@ ಸಿಶೇ ಕಜೆಮಾರ್
ಪುತ್ತೂರು: ಹುಟ್ಟುತ್ತಲೇ ಹೃದಯ ಖಾಯಿಲೆಗೆ ತುತ್ತಾದ ಆ ಬಾಲಕನಿಗೆ ಈಗ 16 ವರ್ಷ ಪ್ರಾಯ. ಕಲ್ಲಡ್ಕ ಶ್ರೀ ರಾಮ ಪ್ರೌಢ ಶಾಲೆಯಲ್ಲಿ ಪ್ರಥಮ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ಈ ವಿದ್ಯಾರ್ಥಿಗೆ ಮತ್ತೆ ಹೃದಯದ ಚಿಕಿತ್ಸೆ ಅಗತ್ಯವಿದ್ದು, ಹೆತ್ತವರು ದಾನಿಗಳ ಸಹಕಾರದ ನಿರೀಕ್ಷೆಯಲ್ಲಿದ್ದಾರೆ. ಹೌದು…ಪುತ್ತೂರು ತಾಲೂಕು ಒಳಮೊಗ್ರು ಗ್ರಾಮದ ನೀರ್ಪಾಡಿ ವಿಶ್ವನಾಥ ಮತ್ತು ಶಾರದಾರವರ ಪುತ್ರರಾಗಿರುವ ಸಾಯಿನಿಧಿಗೆ ಹುಟ್ಟಿನಿಂದಲೇ ಹೃದಯ ಖಾಯಿಲೆ ಅಂಟಿಕೊಂಡಿತ್ತು. ಒಂದು ಬಾರಿ ಬೈಪಾಸ್, ಒಂದು ಬಾರಿ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು, ಇದೀಗ ಮತ್ತೆ ಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದು ಹೆತ್ತವರು ದಾನಿಗಳಿಂದ ಆರ್ಥಿಕ ಸಹಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಹುಟ್ಟಿನಿಂದಲೇ ಅಂಟಿಕೊಂಡ ಖಾಯಿಲೆ
ವಿಶ್ವನಾಥ ಮತ್ತು ಶಾರದಾರವರದ್ದು ತೀರಾ ಬಡ ಕುಟುಂಬ. ವಿಶ್ವನಾಥರವರು ಅಡುಗೆ ಕೆಲಸ ಮಾಡಿಕೊಂಡಿದ್ದು ಶಾರದಾರವರು ಫ್ಯಾಕ್ಟರಿ ಕೆಲಸಕ್ಕೆ ಹೋಗುತ್ತಿದ್ದಾರೆ. ಇದರಿಂದ ಬರುವ ಅಲ್ಪ ಆದಾಯದಿಂದಲೇ ಇವರ ಕುಟುಂಬ ಸಾಗಬೇಕಾಗಿದೆ. ಸಾಯಿನಿಧಿಗೆ ಹುಟ್ಟಿನಿಂದಲೇ ಈ ಹೃದಯದ ಖಾಯಿಲೆ ಅಂಟಿಕೊಂಡಿದ್ದು ಈಗಾಗಲೇ ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗಿದೆ. ಮೂರುವರೇ ತಿಂಗಳ ಮಗುವನ್ನೇ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಲಕ್ಷಾಂತರ ರೂಪಾಯಿ ಖರ್ಚು
ಮೊದಲಿಗೆ ಮೂರುವರೆ ತಿಂಗಳ ಮಗುವನ್ನು ಮಂಗಳೂರು ಕೆ.ಎಂ.ಸಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಅಲ್ಲಿಂದ ಪುಟ್ಟಪರ್ತಿ ಸತ್ಯಸಾಯಿ ಆಸ್ಪತ್ರೆಗೆ ಅಲ್ಲಿಂದ ಅವರೇ ಆಗಿರುವ ವೈಟ್ಫೀಲ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಅಲ್ಲಿಂದ ಬೆಂಗಳೂರು ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ನೀಡಲಾಗಿದೆ. ವೈದ್ಯರಾದ ಡಾ.ದೇವಿಪ್ರಸಾದ್ ಶೆಟ್ಟಿ, ಡಾ.ಸುರೇಶ್, ಡಾ.ಶೇಖರ್ ರಾವ್ ನೇತೃತ್ವದ ವೈದ್ಯರ ತಂಡ ಬಾಲಕನಿಗೆ ಚಿಕಿತ್ಸೆ ನೀಡುತ್ತಿದೆ. 2007 ರಲ್ಲಿ ಬೈಪಾಸ್ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಬಳಿಕ 2016ರಲ್ಲಿ ಮತ್ತೊಂದು ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಈಗಾಗಲೇ ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗಿದೆ.
ಮತ್ತೆ ಚಿಕಿತ್ಸೆ ಬೇಕಿದೆ:
ಇದೀಗ ಮತ್ತೆ ಸಾಯಿನಿಧಿಗೆ ಹೃದಯದ ತೊಂದರೆ ಕಾಣಿಸಿಕೊಂಡಿದ್ದು, ಈ ಬಗ್ಗೆ ಬೆಂಗಳೂರು ನಾರಾಯಣ ಹೃದಯಾಲಯದಲ್ಲಿ ಪರೀಕ್ಷೆ ಮಾಡಿಸಿದ ಹೆತ್ತವರಿಗೆ ಮತ್ತೆ ಆಘಾತ ಉಂಟಾಗಿದೆ. ಸಾಯಿನಿಧಿಯ ಹೃದಯದಲ್ಲಿ ಮತ್ತೆ ತೊಂದರೆ ಕಾಣಿಸಿಕೊಂಡಿದ್ದು, ಸೂಕ್ತ ಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ. ಚಿಕಿತ್ಸೆಗೆ ಹಣ ಹೊಂದಿಸುವುದೇ ಹೆತ್ತವರಿಗೆ ಕಷ್ಟವಾಗಿದೆ. ಇಷ್ಟರ ತನಕ ಅದೇಗೋ ಸಾಲಸೋಲ ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ.
ದಾನಿಗಳ ಸಹಕಾರ ಬೇಕಾಗಿದೆ
ಎಸ್ಎಸ್ಎಲ್ಸಿಯಲ್ಲಿ ಡಿಸ್ಟಿಂಕ್ಷನ್ ಪಡೆದುಕೊಂಡಿರುವ ಓದಿನಲ್ಲಿ ತುಂಬಾ ಮುಂದಿರುವ ಸಾಯಿನಿಧಿಯ ಹೃದಯದ ತೊಂದರೆಯನ್ನು ಗುಣಪಡಿಸಲು ದಾನಿಗಳ ಸಹಕಾರ ಬೇಕಾಗಿದೆ. ಒಂದು ಬಡ ಕುಟುಂಬದ ಕೂಗಿಗೆ ಧ್ವನಿಯಾಗುವ ಸಹೃದಯಿ ದಾನಿಗಳು ತಮ್ಮಿಂದ ಸಾಧ್ಯವಾಗುವ ಆರ್ಥಿಕ ಸಹಕಾರವನ್ನು ನೀಡಬಹುದಾಗಿದೆ. ಸಹಾಯ ಮಾಡುವವರು ನೇರವಾಗಿ ಅವರ ಬ್ಯಾಂಕ್ ಅಕೌಂಟ್ ಅಥವಾ ಗೂಗಲ್ ಪೇ ನಂಬರಿಗೆ ಅಥವಾ ಅವರನ್ನು ಸಂಪರ್ಕಿಸಿ ಸಹಾಯ ಮಾಡಬಹುದಾಗಿದೆ.
ಆರ್ಥಿಕ ಸಹಕಾರ ನೀಡುವವರು ಎಚ್ಡಿಎಫ್ಸಿ ಬ್ಯಾಂಕ್ ಪುತ್ತೂರು ಶಾಖೆಯಲ್ಲಿರುವ ಶಾರದಾರವರ ಅಕೌಂಟ್ ನಂಬರ್ 50100727275307, ಐಎಫ್ಸಿ ಕೋಡ್ ಎಚ್ಡಿಎಫ್ಸಿ0002326 ಗೆ ಕಳುಹಿಸಿಬಹುದು ಅಥವಾ ಗೂಗಲ್ಪೇ ನಂಬರ್ 9900801096 ಗೆ ಹಾಕಬಹುದು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ನನ್ನ ಮಗನಿಗೆ ಹುಟ್ಟಿನಿಂದಲೇ ಹೃದಯದ ತೊಂದರೆ ಕಾಣಿಸಿಕೊಂಡಿತ್ತು ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದೇವೆ. ಈಗ ಮತ್ತೆ ಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ. ಒಂದು ಬಾರಿ ಚಿಕಿತ್ಸೆಗೆ 30 ರಿಂದ 50 ಸಾವಿರ ಖರ್ಚು ಆಗುತ್ತದೆ. ನಾವು ತೀರಾ ಬಡವರು, ಸಹೃದಯಿ ದಾನಿಗಳು ತಮ್ಮ ಕೈಯಲ್ಲಾದ ಸಹಾಯ ಮಾಡುವಂತೆ ಪ್ರಾರ್ಥನೆ.
ಶಾರದಾ ನೀರ್ಪಾಡಿ,
ಸಾಯಿನಿಧಿಯ ತಾಯಿ