ಕಡಬ ಪೊಲೀಸ್ ಠಾಣೆಯಲ್ಲಿ ದಲಿತ ಕುಂದು ಕೊರತೆ ಸಭೆ

0

ದಲಿತರು ಶಿಕ್ಷಣದಿಂದ ವಂಚಿತರಾಗಬಾರದು-ಆಂಜನೇಯ ರೆಡ್ಡಿ

ಕಡಬ: ದಲಿತ ವರ್ಗದವರು ಶಿಕ್ಷಣದಿಂದ ವಂಚಿತರಾಗಬಾರದು, ಉತ್ತಮ ವಿದ್ಯಾಭ್ಯಾಸ ಪಡೆದು ಸರಕಾರಿ ಉದ್ಯೋಗಗಳಿಗೆ ಪ್ರಯತ್ನ ಪಡಬೇಕು ಎಂದು ಕಡಬ ಠಾಣಾ ಆರಕ್ಷಕ ಉಪನಿರೀಕ್ಷಕ ಆಂಜನೇಯ ರೆಡ್ಡಿ ಹೇಳಿದರು.


ಅವರು, ಕಡಬ ಠಾಣೆಯಲ್ಲಿ ನಡೆದ ದಲಿತ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ದಿನಗಳಲ್ಲಿ ದಲಿತರು ಸೇರಿದಂತೆ ಎಲ್ಲ ವರ್ಗದ ಕೆಲ ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಈ ಬಗ್ಗೆ ಮುಖಂಡರು ಗಮನ ಹರಿಸಿ ಅವರನ್ನು ಅದರಿಂದ ಮುಕ್ತಿಗೊಳಿಸಲು ಪ್ರಯತ್ನಿಸಬೇಕು, ಅಲ್ಲದೆ ಉತ್ತಮ ಶಿಕ್ಷಣ ಪಡೆಯುವಂತೆ ಮತ್ತು ಶಿಕ್ಷಣ ಪಡೆದವರು ಸರಕಾರಿ ಉದ್ಯೋಗ ಪಡೆಯುವಲ್ಲಿ ಸಹಕಾರ ನೀಡಬೇಕು. ಸರಕಾರದಿಂದ ದೊರೆಯುವ ಸೌಲಭ್ಯವನ್ನು ಅರ್ಹರಿಗೆ ತಲುಪಿಸುವಲ್ಲಿಯೂ ಪ್ರಯತ್ನ ಪಡುವಂತೆ ಅವರು ಹೇಳಿದರು. ಪೋಕ್ಸೋ ಪ್ರಕರಣಗಳು ನಡೆದಾಗ ಅದನ್ನು ರಾಜಿ ಪಂಚಾತಿಕೆ ಮೂಲಕ ಮುಗಿಸುವ ಪ್ರಯತ್ನ ಮಾಡಬಾರದು, ಯಾಕೆಂದರೆ ಪೊಕ್ಸೋ ಗಂಭೀರ ಪ್ರಕರಣವಾಗಿದ್ದು ಅದರಲ್ಲಿ ನೊಂದವರಿಗೆ ಕಾನೂನಿನ ಮೂಲಕ ನ್ಯಾಯ ದೊರಕಿಸಿ ಕೊಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದವರು ಹೇಳಿದರು.


ಆನ್‌ಲೈನ್ ವಂಚನೆಗೆ ಬಲಿಯಾಗದಿರಿ:
ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ವಂಚನೆಗಳು ಅಧಿಕವಾಗಿದೆ. ಮೊಬೈಲ್ ಬಳಕೆಯ ದುರುಪಯೋಗ ಕೂಡ ಇದಕ್ಕೆ ಕಾರಣವಾಗಿದೆ. ಮೊಬೈಲ್‌ನಲ್ಲಿ ಬಂದ ಲಿಂಕ್‌ಗಳ ಬಗ್ಗೆ ಜಾಗ್ರತೆ ವಹಿಸಬೇಕು, ಇದರಲ್ಲಿ ಎಚ್ಚರ ತಪ್ಪಿದರೆ ಅನಾಹುತದಲ್ಲಿ ಸಿಲುಕಿಕೊಳ್ಳುವುದು ಖಂಡಿತ, ಯಾವುದೇ ಆನ್‌ಲೈನ್‌ಗಳು ವಂಚನೆ ನಡೆದು ಹಣ ತಪ್ಪಿ ವರ್ಗಾವಣೆ ಆದರೆ 1930 ನಂ.ಗೆ ಕಾಲ್ ಮಾಡಬೇಕು. ಆನ್‌ಲೈನ್ ವಂಚನೆಗಳು ಅಧಿಕವಾಗಿದ್ದರೂ ಅದನ್ನು ತಡೆಯುವಲ್ಲಿ ಪೊಲೀಸ್ ಇಲಾಖೆ ಕೂಡ ಸರ್ವ ಸನ್ನದ್ಧವಾಗಿದೆ ಎಂದು ಹೇಳಿದ ಅವರು ನಾವೆಲ್ಲರೂ ಜತೆಯಾಗಿ ಹೋದಾಗ ಸಮಾಜ ಸುಧಾರಣೆಯಾಗುತ್ತದೆ ಎಂದರು.


ಕಡಬ ತಾಲೂಕು ಕಛೇರಿಯಲ್ಲಿ ಆಧಾರ್ ಕೇಂದ್ರ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ:
ದಲಿತ ಮುಖಂಡ ರಾಘವ ಕಳಾರ ಮಾತನಾಡಿ,ಕಡಬ ತಾಲೂಕು ಕಛೇರಿಯಲ್ಲಿರುವ ಆಧಾರ್ ಕೇಂದ್ರ ಸರಿಯಾಗಿ ಕಾರ್ಯನಿರ್ವಹಿಸದೆ ಇರುವುದರಿಂದ ತಾಲೂಕಿನ ಜನತೆಗೆ ಭಾರೀ ತೊಂದರೆಯಾಗಿದೆ. ಇಲ್ಲಿ ಸರಿಯಾಗಿ ಕಾರ್ಯನಿರ್ವಹಿಸಿದರೆ, ಜನರು ಬೇರೆ ಬೇರೆ ಅಂಚೆ ಕಛೇರಿಗಳಿಗೆ ಅಲೆದಾಟ ಮಾಡುವ ಪ್ರಮೇಯ ಬರುವುದಿಲ್ಲ ಎಂದು ಹೇಳಿದರು. ಈ ಬಗ್ಗೆ ಚರ್ಚೆ ನಡೆದು ಬಳಿಕ ಕಡಬ ತಹಸೀಲ್ದಾರ್ ಅವರಿಗೆ ತಿಳಿಸುತ್ತೇವೆ ಎಂದು ಎಸ್.ಐ. ಅವರು ಉತ್ತರಿಸಿದರು.


ಚಂದ್ರಪ್ಪ ಬಲ್ಯ ಅವರು ಮಾತನಾಡಿ, ಬಲ್ಯ ಗ್ರಾಮದ ಕತ್ತರಿಗುಡ್ಡೆ ಕಾಲೋನಿಗೆ ಸಂಪರ್ಕಿಸುವ ರಸ್ತೆಯನ್ನು ಸ್ಥಳೀಯರು ಮನೆ ಕಟ್ಟಿಕೊಂಡು ಅತಿಕ್ರಮಿಸಿದ್ಧಾರೆ, ಇದರಿಂದ ಕಾಲೊನಿಯವರಿಗೆ ಸಂಚಾರಕ್ಕೆ ತೊಂದರೆಯಾಗಿದೆ. ಈ ಬಗ್ಗೆ ಪಂಚಾಯತ್‌ನವರು ಸ್ಥಳಕ್ಕೆ ಬಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು. ಸಭೆಯಲ್ಲಿ ತನಿಖಾ ಎಸ್.ಐ. ಅಕ್ಷಯ್ ಡವಗಿ ಉಪಸ್ಥಿತರಿದ್ದರು. ದಲಿತ ಮುಖಂಡರಾದ ಎಸ್. ಹರೀಶ, ರಘುನಾಥ, ಪ್ರಶಾಂತ, ಉಮೇಶ್ ಆಲಂಕಾರು,ದಿನೇಶ್, ಆನಂದ, ರಾಜು, ರೋಹಿನಿ, ತಾರಾನಾಥ ಕೆ. ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here