ಅನಂತಾಡಿ ಬಾಕಿಲದಲ್ಲಿ ದಂಪತಿ ಆತ್ಮಹತ್ಯೆಗೆತ್ನಿಸಿ ಪತಿ ಮೃತಪಟ್ಟ ಪ್ರಕರಣ – ಅನ್ಯ ವ್ಯಕ್ತಿಯೊಂದಿಗೆ ಸತಿಗಿದ್ದ ಸ್ನೇಹಾಚಾರವೇ ಘಟನೆಗೆ ಕಾರಣ – ಪ್ರಕರಣ ದಾಖಲು

0

ವಿಟ್ಲ: ಬಂಟ್ವಾಳ ತಾಲೂಕಿನ ಅನಂತಾಡಿ ಗ್ರಾಮದ ಬಾಕಿಲ ಎಂಬಲ್ಲಿ ಜು.1ರಂದು ರಾತ್ರಿ ದಂಪತಿ ಮನೆಯೊಳಗೆ ನೇಣುಬಿಗಿದು ಆತ್ಮಹತ್ಯೆಗೆ ಯತ್ನಿಸಿ ಪತಿ ಮೃತಪಟ್ಟು ಪತ್ನಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಘಟನೆಗೆ ಸಂಬಂಧಿಸಿದಂತೆ ಮೃತ ವ್ಯಕ್ತಿಯ ಸಹೋದರ ನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ವ್ಯಕ್ತಿಯ ಪತ್ನಿಗೆ ಅನ್ಯವ್ಯಕ್ತಿಯೊಂದಿಗಿದ್ದ ಸ್ನೇಹಾಚಾರವೇ ಆತ್ಮಹತ್ಯೆಗೆ ಕಾರಣವೆನ್ನಲಾಗಿದೆ.
ಮೂಲತಃ ಕಡಬ ತಾಲೂಕು ಹಳೆನೇರೆಂಕಿ ಗ್ರಾಮದ ಬರಂಬೋಡಿ ನಿವಾಸಿ ಅಣ್ಣಿ ಪೂಜಾರಿಯವರ ಪುತ್ರ, ಬಂಟ್ವಾಳ ತಾಲೂಕಿನ ಅನಂತಾಡಿ ಗ್ರಾಮದ ಬಾಕಿಲದಲ್ಲಿ ವಾಸವಾಗಿದ್ದ ಪ್ರತಾಪ್ (35 ವ.) ಮೃತಪಟ್ಟವರು. ಅವರ ಪತ್ನಿ ವೀಣಾ (32 ವ.) ಗಂಭೀರ ಸ್ಥಿತಿಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಡಬ ತಾಲೂಕು ಹಳೆನೇರಂಕಿ ಬರಂಬೋಡಿ ನಿವಾಸಿ ಅಣ್ಣಿ ಪೂಜಾರಿ ರವರ ಪುತ್ರ ಪ್ರದೀಪ್ ಎ.ರವರು ಪ್ರಕರಣದ ದೂರುದಾರರಾಗಿದ್ದಾರೆ. ಜು.1ರಂದು ರಾತ್ರಿ 7 ಗಂಟೆ ಸುಮಾರಿಗೆ ಅನಂತಾಡಿ ಗ್ರಾಮದ ಬಾಕಿಲದ ಮನೆಯಲ್ಲಿ ಈ ಘಟನೆ ಸಂಭವಿಸಿದೆ. ಮನೆಯಿಂದ ಮಕ್ಕಳು ಅಳುತ್ತಿರುವ ಶಬ್ದಕೇಳಿ ನೆರೆಮನೆಯವರು ಬಂದು ನೋಡಿದಾಗ ದಂಪತಿ ಊಟದ ಕೋಣೆಯ ಸಿಲಿಂಗ್ ಫ್ಯಾನಿಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಸ್ಥಳೀಯರು ಸೇರಿಕೊಂಡು ದಂಪತಿಯನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆತಂದರಾದರೂ ಆ ವೇಳೆಗಾಗಲೇ ಪ್ರತಾಪ್ ರವರು ಮೃತಪಟ್ಟಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ವೀಣಾರವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಮೃತ ಪ್ರತಾಪ್ ಅವರ ಪತ್ನಿ ವೀಣಾರವರಿಗೆ ವ್ಯಕ್ತಿಯೋರ್ವರೊಂದಿಗಿನ ಸ್ನೇಹಾಚಾರಕ್ಕೆ ಸಂಬಂಧಿಸಿದಂತೆ ಇಬ್ಬರೊಳಗೆ ಆಗಾಗ ಜಗಳ ನಡೆಯುತ್ತಿದ್ದು, ಇದೇ ವಿಚಾರದಿಂದ ಮನನೊಂದು ಪ್ರತಾಪ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಲ್ಲರೊಂದಿಗೂ ಅನ್ಯೋನ್ಯವಾಗಿದ್ದ ಪ್ರತಾಪ್:ಎಲ್ಲರೊಂದಿಗೂ ಆತ್ಮೀಯತೆಯಿಂದಿದ್ದ ಪ್ರತಾಪ್ ಎಲ್ಲರಿಗೂ ಅಚ್ಚುಮೆಚ್ಚಿನ ವ್ಯಕ್ತಿಯಾಗಿದ್ದರು. ಮಂಗಳೂರು – ಪುತ್ತೂರು ಮಧ್ಯೆ ಸಂಚರಿಸುವ ಖಾಸಗಿ ಬಸ್ಸಿನಲ್ಲಿ ಚಾಲಕನಾಗಿ ಕೆಲಸಮಾಡಿಕೊಂಡಿದ್ದು, ಕೆಲ ವರುಷಗಳ ಹಿಂದೆ ಬಜಪೆ ಕೆಂಜಾರು ನಿವಾಸಿ ವೀಣಾರನ್ನು ವಿವಾಹವಾಗಿದ್ದರು. ದಂಪತಿಗೆ ನಾಲ್ಕು ವರ್ಷದ ಅವಳಿ – ಜವಳಿ ಮಕ್ಕಳಿದ್ದಾರೆ. ಕೆಲ ಸಮಯಗಳಿಂದ ವೀಣಾರಿಗೆ ಬೇರೊಂದು ವ್ಯಕ್ತಿಯೊಂದಿಗೆ ಸ್ನೇಹಾಚಾರವಿದ್ದು, ಅದೇ ವಿಚಾರಕ್ಕೆ ಸಂಬಂಧಿಸಿ ಮನೆಯಲ್ಲಿ ಆಗಾಗ ಇಬ್ಬರೊಳಗೆ ಜಗಳ ನಡೆಯುತ್ತಿತ್ತು. ಇದೇ ಘಟನೆಯಿಂದ ಬೇಸತ್ತು ಮರ್ಯಾದೆಗೆ ಅಂಜಿ ಪ್ರತಾಪ್ ರವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ.
ಚಿಕ್ಕಂದಿನಿಂದಲೇ ಬಾಕಿಲದಲ್ಲಿದ್ದ ಪ್ರತಾಪ್: ಬಾಕಿಲ ದಿ. ನಾರಾಯಣ ಪೂಜಾರಿಯವರ ಮಗಳ ಮಗನಾಗಿರುವ ಪ್ರತಾಪ್ ಚಿಕ್ಕಂದಿನಿಂದಲೇ ಬಾಕಿಲದ ಅಜ್ಜನ ಮನೆಯಲ್ಲೇ ಇದ್ದು, ಅಲ್ಲೇ ಕಲಿತಿದ್ದರು. ನಾರಾಯಣ ಪೂಜಾರಿಯವರು ಮೃತರಾದ ಬಳಿಕ ಆ ಮನೆಯಲ್ಲಿ ಪ್ರತಾಪ್ ಪತ್ನಿಯೊಂದಿಗೆ ವಾಸವಾಗಿದ್ದರು. ಇಲ್ಲಿನವರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು.
ಪ್ರದೀಪ್ ರವರು ನೀಡಿದ ದೂರಿನಲ್ಲೇನಿದೆ: ಬಂಟ್ವಾಳ ತಾಲೂಕು ಅನಂತಾಡಿ ಗ್ರಾಮದ ಬಾಕಿಲ ಎಂಬಲ್ಲಿ ನನ್ನ ತಮ್ಮ ಪ್ರತಾಪ್ ಎಂಬವರು ಆತನ ಪತ್ನಿ ವೀಣಾರವರೊಂದಿಗೆ ವಾಸವಾಗಿದ್ದು, ವೀಣಾರವರು ಯಾವುದೋ ವ್ಯಕ್ತಿಯೊಂದಿಗೆ ಕೆಲವು ಸಮಯದಿಂದ ಮೊಬೈಲ್ ಪೋನ್‌ನಿಂದ ಮೆಸೇಜ್ ಮಾಡುತ್ತಿದ್ದುದರಿಂದ ಗಂಡ-ಹೆಂಡತಿಯೊಳಗೆ ಆಗಾಗ ಜಗಳವಾಗುತ್ತಾ ಸರಿಯಾಗಿ ಸಂಸಾರ ನಡೆಯದೆ ಇದ್ದುದರಿಂದ ನನ್ನ ತಮ್ಮ ಪ್ರತಾಪ್‌ರವರ ಮಾನಸಿಕ ನೆಮ್ಮದಿ ಹಾಳಾಗಿದ್ದು ಇದೇ ಕಾರಣದಿಂದ ಜು.1ರಂದು ರಾತ್ರಿ ಮನೆಯ ಊಟದ ಕೋಣೆಯ ಸಿಲಿಂಗ್ ಫ್ಯಾನಿಗೆ ನೈಲಾನ್ ಸೀರೆಯನ್ನು ಕಟ್ಟಿ ಅದರ ಇನ್ನೊಂದು ತುದಿಯನ್ನು ನೇಣು ಕುಣಿಕೆಯನ್ನಾಗಿ ಮಾಡಿಕೊಂಡು ಕುತ್ತಿಗೆಗೆ ನೇಣು ಬಿಗಿದುಕೊಂಡು ನೇತಾಡುತ್ತಿರುವುದನ್ನು ಕಂಡ ಅವರ ಪತ್ನಿ ವೀಣಾರವರು ಇಸ್ತ್ರಿಪೆಟ್ಟಿಗೆಯ ವಯರ್‌ನ್ನು ಅದೇ ಫ್ಯಾನಿಗೆ ಕಟ್ಟಿ ಅದರ ಇನ್ನೊಂದು ತುದಿಯನ್ನು ನೇಣು ಕುಣಿಕೆಯನ್ನು ಮಾಡಿಕೊಂಡು ಕುತ್ತಿಗೆಗೆ ನೇಣು ಹಾಕಿಕೊಂಡ ವಿಚಾರವನ್ನು ತಿಳಿದ ನೆರೆಕರೆಯವರು ಪುತ್ತೂರು ಪ್ರಗತಿ ಆಸ್ಪತ್ರಗೆ ಕರೆದುಕೊಂಡು ಬಂದು ಚಿಕಿತ್ಸೆ ನೀಡಿದಾಗ ನನ್ನ ತಮ್ಮ ಪ್ರತಾಪರವರು ಮೃತಪಟ್ಟಿದ್ದು ವೀಣಾರವರನ್ನು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಕೆಎಂಸಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪ್ರತಾಪ್‌ರವರ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ ಎಂದು ಮೃತರ ಸಹೋದರ ಪ್ರದೀಪ್‌ರವರು ವಿಟ್ಲ ಠಾಣಾ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಮಹಜರು ನಡೆಸಿ ಸಂಬಂಧಿಕರಿಗೆ ಬಿಟ್ಟು ಕೊಡಲಾಗಿದೆ.

LEAVE A REPLY

Please enter your comment!
Please enter your name here