗ ಪೊಲೀಸರು ಪತ್ತೆ ಹಚ್ಚುವ ಸಂಭವಗಳು ನಡೆಯುತ್ತಿವೆಯಾದರೂ ಅವುಗಳ ಮೂಲ ಪತ್ತೆ ಹಚ್ಚಿ ಅವರುಗಳಿಗೆ ಶಾಶ್ವತ ಇತಿಶ್ರೀ ಹಾಡಲು ಪೊಲೀಸರಿಗೂ ಸಾಧ್ಯವಾದಂತಿಲ್ಲ. ಡ್ರಗ್ಸ್ ಜಾಲವೂ ಅತ್ಯಂತ ವ್ಯವಸ್ಥಿತವಾಗಿ ಕಾರ್ಯಾಚರಿಸುತ್ತಿದ್ದು ಕಾನೂನಿನ ಕಣ್ಣನ್ನು ತಪ್ಪಿಸಿ ತಮ್ಮ ಕದಂಭ ಬಾಹುವನ್ನು ವಿಸ್ತರಿಸಿಕೊಳ್ಳುತ್ತಲೇ ಇದೆ.

ಮೋಜಿಗಾಗಿ ಆರಂಭ:
ಮೋಜಿಗಾಗಿ, ಟೈಂಪಾಸ್‌ಗಾಗಿ ಪ್ರಾರಂಭಗೊಳ್ಳುವ ಮಾದಕ ವ್ಯಸನದಿಂದ ನಂತದ ದೂರವಾಗಬೇಕೆಂದು ಪಣ ತೊಟ್ಟರೂ ಅದಕ್ಕೆ ಅಡಿಕ್ಟ್ ಆಗಿರುವುದರಿಂದ ಅದರಿಂದ ಹೊರಬರಲು ಸಾಧ್ಯವಾಗುವುದಿಲ್ಲ. ಮಾದಕ ಚಟ ಎನ್ನುವುದು ಒಬ್ಬ ವ್ಯಕ್ತಿಯಿಂದ ಹಿಡಿದು ಆತನ ಕುಟುಂಬ, ಸಂಸಾರ, ಮನೆ ಮಠ ಹೀಗೆ ಎಲ್ಲದರ ನಾಶಕ್ಕೂ ಅದು ಕಾರಣವಾಗುತ್ತದೆ. ಮಾದಕ ವ್ಯಸನವೆನ್ನುವುದು ಒಂದು ಪಿಡುಗಾಗಿದೆ. ಒಳ್ಳೆಯವರಾಗಿದ್ದಾಗ ಆರಂಭಿಸುವ ಸಣ್ಣ ತಪ್ಪು ಅವರನ್ನು ಕ್ರಮೇಣ ಕೆಟ್ಟವರನ್ನಾಗಿ ರೂಪಿಸುತ್ತದೆ. ವ್ಯಸನದ ದಾಸರಾದವರಿಗೆ ಹಿರಿಯರ ಗೌರವ, ಪೋಷಕರ ಬುದ್ದಿವಾದದ ಮಾತು, ಸಮಾಜದಲ್ಲಿರುವ ತಮ್ಮ ಗೌರವ, ಸಮಾಜದಲ್ಲಿರುವ ಕಾನೂನುಗಳು ಎಲ್ಲವೂ ನಗಣ್ಯವಾಗಿರುತ್ತದೆ. ಮಾದಕ ವ್ಯಸನಗಳ ಅಭ್ಯಾಸವಿರುವವರು ಇನ್ನಾದರೂ ಎಚ್ಚೆತ್ತುಕೊಂಡು ತಮ್ಮ ಬದುಕು ಬದಲಿಸಬೇಕಾಗಿದೆ.

ಹೃದಯ ಕರಟಿಸುತ್ತೆ ಸಿಗರೇಟ್…!
ಇನ್ನು ಅನೇಕರು ಜೀವನದ ಎಂಜಾಯ್‌ಗಾಗಿ ಸಿಗರೇಟ್‌ಗೇ ಹೆಚ್ಚು ಮಾರು ಹೋಗಿರುತ್ತಾರೆ. ಸಿಗರೇಟ್, ಬೀಡಿಯಂತಹ ಧೂಮಪಾನ ಮನುಷ್ಯನ ಹೃದಯವನ್ನು ಆವರಿಸಿ ಕ್ಯಾನ್ಸರ್‌ನಂತಹ ಮಾರಕ ರೋಗ ಮತ್ತು ಇನ್ನಿತರ ರೋಗಗಳಿಗೆ ಕಾರಣವಾಗುತ್ತದೆ. ಧೂಮಪಾನ ಸೇವನೆ ಕ್ಯಾನ್ಸರ್‌ಗೆ ಕಾರಣ ಎಂದು ಗೊತ್ತಿದ್ದೂ ಅದನ್ನು ಸೇವನೆ ಮಾಡುವವರು ಇನ್ನಾದರೂ ಚಿಂತಿಸಬೇಕಿದೆ. ಮಾದಕ ವ್ಯಸನಕ್ಕೆ ಅಂಟಿಕೊಂಡ ಸಾವಿರಾರು ಯುವಕರ ಬದುಕು ಈಗಾಗಲೇ ಕತ್ತಲೆಗೆ ಸರಿದಿದೆ. ಮಾದಕ ವ್ಯಸನಗಳು ಒಂದು ರೀತಿಯ ಮಾರಕ ರೋಗವಾಗಿದ್ದು ಅದರಿಂದ ಹೊರಬರುವ ಬಗ್ಗೆ ಪ್ರತಿಜ್ಞೆ ಕೈಗೊಳ್ಳಬೇಕಾಗಿದೆ.

ಮಾಯವಾದ ಕೋಟ್ಪಾ ಕಾಯ್ದೆ:
ಮಾದಕ ವ್ಯಸನಗಳಿಗೆ ಕಡಿವಾಣ ಹಾಕಲು ಸರಕಾರವು ಕೆಲವು ವರ್ಷಗಳ ಹಿಂದೆ ಕೋಟ್ಪಾ ಕಾಯ್ದೆಯನ್ನು ಜಾರಿಗೆ ತಂದು ಅಲ್ಲಲ್ಲಿ ಬೋರ್ಡ್ ಹಾಕಿತ್ತು. ಪ್ರಾರಂಭದಲ್ಲಿ ಇದು ಅಲ್ಪ ಯಶಸ್ಸನ್ನೂ ಕಂಡಿತ್ತು. ಕ್ರಮೇಣ ಆ ಕಾಯ್ದೆ ಸರಿಯಾಗಿ ಅನುಷ್ಠಾನಗೊಳ್ಳದೇ ಸದ್ದಿಲ್ಲದೇ ತೆರೆಮರೆಗೆ ಸರಿದಿತ್ತು. ಈಗ ಬೋರ್ಡೂ ಇಲ್ಲ, ಕಾಯ್ದೆಯೂ ಇಲ್ಲ. ಅದೆಲ್ಲವೂ ಈಗ ನೆನಪು ಮಾತ್ರ.

ವಿದ್ಯಾರ್ಥಿಗಳ ಬಗ್ಗೆ ನಿಗಾ ಇರಲಿ:
ಹದಿಹರೆಯದ ಕಾಲೇಜು ವಿದ್ಯಾರ್ಥಿಗಳು ಕೂಡಾ ಗಾಂಜಾ, ಡ್ರಗ್ಸ್‌ನಂತಹ ಅಮಲುಯುಕ್ತ ಪದಾರ್ಥಗಳ ಕಡೆ ಆಕರ್ಷಿತರಾಗುತ್ತಾರೆ ಎನ್ನವುದು ದುರಂತ. ಮಾದಕ ವ್ಯಸನದ ಹವ್ಯಾಸ ಒಮ್ಮೆ ಶುರುವಾದರೆ ನಂತರ ಚಟವಾಗಿ ಬೆಳೆಯುತ್ತದೆ. ಅದನ್ನು ವರ್ಜಿಸಬೇಕೆಂದು ಎಷ್ಟೇ ಪ್ರಯತ್ನಪಟ್ಟರೂ ಸಾಧ್ಯವಾಗುತ್ತಿಲ್ಲ. ಈ ಕುರಿತು ವಿದ್ಯಾರ್ಥಿ ಪೋಷಕರೂ, ನಾಗರಿಕ ಸಮಾಜವೂ ಎಚ್ಚರಿಕೆ ವಹಿಸಬೇಕಾಗಿದೆ. ಇತ್ತೀಚೆಗೆ ಮಾದಕ ವಸ್ತು ಸಾಗಾಟ ಮತ್ತು ಸೇವನೆಯ ಕಾರಣಕ್ಕೆ ಹಲವು ಕಡೆ ವಿದ್ಯಾರ್ಥಿಗಳು ಖಾಕಿ ಬಲೆಗೆ ಬಿದ್ದಿರುವ ಪ್ರಸಂಗವೂ ನಡೆದಿದೆ.

LEAVE A REPLY

Please enter your comment!
Please enter your name here