ಹರೀಶ್ ಪೂಂಜರ ಆರೋಪಗಳಿಗೆ, ಬೆದರಿಕೆಗೆ ತಕ್ಕ ಉತ್ತರವನ್ನು ಜನರ ಮುಂದೆ ನೀಡಲಿದ್ದೇನೆ

0

ಸುದ್ದಿ ಬಿಡುಗಡೆಯ ಭ್ರಷ್ಟಾಚಾರದ ವಿರುದ್ಧದ ಹೋರಾಟ ನಿಮ್ಮ ಅಸಮಾಧಾನಕ್ಕೆ ಕಾರಣವೇ?

ಪತ್ರಿಕೆ ಹೇಗೆ ನಡೆಸಬೇಕೆಂದು ಜನರಲ್ಲಿ ಕೇಳಲಿದ್ದೇನೆ-ಡಾ. ಶಿವಾನಂದ

ಪುತ್ತೂರು: ಬೆಳ್ತಂಗಡಿ ಶಾಸಕ ಹರೀಶ್ ಪೂಂಜರು ಬೆಳ್ತಂಗಡಿಯ ಸುದ್ದಿ ಬಿಡುಗಡೆ ಪತ್ರಿಕೆ’ ಬಗ್ಗೆ ಹೇಳಿದ ಮಾತುಗಳನ್ನು ಕೇಳಿದ ಮತ್ತು ನೋಡಿದ ಜನರಿಗೆ ವಿಷಯವು ಪೂರ್ಣವಾಗಿ ಅರ್ಥವಾಗುವಂತಹ ಉತ್ತರವನ್ನು ಮುಂದಕ್ಕೆ ಪತ್ರಿಕೆಯಲ್ಲಿ ಅಥವಾ ಬಹಿರಂಗ ಚರ್ಚೆಗೆ ಆಹ್ವಾನಿಸುವ ಮೂಲಕ ನೀಡಲಿದ್ದೇನೆ. ಅದಕ್ಕೆ ಪೂರ್ವಭಾವಿಯಾಗಿ ತಯಾರಿ ನಡೆಸಲು ಪೂಂಜರವರ ಮುಂದೆ ಕೆಲವು ಪ್ರಶ್ನೆಗಳನ್ನು ನೀಡುತ್ತಿದ್ದೇನೆ.

ಪೂಂಜರೇ,

1) ಸುದ್ದಿ ಪತ್ರಿಕೆ ದಾರಿ ತಪ್ಪಿದ್ದರೆ ಅದು ಏನು ಮತ್ತು ಹೇಗೆ ಎಂದು ವಿವರವಾಗಿ ನೀಡುವುದು, ಬಹಿರಂಗ ಪಡಿಸುವುದು. ಅದರಿಂದ ಸುದ್ದಿ ಪತ್ರಿಕೆಗೆ ತಿದ್ದಿಕೊಳ್ಳಲು ಅಥವಾ ಅದರ ಮೇಲೆ ಜನರಿಗೆ ಸೂಕ್ತ ಕ್ರಮ ಕೈಗೊಳ್ಳಲು ಸಹಾಯವಾಗುತ್ತದೆಯಲ್ಲವೇ?

2) ಭ್ರಷ್ಟಾಚಾರದ ಅಧಿಕಾರಿಗಳನ್ನು ಉತ್ತಮ ಸೇವೆ ಮಾಡುವವರೆಂದು ಗುರುತಿಸಿದ್ದೀರಿ ಎಂದಿದ್ದೀರಿ. ಅದು ನಮ್ಮ ಆಯ್ಕೆಯಾಗಿರಲಿಲ್ಲ, ಜನರ ಆಯ್ಕೆಯನ್ನು ಪ್ರಕಟಿಸಿದ್ದೆವು. ಅವರು ಭ್ರಷ್ಟಾಚಾರಿಗಳೆಂದು ತಮಗೆ ಗೊತ್ತಿದ್ದರೆ ಅವರ ಮೇಲೆ ಕ್ರಮ ಕೈಗೊಳ್ಳದೆ ಶಾಸಕರಾದ ತಾವು ಸುಮ್ಮನೆ ಇದ್ದದ್ದು ಯಾಕೆ? ಅವರ ಹೆಸರನ್ನು ಭ್ರಷ್ಟಾಚಾರಿಗಳೆಂದು ಅಂದೇ ನೀಡಿದ್ದರೆ ಅದನ್ನು ಪ್ರಕಟಿಸುತ್ತಿದ್ದೆವು. ಈಗಲೂ ಕಾಲ ಮಿಂಚಿಲ್ಲ. ಭ್ರಷ್ಟಾಚಾರಿಗಳಾದ ಅವರ ಹೆಸರನ್ನು ನೀಡಿದರೆ ಫೊಟೋ ಸಮೇತ ಪ್ರಕಟಿಸುತ್ತೇವೆ. ದಯವಿಟ್ಟು ನೀಡುತ್ತೀರಾ? ಶಾಸಕರಾಗಿ ಇನ್ನು ಮುಂದಕ್ಕಾದರೂ ಅವರ ಮೇಲೆ ಕ್ರಮ ಕೈಗೊಳ್ಳುತ್ತೀರಾ?

3) ಸುದ್ದಿ ಬಿಡುಗಡೆಯ ಭ್ರಷ್ಟಾಚಾರದ ವಿರುದ್ಧದ ಹೋರಾಟ ನಿಮ್ಮ ಅಸಮಾಧಾನಕ್ಕೆ ಕಾರಣವೇ? ಆ ಹೋರಾಟದಿಂದ ನಿಮಗೇನಾದರೂ ತೊಂದರೆಯಾಗಿದೆಯೇ?

4) ಸುದ್ದಿ ಬಿಡುಗಡೆ ಜನರ ದಾರಿ ತಪ್ಪಿಸುತ್ತಿದೆ, ಜನ ಅದಕ್ಕೆ ತಕ್ಕ ಉತ್ತರ ನೀಡುತ್ತಾರೆ’ ಎಂದರೆ ಏನು? ಅದರಲ್ಲಿ ನಿಮ್ಮ ಮತ್ತು ನಿಮ್ಮ ಬಳಗದ ಪಾತ್ರವೇನು? ನಮ್ಮ ಮತ್ತು ಸಿಬ್ಬಂದಿಗಳ ರಕ್ಷಣೆಗಾಗಿಯಾದರೂ ಆ ಬಗ್ಗೆ ವಿವರಗಳು ಬೇಕು.

5) ಸುದ್ದಿ ಬಿಡುಗಡೆ ಪತ್ರಿಕೆ’ ಹೆಚ್ಚು ಜನರನ್ನು ತಲುಪುತ್ತಿದೆಯೇ ಅಥವಾ ತಮ್ಮ (ಪೂಂಜಾ) ಬಳಗದ ಪ್ರಾಯೋಜಕತ್ವದಸುದ್ದಿ ಉದಯ ಪತ್ರಿಕೆ’ ಹೆಚ್ಚು ಜನರನ್ನು ತಲುಪುತ್ತಿದೆಯೇ? ಯಾವುದರ ಪ್ರಸಾರ ಸಂಖ್ಯೆ ಜಾಸ್ತಿ ಇದೆ. ಬೆಳ್ತಂಗಡಿ ತಾಲೂಕಲ್ಲಿ ಪ್ರಸಾರದಲ್ಲಿರುವ ಎಲ್ಲಾ ಪತ್ರಿಕೆಗಳಲ್ಲಿ ಅತೀ ಹೆಚ್ಚು ಪ್ರಸಾರದಲ್ಲಿರುವ ಪತ್ರಿಕೆ ಯಾವುದು ಎಂದು ಹೇಳಬಲ್ಲಿರಾ? ಶಾಸಕರಾಗಿ ಅದನ್ನು ತಿಳಿದುಕೊಳ್ಳುವುದು ತಮ್ಮ ಕರ್ತವ್ಯವೂ ಹೌದು. ಅದು ತಮಗೆ ಬಹಳ ಸುಲಭ ಅಲ್ಲವೇ? ಜನರು ಅದು ಸುದ್ದಿ ಬಿಡುಗಡೆ ಪತ್ರಿಕೆ ಎಂದು ಹೇಳಿದರೆ ಅದಕ್ಕೆ ಕಾರಣವನ್ನು ತಿಳಿಸಬಲ್ಲಿರಾ?

6) ನೀವು ಹೇಳಿದಂತೆ ಸುದ್ದಿ ಬಿಡುಗಡೆ ಪತ್ರಿಕೆ ಜನರ ದಾರಿ ತಪ್ಪಿಸುತ್ತಿದ್ದರೆ ಬೆಳ್ತಂಗಡಿಯ ಪ್ರಜ್ಞಾವಂತ ಜನರು ಸುದ್ದಿ ಬಿಡುಗಡೆಯನ್ನು ತಮ್ಮ ಪತ್ರಿಕೆ ಎಂದು ಒಪ್ಪಿಕೊಳ್ಳಲು ಸಾಧ್ಯವಿತ್ತೇ? ಅವರು ಯಾಕೆ ಒಪ್ಪಿಕೊಂಡಿದ್ದಾರೆಂದು ಕ್ಷೇತ್ರದ ಶಾಸಕರಾಗಿ ತಿಳಿಯಲು ಪ್ರಯತ್ನ ಮಾಡಬಹುದಲ್ಲವೇ?


ನಮಗೆ ಈ ಹೋರಾಟದ ಅಗತ್ಯವಿಲ್ಲ. ಯಾರು ಏನೇ ಹೇಳಿದರೂ ಜನರ ಪರವಾಗಿ ನಿಷ್ಪಕ್ಷಪಾತವಾಗಿ ಪತ್ರಿಕೆ ನಡೆಸಿಕೊಂಡು ಹೋಗುವುದು ನಮ್ಮ ಕರ್ತವ್ಯವಾಗಿ ಮಾಡುತ್ತಿದ್ದೇವೆ. ಆದರೆ ಬೆಳ್ತಂಗಡಿಯ ಸುದ್ದಿ ಬಿಡುಗಡೆ ಪತ್ರಿಕೆ ಜನರ ದಾರಿ ತಪ್ಪಿಸುತ್ತಿದೆ, ಆ ಬಗ್ಗೆ ಜನರು ನೋಡಿಕೊಳ್ಳುತ್ತಾರೆ ಎಂಬ ಬೆದರಿಕೆಯ ಮಾತು ಶಾಸಕರಾದ ಹರೀಶ್ ಪೂಂಜರಿಂದ ಪತ್ರಿಕಾ ದಿನಾಚರಣೆಯಂದು ಎಲ್ಲಾ ಪತ್ರಕರ್ತರ ಸಮಕ್ಷಮದಲ್ಲಿ ಬಂದಿರುವುದರಿಂದ ಅದನ್ನು ಎಚ್ಚರಿಕೆಯಾಗಿ ತೆಗೆದುಕೊಂಡು ಜನರ ಮುಂದೆ ವಿಷಯವನ್ನು ಇಟ್ಟು ಅದರ ಸತ್ಯಾಸತ್ಯತೆಯ ಬಗ್ಗೆ ಹಾಗೂ ನಮ್ಮ ಮುಂದಿನ ದಾರಿಯ ಬಗ್ಗೆ ವಿಮರ್ಶೆ ಮತ್ತು ಚರ್ಚೆಯನ್ನು ಮಾಡಲಿದ್ದೇವೆ.
ಯಾರಿಂದ ಯಾವುದೇ ಒತ್ತಡ ಬಂದರೂ, ಬೆದರಿಕೆಯ, ಆಮಿಷ ಇದ್ದರೂ ಅದನ್ನು ಲೆಕ್ಕಿಸದೆ ಪತ್ರಿಕೆ ಜನರ ಪತ್ರಿಕೆಯಾಗಿಯೇ ಕೆಲಸ ಮಾಡಲಿದೆ. ನಮ್ಮಿಂದ ತಪ್ಪುಗಳಾಗಿದ್ದಲ್ಲಿ ಅದನ್ನು ಒಪ್ಪಿಕೊಂಡು ತಿದ್ದಿಕೊಂಡು ಹೋಗುವ ಸಂಪ್ರದಾಯವನ್ನು ಈ ಹಿಂದೆಯೂ ಇಟ್ಟುಕೊಂಡಿದ್ದೇವೆ, ಮುಂದೆಯೂ ಇಟ್ಟುಕೊಳ್ಳಲಿದ್ದೇವೆ. ನಮ್ಮಿಂದ ಆದ ತಪ್ಪುಗಳನ್ನು ಪೂಂಜರವರು ತಿಳಿಸಿಕೊಟ್ಟಲ್ಲಿ ಅದನ್ನು ಒಪ್ಪಿಕೊಂಡು ಜನರಿಂದ ಮತ್ತು ಹರೀಶ್ ಪೂಂಜರಿಂದಲೂ ಪತ್ರಿಕೆ ನಡೆಸುವುದು ಹೇಗೆಂದು ಕಲಿಯಲಿದ್ದೇವೆ. ನಮ್ಮನ್ನು ಟೀಕಿಸುವರದ್ದು, ಶಾಸಕ ಹರೀಶ್ ಪೂಂಜರದ್ದು ತಪ್ಪು ಎಂದು ಕಂಡುಬಂದರೆ, ಅದನ್ನು ಒಪ್ಪಿಕೊಂಡು, ತಿದ್ದಿಕೊಂಡು ಹೋಗಲು ತಯಾರಿ ಇದ್ದಾರೆಯೇ? ಎಂಬ ಪ್ರಶ್ನೆಯನ್ನು ಅವರ ಮುಂದೆ ಇಡಲು ಬಯಸುತ್ತೇನೆ. ಆ ಪ್ರಶ್ನೆಗೆ ಉತ್ತರವನ್ನು ಹರೀಶ್ ಪೂಂಜರಲ್ಲಿ ಕೇಳಬೇಕೆಂದು ಜನರಲ್ಲಿ ವಿನಂತಿಸುತ್ತಿದ್ದೇನೆ.

LEAVE A REPLY

Please enter your comment!
Please enter your name here