




ಪುತ್ತೂರು:ಆಧುನಿಕ ತಂತ್ರಜ್ಞಾನಾಧಾರಿತ ಶಿಕ್ಷಣ ಪದ್ದತಿಗಳು ಇಂದು ಖಾಸಗಿ ಶಾಲೆಗಳಿಗೆ ಮಾತ್ರ ಸೀಮಿತವಾಗಿರದೇ ಸರಕಾರಿ ಶಾಲೆಗಳಲ್ಲಿಯೂ ದೊರೆಯುವಂತಾಗಬೇಕು.ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಆಧುನಿಕ ಕಲಿಕೆ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಸೆಲ್ಕೋ ಸಂಸ್ಥೆಯು ವಿನೂತನವಾದ ಇ-ಶಾಲಾ ಕಾರ್ಯಕ್ರಮ ಹಮ್ಮಿಕೊಂಡಿದೆ.ಇದರ ಮೂಲಕ ಇನ್ನು ಮುಂದೆ ಖಾಸಗಿ ಶಾಲೆಗಳ ಮಕ್ಕಳಂತೆ ಸರಕಾರಿ ಶಾಲೆ ಮಕ್ಕಳೂ ಸ್ಮಾರ್ಟ್ ಕ್ಲಾಸ್ ಸೌಲಭ್ಯ ಪಡೆಯಬಹುದಾಗಿದೆ.
ಮೆಂಡಾ ಫೌಂಡೇಶನ್ ಸಹಯೋಗದಲ್ಲಿ ಸೆಲ್ಕೋ ಸಂಸ್ಥೆಯು ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಪ್ರದೇಶದ ಹಿಂದುಳಿದ ಸುಮಾರು 200 ಶಾಲೆಗಳಿಗೆ ಸೋಲಾರ್ ಆಧಾರಿತ ಡಿಜಿಟಲ್ ಶಿಕ್ಷಣ ಸೌಲಭ್ಯ ಕಲ್ಪಿಸಲು ಮುಂದಾಗಿದೆ.ಮುಂದಿನ ದಿನಗಳಲ್ಲಿ ಇನ್ನಷ್ಟು ಶಾಲೆಗಳಿಗೆ ಈ ಯೋಜನೆಯನ್ನು ವಿಸ್ತರಿಸುವ ಉದ್ದೇಶವನ್ನೂ ಸಂಸ್ಥೆ ಹೊಂದಿದೆ.ಆಕರ್ಷಕ ಬೋಧನಾ ವಿಧಾನಗಳ ಮೂಲಕ ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಹೆಚ್ಚಿಸುವುದು, ಹಾಜರಾತಿ ಉತ್ತಮಗೊಳಿಸುವುದು ಮತ್ತು ಶಿಕ್ಷಕರ ಕೊರತೆಯನ್ನು ಸರಿದೂಗಿಸುವುದೇ ಈ ಯೋಜನೆಯ ಪ್ರಮುಖ ಉದ್ದೇಶಗಳಾಗಿವೆ.
ಸ್ಮಾರ್ಟ್ ಕ್ಲಾಸ್ ವಿಶೇಷತೆ:



ಇ-ಶಾಲಾ ಯೋಜನೆಯಡಿ 1ರಿಂದ 10ನೇ ತರಗತಿವರೆಗಿನ ಎಲ್ಲಾ ವಿಷಯಗಳ ಪಾಠಗಳನ್ನು ಸ್ಮಾರ್ಟ್ ಟಿವಿ' ಮೂಲಕ ಬೋಧಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.ರಾಜ್ಯ ಸರ್ಕಾರ ಅನುಮೋದಿತ ಪಠ್ಯಕ್ರಮವನ್ನುನೆಸ್ಟ್ ಎಜುಕೇಶನ್ ಸಂಸ್ಥೆ’ ಸಿದ್ಧಪಡಿಸಿದೆ.ಉತ್ತಮ ವಿಡಿಯೋ ಪಾಠಗಳು, ಪ್ರಶ್ನೋತ್ತರಗಳು ಹಾಗೂ ಅಭ್ಯಾಸ ಚಟುವಟಿಕೆಗಳನ್ನು ಜೋಡಿಸಿಕೊಳ್ಳಲಾಗಿದೆ.ಹೆಚ್ಚುವರಿ ಕಲಿಕೆಗೆ ಪೂರಕವಾಗಿ ಪಠ್ಯಕ್ರಮ, ಪಠ್ಯೇತರ ವಿಷಯಗಳಾದ ಯೋಗ, ಆರೋಗ್ಯ ಹಾಗೂ ವಿಜ್ಞಾನಕ್ಕೆ ಸಂಬಂಧಿಸಿದ ವೀಡಿಯೋ ಪಾಠಗಳು ಸ್ಮಾರ್ಟ್ ಕ್ಲಾಸ್‌ನಲ್ಲಿ ಲಭ್ಯವಿದೆ.ತರಗತಿ ನಿರ್ವಹಣೆಗೆ ಯಾವುದೇ ಇಂಟರ್ನೆಟ್ ಸಂಪರ್ಕದ ಅವಶ್ಯಕತೆ ಇರುವುದಿಲ್ಲ.ಯೋಜನೆ ಅನುಷ್ಠಾನಕ್ಕೆ ಅಗತ್ಯವಿರುವ ಸೋಲಾರ್ ಪೆನಲ್, ಬ್ಯಾಟರಿ, ಇನ್ವರ್ಟರ್, 50 ಇಂಚಿನ ಎಲ್.ಇ.ಡಿ ಟಿವಿ ಸೌಲಭ್ಯವನ್ನು ಸೆಲ್ಕೋ ಸಂಸ್ಥೆ ಒದಗಿಸುತ್ತದೆ.ಜೊತೆಗೆ ಈ ಉಪಕರಣಗಳ ಐದು ವರ್ಷಗಳ ನಿರ್ವಹಣೆ ಜವಾಬ್ದಾರಿಯನ್ನೂ ಸಂಸ್ಥೆಯೇ ನೋಡಿಕೊಳ್ಳಲಿರುವುದು ಸೆಲ್ಕೋದ ಈ ಯೋಜನೆಯ ಇನ್ನೊಂದು ವಿಶೇಷತೆಯಾಗಿದೆ.
ಯೋಜನೆ ಅನುಷ್ಠಾನ ಹೀಗೆ:





ಈ ಯೋಜನೆಯ ವೆಚ್ಚ ಒಟ್ಟು ರೂ.1.80ಲಕ್ಷವಾಗಿದೆ.ಇದರಲ್ಲಿ ಶೇ.50ರಷ್ಟನ್ನು ಮೆಂಡಾ ಫೌಂಡೇಶನ್ ಭರಿಸಲಿದೆ.ಇನ್ನುಳಿದ ಶೇ.50ರಷ್ಟು ವೆಚ್ಚವನ್ನು ಸ್ಥಳೀಯ ದಾನಿಗಳು, ಉದ್ಯಮಿಗಳು,ಎಸ್.ಡಿ.ಎಂ.ಸಿ ಅಥವಾ ಸಂಘ ಸಂಸ್ಥೆಗಳು ಭರಿಸುವಂತೆ ಯೋಜನೆ ರೂಪಿಸಲಾಗಿದೆ.ಒಟ್ಟು ವೆಚ್ಚದಲ್ಲಿ ಐದು ವರ್ಷದ ನಿರ್ವಹಣೆ ವೆಚ್ಚವೂ ಒಳಗೊಂಡಿರುವುದು ಯೋಜನೆ ಸದುಪಯೋಗವಾಗುವ ಬಗ್ಗೆ ಖಾತ್ರಿ ನೀಡುತ್ತಿದೆ.ಈ ಯೋಜನೆಯು ಸಂಪೂರ್ಣವಾಗಿ ಸೋಲಾರ್ ವ್ಯವಸ್ಥೆಯಡಿ ಕಾರ್ಯನಿರ್ವಹಿಸುವುದರಿಂದ ವಿದ್ಯುತ್ ವ್ಯತ್ಯಯದಿಂದ ಕಲಿಕೆಗೆ ತಡೆ ಉಂಟಾಗುವ ಭಯವಿಲ್ಲ. ಪಾಠ ಬೋಧನೆ ವೇಳೆ ನಿಂತು ವಿಷಯದ ಪೂರಕ ವಿವರಣೆ ಒದಗಿಸಲು ಸಹ ತಾಂತ್ರಿಕ ಸೌಲಭ್ಯ ಕಲ್ಪಿಸಲಾಗಿದ್ದು ಕಲಿಕೆ ಪರಿಣಾಮಕಾರಿಯಾಗಿಸಲು ಇದು ಸಹಕಾರಿಯಾಗಲಿದೆ.
ನೀವೂ ಕೈ ಜೋಡಿಸಿ:
ಮಕ್ಕಳ ಕಲಿಕೆಯನ್ನು ಸರಳಗೊಳಿಸುವ ಮತ್ತು ಆಧುನಿಕ ತಂತ್ರಜ್ಞಾನದೊಂದಿಗೆ ಬೋಧಿಸುವ ಈ ಸೌಲಭ್ಯ ಗ್ರಾಮೀಣ ಭಾಗದ ಪ್ರತಿಯೊಬ್ಬ ವಿದ್ಯಾರ್ಥಿಗೂ ದೊರೆಯುವಂತಾಗಬೇಕು ಎಂಬುದು ಸೆಲ್ಕೋ ಸಂಸ್ಥೆಯ ಆಶಯವಾಗಿದೆ.ನಮ್ಮ ಈ ಯೋಜನೆಯ ಯಶಸ್ವಿ ಅನುಷ್ಠಾನಕ್ಕಾಗಿ ದಾನಿಗಳು, ಶಿಕ್ಷಣ ಪ್ರೇಮಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳು ತಮ್ಮೊಂದಿಗೆ ಕೈ ಜೋಡಿಸುವಂತೆ ಸೆಲ್ಕೋ ಸಂಸ್ಥೆ ಮನವಿ ಮಾಡಿದೆ.ಹೆಚ್ಚಿನ ಮಾಹಿತಿಗಾಗಿ ಕ್ಷೇತ್ರ ವ್ಯವಸ್ಥಾಪಕ ಪ್ರಸಾದ್ ಬಿ.(ಮೊ:9880715838)ಅವರನ್ನು ಸಂಪರ್ಕಿಸುವಂತೆ ಸೆಲ್ಕೋ ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಜಿಲ್ಲೆಯಲ್ಲಿ ಈಗಾಗಲೇ 120 ಸರಕಾರಿ ಶಾಲೆಗಳಲ್ಲಿ ಇ-ಶಾಲಾ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಪುತ್ತೂರು ತಾಲೂಕಿನಲ್ಲಿ 32 ಸರಕಾರಿ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ಅಳವಡಿಸಲಾಗಿದೆ. ಯೋಜನೆಯ ಒಟ್ಟು ವೆಚ್ಚದ ಶೇ.50ನ್ನು ಸೆಲ್ಕೋ ಭರಿಸುತ್ತಿದೆ. ಉಳಿದ ಶೇ.50ರಷ್ಟನ್ನು ಸ್ಥಳೀಯವಾಗಿ ಭರಿಸಬೇಕಾಗಿದೆ- ಪ್ರಸಾದ್ ಬಿ., ಕ್ಷೇತ್ರ ವ್ಯವಸ್ಥಾಪಕರು,ಸೆಲ್ಕೋ








