ರಾಜ್ಯದ ಯಾವುದೇ ಜಿಲ್ಲೆಗಳಲ್ಲಿಯೂ ಸಹ ಅಂಗನವಾಡಿ ಫಲಾನುಭವಿಗಳಿಗೆ ಕಳಪೆ ಗುಣಮಟ್ಟದ ಕೋಳಿ ಮೊಟ್ಟೆ ಸರಬರಾಜಾಗಿರುವುದು ಕಂಡು ಬಂದಲ್ಲಿ, ಆ ಜಿಲ್ಲೆಗಳಿಗೂ ಭೇಟಿ ನೀಡಿ ಪರಿಶೀಲಿಸುವಂತೆ ಆದೇಶಿಸಲಾಗಿದೆ.
ಬೆಂಗಳೂರು:ಅಂಗನವಾಡಿ ಮಕ್ಕಳು, ಗರ್ಭಿಣಿ, ಬಾಣಂತಿಯರಿಗೆ ಕಳಪೆ ಗುಣಮಟ್ಟದ ಕೋಳಿಮೊಟ್ಟೆ ಸರಬರಾಜಾಗಿರುವ ಆರೋಪದ ಹಿನ್ನೆಲೆಯಲ್ಲಿ ಲೋಪದೋಷಗಳನ್ನು ಪರಿಶೀಲಿಸಲು ತನಿಖಾ ತಂಡ ರಚಿಸಿ, ವರದಿ ಸಲ್ಲಿಸಲು ರಾಜ್ಯಪಾಲರು ಆದೇಶಿಸಿದ್ದಾರೆ.
ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐ.ಸಿ.ಡಿ.ಎಸ್) ಜಂಟಿ ನಿರ್ದೇಶಕಿ ಡಾ.ಬಿ.ಉಷಾ, ಉಪನಿರ್ದೇಶಕ ಬಿ.ಎಚ್. ನಿಶ್ಚಲ್, ಹಿರಿಯ ಸಹಾಯಕ ನಿರ್ದೇಶಕಿ ಹೇಮಾವತಿ, ಪ್ರಥಮ ದರ್ಜೆ ಸಹಾಯಕ ಪಂಚಾಕ್ಷರಿ ಎಚ್.ವಿ., ಅಕೌಂಟೆಂಟ್ ಕಿರಣ್ ಸೇರಿದಂತೆ ಐವರು ಸದಸ್ಯರ ತಂಡವನ್ನು ರಚಿಸಲಾಗಿದೆ.ತನಿಖೆ ನಡೆಸಿ ವರದಿ ಸಲ್ಲಿಸುವಂತೆ ರಾಜ್ಯಪಾಲರ ಆದೇಶದ ಮೇರೆಗೆ ಸರ್ಕಾರದ ಅಧೀನ ಕಾರ್ಯದರ್ಶಿ ನಿರ್ಮಲಾ ಎಸ್. ಖಟಾವ್‌ಕರ್ ಸೂಚಿಸಿದ್ದಾರೆ.