ಪುತ್ತೂರು: ಪುತ್ತೂರು ಬೆಳ್ಳಾರೆ ರಸ್ತೆಯಲ್ಲಿ ನೀವು ವಾಹನದಲ್ಲಿ ಸಂಚರಿಸುವುದಿದ್ದರೂ ಅಥವಾ ನಡೆದುಕೊಂಡು ಹೋಗುವುದಿದ್ದರೂ ಇಲ್ಲಿನ ನೆಟ್ಟಾರು ಚಡವು ಎಂಬಲ್ಲಿಗೆ ತಲುಪಿದಾಗ ಉಸಿರು ಬಿಗಿ ಹಿಡಿದು ಸಂಚರಿಸಬೇಕಾದ ಪರಿಸ್ಥಿತಿ ಎದುರಾಗುತ್ತದೆ.
ಇದಕ್ಕೆ ಕಾರಣ ಬೇರೇನೂ ಅಲ್ಲ. ರಸ್ತೆಯ ಒಂದು ಬದಿಯಲ್ಲಿ ಬಹಳ ಹಿಂದೆ ಸರಕಾರದ ವತಿಯಿಂದ ನೆಟ್ಟು, ಬಳಿಕ ತಿರುಗಿ ನೋಡದಿದ್ದರೂ ನೆಟ್ಟ ಅಕೇಶಿಯ ಗಿಡಗಳು ಈಗ ಬೆಳೆದು ಹೆಮ್ಮರವಾಗಿದ್ದು, ರಸ್ತೆಯ ಕಡೆಗೆ ಬಾಗಿ ನಿಂತಿದೆ. ಇಷ್ಟೇ ಆಗಿದ್ದರೆ ಪರವಾಗಿಲ್ಲ ಎನ್ನಬಹುದು ಆದರೆ ಗುಡ್ಡದ ಬದಿಯಲ್ಲಿರುವ ಈ ಮರಗಳ ಬುಡದಲ್ಲಿನ ಮಣ್ಣು ಮಳೆಯ ನೀರಿನಲ್ಲಿ ಕರಗಿ ಬೇರುಗಳು ಸಡಿಲಗೊಂಡಿದ್ದು, ಈಗಲೋ ಮತ್ತೆಯೋ ಧರೆಗುರುಳಲು ಸಿದ್ಧವಾಗಿ ನಿಂತಿದೆ. ಇಲ್ಲಿ ಈ ಹಿಂದೆ ಅಪಾಯಕಾರಿ ಸ್ಥಿತಿಯಲ್ಲಿದ್ದ ಹಲವು ಮರಗಳು ನೆಲಕ್ಕುರುಳಿದೆ. ಬದಲಾದ ಹವಾಮಾನದ ಪರಿಸ್ಥಿತಿಯಲ್ಲಿ ಗಾಳಿ ಮಳೆಗೆ ಮರಗಳು ಯಾವಾಗ ಬೇಕಾದರೂ ಧರೆಗುರುಳಬಹುದು. ಹೀಗಾದಲ್ಲಿ ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ, ಪಾದಾಚಾರಿಗಳಿಗೆ ಅಪಾಯ ತಪ್ಪಿದ್ದಲ್ಲ. ರಸ್ತೆಯ ಇನ್ನೊಂದು ಬದಿಯಲ್ಲಿ ಪ್ರಪಾತವಿದ್ದು, ತಿರುವಿನಿಂದ ಕೂಡಿದ ಈ ರಸ್ತೆಯಲ್ಲಿ ಏರುವ ಮತ್ತು ಇಳಿಯುವ ಸಮಯದಲ್ಲಿ ಅಪಾಯ ತಲೆಯ ಮೇಲಿನ ತೂಗುಗತ್ತಿಯಂತೆ ಹಿಂಬಾಲಿಸುತ್ತದೆ. ಅಪಾಯ ಸಂಭವಿಸುವ ಮೊದಲು ದುರಂತಕ್ಕೆ ಆಹ್ವಾನ ನೀಡುವ ಈ ಮರಗಳಿಗೆ ಮುಕ್ತಿ ನೀಡುವ ಕೆಲಸ ಸಂಬಂಧ ಪಟ್ಟವರಿಂದ ತುರ್ತಾಗಿ ಆಗಬೇಕಿದೆ.