ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆಯಿಂದ ಸಂಕಷ್ಟ-ಕರ್ನಾಟಕ ಕಾರ್ಮಿಕ ಸಂಘಗಳ ಒಕ್ಕೂಟ ನೇತೃತ್ವದಲ್ಲಿ ಪ್ರತಿಭಟನೆ

0

ಉಚಿತ ಪ್ರಯಾಣ ಯೋಜನೆಯಿಂದ ಟೂರಿಸ್ಟ್ ವಾಹನಗಳ ಚಾಲಕ,ಮಾಲಕರಿಗೆ ಸಂಕಷ್ಟ
ಉಚಿತ ಯೋಜನೆಗಳಿಗಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೂ ಹೊರೆ
ರಿಕ್ಷಾ, ಟೂರಿಸ್ಟ್ ವಾಹನ ಚಾಲಕ,ಮಾಲಕರು, ಕಟ್ಟಡ ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗಿ

ಪುತ್ತೂರು:ರಾಜ್ಯದ ಸರಕಾರದ ಗ್ಯಾರಂಟಿಯಾಗಿ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆಯಿಂದಾಗಿ ಟೂರಿಸ್ಟ್ ವಾಹನ ಚಾಲಕ-ಮಾಲಕರಿಗೆ, ವಿದ್ಯಾರ್ಥಿಗಳಿಗೆ, ಕಾರ್ಮಿಕರಿಗೆ ಆಗುತ್ತಿರುವ ಕಷ್ಟ-ನಷ್ಟ ಹಾಗೂ ಉಚಿತ ಯೋಜನೆಗಳಿಂದಾಗಿ ಆಹಾರ ವಸ್ತುಗಳು,ಇತರ ವಸ್ತುಗಳ ಬೆಲೆ ಏರಿಕೆಯಾಗಿರುವುದರಿಂದ ಜನ ಸಾಮಾನ್ಯರಿಗೆ ಉಂಟಾಗುವ ತೊಂದರೆಯನ್ನು ವಿರೋಧಿಸಿ ಕರ್ನಾಟಕ ಕಾರ್ಮಿಕ ಸಂಘಗಳ ಒಕ್ಕೂಟ ಅನುರಾಗ ವಠಾರ ಇದರ ಆಶ್ರಯದಲ್ಲಿ ದ.ಕ. ಜಿಲ್ಲಾ ನವ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘ, ಕರ್ನಾಟಕ ವಿದ್ಯುತ್ ಕಂಬ ಅಳವಡಿಸುವ ಕಾರ್ಮಿಕರ ಸಂಘ ಮತ್ತು ಕರ್ನಾಟಕ ರಿಕ್ಷಾ ಚಾಲಕ-ಮಾಲಕರ ಸಂಘ ಅನುರಾಗ ವಠಾರ ಹಾಗೂ ಇತರ ಎಲ್ಲಾ ವಾಹನ ಚಾಲಕ-ಮಾಲಕರ ಸಹಕಾರದೊಂದಿಗೆ ಜು.10ರಂದು ಸಂಜೆ ಅಮರ್‌ಜವಾನ್ ಜ್ಯೋತಿ ಸ್ಮಾರಕದ ಬಳಿ ಪ್ರತಿಭಟನೆ ನಡೆಯಿತು.


ಉಚಿತ ಯೋಜನೆಗಳಿಂದ ಸಾಲ ತೀರಿಸಲಾಗದೇ ದೇಶ ಮತ್ತೆ ಪರರ ಕೈವಶವಾಗಲಿದೆ-ಪುರಂದರ ಭಟ್:
ಕರ್ನಾಟಕ ಕಾರ್ಮಿಕ ಸಂಘಗಳ ಒಕ್ಕೂಟದ ಅಧ್ಯಕ್ಷ, ವಕೀಲ ಬಿ.ಪುರಂದರ ಭಟ್ ಅವರು ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿ, ಉಚಿತ ಗ್ಯಾರಂಟಿ ಯೋಜನೆಗಳಿಂದ ಸಾರ್ವತ್ರಿಕ ಅನ್ಯಾಯವಾಗಿದೆ.ತನ್ನ ಖಾಸಗಿ ಸಂಪಾದನೆಯಿಂದ ಇತರರಿಗೆ ನೀಡುವುದನ್ನು ಉಚಿತ ಎಂದು ಧರ್ಮ ಹೇಳುತ್ತದೆ.ಆದರೆ ಸರಕಾರ ಜನರ ತೆರಿಗೆಯ ಹಣದಿಂದ ನೀಡಿದರೆ ಅದು ಉಚಿತವಾಗಲು ಹೇಗೆ ಸಾಧ್ಯ.ಪಂಚಾಯತ್‌ನಿಂದ ಪಾರ್ಲಿಮೆಂಟ್ ತನಕ ಅರಿವಿಲ್ಲದವರಿಂದ ಇಂತಹ ಸ್ಥಿತಿ ಬಂದಿದೆ ಎಂದರು.ಸರಕಾರ ನೀಡುವ 5 ಗ್ಯಾರಂಟಿಗಳಿಂದ ಬಡತನ ನಿವಾರಿಸಲು ಸಾಧ್ಯನಾ?ಅನ್ನಭಾಗ್ಯದಲ್ಲಿ ಅಕ್ಕಿಯ ಬದಲು ಹಣ ನೀಡಲಾಗುತ್ತಿದ್ದು ಅವರಲ್ಲಿ ಜೀರ್ಣವಾಗದಷ್ಟು ಹಣವಿರಬೇಕು.ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಯೋಜನೆ ಜಾರಿ ಮಾಡುತ್ತೇವೆ ಎಂದಿದ್ದರು.ಅಲ್ಲದೆ ಗ್ಯಾರಂಟಿ ಘೋಷಣೆ ಮಾಡುವಾಗ ಯಾವುದೇ ಶರತ್ತು ಇಲ್ಲದೇ ಇದ್ದು ಸಮಯ ಸಾಧಕರಾಗಿರುವ ಅವರು ಈಗ ವಚನ ಭ್ರಷ್ಟರಾಗಿದ್ದಾರೆ ಎಂದು ಹೇಳಿದ ಪುರಂದರ ಭಟ್,ಉಚಿತ ಬಸ್ ಬಂದ ಬಳಿಕವೇ ಮಹಿಳೆಯರಲ್ಲಿ ಧರ್ಮದ ಬಗ್ಗೆ ಹೆಚ್ಚಿನ ಒಲವು ಬಂದಂತೆ ಕಾಣುತ್ತಿದೆ ಎಂದರಲ್ಲದೆ, 2022-23ನೇ ಸಾಲಿನ ಪರೀಕ್ಷಾ ಫಲಿತಾಂಶ ಇನ್ನೂ ಬಂದಿಲ್ಲ.ಹಾಗಾದರೆ ಇವರು ನಿರುದ್ಯೋಗ ಭತ್ಯೆ ನೀಡುವುದು ಯಾರಿಗೆ?.ಈ ಉಚಿತ ಯೋಜನೆಗಳಿಂದ ಸಾಲ ತೀರಿಸಲಾಗದೇ ದೇಶ ಮತ್ತೆ ಪರರ ಕೈವಶವಾಗಲಿದೆ ಎಂದು ಹೇಳಿದರು.


ವಾಹನ ಚಾಲಕ-ಮ್ಹಾಲಕರಿಗೆ ಮತ್ತೆ ಕೊರೋನಾದಂತೆ ಸಂಕಷ್ಟ-ಜಯರಾಮ ಕುಲಾಲ್:
ನವ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಜಯರಾಮ ಕುಲಾಲ್ ಮಾತನಾಡಿ, ಸರಕಾರದ ಉಚಿತ ಯೋಜನೆಯಿಂದ ಬಡ ರಿಕ್ಷಾ ಚಾಲಕರು ಬೀದಿಗೆ ಬೀಳುವಂತಾಗಿದೆ.ಬೆಲೆ ಏರಿಕೆ ಮಾಡಿ ಉಚಿತ ಯೋಜನೆಗಳನ್ನು ನೀಡುತ್ತಿದ್ದಾರೆ.ಉಚಿತ ಯೋಜನೆಯಿಂದ ಸರಕಾರಕ್ಕೆ ಗಂಡಾಂತರ ಬರಲಿದೆ.ಉಚಿತ ಯೋಜನೆಯಿಂದ ಮುಂದೆ ಕೆಟ್ಟ ಪರಿಣಾಮ ಬೀಳಲಿದೆ.ಒಂದು ವರ್ಗಕ್ಕೆ ಉಚಿತ ಯೋಜನೆಗಳನ್ನು ನೀಡಿ ತಾರತಮ್ಯ ಮಾಡುವ ಬದಲು ರಿಯಾಯಿತಿ ದರದಲ್ಲಿ ಎಲ್ಲರಿಗೂ ನೀಡಬೇಕು.ನಗರ ಸಭಾ ವ್ಯಾಪ್ತಿಯಲ್ಲಿ ಮನೆ ಕಟ್ಟಬೇಕಾದರೆ ರೂ. 1ಲಕ್ಷ ತೆರಿಗೆ ಪಾವತಿಸಬೇಕಾಗಿದ್ದು ಇದನ್ನು ಉಚಿತವಾಗಿ ನೀಡಿದರೆ ಬಡವರಿಗೆ ಅನುಕೂಲವಾಗಬಹುದು.ಮಹಿಳೆಯರಿಗೆ ನೀಡುವ 2 ಸಾವಿರ ರೂಪಾಯಿಯಿಂದಾಗಿ ಮನೆಯಲ್ಲಿ ಅತ್ತೆ-ಸೊಸೆ ಹೊಡೆದಾಡಿಕೊಳ್ಳುವ ದಿನಗಳೂ ಬರಲಿದೆ.ವಾಹನಗಳ ತೆರಿಗೆ, ವಿಮೆಯ ಮೊತ್ತ ಏರಿಕೆಯಿಂದಾಗಿ ಖಾಸಗಿ ವಾಹನ ಚಾಲಕರನ್ನು ಸಂಕಷ್ಟಕ್ಕೆ ತಂದಿದೆ.ಕೊರೋನಾನಂತರ ಸ್ವಲ್ಪ ಮಟ್ಟಿಗೆ ಸುಧಾರಿಸಿಕೊಂಡಿದ್ದ ಖಾಸಗಿ ವಾಹನ ಮ್ಹಾಲಕರು, ರಿಕ್ಷಾ ಚಾಲಕರ ಜೀವನ ಮತ್ತೆ ಅದೇ ಸ್ಥಿತಿಗೆ ಬರಲಿದೆ ಎಂದು ಹೇಳಿದರಲ್ಲದೆ, ಎಲ್ಲಾ ವರ್ಗದವರಿಗೂ ಅನುಕೂಲವಾಗುವ ಯೋಜನೆಗಳನ್ನು ಜಾರಿಗೆ ತರುವಂತೆ ಆಗ್ರಹಿಸಿದರು.


ವಾಹನ ಚಾಲಕರಿಗೆ ಸಬ್ಸಿಡಿ ದರದಲ್ಲಿ ಇಂಧನ ನೀಡಲಿ-ದೇವಾನಂದ:
ಸಂಘದ ಕಾನೂನು ಸಲಹೆಗಾರ ದೇವಾನಂದ ಕೆ ಮಾತನಾಡಿ, ಮಹಿಳೆಯರಿಗೆ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ ಯೋಜನೆ ಬಡಪಾಯಿ ರಿಕ್ಷಾ ಚಾಲಕರಿಗೆ ಸಂಕಷ್ಟ ತಂದಿದೆ.ಎಲ್ಲಾ ರೀತಿಯ ಅಗತ್ಯ ವಷ್ತುಗಳ ದರ ಏರಿಕೆ ಮಾಡಿ ಜನ ಸಾಮಾನ್ಯರನ್ನು ಸಂಕಷ್ಟಕ್ಕೆ ತಂದಿದ್ದಾರೆ.ವಿದ್ಯುತ್ ದರ ಏರಿಕೆ ಮಾಡಿ ಉಚಿತ ನೀಡುವುದಾಗಿ ಹೇಳುತ್ತಿದ್ದಾರೆ.ಜನರನ್ನು ಶೋಷಣೆ ಮಾಡಿ ಉಚಿತ ನೀಡುತ್ತಿದ್ದಾರೆ.ಮೀನುಗಾರರಿಗೆ ಸಬ್ಸಿಡಿ ದರದಲ್ಲಿ ಡೀಸೆಲ್ ನೀಡುವಂತೆ ಖಾಸಗಿ ವಾಹನ ಚಾಲಕರಿಗೂ ಸಬ್ಸಿಡಿ ದರದಲ್ಲಿ ಇಂಧನ ನೀಡಲಿ ಎಂದು ಆಗ್ರಹಿಸಿದರು.


ರಿಕ್ಷಾ ಚಾಲಕರಿಗೆ ಸತ್ತ ಮೇಲೆ ಮಾತ್ರ-ಗಿರೀಶ್ ನಾಯ್ಕ: ಕರ್ನಾಟಕ ರಿಕ್ಷಾ ಚಾಲಕ ಮಾಲಕರ ಒಕ್ಕೂಟದ ಕೋಶಾಧಿಕಾರಿ ಗಿರೀಶ್ ನಾಯ್ಕ ಮಾತನಾಡಿ, ಸರಕಾರದ ಗ್ಯಾರಂಟಿ ಯೋಜನೆಗಳಿಂದ ಸಾರ್ವಜನಿಕರಿಗೆ, ವಾಹನ ಚಾಲಕ-ಮ್ಹಾಲಕರಿಗೆ ಹೊಡೆತ ಬಿದ್ದಿದೆ.ಸರಕಾರದಿಂದ ರಿಕ್ಷಾ ಚಾಲಕರಿಗೆ ಯಾವುದೇ ಯೋಜನೆಗಳಿಲ್ಲ.ಹಲವು ಹೋರಾಟದ ನಂತರ ರಿಕ್ಷಾ ಚಾಲಕರಿಗೆ ವಿಮೆ ಸೌಲಭ್ಯ ದೊರೆತಿದೆಯಾದರೂ ಅದು ದೊರೆಯುವುದು ಸತ್ತ ಮೇಲೆ ಮಾತ್ರ.ಜೀವನದಲ್ಲಿರುವಾಗ ರಿಕ್ಷಾ ಚಾಲಕರಿಗೆ ಯಾವುದೇ ಯೋಜನೆಗಳಿಲ್ಲ ಎಂದು ಹೇಳಿದರು.


ನವ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ಸಲಹೆಗಾರ ಸೇಸಪ್ಪ ಕುಲಾಲ್, ಉಪಾಧ್ಯಕ್ಷ ಮೋಹನ ಆಚಾರ್ಯ, ಕರ್ನಾಟಕ ಅಟೋ ರಿಕ್ಷಾ ಚಾಲಕ ಮ್ಹಾಲಕ ಸಂಘದ ಅಧ್ಯಕ್ಷ ಅರುಣ್ ಕುಮಾರ್ ಸಂಪ್ಯ, ನವ ಕರ್ನಾಟಕ ಕಟ್ಟಡ ಕಾರ್ಮಿಕ ಸಂಘದ ಕಾರ್ಯದರ್ಶಿ ರಾಜೇಶ್ ಮುಕ್ವೆ, ಬಸ್ ಮ್ಹಾಲಕ ಶಿವಪ್ರಸಾದ್ ಕೌಡಿಚ್ಚಾರು, ವಿದ್ಯುತ್ ಕಂಬ ಅಳವಡಿಸುವವರ ಸಂಘದ ಸುಂದರ್ ಸೇರಿದಂತೆ ಹಲವು ಮಂದಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.ಪ್ರತಿಭಟನೆಯ ಬಳಿಕ ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.ಗಿರೀಶ್ ನಾಯ್ಕ ಸೊರೆಕೆ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here