ಮಾಧ್ಯಮಗಳ ವಿಶ್ವಾಸಾರ್ಹತೆಗೆ ಉದ್ದೇಶ ಮತ್ತು ವಿಚಾರಧಾರೆಗಳ ಸ್ಪಷ್ಟತೆ ಅಗತ್ಯ – ಮಾಜಿ ಸಚಿವ ಎಸ್.ಅಂಗಾರ
ಡಾ.ಯು.ಪಿ.ಶಿವಾನಂದ ,ಗಂಗಾಧರ ಮಟ್ಟಿಯವರಿಗೆ ವಿಶೇಷ ಸನ್ಮಾನ
ಪುತ್ತೂರು: ಉದ್ದೇಶ ಮತ್ತು ವಿಚಾರಧಾರೆಗಳು ಸ್ಪಷ್ಟ ಮತ್ತು ದೃಢವಾಗಿದ್ದರೆ ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಗಳಿಸಲು ಸಾಧ್ಯ. ಆಧುನಿಕ ಯುಗದಲ್ಲಿ ಮಾಧ್ಯಮಗಳು ಸ್ಪಷ್ಟ ಉದ್ದೇಶ ಮತ್ತು ವಿಚಾರಧಾರೆಯ ಮೂಲಕ ತಮ್ಮ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಬೇಕು ಎಂದು ಮಾಜಿ ಸಚಿವ ಎಸ್.ಅಂಗಾರ ಹೇಳಿದ್ದಾರೆ.
ಸುಳ್ಯ ಕೇರ್ಪಳದ ಬಂಟರ ಭವನದಲ್ಲಿ ನಡೆದ ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಬೆಳ್ಳಿ ಹಬ್ಬ ಸಂಭ್ರಮದ ಸಮಾರೋಪ ಹಾಗೂ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹಲವಾರು ಸವಾಲಿನ ಮಧ್ಯೆ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಪತ್ರಕರ್ತರು ತಾವು ಉಳಿಯುವುದರ ಜೊತೆಗೆ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಸಮಾರೋಪ ಭಾಷಣ ಮಾಡಿದ ಸುದ್ದಿಯಾನ ಡಿಜಿಟಲ್ ಮಾಧ್ಯಮದ ಸಂಪಾದಕ ಹರಿಪ್ರಸಾದ್ ಅಡ್ಪಂಗಾಯ ವೃತ್ತಿ ಕ್ಷೇತ್ರದಲ್ಲಿ ಸ್ಥಳೀಯ ಪತ್ರಕರ್ತರಿಗೆ ಇರುವ ಸವಾಲುಗಳು ರಾಜ್ಯ ಮಟ್ಟದ ಪತ್ರಕರ್ತರ ಸವಾಲುಗಳಿಂದ ದೊಡ್ಡದು ಮತ್ತು ಭಿನ್ನವಾದುದು ಎಂದು ಅಭಿಪ್ರಾಯಪಟ್ಟರು. ಸಮಾಜದ ಅಭ್ಯುದಯ ಪ್ರತಿಯೊಬ್ಬ ಪತ್ರಕರ್ತನ ಸುದ್ದಿಯ ಉದ್ದೇಶವೇ ಹೊರತು ವೈಯುಕ್ತಿಕ ಹಿತಾಸಕ್ತಿಗಳು ಇರುವುದಿಲ್ಲ ಎಂದು ಹೇಳಿದರು. ಸಮಾಜದ ಅಭ್ಯುದಯಕ್ಕಾಗಿ ಸರಕಾರಗಳನ್ನು ಮತ್ತು ಇತರ ವ್ಯವಸ್ಥೆಯನ್ನು ಎಚ್ಚರಿಸುವ ಕೆಲಸವನ್ನು ಪತ್ರಕರ್ತರು ಸದಾ ಮಾಡಬೇಕಾಗುತ್ತದೆ ಎಂದು ಹೇಳಿದರು.
ಹಲವು ಸುಳ್ಳುಗಳು ಹರಿದಾಡುತ್ತಿರುವುದನ್ನು ತಡೆದು ಸತ್ಯವನ್ನು ಜನರಿಗೆ ತಿಳಿಸಬೇಕಾದ ಸವಾಲು ಪತ್ರಕರ್ತರ ಮುಂದಿದೆ ಎಂದ ಅವರು ಸವಾಲು, ಜವಾಬ್ದಾರಿಯನ್ನು ಪತ್ರಕರ್ತ ಸಮರ್ಥವಾಗಿ ನಿರ್ವಹಿಸಿದರೆ ಸಮಾಜ ಸುಭದ್ರವಾಗಿವಾಗುತ್ತದೆ. ಈ ಹಿನ್ನಲೆಯಲ್ಲಿ ಒಳ್ಳೆಯ ಪತ್ರಕರ್ತರನ್ನು ಸೃಷ್ಠಿಸುವ ಅಗತ್ಯತೆ ಇದೆ. ಪತ್ರಕರ್ತರ ಸಂಘಗಳು ಉತ್ತಮ ಪತ್ರಕರ್ತರ ಸೃಷ್ಠಿಸಲು ಪ್ರಯತ್ನ ನಡೆಸಬೇಕು ಎಂದು ಅವರು ಹೇಳಿದರು.
ಸುದ್ದಿ ಬಿಡುಗಡೆ ಪ್ರಧಾನ ಸಂಪಾದಕ ಡಾ.ಯು.ಪಿ.ಶಿವಾನಂದ ಹಾಗೂ ಹಿರಿಯ ಪತ್ರಕರ್ತ ಗಂಗಾಧರ ಮಟ್ಟಿ ಅವರಿಗೆ ವಿಶೇಷ ಸನ್ಮಾನ ನೀಡಿ ಗೌರವಿಸಲಾಯಿತು. ಸಂಘದ ಮಾಜಿ ಅಧ್ಯಕ್ಷರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.ಬೆಳ್ಳಿ ಹಬ್ಬ ನೆನಪಿನ ಸ್ಮರಣ ಸಂಚಿಕೆ ”ಬೆಳ್ಳಿ ಬರಹ’ ಬಿಡುಗಡೆ ಮಾಡಲಾಯಿತು.
ಮುಖ್ಯ ಅತಿಥಿಯಾಗಿದ್ದ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಮಾತನಾಡಿದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ, ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದಯಾನಂದ ಕೊರತ್ತೋಡಿ, ಕಾರ್ಯದರ್ಶಿ ಶಿವಪ್ರಸಾದ್ ಕೇರ್ಪಳ, ಕೋಶಾಧಿಕಾರಿ ದಯಾನಂದ ಕಲ್ನಾರ್, ಬೆಳ್ಳಿ ಹಬ್ಬ ಸಮಿತಿಯ ಅಧ್ಯಕ್ಷ ಗಂಗಾಧರ ಮಟ್ಟಿ, ಕೋಶಾಧಿಕಾರಿ ಗಿರೀಶ್ ಅಡ್ಪಂಗಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಜಯಪ್ರಕಾಶ್ ಕುಕ್ಕೇಟ್ಟಿ ಸ್ವಾಗತಿಸಿದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಗಂಗಾಧರ ಕಲ್ಲಪಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಸ್ಮರಣ ಸಂಚಿಕೆಯ ಪ್ರಧಾನ ಸಂಪಾದಕ ಜೆ.ಕೆ.ರೈ ‘ಬೆಳ್ಳಿ ಬರಹ’ ಸ್ಮರಣ ಸಂಚಿಕೆ ಕುರಿತು ಮಾತನಾಡಿದರು. ಲೋಕೇಶ್ ಪೆರ್ಲಂಪಾಡಿ, ಸತೀಶ್ ಹೊದ್ದೆಟ್ಟಿ ಸನ್ಮಾನಿತರ ಪರಿಚಯ ಮಾಡಿದರು. ಪತ್ರಕರ್ತರ ಸಂಘದ ಕಾರ್ಯದರ್ಶಿ ಶಿವಪ್ರಸಾದ್ ಕೇರ್ಪಳ ವಂದಿಸಿದರು. ಬೆಳ್ಳಿ ಹಬ್ಬ ಸಮಿತಿಯ ಪ್ರಧಾನ ಕಾರ್ಯದರ್ಶಿ ದುರ್ಗಾಕುಮಾರ್ ನಾಯರ್‌ಕೆರೆ ಕಾರ್ಯಕ್ರಮ ನಿರೂಪಿಸಿದರು