ಕೊಳವೆ ಬಾವಿಗಳಿಗೆ ಮರುಜೀವ ನೀಡುವ ಕಾಯಕ ಬೋರ್‌ವೆಲ್‌ಗೆ ನೀರಿಂಗಿಸಲು ಮುಂದಾದ ಕೆದಂಬಾಡಿ ಗ್ರಾಮ ಪಂಚಾಯತ್

0

ಪುತ್ತೂರು: ಬೋರ್‌ವೆಲ್‌ನಲ್ಲಿ ನೀರು ಬತ್ತಿದ ಕೂಡಲೇ ಮತ್ತೊಂದು ಬೋರ್‌ವೆಲ್ ಕೊರೆಸುತ್ತೇವೆ ಅದು ಬಿಟ್ಟು ಬೋರ್‌ವೆಲ್‌ಗೆ ನೀರು ಇಂಗಿಸುವ ಕೆಲಸವನ್ನು ಯಾರೂ ಕೂಡ ಮಾಡುತ್ತಿಲ್ಲ. ಬತ್ತಿಹೋದ ಕೊಳವೆ ಬಾವಿಗೆ ವೈಜ್ಞಾನಿಕವಾಗಿ ನೀರು ಇಂಗಿಸಿದರೆ ಕೊಳವೆ ಬಾವಿಯಲ್ಲಿ ನೀರು ಹೆಚ್ಚುತ್ತದೆ. ಇದಕ್ಕೆ ಸರಕಾರ ಕೂಡ ನರೇಗಾ ಯೋಜನೆಯಡಿ ಪ್ರೋತ್ಸಾಹ ನೀಡುತ್ತಿದೆ. ಇದೀಗ ಕೆದಂಬಾಡಿ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಒಂದು ಮಹತ್ತರ ನಿರ್ಣಯ ಕೈಗೊಂಡಿದ್ದು, ಗ್ರಾ.ಪಂ.ನ ಬೋರ್‌ವೆಲ್‌ಗಳಿಗೆ ನೀರಿಂಗಿಸುವ ಕೆಲಸದೊಂದಿಗೆ ಸಾರ್ವಜನಿಕರಿಗೂ ಇದರ ಉಚಿತ ಮಾಹಿತಿಯನ್ನು ನೀಡುವ ಮೂಲಕ ಬತ್ತಿ ಹೋದ ಹಾಗೂ ಚಾಲೂ ಇರುವ ಕೊಳವೆಬಾವಿಗಳಿಗೆ ನೀರಿಂಗಿಸಲು ಕೆಲಸಕ್ಕೆ ಮುಂದಾಗಿದೆ. ಜೂ.31ರಂದು ನಡೆದ ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ಈ ಮಹತ್ತರ ನಿರ್ಣಯವನ್ನು ಕೈಗೊಳ್ಳಲಾಗಿದೆ.
ಗ್ರಾ ಪಂ ಅಧ್ಯಕ್ಷ ರತನ್ ರೈ ಕುಂಬ್ರರವರು ಮಾತನಾಡಿ, ಕೊಳವೆ ಬಾವಿಗೆ ನೀರಿಂಗಿಸುವ ಸಲುವಾಗಿ ಸರಕಾರ ನರೇಗಾ ಯೋಜನೆಯಡಿ ಅನುದಾನ ನೀಡುತ್ತಿದೆ. ಗ್ರಾಮಸ್ಥರು ಇದರ ಸದುಪಯೋಗವನ್ನು ಪಡೆದುಕೊಂಡು ತಮ್ಮ ತೋಟ, ಜಮೀನುನಲ್ಲಿರುವ ಬತ್ತಿ ಹೋದ ಅಥವಾ ಚಾಲೂ ಇರುವ ಕೊಳವೆ ಬಾವಿಗಳಿಗೆ ನೀರಿಂಗಿಸುವ ಮೂಲಕ ಅಂತರ್‌ಜಲವನ್ನು ಹೆಚ್ಚಿಸುವಲ್ಲಿ ಪ್ರಯತ್ನಿಸಬೇಕು ಎಂದು ಕರೆ ನೀಡಿದರು. ನೀರಿಂಗಿಸುವ ಬಗ್ಗೆ ಗ್ರಾಮಸ್ಥರಿಗೆ ಉಚಿತ ಮಾಹಿತಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಗ್ರಾ ಪಂ.ನಲ್ಲಿದೆ 16 ಕೊಳವೆಬಾವಿ
ಕೆದಂಬಾಡಿ ಗ್ರಾಮ ಪಂಚಾಯತ್‌ಗೆ ಸೇರಿದ ಒಟ್ಟು 16 ಕೊಳವೆಬಾವಿಗಳು ಗ್ರಾಮದಲ್ಲಿದೆ. ಇದರಲ್ಲಿ ಬಹುತೇಕ ಎಲ್ಲಾ ಕೊಳವೆಬಾವಿಗಳಿಂದಲೂ ಕುಡಿಯುವ ನೀರು ಸರಬರಾಜು ಆಗ್ತಾ ಇದೆ. 16 ಬೋರ್‌ವೆಲ್‌ಗಳಲ್ಲಿ ಈಗಾಗಲೇ 3 ಬೋರ್‌ವೆಲ್‌ಗೆ 4 ವರ್ಷಗಳ ಹಿಂದೆ ನೀರಿಂಗಿಸುವ ಕೆಲಸ ಮಾಡಲಾಗಿದ್ದು, ಈ ಎರಡೂ ಬೋರ್‌ವೆಲ್‌ಗಳಲ್ಲಿ ನೀರಿನ ಮಟ್ಟ ಉತ್ತಮವಾಗಿದೆ. ಇತರ ಕೊಳವೆಬಾವಿಗಳಿಗೂ ಅದರ ನೀರಿನ ಮಟ್ಟ ನೋಡಿಕೊಂಡು ನೀರಿಂಗಿಸುವ ಕೆಲಸ ಮಾಡಲಾಗುವುದು ಎಂದು ಅಧ್ಯಕ್ಷ ರತನ್ ರೈ ಮಾಹಿತಿ ನೀಡಿದರು.

ನರೇಗಾದಲ್ಲಿದೆ ಅನುದಾನ
ಗ್ರಾಮಸ್ಥರು ಕೂಡ ತಮ್ಮ ತೋಟ, ಜಮೀನುಗಳಲ್ಲಿರುವ ಬೋರ್‌ವೆಲ್‌ಗಳಿಗೆ ನೀರಿಂಗಿಸುವ ಕೆಲಸ ಮಾಡಬಹುದಾಗಿದೆ. ಇದಕ್ಕೆ ಸರಕಾರ ನರೇಗಾದ ಮೂಲಕ ಅನುದಾನ ನೀಡುತ್ತಿದೆ. ಸಾರ್ವಜನಿಕ ಬಳಕೆಯ ಬೋರ್‌ವೆಲ್‌ಗೆ ನೀರಿಂಗಿಸುವ ಕೆಲಸಕ್ಕೆ 92ಸಾವಿರ ರೂ.ಅನುದಾನ ನೀಡಿದರೆ, ವೈಯುಕ್ತಿಕ ತಮ್ಮ ಜಮೀನುನಲ್ಲಿರುವ ಬೋರ್‌ವೆಲ್‌ಗೆ ನೀರಿಂಗಿಸುವ ಕೆಲಸಕ್ಕೆ ರೂ. 42ಸಾವಿರ ಅನುದಾನ ನೀಡಲಾಗುತ್ತಿದೆ. ಇದರಲ್ಲಿ ಜಮೀನು ಮಾಲಕ ಸಣ್ಣ ರೈತ ಅಥವಾ ಬಿಪಿಎಲ್ ಕಾರ್ಡ್ ಹೊಂದಿರಬೇಕಾಗುತ್ತದೆ.

ಗ್ರಾ ಪಂ ಕೊಳವೆ ಬಾವಿಗಳಿಗೆ ನೀರಿಂಗಿಸುವ ಕಾಯಕ
ಮುಂಗಾರು ಮಳೆಯ ಕೊರತೆಯಿಂದಾಗಿ ಈ ವರ್ಷ ಕುಡಿಯುವ ನೀರಿಗೆ ಬಹಳಷ್ಟು ತೊಂದರೆ ಉಂಟಾಗಿದೆ. ಬಹುತೇಕ ಬಾವಿ,ಕೆರೆಗಳು ಬತ್ತಿ ಹೋಗಿವೆ. ಕೊಳವೆಬಾವಿಗಳಲ್ಲಿ ಕೂಡ ನೀರು ಬತ್ತಿಹೋದ ಘಟನೆಗಳು ನಡೆದಿದೆ. ಇದಕ್ಕೆಲ್ಲಾ ನೀರಿಂಗಿಸುವುದು ಒಂದೇ ಪರಿಹಾರವಾಗಿದ್ದು ಅದಕ್ಕಾಗಿ ಕೆದಂಬಾಡಿ ಗ್ರಾಮ ಪಂಚಾಯತ್ ತನ್ನ ಬಹುತೇಕ ಬೋರ್‌ವೆಲ್‌ಗೆ ನೀರಿಂಗಿಸುವ ಕಾಯಕಕ್ಕೆ ಮುಂದಾಗಿದೆ.
ಸಾಮಾನ್ಯ ಸಭೆಯಲ್ಲಿ ಗ್ರಾಪಂ ಉಪಾಧ್ಯಕ್ಷ ಭಾಸ್ಕರ ರೈ ಮಿತ್ರಂಪಾಡಿ, ಸದಸ್ಯರುಗಳಾದ ಪ್ರವೀಣ್ ಶೆಟ್ಟಿ ತಿಂಗಳಾಡಿ, ವಿಠಲ ರೈ ಮಿತ್ತೋಡಿ, ಕೃಷ್ಣ ಕುಮಾರ್ ಇದ್ಯಪೆ, ಜಯಲಕ್ಷ್ಮೀ ಬಲ್ಲಾಳ್, ಸುಜಾತ ಮುಳಿಗದ್ದೆ, ರೇವತಿ, ಸುಜಾತ, ಅಸ್ಮಾ ಉಪಸ್ಥಿತರಿದ್ದರು. ಅಭಿವೃದ್ಧಿ ಅಧಿಕಾರಿ ಅಜಿತ್ ಜಿ.ಕೆ ಸ್ವಾಗತಿಸಿ, ಇಲಾಖಾ ಮಾಹಿತಿ ನೀಡಿ ವಂದಿಸಿದರು. ಸಿಬ್ಬಂದಿ ಜಯಂತ ಮೇರ್ಲ, ಮೃದುಳಾ, ಗಣೇಶ್, ವಿದ್ಯಾಪ್ರಸಾದ್, ಶಶಿಪ್ರಭಾ ರೈ ಸಹಕರಿಸಿದ್ದರು.

ನೀರಿನ ಅಭಾವ ವರ್ಷದಿಂದ ವರ್ಷಕ್ಕೆ ಜಾಸ್ತಿಯಾಗುತ್ತಲೇ ಹೋಗುತ್ತಿದೆ. ಕೊಳವೆಬಾವಿಗಳಿಗೆ ನೀರಿಂಗಿಸುವುದರಿಂದ ಬಹಳಷ್ಟು ಅನುಕೂಲ ಇದೆ. ಅದಕ್ಕಾಗಿ ಕೆದಂಬಾಡಿ ಗ್ರಾಪಂ ಈಗಾಗಲೇ ತನ್ನ 3 ಬೋರ್‌ವೆಲ್‌ಗೆ ನೀರಿಂಗಿಸುವ ಯಶಸ್ಸು ಕಂಡಿದೆ. ಈ ವರ್ಷ ಮತ್ತಷ್ಟು ಬೋರ್‌ವೆಲ್‌ಗೆ ನೀರಿಂಗಿಸುವ ಕಾರ್ಯ ಮಾಡಲಿದೆ. ಸಾರ್ವಜನಿಕರು ಕೂಡ ತಮ್ಮ ಜಮೀನಿನಲ್ಲಿರುವ ಬೋರ್‌ವೆಲ್‌ಗೆ ನೀರಿಂಗಿಸುವ ಕೆಲಸ ಮಾಡಬೇಕಾಗಿದೆ.’

ರತನ್ ರೈ ಕುಂಬ್ರ,
ಅಧ್ಯಕ್ಷರು ಕೆದಂಬಾಡಿ ಗ್ರಾಪಂ

LEAVE A REPLY

Please enter your comment!
Please enter your name here