ಉಪ್ಪಿನಂಗಡಿ: ಇಲ್ಲಿನ ವಲಯ ಅರಣ್ಯ ವ್ಯಾಪ್ತಿಯ ಬೆಳ್ತಂಗಡಿ ತಾಲೂಕಿನ ಸರಳೀಕಟ್ಟೆ ಹೊಸಮುಗೇರು ಎಂಬಲ್ಲಿ ಬೀದಿ ನಾಯಿಯ ದಾಳಿಗೆ ಸಿಲುಕಿ ಜಿಂಕೆಯೊಂದು ಸಾವನ್ನಪ್ಪಿದ ಘಟನೆ ಶನಿವಾರ ಸಂಭವಿಸಿದೆ.
ಸುಮಾರು 2 ವರ್ಷ ಪ್ರಾಯದ ಗಂಡು ಜಿಂಕೆ ಮೇಯುತ್ತಾ ಕಾಡಿನಂಚಿಗೆ ಬಂದ ವೇಳೆ ಬೀದಿ ನಾಯಿಯೊಂದು ಜಿಂಕೆಯ ಮೇಲೆ ದಾಳಿ ನಡೆಸಿತ್ತು. ನಾಯಿಯ ದಾಳಿಗೆ ಸಿಲುಕಿ ಗಂಭೀರ ಗಾಯಗೊಂಡಿದ್ದ ಜಿಂಕೆಯನ್ನು ಸ್ಥಳೀಯರು ಕಂಡು, ಅರಣ್ಯ ಇಲಾಖಾಧಿಕಾರಿಗಳಿಗೆ ಮಾಹಿತಿ ನೀಡಿದರು.
ತಕ್ಷಣವೇ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖಾಽಕಾರಿಗಳು ಗಾಯಗೊಂಡ ಜಿಂಕೆಯನ್ನು ಸಮೀಪದ ಪಶು ಚಿಕಿತ್ಸಾಲಯಕ್ಕೆ ಕೊಂಡೊಯ್ದರಾದರೂ ಆ ವೇಳೆಗೆ ಜಿಂಕೆ ಸಾವನ್ನಪ್ಪಿತ್ತು.
ಉಪ ಅರಣ್ಯಾಧಿಕಾರಿಗಳಾದ ಸಂದೀಪ್, ಕ್ಯಾರೆಲ್ ಮೊಂತೇರೋ , ಅರಣ್ಯ ವೀಕ್ಷಕ ಪ್ರತಾಪ, ವಾಹನ ಚಾಲಕ ಕಿಶೋರ್ ರವರ ತಂಡ ಜಿಂಕೆಯ ಮೃತ ದೇಹವನ್ನು ಅರಣ್ಯ ಇಲಾಖಾ ಡಿಪೋ ಇರುವ ಮಣ್ಣಗುಂಡಿ ಎಂಬಲ್ಲಿ ತೆಗೆದುಕೊಂಡು ಹೋಗಿ ಅಂತ್ಯ ಸಂಸ್ಕಾರ ನೆರವೇರಿಸಿದರು.