ಪುತ್ತೂರು:ಸುದಾನ ವಸತಿ ಶಾಲೆಯಲ್ಲಿ ವಿದ್ಯಾರ್ಥಿ ಮಂತ್ರಿಮಂಡಲ ಮತ್ತು ಶಾಲಾ ಸಂಘಗಳ ಉದ್ಘಾಟನೆಯು ಸುದಾನ ವಸತಿ ಶಾಲೆಯ ಎಡ್ವರ್ಡ್ ಹಾಲ್ ನಲ್ಲಿ ಜು.4ರಂದು ನಡೆಯಿತು.
ಪುತ್ತೂರಿನ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಉಮೇಶ್ ನಾಯಕ್ ಮಾತನಾಡಿ ನಮ್ಮ ಸುತ್ತಲಿರುವ ಪ್ರತಿಯೊಬ್ಬರಲ್ಲೂ ನಾವು ಕಲಿಯುವಂತಹ ಉತ್ತಮ ಅಂಶಗಳಿರುತ್ತವೆ. ಗಮನಿಸುವ ಮತ್ತು ಸ್ವೀಕರಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದರು.
ಶಾಲಾ ಮುಖ್ಯ ಶಿಕ್ಷಕಿ ಶೋಭಾನಾಗರಾಜ್ ಪ್ರತಿಜ್ಞಾ ವಿಧಿಯನ್ನು ನಡೆಸಿಕೊಟ್ಟರು. ಶಾಲಾ ವಿದ್ಯಾರ್ಥಿ ನಾಯಕ ಮಾ. ವಿಶಾಲ್ ಬಿ (10ನೇ) ಉಪವಿದ್ಯಾರ್ಥಿ ನಾಯಕಿ ಜಿಯಾ ಸ್ವೀಡಲ್ ಲಸ್ರಾಡೊ (10ನೇ) ವಿದ್ಯಾರ್ಥಿ ಕಾರ್ಯದರ್ಶಿ ಅನಿಕಾ ಯು (9ನೇ) ಮತ್ತು ವಿರೋಧ ಪಕ್ಷದ ವಿದ್ಯಾರ್ಥಿ ನಾಯಕಿ ಶಜ್ಮಾ ಸುಮಯ್ಯ, ಉಪನಾಯಕಿ ತ್ರಯಾ ಕೃಷ್ಣರಾಜ್ (9ನೇ) ಮತ್ತು ಮಂತ್ರಿ ಮಂಡಲದ ಸದಸ್ಯರು ಪ್ರತಿಜ್ಞೆಯನ್ನು ಸ್ವೀಕರಿಸಿದರು.
ಶಾಲೆಯ ವಿವಿಧ ಸಂಘಗಳಿಗೆ ನೀಡಲಾದ ಭಾರತದ ವಿವಿಧ ಕರಾವಳಿಯ ಸಂಕೇತಗಳನ್ನು ಪ್ರತಿನಿಧಿಸುವ, ಕಲಾತ್ಮಕವಾಗಿ ರಚಿಸಲಾದ ಭಾರತದ ನಕ್ಷೆಯನ್ನು ಶಾಲಾ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ಡಾ| ಪೀಟರ್ ವಿಲ್ಸನ್ ಪ್ರಭಾಕರ್ ಅನಾವರಣಗೊಳಿಸಿ ಬದುಕು ಶಿಸ್ತು ಬದ್ಧವಾಗಿದ್ದರೆ ಗೆಲುವು ಸಾಧ್ಯ. ಸ್ಥಾನಕ್ಕಿಂತ ಜವಾಬ್ದಾರಿ ದೊಡ್ಡದು. ಹೊಣೆಯರಿತು ನಡೆದಾಗ ಯಶಸ್ಸು ಸುಲಭ ಎಂದು ನುಡಿದರು.
ಶಾಲೆಯ ಸಂಘಗಳಾದ ಅವನಿ ವಿಜ್ಞಾನ ಸಂಘ(ಗುಜರಾತ್ ಕರಾವಳಿ), ಜಾಗೃತಿ ಸೋಶಿಯಲ್ ಕ್ಲಬ್(ಮುಂಬೈ ಕರಾವಳಿ), ಪ್ರತಿಭಾ ಕಲಾಸಂಘ(ಕೆನರಾ ಕರಾವಳಿ), ಶಕ್ತಿ ಕ್ರೀಡಾ ಸಂಘ(ಮಲಬಾರ್), ಸ್ಪಂದನಾ ಇಂಟೆರ್‍ಯಾಕ್ಟ್ ಕ್ಲಬ್(ಕೊಂಕಣ ಕರಾವಳಿ), ದೃಷ್ಟಿ ಐ.ಟಿ ಕ್ಲಬ್(ಕೋರಮಂಡಲ ಕರಾವಳಿ), ಲಹರಿ ಸಾಹಿತ್ಯ ಸಂಘ( ಉತ್ತರ ಪ್ರಾಂತ್ಯ ಕರಾವಳಿ)ಗಳ ಕಾರ್ಯಚಟುವಟಿಕೆಗಳ ಬಗ್ಗೆ ಕ್ರಮವಾಗಿ ಸಂಘದ ನಿರ್ದೇಶಕರಾಗಿರುವ ಸಹಶಿಕ್ಷಕರಾದ ರೀನಾ ಅಲೆಕ್ಸ್, ನಿಶ್ಮಿತಾ, ಬಕುಳಾ, ಪುಷ್ಪರಾಜ್, ಗ್ಲಾಡೀಸ್, ರಂಜಿತ್ ಮಥಾಯಿಸ್, ಚೇತನಾ ಪಿ.ಕೆ ವರದಿ ಮಂಡಿಸಿದರು.ಶಾಲೆಯ ಹಿರಿಯ ಶಿಕ್ಷಕಿಯಾಗಿದ್ದು ಸ್ವಯಂನಿವೃತ್ತಿಯನ್ನು ಪಡೆದ ಸರಿತಾ ಪಾಯಿಸ್ ರನ್ನು ಸನ್ಮಾನಿಸಲಾಯಿತು. ಸಹಶಿಕ್ಷಕಿ ವಿನುತಾ ಅಭಿನಂದನಾ ಭಾಷಣವನ್ನು ಮಾಡಿದರು. ಶಾಲಾ ಕೋಶಾಧಿಕಾರಿ ರೋಟೇರಿಯನ್ ಆಸ್ಕರ್ ಆನಂದ್, ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಶ್ರೀವಿಭಾ, ದಿಯಾ ಪ್ರಮೋದ್ ಮತ್ತು ತ್ರಿಶಾ ಕೃಷ್ಣರಾಜ್‌ರಿಂದ ಜನಪದ ಗೀತಾ ಗಾಯನ ನಡೆಯಿತು.ಜಾಗೃತಿ ಸೋಶಿಯಲ್ ಕ್ಲಬ್ ನ ವಿದ್ಯಾರ್ಥಿ ನಾಯಕಿ. ದಿಯಾ ಪ್ರಮೋದ್ ಸ್ವಾಗತಿಸಿ, ಕಾರ್ಯದರ್ಶಿ ಧ್ರುವ ಜೆ ವಂದಿಸಿದರು.
ಸಹಶಿಕ್ಷಕರಾದ ಅಶ್ವಿನಿ ಮತ್ತು ಶೈನಿ ಕಾರ್ಯಕ್ರಮವನ್ನು ನಿರೂಪಿಸಿದರು. ಸಹಶಿಕ್ಷಕರಾದ ಆಶಾಲತಾ, ನಿಶ್ಮಿತಾ ಹಾಗೂ ತಂಡ ಸಹಕರಿಸಿದರು.