ರಾಮಕುಂಜ: ಯಕ್ಷಗಾನವು ಒಂದು ಕಲಾಸಂಕೀರ್ಣ. ಇಲ್ಲಿರುವ ಸಾಹಿತ್ಯ, ಮಾತುಗಾರಿಕೆ, ವೇಷ, ಬಣ್ಣಗಾರಿಕೆ, ನೃತ್ಯ, ಭಾವಾಭಿನಯಗಳು ಕಲಾವಿದರ ಸರ್ವಾಂಗೀಣ ಬೆಳವಣಿಗೆಗೆ ನೆರವಾಗುತ್ತವೆ. ಎಳೆಯರ ಸಮಗ್ರ ವಿಕಾಸಕ್ಕೆ ಯಕ್ಷಗಾನ ಪೂರಕ ಎಂದು ಯಕ್ಷನಂದನ ಕಲಾ ಸಂಘದ ಅಧ್ಯಕ್ಷ, ಕಲಾವಿದ ಗಣರಾಜ ಕುಂಬ್ಳೆ ಹೇಳಿದರು.
ಅವರು ಅಂಡೆತಡ್ಕದ ಸರಕಾರಿ ಹಿ.ಪ್ರಾ. ಶಾಲೆಯಲ್ಲಿ ಗೋಕುಲನಗರದ ಯಕ್ಷನಂದನ ಕಲಾ ಸಂಘದ ವತಿಯಿಂದ ನಡೆಯುವ ಯಕ್ಷಗಾನ ನಾಟ್ಯ ತರಗತಿಯ ಉದ್ಘಾಟನೆ ನೆರವೇರಿಸಿ ಮಾತಾಡುತ್ತಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸತೀಶ ಪೂಜಾರಿಯವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಂಘದ ಗೌರವಾಧ್ಯಕ್ಷ ಮುರಲಿಕೃಷ್ಣ ಬಡಿಲ ಹಿತವಚನ ನುಡಿದರು. ವೇದಿಕೆಯಲ್ಲಿ ನಾಟ್ಯಗುರು ಲಕ್ಷ್ಮಣ ಆಚಾರ್ಯ ಎಡಮಂಗಲ, ಶಿಕ್ಷಕರಾದ ರಘು, ಮಮತಾಶ್ರೀ, ನಾಟ್ಯ ತರಬೇತಿ ಸಂಚಾಲಕ ಭಾಸ್ಕರ ಬಟ್ಟೋಡಿ, ಶ್ರುತಿವಿಸ್ಮಿತ್, ಸಂಘದ ಪ್ರಧಾನ ಕಾರ್ಯದರ್ಶಿ ಹರಿಕಿರಣ ಕೊಯಿಲ ಉಪಸ್ಥಿತರಿದ್ದರು.